ಭಾನುವಾರ, ಜೂನ್ 26, 2022
27 °C
ಹೆಡ್‌ ಕಾನ್‌ಸ್ಟೆಬಲ್‌ ಬಳಿ ₹ 2.16 ಕೋಟಿ ಜಪ್ತಿ

ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ: ಅಕ್ರಮದ ಹಣದಲ್ಲಿ ಐಷಾರಾಮಿ ಬಂಗ್ಲೆ

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೊಳ ಗಾಗಿರುವ ಹೆಡ್‌ ಕಾನ್‌ಸ್ಟೆಬಲ್ ಶ್ರೀಧರ್, ಅಕ್ರಮದಿಂದ ಬಂದಿದ್ದ ಹಣದಲ್ಲಿ ಐಷಾರಾಮಿ ಬಂಗ್ಲೆ ನಿರ್ಮಿಸು ತ್ತಿದ್ದ ಸಂಗತಿ ಸಿಐಡಿ ಅಧಿಕಾರಿಗಳ ತನಿಖೆಯಿಂದ ಹೊರಬಿದ್ದಿದೆ.

‘ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್) ಹೆಡ್ ಕಾನ್‌ಸ್ಟೆಬಲ್ ಶ್ರೀಧರ್‌ನನ್ನು ನಿಯೋಜನೆ ಮೇರೆಗೆ ಪೊಲೀಸ್ ನೇಮಕಾತಿ ವಿಭಾಗಕ್ಕೆ ನೇಮಿಸಲಾಗಿತ್ತು. ನಾಲ್ಕೈದು ವರ್ಷದಿಂದ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಶ್ರೀಧರ್, ಮಧ್ಯವರ್ತಿಗಳ ಮೂಲಕ ಅಭ್ಯರ್ಥಿಗಳನ್ನು ಪರಿಚಯಿಸಿಕೊಂಡು ಅಕ್ರಮಕ್ಕೆ ಸಹಕಾರ ನೀಡುತ್ತಿದ್ದ’ ಎಂದು ಸಿಐಡಿ ಮೂಲಗಳು ಹೇಳಿವೆ.

‘545 ಪಿಎಸ್‌ಐ ಹುದ್ದೆ ಗಳ ನೇಮಕಾತಿ ಪ್ರಕ್ರಿಯೆ ಯಲ್ಲಿ ಅಭ್ಯರ್ಥಿಗಳಿಂದ ಕೋಟ್ಯಂತರ ರೂಪಾಯಿ ಪಡೆ ದಿದ್ದ ಶ್ರೀಧರ್, ಅದರಲ್ಲಿ ತನ್ನ ಪಾಲು ಇಟ್ಟುಕೊಂಡಿದ್ದ. ಉಳಿದ ಹಣವನ್ನು ಇತರೆ ಆರೋಪಿಗಳಿಗೂ ಹಂಚಿರುವುದು ಗೊತ್ತಾಗಿದೆ. ‘ಬಸವೇಶ್ವರ ನಗರದ ಶಾರದಾ ಕಾಲೊನಿಯಲ್ಲಿರುವ ಶ್ರೀಧರ್ ಮನೆ ಮೇಲೆ ಇತ್ತೀಚೆಗೆ ದಾಳಿ ಮಾಡಲಾಗಿತ್ತು. ಆರಂಭದಲ್ಲಿ ₹16 ಲಕ್ಷ ಮಾತ್ರ ಸಿಕ್ಕಿತ್ತು. ಇದಾದ ನಂತರ ಶ್ರೀಧರ್‌ನ ಸ್ನೇಹಿತರು ದಾಳಿಗೆ ಹೆದರಿ ಹಂತ ಹಂತವಾಗಿ ₹ 2 ಕೋಟಿ ತಂದುಕೊಟ್ಟಿದ್ದಾರೆ. ಅಕ್ರಮದಿಂದ ಬಂದಿದ್ದ ಹಣವನ್ನು ತಮ್ಮ ಬಳಿ ಇಟ್ಟುಕೊಳ್ಳುವಂತೆ ಶ್ರೀಧರ್‌ ಹೇಳಿದ್ದನೆಂದು ಸ್ನೇಹಿತರು ಹೇಳಿಕೆ ಸಹ ನೀಡಿದ್ದಾರೆ’ ಎಂದೂ ಮೂಲಗಳು ಹೇಳಿವೆ.

ತುಮಕೂರಿನಲ್ಲಿ ಬಂಗ್ಲೆ: ‘ಪ್ರಕರಣದ ಪ್ರಮುಖ ಆರೋಪಿ ಆಗಿರುವ ಡಿವೈಎಸ್ಪಿ ಶಾಂತಕುಮಾರ್ ಅಧೀನದಲ್ಲಿ ಶ್ರೀಧರ್ ಕೆಲಸ ಮಾಡುತ್ತಿದ್ದ. ಅಕ್ರಮದಿಂದಲೇ ಇದುವರೆಗೂ ಆತ ₹4 ಕೋಟಿಗೂ ಹೆಚ್ಚು ಹಣ ಗಳಿಸಿರುವ ಮಾಹಿತಿ ಇದೆ. ಹಣದ ಮೂಲ ಹುಡುಕುತ್ತ ಹೊರಟಾಗ, ತುಮಕೂರಿನಲ್ಲಿ ಐಷಾರಾಮಿ ಬಂಗ್ಲೆ  ಕಟ್ಟಿಸುತ್ತಿರುವ ಸಂಗತಿ ತಿಳಿಯಿತು. ಕಟ್ಟಡ ನಿರ್ಮಾಣ ಕೆಲಸ ಮುಗಿದಿದ್ದು, ಗಾರೆ (ಪ್ಲಾಸ್ಟರಿಂಗ್) ಕೆಲಸ ಮಾತ್ರ ಬಾಕಿ ಇದೆ. ಜೊತೆಗೆ, ಹೊರಾಂಗಣ ಹಾಗೂ ಒಳಾಂಗಣ ವಿನ್ಯಾಸ ಕೆಲಸವನ್ನೂ ಈಗಾಗಲೇ ಗುತ್ತಿಗೆ ನೀಡಿದ್ದಾರೆ’ ಎಂದು ಸಿಐಡಿ ಮೂಲಗಳು ವಿವರಿಸಿವೆ.

‘ತುಮಕೂರಿನ ಸ್ಫೂರ್ತಿ ಬಡಾವಣೆ ಯಲ್ಲಿ 32X42 ಚದರ ಅಡಿ ಅಳತೆಯ ನಿವೇಶನ ಖರೀದಿಸಿರುವ ಶ್ರೀಧರ್, ಅದೇ ಸ್ಥಳದಲ್ಲಿ ಮೂರು ಅಂತಸ್ತಿನ ಐಷಾರಾಮಿ ಬಂಗ್ಲೆ ನಿರ್ಮಾಣ ಮಾಡಿಸುತ್ತಿದ್ದಾರೆ.’

‘ಶ್ರೀಧರ್ ಹೆಸರಿನಲ್ಲೇ ನಿವೇಶನ ನೋಂದಣಿ ಆಗಿದೆ. ತುಮಕೂರಿಗೆ ಹೋಗಿದ್ದ ವಿಶೇಷ ತಂಡ, ಉಪ ನೋಂದಣಾಧಿಕಾರಿಗಳಿಂದ ದಾಖಲೆ ಸಮೇತ ಮಾಹಿತಿ ಕಲೆ ಹಾಕಿದೆ. ಕಟ್ಟಡ ನಿರ್ಮಾಣ ಜವಾಬ್ದಾರಿ ವಹಿಸಿಕೊಂಡಿದ್ದ ಎಂಜಿನಿಯರ್ ಹಾಗೂ ಇತರೆ ವ್ಯಕ್ತಿ ಗಳಿಂದಲೂ ಹೇಳಿಕೆ ಪಡೆಯುವ ಕೆಲಸ ನಡೆದಿದೆ’ ಎಂದೂ ತಿಳಿಸಿವೆ.

ನ್ಯಾಯಾಲಯಕ್ಕೆ ಮಾಹಿತಿ: ‘ಶ್ರೀಧರ್, ಆದಾಯಕ್ಕಿಂತಲೂ ಹೆಚ್ಚು ಆಸ್ತಿ ಹೊಂದಿದ್ದಾರೆ. ನೇಮಕಾತಿ ವಿಭಾಗದಲ್ಲಿ ಕೆಲಸ ಆರಂಭಿಸಿದ ದಿನದಿಂದಲೇ ಆತನ ಆಸ್ತಿ ಹೆಚ್ಚಳವಾಗಿದೆ. ಪ್ರತಿ ನೇಮಕಾತಿಯಲ್ಲೂ ಅಕ್ರಮ ನಡೆಸಿರುವುದರ ಬಗ್ಗೆ ಮಾಹಿತಿ ಇದ್ದು, ಪರಿಶೀಲಿಸಬೇಕಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಶ್ರೀಧರ್‌ ಬಳಿ ಸಿಕ್ಕಿರುವ ಹಣ ಹಾಗೂ ಆತನ ಹೆಸರಿನಲ್ಲಿರುವ ಆಸ್ತಿಗಳ ಪಟ್ಟಿ ಮಾಡಲಾಗಿದ್ದು, ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಶ್ರೀಧರ್‌ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕುವ ಬಗ್ಗೆ ನ್ಯಾಯಾಲಯವೇ ತೀರ್ಮಾನ ಕೈಗೊಳ್ಳಲಿದೆ’ ಎಂದೂ ತಿಳಿಸಿವೆ.

‘3 ಕೋಟಿಗೂ ಹೆಚ್ಚು ಖರ್ಚು’
‘ಹೆಡ್‌ ಕಾನ್‌ಸ್ಟೆಬಲ್ ಶ್ರೀಧರ್, ತುಮಕೂರಿನಲ್ಲಿ ನಿವೇಶನ ಖರೀದಿಸಿ ಮೂರು ಅಂತಸ್ತಿನ ಐಷಾರಾಮಿ ಬಂಗ್ಲೆ ಕಟ್ಟಿಸಲು ₹3 ಕೋಟಿಗೂ ಹೆಚ್ಚು ಖರ್ಚು ಮಾಡಿರುವ ಮಾಹಿತಿ ಇದೆ. ಆ ಬಗ್ಗೆ ದಾಖಲೆ ಸಂಗ್ರಹಿಸಲಾಗುತ್ತಿದೆ. ಎಲ್ಲಾದರೂ ಸಾಲ ಪಡೆದಿರುವ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ. ಶ್ರೀಧರ್‌ನನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಅಗತ್ಯವಿದ್ದರೆ, ಪುನಃ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು’ ಎಂದು ಸಿಐಡಿ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು