ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಂವಾದ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯ ಅಗತ್ಯ ಇದೆಯೆ?

Last Updated 23 ಸೆಪ್ಟೆಂಬರ್ 2021, 19:12 IST
ಅಕ್ಷರ ಗಾತ್ರ

‘ಒಂದು ಧರ್ಮದಲ್ಲಿರುವ ಲೋಪಗಳೇ ಮತ್ತೊಂದು ಧರ್ಮಕ್ಕೆ ಜನರು ವಲಸೆ ಹೋಗಲು ಕಾರಣವಾಗುತ್ತವೆ. ಅಂತರ ಧರ್ಮೀಯ ವಿವಾಹಗಳನ್ನು ತಡೆಯುವ ಗುಪ್ತ ಕಾರ್ಯಸೂಚಿಯಿಂದ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾ ಗುತ್ತಿದೆ. ಮನುಷ್ಯನ ಆಯ್ಕೆ ಸ್ವಾತಂತ್ರ್ಯಕ್ಕೆ ನಿಯಂತ್ರಣ ಹೇರುವುದು ಸರಿಯಲ್ಲ’–ಇದು ‘ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯ ಅಗತ್ಯ ಇದೆಯೇ?’ ಎಂಬ ವಿಷಯದ ಕುರಿತು ‘ಪ್ರಜಾವಾಣಿ’ ಏರ್ಪಡಿಸಿದ್ದ ಸಂವಾದದಲ್ಲಿ ವ್ಯಕ್ತವಾದ ಅಭಿಪ್ರಾಯ.

ಚಿತ್ರದುರ್ಗ ಜಿಲ್ಲೆಯಲ್ಲಿ ಆಮಿಷದ ಮತಾಂತರ ನಡೆಯುತ್ತಿದೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಅವರು ಸದನದಲ್ಲಿ ಪ್ರಸ್ತಾಪಿಸಿದ್ದರು. ತಮ್ಮ ತಾಯಿ ಸೇರಿದಂತೆ ಜಿಲ್ಲೆಯಲ್ಲಿ 15–20 ಸಾವಿರ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಎಂದಿದ್ದರು. ಹೀಗಾಗಿ ಶೀಘ್ರದಲ್ಲೇ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವುದಾಗಿ ಸರ್ಕಾರ ಘೋಷಿಸಿತ್ತು.

‘ಮತಾಂತರ ಇಂದು ನಿನ್ನೆಯದಲ್ಲ’
‘ಬಡಜನರನ್ನು ಕ್ರೈಸ್ತ ಮಿಷನರಿಗಳು ಆಮಿಷವೊಡ್ಡಿ ಮತಾಂತರ ಮಾಡುತ್ತಿವೆ ಎಂಬ ವಿಷಯವನ್ನು ಹಲವು ವರ್ಷಗಳಿಂದ ಹೇಳುತ್ತಾ ಬಂದಿದ್ದೇವೆ.ಕ್ರೈಸ್ತ ಮಿಷನರಿಗಳು ಆಸ್ಪತ್ರೆಗೆ ಹೋಗಿ ರೋಗಿ ಹುಷಾರಾಗುತ್ತಾನೆ ಎಂದು ನಂಬಿಸಿ ಬೈಬಲ್ ನೀಡುತ್ತಾರೆ. ಅವರ ಜೊತೆ ನಿರಂತರ ಸಂಪರ್ಕ ಸಾಧಿಸುತ್ತಾರೆ. ತುಳಸಿ ಗಿಡ ತೆಗೆಯಲು ಹೇಳುತ್ತಾರೆ. ಹೆಣ್ಣುಮಕ್ಕಳ ಗಾಜಿನ ಬಳೆ ತೆಗೆಸುತ್ತಾರೆ. ಕುಂಕುಮ ಇಡಬೇಡಿ ಎನ್ನುತ್ತಾರೆ. ಹಿಂದೂ ಧರ್ಮದಲ್ಲಿ ಅಸ್ಪೃಷ್ಯತೆ ಎಂಬ ನ್ಯೂನತೆ ಇರುವುದು ನಿಜ. ಒಬ್ಬ ಶಾಸಕರ ತಾಯಿಯನ್ನೂ ಮತಾಂತರ ಮಾಡುತ್ತಾರೆ ಎಂದರೆ ಅವರು ಎಷ್ಟು ಪ್ರಭಾವಶಾಲಿ ಇರಬಹುದು ಎಂದು ಯೋಚಿಸಿ.ತಂದೆ–ತಾಯಿಯ ಜೊತೆ ಅವರ ಮಕ್ಕಳನ್ನೂ ಮತಾಂತರಕ್ಕೆ ತಳ್ಳಲು ಯಾವ ಕಾನೂನಿನಲ್ಲಿ ಅನುಮತಿ ಇದೆ? ಕೇವಲ ₹5 ಸಾವಿರಕ್ಕೆ ಮತಾಂತರ ಆದವರನ್ನು ನಾನು ನೋಡಿದ್ದೇನೆ. ಹೀಗೆ ಹಣಕ್ಕಾಗಿ ಮತಾಂತರ ಆದವರು, ತಮ್ಮ ಹಿಂದಿನ ಧರ್ಮದಲ್ಲಿ ಪಡೆಯುತ್ತಿದ್ದ ಸರ್ಕಾರಿ ಸೌಲಭ್ಯಗಳನ್ನು ಮುಂದುವರಿಸುವುದು ಸರಿಯಲ್ಲ. ಈಗಿರುವ ಕಾನೂನು ಹಲ್ಲಿಲ್ಲದ ಹಾವಾಗಿದೆ. ಆ ಹಾವಿಗೆ ವಿಷದ ಹಲ್ಲು ನೀಡಲು ಈ ಕಾಯ್ದೆ ಜಾರಿಗೆ ತರಲಾಗುತ್ತಿದೆ.’
-ಜಗದೀಶ್ ಶೇಣವ,ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಘಟಕದ ವಕ್ತಾರ

‘ಬದಲಾವಣೆಯ ಸಹಜ ಪ್ರಕ್ರಿಯೆ ಗೌರವಿಸಬೇಕು’
‘ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಖಂಡಿತವಾಗಿ ಅಗತ್ಯವಿಲ್ಲ. ಜನರು ಪ್ರಜ್ಞಾವಂತರು ಎಂದು ಯಾವ ಸರ್ಕಾರ ಒಪ್ಪಿಕೊಳ್ಳುತ್ತದೆಯೋ ಅಲ್ಲಿ ಇಂತಹ ಕಾಯ್ದೆಗಳ ಅಗತ್ಯವಿರುವುದಿಲ್ಲ. ಹೇಗೆ ಬದುಕಬೇಕು ಎಂಬುದು ಜನರಿಗೆ ಬಿಟ್ಟ ವಿಷಯ. ಅಂತರ್ಜಾತಿ, ಅಂತರ ಧರ್ಮೀಯ ವಿವಾಹಗಳನ್ನು ಮೊದಲು ಮನೆಯವರು ವಿರೋಧಿಸುತ್ತಿದ್ದರು. ಆದರೆ ಈಗ ಸಂಬಂಧಪಡದ ವ್ಯಕ್ತಿಗಳು ನಿಯಂತ್ರಿಸಲು ಯತ್ನಿಸುತ್ತಿರುವುದು ಆತಂಕಕಾರಿ ವಿದ್ಯಮಾನ.

‘ಈ ಕಾಯ್ದೆಯನ್ನು ಬಹುಸಂಖ್ಯಾತ ದಲಿತರು ಮತ್ತು ಮಹಿಳೆಯರನ್ನು ಗುರಿಯಾಗಿಸಿ ರೂಪಿಸಲಾಗುತ್ತಿದೆ. ಜೀವಿಯೊಂದು ತಾನು ಜೀವಿಸುತ್ತಿರುವ ಪರಿಸರ ಉಸಿರುಗಟ್ಟುವಂತಿದೆ ಎಂದೆನಿಸಿದಾಗ, ಒಳ್ಳೆಯ ವಾತಾವರಣ‌ವನ್ನು ಬಯಸುವುದು ಸಹಜ ಪ್ರಕ್ರಿಯೆ. ಇದು ಮನುಷ್ಯರಿಗೂ ಅನ್ವಯ. ಅನ್ಯಾಯದಿಂದ ಕೂಡಿರುವ ಸಮಾಜವನ್ನು ತೊರೆದು, ನ್ಯಾಯಪರ ವಾತಾವರಣಕ್ಕೆ ಬದಲಾಗುವ ಸಹಜ ಪ್ರಕ್ರಿಯೆಯನ್ನು ಗೌರವಿಸಬೇಕು. ಕೇವಲ ಬಡತನದಿಂದ ಮತಾಂತರ ಆಗುತ್ತಿದೆ ಎಂಬುದು ಸರಿಯಲ್ಲ. ಅದು ಆಂಶಿಕ ಮಾತ್ರ. ಸಮಾಜದ ಅನಿಷ್ಠ ಪದ್ಧತಿಗಳನ್ನು ನಿವಾರಿಸದ ಹೊರತು ಇದು ನಿರಂತರ ಪ್ರಕ್ರಿಯೆಯಾಗಿ ಉಳಿಯುತ್ತದೆ’.
-ಸಬಿಹಾ ಭೂಮಿಗೌಡ,ವಿಶ್ರಾಂತ ಕುಲಪತಿ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ

*

‘ಧರ್ಮದ ಆಯ್ಕೆ ಸ್ವಾತಂತ್ರ್ಯ ಇದೆ’
‘ರಾಜಕಾರಣವು ಧರ್ಮದಲ್ಲಿ ಮಿಳಿತವಾಗಬಾರದು ಎಂದು ಗಾಂಧೀಜಿ ಪ್ರತಿಪಾದಿಸಿದ್ದರು. ಸಂವಿಧಾನದ ಕಲಂ 25ರ ಅಡಿ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಮೂಲಭೂತ ಹಕ್ಕು ದೇಶದ ಜನರಿಗೆ ಇದೆ. ಸ್ವಾತಂತ್ರ್ಯ ಬಂದು 75 ವರ್ಷಗಳು ಸಂದಿರುವಾಗ ಈಗ ಕಾಯ್ದೆ ಜಾರಿ ಮಾಡುತ್ತಿರುವುದು ರಾಜಕೀಯ ಪ್ರೇರಿತ. ಧರ್ಮ ಪ್ರಚಾರ ನಿಷಿದ್ಧವಲ್ಲ. 18ನೇ ಶತಮಾನದಲ್ಲಿ ಹಿಂದೂ ಧರ್ಮವನ್ನು ಪ್ರಚಾರ ಮಾಡಲಾಗಿದೆ. ಆದರೆ ಯಾರನ್ನೂ ಬಲವಂತವಾಗಿ ಮತಾಂತರ ಮಾಡುವಂತಿಲ್ಲ. ಹೀಗೆ ಮಾಡಿದರೆ ಕ್ರಮ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ಇದ್ದು, ಪ್ರತ್ಯೇಕ ಕಾಯ್ದೆ ಅನಗತ್ಯ.

‘ಕರ್ನಾಟಕದಲ್ಲಿ ಒತ್ತಾಯದ ಮತಾಂತರ ನಡೆಯುತ್ತಿಲ್ಲ ಎಂದು ಬಿಜೆಪಿ ಸರ್ಕಾರವೇ 2019ರಲ್ಲಿ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ. ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಅದರ ತೀರ್ಪನ್ನು ಕಾದುನೋಡೋಣ. ಬಿಜೆಪಿ ಪ್ರಭಾವವಿರುವ ಎಂಟು ರಾಜ್ಯಗಳಲ್ಲಿ ಈಗಾಗಲೇ ಕಾಯ್ದೆ ಜಾರಿಗೊಳಿಸಲಾಗಿದೆ. 18 ವರ್ಷದ ಬಳಿಕ ಅಂತರ್ಜಾತಿ ವಿವಾಹವಾದರೆ, ಪೋಷಕರ ಅನುಮತಿ ಬೇಕು ಎಂಬುದು ಈ ರಾಜ್ಯಗಳಲ್ಲಿ ತಂದಿರುವ ಕಾಯ್ದೆಗಳಲ್ಲಿ ಉಲ್ಲೇಖವಾಗಿದೆ.ಹಾಗಾದರೆ ಮೂಲಭೂತ ಹಕ್ಕು ಎಲ್ಲಿ ಹೋಯಿತು? ರಾಜಕೀಯ ಕಾರಣಕ್ಕೋಸ್ಕರ ಧರ್ಮದ ಆಯ್ಕೆ ಸ್ವಾತಂತ್ರ್ಯ ಕಿತ್ತುಕೊಳ್ಳುವುದು ಸರಿಯಲ್ಲ. ಒತ್ತಾಯದ ಮತಾಂತರ ಆಗಿದ್ದರೆ, ದೂರು ದಾಖಲಿಸುವ ಆಯ್ಕೆಗಳಿವೆ’.
-ರಮೇಶ್ ಬಾಬು,ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರ

*

ಜನರ ಗಮನ ಬೇರೆಡೆ ಸೆಳೆಯುವ ಯತ್ನ’
‘ತಮ್ಮ ಜಿಲ್ಲೆಯಲ್ಲಿ ಹತ್ತಿಪ್ಪತ್ತು ಸಾವಿರ ಜನರು ಮತಾಂತರ ಆಗುತ್ತಿದ್ದಾರೆ ಎಂದರೆ ಆ ಪ್ರದೇಶದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯನ್ನು ಅರಿಯಲು ಒಬ್ಬ ಶಾಸಕರಾಗಿ ಗೂಳಿಹಟ್ಟಿ ಅವರಿಗೆ ಏಕೆ ಆಗಿಲ್ಲ ಎಂದು ಪ್ರಶ್ನಿಸಲು ಬಯಸುತ್ತೇನೆ. ಒಬ್ಬ ಶಾಸಕರಿಂದ ತಮ್ಮ ತಾಯಿಯನ್ನೇ ತಡೆಯಲಾಗದ್ದು, ಕಾಯ್ದೆ ಮೂಲಕ ತಡೆಯಲು ಸಾಧ್ಯವೇ? ದೇಶದಲ್ಲಿ ಎಷ್ಟೋ ನಿಷೇಧ ಕಾಯ್ದೆಗಳಿವೆ. ಆದರೆ ತಡೆಯಲು ಆಗಿದೆಯೇ? ಶಾಸಕರ ತಾಯಿ ಮತಾಂತರವಾದ ಹಳೆಯ ಸುದ್ದಿ ಈಗ ಮುನ್ನೆಲೆಗೆ ಬರಲು ರಾಜಕೀಯ ಕಾರಣವಿದೆ.

‘ಬೆಲೆ ಏರಿಕೆ ಹಾಗೂ ಅತ್ಯಾಚಾರದ ಬಗ್ಗೆ ಗಂಭೀರ ಚರ್ಚೆ ನಡೆಯುವ ವೇಳೆ ಸದನದ ಮತ್ತು ರಾಜ್ಯದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಇಂತಹ ಭಾವನಾತ್ಮಕ ವಿಚಾರವನ್ನು ಬಿಜೆಪಿ ಎತ್ತಿಕೊಂಡಿದೆ. ಜಮೀನ್ದಾರರು, ಬ್ರಾಹ್ಮಣರ ಒತ್ತಡದಿಂದ ಪಾರಾಗಲು ಜನರು ಮತಾಂ ತರ ಆಗುತ್ತಾರೆ ಎಂದು ಸ್ವಾಮಿ ವಿವೇಕಾನಂದರು ತಮ್ಮ ಪುಸ್ತಕದಲ್ಲಿ ಅಂದೇ ಉಲ್ಲೇಖಿಸಿದ್ದರು. ಅದರ ಲೋಪಗಳನ್ನು ಸರಿಪಡಿಸಲು ಈಗಲೂ ಆಗಿಲ್ಲ.ದೇಶದಲ್ಲಿ ಮುಸ್ಲಿಮರ ಸಂಖ್ಯೆ ಶೇ 35ಕ್ಕೆ ಹೆಚ್ಚಳವಾಗಿದೆ ಎಂದು ಸುಳ್ಳು ಹೇಳಲಾಗುತ್ತಿದೆ. ಆದರೆ ದತ್ತಾಂಶಗಳು ಹೀಗೆ ಹೇಳುವುದಿಲ್ಲ. ಇದು ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಯತ್ನ’.
-ಕೆ.ಎಸ್. ವಿಮಲಾ,ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT