ಭಾನುವಾರ, ಆಗಸ್ಟ್ 14, 2022
25 °C
ಎಸ್ಸೆಸ್ಸೆಲ್ಸಿ ಪರೀಕ್ಷಾ ಸಮಯದಲ್ಲಿ ಖಾಸಗಿ ಶಾಲೆಗಳ ಹೊಸ ಅಸ್ತ್ರ l ವಿದ್ಯಾರ್ಥಿ–ಪೋಷಕರಿಗೆ ಸಂಕಟ

ಶುಲ್ಕ ಕಟ್ಟಿದರಷ್ಟೇ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಲ್‌ ಟಿಕೆಟ್‌: ಖಾಸಗಿ ಶಾಲೆಗಳು

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶುಲ್ಕ ಪಾವತಿಸುವಂತೆ ಪೋಷಕರ ಮೇಲೆ ಒತ್ತಡ ಹೇರಲು ಆನ್‌ಲೈನ್‌ ತರಗತಿ ಸ್ಥಗಿತ, ವರ್ಗಾವಣೆ ಪ್ರಮಾಣಪತ್ರ ನಿರಾಕರಣೆ ಸೇರಿದಂತೆ ಹಲವು ತಂತ್ರಗಾರಿಕೆ ಬಳಸಿದ್ದ ಖಾಸಗಿ ಶಾಲಾ ಆಡಳಿತ ಮಂಡಳಿಗಳು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಾಲ್‌ ಟಿಕೆಟ್‌ (ಪರೀಕ್ಷಾ ಪ್ರವೇಶಪತ್ರ) ನಿರಾಕರಿಸುವ ಮೂಲಕ ಹೊಸ ಅಸ್ತ್ರ ಪ್ರಯೋಗಿಸುತ್ತಿವೆ.

ಇದೇ 19 ಮತ್ತು 22ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಪರೀಕ್ಷೆಗೆ ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ಸೋಮವಾರದಿಂದ (ಜುಲೈ 12) ಹಾಲ್‌ಟಿಕೆಟ್‌ ನೀಡಲಾಗುತ್ತಿದೆ. ಆದರೆ, 2020–21ನೇ ಶೈಕ್ಷಣಿಕ ಸಾಲಿನಪೂರ್ಣ ಶುಲ್ಕ ಪಾವತಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಪತ್ರ ನೀಡಲಾಗುವುದು ಎಂದು ಕೆಲವು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಷರತ್ತು ವಿಧಿಸಿವೆ.

ಇದು, ಪೋಷಕರನ್ನು ಸಂಕಷ್ಟಕ್ಕೆ ದೂಡಿದೆ. ಅಲ್ಲದೇ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಕೋವಿಡ್‌ ಕಾರಣದಿಂದ ಶಾಲೆಗಳು ಮುಚ್ಚಿದ್ದು, ಶುಲ್ಕದ ವಿಚಾರದಲ್ಲಿ ಉಂಟಾಗಿದ್ದ ಗೊಂದಲ ಪರಿಹರಿಸಲು ಕಳೆದ ಜ.29ರಂದು ಸುತ್ತೋಲೆ ಹೊರಡಿಸಿದ್ದ ಸರ್ಕಾರ, 2020–21ನೇ ಸಾಲಿಗೆ ಮಾತ್ರ ಅನ್ವಯಿಸುವಂತೆ ಶೇ 70ರಷ್ಟು ಬೋಧನಾ ಶುಲ್ಕ ಮಾತ್ರ ಪಡೆಯಬೇಕು ಎಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದು, ಪ್ರಕರಣ ವಿಚಾರಣೆ ಹಂತದಲ್ಲಿದೆ.

ಎಸ್ಸೆಸ್ಸೆಲ್ಸಿ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರಳೀಕೃತ ವ್ಯವಸ್ಥೆಯಲ್ಲಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಆದರೆ, ಪರೀಕ್ಷೆಯನ್ನೇ ಖಾಸಗಿ ಶಾಲೆಗಳು ಗುರಿ ಮಾಡಿಕೊಂಡಿವೆ. ವಿದ್ಯಾರ್ಥಿ
ಗಳು ಪೂರ್ಣ ಶುಲ್ಕ ಪಾವತಿಸಿದರೆ ಮಾತ್ರ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡುವುದಾಗಿ ಬೆದರಿಕೆ ಒಡ್ಡಿವೆ.

‘ಶುಲ್ಕ ಕಡಿತಗೊಳಿಸಿದ ಪ್ರಕರಣದಲ್ಲಿ ಹೈಕೋರ್ಟ್‌ ಅಂತಿಮ ತೀರ್ಪು ನೀಡಿಲ್ಲ. ಬೋಧನಾ ಶುಲ್ಕದಲ್ಲಿ ಶೇ 30ರಷ್ಟು ಕಡಿತಗೊಳಿಸಿರುವ ಸರ್ಕಾರದ ಆದೇಶ ಪಾಲಿಸಬೇಕೇ ಅಥವಾ ಶಾಲೆಗಳು ನಿಗದಿಪಡಿಸಿದ ಶುಲ್ಕವನ್ನು ಪಡೆಯಬಹುದೇ ಎಂಬ ವಿಷಯದಲ್ಲಿ ಹೈಕೋರ್ಟ್‌ ಯಾವುದೇ ನಿರ್ದೇಶನ ನೀಡಿಲ್ಲ. ಪೂರ್ಣ ಶುಲ್ಕ ಪಾವತಿಸಲೇಬೇಕು. ಸರ್ಕಾರದ ಆದೇಶವನ್ನು ಹೈಕೋರ್ಟ್‌ ಎತ್ತಿಹಿಡಿದರೆ, ಹೆಚ್ಚುವರಿಯಾಗಿ ಪಡೆದ ಶುಲ್ಕ ಮರಳಿಸಲಾಗುವುದು’ ಎಂದೂ ಶಾಲಾಡಳಿತ ಮಂಡಳಿಗಳು ಹೇಳುತ್ತಿವೆ.

ವಿನಾಯಿತಿ ಕೊಟ್ಟರೂ ಕಟ್ಟಿಲ್ಲ: ‘ಶಿಕ್ಷಣ ಇಲಾಖೆ ಶುಲ್ಕ ಕಟ್ಟಿಸಿಕೊಳ್ಳದೆ ಪರೀಕ್ಷೆ ನಡೆಸುತ್ತಿದೆಯೇ? ಶಿಕ್ಷಕರು ಪಾಠ ಮಾಡಿಲ್ಲವೇ? ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಶುಲ್ಕವನ್ನೂ ಬಹುತೇಕರು ಕಟ್ಟಿಲ್ಲ. ಶುಲ್ಕ ಕಟ್ಟದವರಿಗೆ ಕಟ್ಟಿ ಎಂದು ಹೇಳುತ್ತಿದ್ದೇವೆ. ವಿದ್ಯಾರ್ಥಿಗಳಿಂದ ಶುಲ್ಕ ಕೇಳುವುದೂ ತಪ್ಪೇ?’ ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌ ಹೇಳಿದರು.

‘ಸರ್ಕಾರ ಶೇ 30ರಷ್ಟು ವಿನಾಯಿತಿ ಕೊಟ್ಟರೂ ಅನೇಕರು ಶುಲ್ಕ ಪಾವತಿಸಿಲ್ಲ. ಭಾಗಶಃ ಕಟ್ಟಿದವರೂ, ಶುಲ್ಕವನ್ನೇ ಕಟ್ಟದವರೂ ಇದ್ದಾರೆ. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ಸರಿಯಲ್ಲ’ ಎಂದರು.

‘ಹೆಚ್ಚು ಶುಲ್ಕ ಕೇಳುವವರ ಮೇಲೆ ದೂರು ಕೊಡಲಿ. ಆದರೆ, ಸುಳ್ಳು ಹೇಳಿಕೊಂಡು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸುವುದು ಸರಿಯಲ್ಲ’ ಎಂದರು.

ಅನ್ಯಾಯ: ‘ತರಗತಿಗಳನ್ನು ನಡೆಸದೆ ಪರೀಕ್ಷೆ ನಡೆಸುವುದೇ ಸರ್ಕಾರ ತಪ್ಪು ನಡೆ. ಪರೀಕ್ಷೆಯನ್ನು ಅಸ್ತ್ರ ಮಾಡಿಕೊಂಡು ಖಾಸಗಿ ಶಾಲೆಗಳು ಶುಲ್ಕ ವಸೂಲಿಗೆ ಇಳಿದಿರುವುದು ತೀರಾ ಅನ್ಯಾಯ’ ಎಂದು ಆರ್‌ಟಿಇ ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್‌. ಯೋಗಾನಂದ ಹೇಳಿದರು.

ಅಸಹಾಯಕತೆ: ‘ಸರ್ಕಾರ ಶುಲ್ಕ ಕಡಿತಗೊಳಿಸಿದ ವಿಷಯದಲ್ಲಿ ಹೈಕೋರ್ಟ್‌ ಅಂತಿಮ ತೀರ್ಪು ನೀಡದೇ ಇರುವುದು ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ವರವಾಗಿದೆ. ಪ್ರಕರಣ ಹೈಕೋರ್ಟ್‌ನಲ್ಲಿರುವುದರಿಂದ ಶೇ 70ರಷ್ಟು ಮಾತ್ರ ಶುಲ್ಕ ಪಡೆಯಬೇಕು ಎಂದು ಮತ್ತೊಮ್ಮೆ ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಲು ಸಾಧ್ಯವೂ ಇಲ್ಲ’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ಎಲ್ಲಿಂದ ಕಟ್ಟಲಿ: ಪೋಷಕರ ಅಳಲು

‘ನನ್ನ ಮಗ ಎಸ್ಸೆಸ್ಸೆಲ್ಸಿ ಓದುತ್ತಿದ್ದು, ಶಾಲೆಯವರು ನಿಗದಿಪಡಿಸಿದ್ದ ₹ 41 ಸಾವಿರ ಶುಲ್ಕದಲ್ಲಿ ಈಗ ₹ 26,500 ಪಾವತಿಸಿದ್ದೇನೆ. ಸರ್ಕಾರದ ಆದೇಶದಂತೆ ಶೇ 70ರಷ್ಟು ಶುಲ್ಕ ಪಾವತಿಸಲು ಬದ್ಧ. ಆದರೆ, ಶಾಲೆಯವರು ಉಳಿದ ₹ 14,500 ಕಟ್ಟದಿದ್ದರೆ ಹಾಲ್‌ಟಿಕೆಟ್‌ ಕೊಡುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದಾರೆ’ ಎಂದು ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯ ಪೋಷಕರೊಬ್ಬರು ನೋವು ತೋಡಿಕೊಂಡಿದ್ದಾರೆ.

‘ಶುಲ್ಕ ಕಡಿತಗೊಳಿಸಿದ ಆದೇಶ ಮಾಡಿದ ಶಿಕ್ಷಣ ಸಚಿವರನ್ನೇ ಕರೆದುಕೊಂಡು ಬಂದರೂ ಪೂರ್ಣ ಶುಲ್ಕ ಕಟ್ಟದಿದ್ದರೆ ಹಾಲ್‌ಟಿಕೆಟ್‌ ಕೊಡಲ್ಲ. ನಾವು ನಿಗದಿಪಡಿಸಿರುವ ಶುಲ್ಕದಲ್ಲಿ ನಯಾ ಪೈಸೆ ಕಡಿಮೆ ಮಾಡಲ್ಲವೆಂದು ಷರತ್ತು ಹಾಕಿದ್ದಾರೆ’ ಎಂದರು.

ಪೂರ್ಣ ಶುಲ್ಕ ಪಾವತಿಸುವಂತೆ ಒತ್ತಡ ಹೇರುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಬಿಇಒಗಳಿಗೆ ಪೋಷಕರು ದೂರು ನೀಡಿದರೆ ಡಿಡಿಪಿಐಗಳು ಕ್ರಮ ತೆಗೆದುಕೊಳ್ಳಲಿದ್ದಾರೆ

- ಎಸ್‌. ಸುರೇಶ್‌ಕುಮಾರ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ಶಿಕ್ಷಣ ಸಚಿವರು, ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಿ ಅಂಥ ಶಾಲೆಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು, ಸಹಾಯವಾಣಿ ಆರಂಭಿಸಿ ವಿದ್ಯಾರ್ಥಿಗಳು, ಪೋಷಕರ ನೆರವಿಗೆ ನಿಲ್ಲಬೇಕು 

-ವಿ.ಪಿ. ನಿರಂಜನಾರಾಧ್ಯ, ಶಿಕ್ಷಣ ತಜ್ಞ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು