ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಪೊಲೀಸರನ್ನು ಆಪತ್ತಿಗೆ ತಳ್ಳುತ್ತಿರುವ ಪ್ರತಿಭಟನೆಗಳು

Last Updated 30 ಸೆಪ್ಟೆಂಬರ್ 2020, 11:18 IST
ಅಕ್ಷರ ಗಾತ್ರ
ADVERTISEMENT
""
""
""

ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜೀವಂತವಾಗಿಡುವಲ್ಲಿ ಪ್ರತಿಭಟನೆಗಳ ಪಾತ್ರ ಮಹತ್ವದ್ದು. ಆದರೆ ಕೋವಿಡೋತ್ತರ ಕಾಲಘಟ್ಟದಲ್ಲಿ ಸರ್ಕಾರದ ವಿರುದ್ಧ, ಆಡಳಿತ ವ್ಯವಸ್ಥೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಪೊಲೀಸ್‌ ಸಿಬ್ಬಂದಿಯನ್ನು ಅಪಾಯಕ್ಕೆ ತಳ್ಳುತ್ತಿವೆ.

ಪ್ರತಿಭಟನೆ ಸಂದರ್ಭಗಳಲ್ಲಿ ಬಂದೋಬಸ್ತ್‌ ಕರ್ತವ್ಯನಿರತರಾಗಿರುವ ತಳಹಂತದ ಪೊಲೀಸ್‌ ಸಿಬ್ಬಂದಿ ಅತ್ತ ಹಿರಿಯ ಅಧಿಕಾರಿಗಳ ಆದೇಶ ಧಿಕ್ಕರಿಸಲೂ ಆಗದೇ ಇತ್ತ ಕೋವಿಡ್‌ನಿಂದ ರಕ್ಷಿಸಿಕೊಳ್ಳಲಿಕ್ಕೂ ಆಗದೇ ಅಡಕತ್ತರಿಯಲ್ಲಿ ಸಿಲುಕಿದ್ದಾರೆ.

ನಗರದಲ್ಲಿ ಅತಿ ಹೆಚ್ಚು ಪ್ರತಿಭಟನೆಗಳು ಹಲಸೂರು ಗೇಟ್‌ ಠಾಣೆಯವ ವ್ಯಾಪ್ತಿಯಲ್ಲೇ ನಡೆಯುತ್ತವೆ. ಪುರಭವನ, ಮೈಸೂರು ಬ್ಯಾಂಕ್‌ ವೃತ್ತ, ಬಿಬಿಎಂಪಿ ಕೇಂದ್ರ ಕಚೇರಿಗಳೆಲ್ಲವೂ ಈ ಠಾಣೆಯ ವ್ಯಾಪ್ತಿಗೆ ಬರುತ್ತವೆ. ಜನನಿಬಿಡವಾಗಿರುವ ಈ ಪ್ರದೇಶದಲ್ಲಿ ನಡೆಯುವ ಪ್ರತಿಭಟನೆಗಳು ಹೆಚ್ಚು ಗಮನಸೆಳೆಯುವುದರಿಂದ ಇಲ್ಲಿ ನಿತ್ಯವೂ ಒಂದಿಲ್ಲೊಂದು ಪ್ರತಿಭಟನೆ ನಡೆಯುತ್ತಲೇ ಇರುತ್ತದೆ ಎನ್ನುತ್ತಾರೆ ಈ ಪೊಲೀಸ್‌ ಠಾಣೆಯ ಸಿಬ್ಬಂದಿ.

ಹಲಸೂರು ಗೇಟ್‌ ಠಾಣೆಯ ವ್ಯಾಪ್ತಿಯೊಂದರಲ್ಲೇ ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳುಗಳಲ್ಲಿ 35ಕ್ಕೂ ಅಧಿಕ ಪ್ರತಿಭಟನೆಗಳು ನಡೆದಿವೆ. ಈ ಠಾಣೆಯ 115 ಸಿಬ್ಬಂದಿ ಇದ್ದು, ಸಬ್‌ಇನ್‌ಸ್ಪೆಕ್ಟರ್‌, ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಇಬ್ಬರು ಮಹಿಳಾ ಸಿಬ್ಬಂದಿಯೂ ಸೇರಿದಂತೆ ಇದುವರೆಗೆ 17 ಸಿಬ್ಬಂದಿಗೆ ಕೋವಿಡ್‌ ತಗುಲಿದೆ.

‘ಪ್ರತಿಭಟನೆ ಸಂದರ್ಭದಲ್ಲಿ ಬಂದೋಬಸ್ತ್‌ ಕರ್ತವ್ಯಕ್ಕೆ ನಮ್ಮನ್ನು ನಿಯೋಜಿಸುತ್ತಾರೆ. ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ನಾವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಬೇಕಾಗುತ್ತದೆ. ಈ ಸಂದರ್ಭದಲ್ಲಿ ಅವರು ಘೋಷಣೆ ಕೂಗುವುದು ತಪ್ಪಿಸಿಕೊಳ್ಳಲು ಯತ್ನಿಸುವುದು ಮಾಮೂಲಿ. ಆಗೆಲ್ಲ ಯಾವ ಅಂತರವನ್ನೂ ಕಾಪಾಡುವುದಕ್ಕೆ ಸಾಧ್ಯವಿಲ್ಲ. ಘೋಷಣೆ ಕೂಗುವಾಗ ಅವರ ಎಂಜಿಲು ನಮ್ಮ ಮೇಲೂ ಚಿಮ್ಮುತ್ತದೆ. ಒಂದು ವೇಳೆ ಪ್ರತಿಭಟನಾಕಾರರಿಗೆ ಕೋವಿಡ್‌ ಸೋಂಕು ಇದ್ದರೆ ನಮಗೂ ಹಬ್ಬುವುದು ಖಚಿತ’ ಎಂದು ತಮ್ಮ ಹೆಸರು ಬಹಿರಂಗ ಪಡಿಸಲು ಬಯಸದ ಠಾಣೆಯ ಸಿಬ್ಬಂದಿಯೊಬ್ಬರು ತಮ್ಮ ಇಕ್ಕಟ್ಟಿನ ಪರಿಸ್ಥಿತಿಯನ್ನು ವಿವರಿಸಿದರು.

ಬಹುತೇಕ ಪ್ರತಿಭಟನೆಗಳಿಗೆ ಆಯೋಜಕರು ಅನುಮತಿಯನ್ನೇ ಪಡೆದಿರುವುದಿಲ್ಲ. ಕೋವಿಡ್‌ ವ್ಯಾಪಕವಾಗಿ ಹಬ್ಬುತ್ತಿರುವ ಈ ಸಂದರ್ಭದಲ್ಲಿ 100ಕ್ಕಿಂತ ಹೆಚ್ಚು ಮಂದಿ ಒಂದೆಡೆ ಸೇರಬಾರದು ಎಂಬ ನಿಯಮವಿದೆ. ಆದರೆ, ಪ್ರತಿಭಟನೆಗಳ ಸಂದರ್ಭದಲ್ಲಿ ಅದು ಪಾಲನೆಯಾಗುತ್ತಲೇ ಇಲ್ಲ. ಸೆ. 28ರಂದು ನಡೆದ ಬಂದ್‌ಗೆ ಪೊಲೀಸ್‌ ಇಲಾಖೆ ಅನುಮತಿ ನೀಡಿರಲಿಲ್ಲ. ಆದರೂ ಸಾವಿರಾರು ಸಂಖ್ಯೆಯಲ್ಲಿ ಜನ ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಿದರು.

‘ರ‍್ಯಾಲಿಯಲ್ಲಿ ಸಾಗುತ್ತಿದ್ದ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುವಂತೆ ಮೇಲಧಿಕಾರಿಗಳು ಸೂಚನೆ ನೀಡಿದರು. ನಮಗೆ ಬೇರೆ ವಿಧಿ ಇಲ್ಲದೇ ಕರ್ತವ್ಯ ನಿಭಾಯಿಸಬೇಕಾಯಿತು. ಕೋವಿಡ್‌ ಹರಡಬಹುದು ಎಂಬ ಅಳುಕುಒಳಗೊಳಗೆ ಇದ್ದೇ ಇದೆ. ನಮಗೆ ನೀಡಿರುವ ಮಾಸ್ಕ್‌, ಮುಖಕವಚಗಳು ನಮ್ಮನ್ನು ಕೋವಿಡ್‌ನಿಂದ ರಕ್ಷಿಸಲಾರವು ಎಂಬ ಸತ್ಯ ನಮಗೂ ತಿಳಿದಿದೆ. ನಮ್ಮ ಹೆಂಡತಿ ಮಕ್ಕಳ ಹಾಗೂ ವಯಸ್ಸಾದ ತಂದೆ ತಾಯಿಯ ಚಿತ್ರಣ ಕಣ್ಣಮುಂದೆ ಬರುತ್ತದೆ. ಅವೆಲ್ಲವನ್ನೂ ನುಂಗಿಕೊಂಡು ನಾವು ಕರ್ತವ್ಯ ನಿರ್ವಹಿಸಬೇಕು’ ಎಂದು ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದರು.

‘ನಾವು ಕೇವಲ ನಮ್ಮ ಠಾಣೆಯ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಿದರೆ ಸಾಲದು. ಸ್ವಾತಂತ್ರ್ಯ ಉದ್ಯಾನ (ಉಪ್ಪಾರ ಪೇಟೆ ಠಾಣಾ ವ್ಯಾಪ್ತಿ), ಮೌರ್ಯ ವೃತ್ತಗಳಲ್ಲಿ (ಶೇಷಾದ್ರಿಪುರ ಠಾಣಾ ವ್ಯಾಪ್ತಿ) ಪ್ರತಿಭಟನೆ ನಡೆದಾಗಲೂ ಬಂದೋಬಸ್ತ್‌ ಕರ್ತವ್ಯಕ್ಕೆ ನಮ್ಮನ್ನು ನಿಯೋಜಿಸಲಾಗುತ್ತದೆ. ತಿಂಗಳ ಹಿಂದೆ ವಿಲ್ಸನ್‌ ಗಾರ್ಡನ್‌ ಠಾಣೆಯ ಇನ್‌ಸ್ಪೆಕ್ಟರ್‌ ಹಾಗೂ ಎಎಸ್‌ಐ ಅವರು ಕೇವಲ ಐದೇ ದಿನಗಳ ಅಂತರದಲ್ಲಿ ತೀರಿಕೊಂಡರು. ನಮ್ಮ ಠಾಣೆಯಲ್ಲಿ 17 ಮಂದಿಗೆ ಕೋವಿಡ್‌ ಬಂದಿದ್ದರೂ ಪುಣ್ಯಕ್ಕೆ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ನಗರದಲ್ಲಿ 17 ಸಾವಿರಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಅಂದಾಜಿನ ಪ್ರಕಾರ ಇದುವರೆಗೆ 3,500ಕ್ಕೂ ಹೆಚ್ಚು ಮಂದಿಗೆ ಕೋವಿಡ್‌ ಸೋಂಕು ತಗುಲಿದೆ. ಕೋವಿಡ್‌ ವ್ಯಾಪಕವಾಗುತ್ತಿದ್ದಂತೆಯೇ ನಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಅಪಾಯವೂ ಹೆಚ್ಚುತ್ತಿದೆ’ ಎಂದು ಪರಿಸ್ಥಿತಿ ವಿವರಿಸಿದರು.

ಪೊಲೀಸ್‌ ಸಿಬ್ಬಂದಿಯ ಕೋವಿಡ್‌ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ಕಾಯ್ದಿರಿಸಬೇಕು ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ಆರೋಗ್ಯ ಇಲಾಖೆಯನ್ನು ಕೋರಿದ್ದರು. ಆದರೆ, ಆ ಬೇಡಿಕೆ ಈಡೇರಿಲ್ಲ. ಕೋವಿಡ್‌ನಿಂದ ಗಂಭಿರ ಸಮಸ್ಯೆ ಎದುರಿಸಿದ ಅನೇಕ ಸಿಬ್ಬಂದಿ ಸಕಾಲದಲ್ಲಿ ಚಿಕಿತ್ಸೆ ಪಡೆಯುವುದೂ ಸಾಧ್ಯವಾಗಿಲ್ಲ. ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ.

ಪ್ರತಿಭಟನೆ ವೇಳೆ ಅನೇಕರು ಮಾಸ್ಕ್‌ ಧರಿಸಿರುವುದಿಲ್ಲ. ಅಂತರ ಕಾಪಾಡುವುದಿಲ್ಲ. ಸ್ಯಾನಿಟೈಸರ್‌ಗಳನ್ನು ಬಳಸುವುದಿಲ್ಲ. ಇವೆಲ್ಲವೂ ಕೋವಿಡ್‌ ಹರಡುವ ಅಪಾಯವನ್ನು ಹೆಚ್ಚಿಸುತ್ತಿವೆ. ಪ್ರತಿಭಟನೆಯಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ನಿಯಂತ್ರಿಸುವುದು ಆಯೋಜಕರಿಗೆ ಹಾಗೂ ಪೊಲೀಸರಿಗೆ ತಲೆನೋವಿನ ವಿಚಾರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಗಳಿಗೆ ಅವಕಾಶ ನೀಡದೇ ಇರಲು ಸಾಧ್ಯವಿಲ್ಲ. ಕೋವಿಡ್‌ ವ್ಯಾಪಿಸುತ್ತಿರುವ ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸ್‌ ಸಿಬ್ಬಂದಿಗಳಿಬ್ಬರ ಹಿತದೃಷ್ಟಿಯಿಂದ ಸರ್ಕಾರ ಸರಿಯಾದ ಮಾರ್ಗಸೂಚಿ ರೂಪಿಸಿ ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತರು.

‘ಕೋವಿಡ್‌ ವ್ಯಾಪಿಸುತ್ತಿರುವ ಇಂದಿನ ಸಂದರ್ಭದಲ್ಲಿ ಪರಿಸ್ಥಿತಿಯ ಗಂಭೀರತೆಯನ್ನು ನಾಯಕರಾದವರು ಅರ್ಥ ಮಾಡಿಕೊಳ್ಳಬೇಕು. ತೀರಾ ಅನಿವಾರ್ಯವಾದರೆ ಮಾತ್ರ ಬೀದಿಗಿಳಿದು ಪ್ರತಿಭಟನೆ, ಧರಣಿ ಹಮ್ಮಿಕೊಳ್ಳಬೇಕು. ಸರ್ಕಾರವೂ ಪರಿಸ್ಥಿತಿಯ ಸೂಕ್ಷ್ಮವನ್ನು ಅರಿತು, ಜನರು ರೊಚ್ಚಿಗೇಳುವ ಮುನ್ನವೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಬೇಕು. ಪ್ರತಿಭಟನೆಗೆಂದೇ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಬೇಕು. ಅದನ್ನು ಪಾಲಿಸದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪೊಲೀಸರ ಚಿಕಿತ್ಸೆ ವೆಚ್ಚವನ್ನು ಪ್ರತಿಭಟನಾಕಾರರಿಂದಲೇ ವಸೂಲಿ ಮಾಡಬೇಕು. ಪೊಲೀಸ್‌ ಸಿಬ್ಬಂದಿಗೆ ಹೆಚ್ಚಿನ ಸುರಕ್ಷತಾ ಸಾಧನಗಳನ್ನು ಹಾಗೂ ಆರೋಗ್ಯ ಸೌಕರ್ಯಗಳನ್ನು ಒದಗಿಸಬೇಕು’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ.

ಏನೇ ಮಾರ್ಗಸೂಚಿ ರೂಪಿಸಿದರೂ ಅದನ್ನು ಅನುಷ್ಠಾನ ಮಾಡಲು ಸಾಧ್ಯವೇ ಎಂಬುದು ಪ್ರಶ್ನೆ. ಕೋವಿಡ್‌ನಂತಹ ಸಂದರ್ಭದಲ್ಲಿ ಎದುರಾಗಿರುವ ಸಂಧಿಗಧ ಪರಿಸ್ಥಿತಿಯವನ್ನು ಪ್ರತಿಯೊಬ್ಬ ವ್ಯಕ್ತಿಯೂ ಅರ್ಥಮಾಡಿಕೊಂದು ಜವಾಬ್ದಾರಿಯಿಂದ ವರ್ತಿಸಿದರೆ ಮಾತ್ರ ಈ ಸಂಕಷ್ಟದಿಂದ ಪಾರಾಗಲು ಸಾಧ್ಯ ಎಂಬುದು ವಾಸ್ತವ.

ಹಲಸೂರು ಗೇಟ್‌ ಠಾಣೆ ವ್ಯಾಪ್ತಿಯಲ್ಲಿ ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ನಡೆದ ಪ್ರತಿಭಟನೆಗಳು

ಆಯೋಜಕರು; ದಿನಾಂಕ

ಆರ್‌ಎಸ್‌ಎಸ್‌; ಆ.05

ಎಸ್‌.ಪಿ ರಸ್ತೆ ವರ್ತಕರ ಸಂಘಟನೆ; ಆ.05

ಆಶಾ ಕಾರ್ಯಕರ್ತೆಯರ ಸಂಘಟನೆ; ಆ. 07

ಆಶಾ ಕಾರ್ಯಕರ್ತೆಯರ ಸಂಘಟನೆ; ಆ.09

ದಲಿತ ಸಂಘರ್ಷ ಸಮಿತಿ; ಆ.13

ವಿಶ್ವ ಹಿಂದೂ ಪರಿಷತ್‌; ಆ.13

ಎನ್‌ಎಚ್‌ಯುಎಂ ಉದ್ಯೋಗಿಗಳ ಸಂಘಟನೆ; ಆ.15

ಸಿಪಿಎಂ; ಆ.17

ಕರ್ನಾಟಕ ರೈತಸಂಘ ರ‍್ಯಾಲಿ; ಆ.24

ಸಿಪಿಎಂ; ಆ.24

ಸಿಐಟಿಯು; ಆ.26

ಸಿಐಟಿಯು; ಸೆ.02

ಎಸ್‌ಎಫ್‌ಐ; ಸೆ.02

ಎಬಿವಿಪಿ; ಸೆ.03

ಸಿಐಟಿಯು; ಸೆ.05

ಖಾಸಗಿ ಶಾಲೆಗಳ ಆಡಳಿತ ಮಂಡಳಿ; ಸೆ.05

ಕೆದಂಬಾಡಿ ಕ್ರಿಯೇಷನ್ಸ್‌; ಸೆ.06

ದಲಿತ ಸಂಘರ್ಷ ಸಮಿತಿ; ಸೆ.07

ಕನ್ನಡ ಚಳವಳಿ ವಾಟಾಳ್‌ ಪಕ್ಷ; ಸೆ.07

ಸಿಪಿಎಂ; ಸೆ.09

ಕರ್ನಾಟಕ ರಕ್ಷಣಾ ವೇದಿಕೆ; ಸೆ.13

ಕನ್ನಡ ಚಳವಳಿ ಸೆಂಟ್ರಲ್ ಕಮಿಟಿ; ಸೆ.14

ರಾಷ್ಟ್ರೀಯ ಕ್ಷತ್ರಿಯ ಮಹಾ ಪರಿಷತ್‌; ಸೆ.14

ಸಿಪಿಎಂ; ಸೆ.15

ಅಂಗನವಾಡಿ ಸಹಾಯಕಿಯರ ಸಂಘ; ಸೆ.21

ಆರ್‌.ಸುಬ್ಬಮ್ಮ ಗೌರಮ್ಮ ಕುಟುಂಬ ಟ್ರಸ್ಟ್; ಸೆ.21

ದಲಿತ ಸಂಘರ್ಷ ಸಮಿತಿ; ಸೆ.22

ಆಟೊ ಚಾಲಕರ ಸಂಘಟನೆಗಳ ಒಕ್ಕೂಟ; ಸೆ.22

ಶ್ರೀಗುರುರಾಘವೇಂದ್ರ ಸಹಕಾರಿ ಬ್ಯಾಂಕ್‌ ಠೇವಣಿದಾರರ ಸಂಘ; ಸೆ.23

ಭೀಮ್‌ ಆರ್ಮಿ; ಸೆ.24

ಎಐಟಿಯುಸಿ; ಸೆ.24

ಕರ್ನಾಟಕ ಪ್ರಾದೇಶಿಕ ಯೂತ್‌ ಕಾಂಗ್ರೆಸ್‌; ಸೆ.25

ಐಸಿಸಿಟಿ; ಸೆ.25

ವಿವಿಧ ಸಂಘಟನೆಗಳು; ಸೆ.28

ಅಂಬೇಡ್ಕರ್‌ ಡಿಎಸ್‌ಎಸ್‌; ಸೆ.29

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT