ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯನ ಸುತ್ತ ಕಾಮನಬಿಲ್ಲಿನ ಉಂಗುರ! ವೈಜ್ಞಾನಿಕ ಹಿನ್ನೆಲೆ ಏನು?

ಬೀದಿಗೆ ಬಂದು ‘ಸೂರ್ಯ ದರ್ಶನ’ ಪಡೆದ ಜನರು
Last Updated 24 ಮೇ 2021, 21:01 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಕಾರ್ಮೋಡದಲ್ಲಿ ಮಂಕಾಗಿ ಕುಳಿತಿದ್ದ ಜನ ಸೋಮವಾರ ಬಾನಂಗಳದಲ್ಲಿ ‘ಸೂರ್ಯ ದೇವ’ನ ಸಪ್ತ ವರ್ಣಗಳ ಉಂಗುರ ದರ್ಶನದಿಂದ ಪುಳಕಿತರಾದರು.

ಲಾಕ್‌ಡೌನ್‌ನಿಂದ ಮನೆ ಬಿಟ್ಟು ಹೊರಗೇ ಬಾರದ ಜನ ರಸ್ತೆ ಮತ್ತು ತಮ್ಮ ತಮ್ಮ ಮನೆಗಳ ತಾರಸಿ ಮೇಲೆ ಹೋಗಿ ಸೂರ್ಯನ ಹೊಸ ‘ಅವತಾರ’ವನ್ನು ನೋಡಿ ಸಂಭ್ರಮಿಸಿದರು.

ಸಾಮಾಜಿಕ ಜಾಲತಾಣಗಳ ಮೂಲಕ ಸೂರ್ಯನ ಉಂಗುರದ ಚಿತ್ರವನ್ನು ಹರಿ ಬಿಟ್ಟಿದ್ದರಿಂದ ಇನ್ನಷ್ಟು ಜನ ಮನೆ ಬಿಟ್ಟು ಹೊರಬಂದು, ಆಗಸದತ್ತ ಮುಖ ಮಾಡಿ ಸೂರ್ಯ ಉಂಗುರ ದರ್ಶನ ಮಾಡಿ ಆನಂದಿಸಿದರು.

ಇದರ ವೈಜ್ಞಾನಿಕ ಹಿನ್ನೆಲೆ ಏನು?: ಸೂರ್ಯನ ಸುತ್ತ ತೇಜೋಪುಂಜದಂತೆ ಕಾಣುವ ಈ ಉಂಗುರ ನಿರ್ಮಾಣ ಆಗಲು ಮುಖ್ಯ ಕಾರಣ ಬೆಳಕಿನ ವಕ್ರೀಭವನ. ವಾತಾವರಣದಲ್ಲಿ ಮಂಜಿನ ಹರಳುಗಳ ಮೇಲೆ ಸೂರ್ಯ ಕಿರಣಗಳು ಬಿದ್ದಾಗ, ಕಿರಣಗಳು ವಕ್ರೀಭವನ ಹೊಂದಿ ಬಾಗುತ್ತವೆ. ಬೆಳಕಿನ ಏಳು ಬಣ್ಣಗಳು ಪ್ರಕಟಗೊಳ್ಳುತ್ತದೆ. ಅತಿ ಸೂಕ್ಷ್ಮ ಸ್ವರೂಪದ ಮೋಡಗಳ ಇರುವಿಕೆಯಿಂದ ನೋಡುಗರ ಕಣ್ಣುಗಳಿಗೆ ಈ ನೈಸರ್ಗಿಕ ಕ್ರಿಯೆ ಉಂಗುರದಂತೆ ಗೋಚರಿಸುತ್ತದೆ. ಈ ಮೋಡಗಳು ಸುಮಾರು 20,000 ಅಡಿ ಎತ್ತರದಲ್ಲಿ ಸೃಷ್ಟಿಯಾಗಿರುತ್ತವೆ. ಮೋಡಗಳು ಕೋಟಿಗಟ್ಟಲೆ ಅತಿ ಸೂಕ್ಷ್ಮ ಮಂಜಿನ ಹರಳಗಳನ್ನು ಒಳಗೊಂಡಿರುತ್ತವೆ.

ಈ ಉಂಗುರವನ್ನು ವಿಭಿನ್ನ ಕೋನಗಳಲ್ಲಿ ನೋಡಿದಾಗ ಕೊಂಚ ಭಿನ್ನವಾಗಿ ಗೋಚರಿಸುತ್ತದೆ. ಸರಿಯಾದ ಕೋನದಲ್ಲಿ ನೋಡಿದಾಗ ಮಾತ್ರ ಕಾಮನಬಿಲ್ಲಿನ ಗೋಲದಂತೆ ಕಾಣಿಸುತ್ತದೆ. ಇಲ್ಲವಾದರೆ ಕೇವಲ ಬಿಳಿ ಉಂಗುರದಂತೆ ಕಾಣಿಸುತ್ತದೆ. ಸೂರ್ಯ ಮಾತ್ರವಲ್ಲ ರಾತ್ರಿ ವೇಳೆ ಚಂದ್ರನ ಸುತ್ತಲೂ ಕೆಲವೊಮ್ಮೆ ಇಂತಹ ಉಂಗುರ ಕಾಣಿಸಿಕೊಳ್ಳುತ್ತದೆ.

ವಿಜ್ಞಾನಿಗಳು ಇದನ್ನು 22 ಡಿಗ್ರಿ ಉಂಗುರ ಎಂದೂ ಕರೆಯುತ್ತಾರೆ. ಏಕೆಂದರೆ ಈ ಉಂಗುರಗಳು ಸೂರ್ಯ ಅಥವಾ ಚಂದ್ರನ ಸುತ್ತ ಸರಿ ಸುಮಾರು 22 ಡಿಗ್ರಿ ತ್ರಿಜ್ಯವನ್ನು ಹೊಂದಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT