ಬುಧವಾರ, ಆಗಸ್ಟ್ 17, 2022
25 °C

PV Web Exclusive| ವಿಮಾನ ನಿಲ್ದಾಣದೊಳಗೆ ಕಮರಿದ ಬದುಕು

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ‘ನಾವು ನಾಲ್ವರು ಸಹೋದರರು. ಪಿತ್ರಾರ್ಜಿತವಾಗಿ ಬಂದ ತಲಾ ಮೂರು ಎಕರೆ ಜಮೀನು ಇತ್ತು. ಬೆಳೆದ ಜೋಳ, ರಾಗಿ ವರ್ಷದ ಊಟಕ್ಕೆ ಸಾಕಾಗುತ್ತಿತ್ತು. ನೆಮ್ಮದಿಯ ಜೀವನ ಸಾಗಿಸುತ್ತಿದ್ದೆವು. ಈಗ ಎಲ್ಲ ಕಳೆದುಕೊಂಡಿದ್ದೇವೆ. ಸರ್ಕಾರ ನೀಡಿದ್ದ ಪರಿಹಾರದ ಹಣ ಖಾಲಿಯಾಗಿದೆ. ಈಗ ಬೇರೆಯವರ ಭೂಮಿಯಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಮಕ್ಕಳು ಮರಿ ಒಂದು ಹೊತ್ತಯ ಉಂಡರೆ ಎರಡ್ಹೊತ್ತು ಉಪವಾಸ ಎನ್ನುವ ಬದುಕು’

–ಇದು ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡ ಕುಪ್ಪಣ್ಣ ಅವರಂತಹ ನೂರಾರು ರೈತರ ಅಳಲು.

ಜಿಲ್ಲೆಯಲ್ಲೂ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎನ್ನುವ ಕನಸು ಚಿಗುರೊಡೆದದ್ದು 2006ರಲ್ಲಿ. 2004ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದೇ ಇದ್ದಾಗ ಜೆಡಿಎಸ್ ಬೆಂಬಲದೊಂದಿಗೆ ಕಾಂಗ್ರೆಸ್‌ನ ಧರ್ಮಸಿಂಗ್ ಮುಖ್ಯಮಂತ್ರಿಯಾದರು. 20 ತಿಂಗಳಿಗೆ ಸರ್ಕಾರ ಪತನವಾದ ನಂತರ ಬಿಜೆಪಿ–ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಈ ಸರ್ಕಾರದಲ್ಲಿ ಜಿಲ್ಲೆಯ ಶಿಕಾರಿಪುರದ ಶಾಸಕ ಬಿ.ಎಸ್. ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದರು. ಆಗ ಸೋಗಾನೆ ಬಳಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಯಿತು. 2008ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ನಂತರ ಭೂ ಸ್ವಾಧೀನಕ್ಕೆ ಚಾಲನೆ ನೀಡಲಾಗಿತ್ತು.

ವಿಮಾನ ನಿಲ್ದಾಣಕ್ಕಾಗಿ 752 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಅದರಲ್ಲಿ 70 ಎಕರೆ ಭೂಮಿಗೆ ಪ್ರತಿ ಎಕರೆಗೆ ₹ 9 ಲಕ್ಷದಂತೆ ಪರಿಹಾರ ನೀಡಲಾಗಿದೆ. ಉಳಿದ 578.34 ಎಕರೆ ಭೂಮಿ ಬಗರ್‌ಹುಕುಂ ಸಾಗುವಳಿ. ಪರಿಹಾರ ಪಡೆಯಲು ಅವರ ಬಳಿ ದಾಖಲೆಗಳಿಲ್ಲ. ಕೆಲವರು ಫಾರಂ ನಂಬರ್ 50, 53ರ ಅಡಿ ಭೂ ಹಕ್ಕು ಕೋರಿ ಅರ್ಜಿ ಸಲ್ಲಿಸಿದ್ದರು. ಇಂತಹ 400ಕ್ಕೂ ಹೆಚ್ಚು ರೈತರು ಸಾಗುವಳಿ ಮಾಡಿದ್ದು ಒಂದು, ಒಂದೂವರೆ ಎಕರೆಯಷ್ಟು ಭೂಮಿ. ಬಗರ್‌ಹುಕುಂ ಭೂಮಿ ಸರ್ಕಾರದ ಸ್ವತ್ತಾದ ಕಾರಣ ಕಾನೂನು ಪ್ರಕಾರ ಪರಿಹಾರ ನೀಡಲು ಸಾಧ್ಯವಿಲ್ಲ. ಕೊನೆಗೆ ರೈತರ ನಿರಂತರ ಹೋರಾಟದ ಫಲವಾಗಿ ಅಂತಹ 343 ರೈತರಿಗೆ ದಯಾ ಪರಿಹಾರವೆಂದು ತಲಾ ₹ 2 ಲಕ್ಷ ನೀಡಲಾಗಿತ್ತು. ಅದೇ ಭೂಮಿ ನಂಬಿಕೊಂಡು ದಶಕಗಳಿಂದ ಬದುಕು ನಡೆಸುತ್ತಿದ್ದ ಜನರು ಇಂದಿಗೂ ಸಂಕಷ್ಟದಲ್ಲಿದ್ದಾರೆ. ಬಹಳಷ್ಟು ಕುಟುಂಬಗಳು ತುತ್ತು ಅನ್ನಕ್ಕೂ ಪರದಾಟ ನಡೆಸಿವೆ.

ಭೂಮಿ ವಶಕ್ಕೆ ಪಡೆಯುವಾಗ ಕುಟುಂಬಗಳಿಗೆ ಆಶ್ರಯ ನೀಡುವ ಭರವಸೆ ನೀಡಲಾಗಿತ್ತು. ಪ್ರತಿ ರೈತರಿಗೂ ಪುನರ್‌ವಸತಿ ಕಲ್ಪಿಸಲು 30X40 ಅಳತೆಯ ನಿವೇಶನ, ಮನೆಕಟ್ಟಿಕೊಡುವ ಹಾಗೂ ಕುಟುಂಬದ ಯುವಕರಿಗೆ ಸರ್ಕಾರಿ ಕೆಲಸ ನೀಡುವ ಭರವಸೆ ನೀಡಲಾಗಿತ್ತು. ನಂತರ ವಿಮಾನ ನಿಲ್ದಾಣ ಕಾಮಗಾರಿ ನನೆಗುದಿಗೆ ಬಿದ್ದಂತೆ ಸೂರು ಕಲ್ಪಿಸುವ ವಿಷಯವೂ ಮರೆತುಹೋಗಿತ್ತು. ಭೂಮಿ ಕಳೆದುಕೊಂಡ ಹಲವು ರೈತರು ಪಾಳು ಬಿದ್ದ ಜಮೀನಿನಲ್ಲೇ ಹಸು, ಕುರಿ, ಕೋಳಿ ಸಾಕಿಕೊಂಡು, ಹೈನುಗಾರಿಕೆ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು. ಈಗ ವಿಮಾನ ನಿಲ್ದಾಣ ಕಾಮಗಾರಿಗಳು ಮತ್ತೆ ಗರಿಗೆದರಿವೆ. ಉಪ ಕಸುಬು ಮಾಡಿಕೊಂಡಿದ್ದ ಎಲ್ಲರನ್ನೂ ಆ ಜಾಗದಿಂದ ಒಕ್ಕಲೆಬ್ಬಿಸಲಾಗಿದೆ.

ಈ ಮಧ್ಯೆ ನಿವೇಶನ ನೀಡಲು ನಿಧಿಗೆ ಬಳಿ ಗುರುತಿಸಿದ್ದ 20 ಎಕರೆ ಭೂಮಿಯಲ್ಲಿ ಸಂತ್ರಸ್ತರಿಗೆ ಒಂದೂ ನಿವೇಶನ ದೊರೆತಿಲ್ಲ. ಎಲ್ಲವೂ ಪಟ್ಟಭದ್ರರ ಪಾಲಾಗಿವೆ. ಸಂತ್ರಸ್ತರು ನಿವೇಶನಕ್ಕಾಗಿ ಈಗಲೂ ಶಾಸಕರು, ಅಧಿಕಾರಿಗಳ ಮನೆ ಬಾಗಿಲಿಗೆ ಅಲೆಯುತ್ತಲೇ ಇದ್ದಾರೆ. ಈಚೆಗೆ ಭೂಮಿ ಕಳೆದುಕೊಂಡ ರೈತರ ಸಭೆ ನಡೆಸಿದ ಗ್ರಾಮಾಂತರ ಶಾಸಕ ಅಶೋಕನಾಯ್ಕ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರು 400 ರೈತರಿಗೆ ಗೃಹ ನಿರ್ಮಾಣ ಮಂಡಳಿಯಿಂದ ನಿವೇಶನ ಕೊಡಿಸುವ ಭರವಸೆ ನೀಡಿದ್ದಾರೆ.

384 ಕೋಟಿಗೆ ಹಿಗ್ಗಿದ ಯೋಜನೆ

2008ರಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾದಾಗ ಸರ್ಕಾರ ನಿಗದಿ ಮಾಡಿದ ಒಟ್ಟು ವೆಚ್ಚ ₹ 116 ಕೋಟಿ. ವಿಮಾನದ ರನ್‌ವೇ 2050 ಚದರ ಮೀಟರ್ ಇತ್ತು. ಟೆಂಡರ್ ಪ್ರಕ್ರಿಯೆಗಳು ಮುಗಿದು ಅರ್ಧದಷ್ಟು ರನ್‌ವೇ ಕಾರ್ಯವೂ ಆಗಿತ್ತು. ಆದರೆ, ಮಾಚೇನಹಳ್ಳಿ ಕೈಗಾರಿಕಾ ವಲಯದ ಕೆಲವು ಕಾರ್ಖಾನೆಗಳ ಚಿಮಣಿಗಳು ವಿಮಾನ ಇಳಿಯಲು ಅಡ್ಡಿಯಾಗುತ್ತವೆ ಎಂದು ತಂತ್ರಜ್ಞರು ಎಚ್ಚರಿಸಿದ ನಂತರ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ನಂತರ ಬಂದ ಕಾಂಗ್ರೆಸ್‌ ಸರ್ಕಾರ ಆಸಕ್ತಿ ತೋರಲಿಲ್ಲ. 2019ರಲ್ಲಿ ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿಯಾದ ತಕ್ಷಣ ₹ 47 ಕೋಟಿ ಹೆಚ್ಚುವರಿ ಪಾವತಿಸಿ, ರನ್‌ವೇ ಬದಲಿಸಿ 2,580 ಚದರ ಮೀಟರ್‌ಗೆ ಹೆಚ್ಚಿಸಿದ್ದರು. ಈಗ ಮತ್ತೊಮ್ಮೆ ಯೋಜನೆ ವಿಸ್ತರಿಸಿ, ಏರ್‌ಬಸ್‌ಗಳೂ ಇಳಿಯುಲು ಅನುಕೂಲವಾಗುವಂತೆ ರನ್‌ವೇಯನ್ನು 3,200 ಚದರ ಮೀಟರ್‌ಗೆ ವಿಸ್ತರಿಸಲು ಅನುಮೋದನೆ ನೀಡಲಾಗಿದೆ. ಹಿಂದೆ ನಿಗದಿಯಾಗಿದ್ದ ₹ 220 ಕೋಟಿ ಜತೆಗೆ ಹೊಸದಾಗಿ ₹ 164 ಕೋಟಿ ಬಿಡುಗಡೆ ಮಾಡಲಾಗಿದೆ. ಒಟ್ಟು ಯೋಜನಾ ವೆಚ್ಚ ₹ 384 ಕೋಟಿಗೆ ಏರಿಕೆಯಾಗಿದೆ.

ಈಗಾಗಲೇ ವಿಮಾನ ನಿಲ್ದಾಣದ ಇಡೀ ಭೂಮಿಗೆ ಕಾಂಪೌಂಡ್‌ ನಿರ್ಮಿಸುವ ಕೆಲಸ ಆರಂಭವಾಗಿದೆ. ರನ್‌ವೇ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಪ್ರಥಮ ಹಂತದಲ್ಲಿ ರನ್‍ವೇ, ಟ್ಯಾಕ್ಸಿ ವೇ, ಏಪ್ರಾನ್, ಪೂರಕ ರಸ್ತೆ, ಕಾಂಪೌಂಡ್ ಗೋಡೆ ನಿರ್ಮಾಣವಾಗಲಿವೆ. ಸಾಮಾನ್ಯ ವಿಮಾನಗಳ ಜತೆ, ಏರ್‌ಬಸ್‌ ಸೇರಿದಂತೆ ಏಕ ಕಾಲಕ್ಕೆ ಮೂರು ವಿಮಾನಗಳು ಇಳಿಯಲು ಸಾಧ್ಯವಾಗಲಿದೆ. ಕಚೇರಿ, ಕಟ್ಟಡ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. 2021ರ ಡಿಸೆಂಬರ್ ಅಂತ್ಯದ ವೇಳೆಗೆ ವಿಮಾನಗಳ ಹಾರಾಟದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಅತ್ತ ಜನರ ಬದುಕಿನ ಕನಸುಗಳು ಭೂಮಿಯಲ್ಲೇ ಕಮರಿಹೋಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು