ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಕೆ.ಶಿವಕುಮಾರ್‌ಗೆ 14ರಂದು ಉತ್ತರ ಕೊಡುವೆ, ಯುದ್ಧವೇ ಆಗಲಿ: ರಮೇಶ ಜಾರಕಿಹೊಳಿ

Last Updated 1 ಡಿಸೆಂಬರ್ 2021, 10:35 IST
ಅಕ್ಷರ ಗಾತ್ರ

ಬೆಳಗಾವಿ: ‘ನನ್ನ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆಡಿರುವ ಮಾತುಗಳಿಗೆ ಡಿ.14ರಂದು ವಿಧಾನಪರಿಷತ್‌ ಚುನಾವಣೆ ಫಲಿತಾಂಶ ಬಂದ ನಂತರ ಪ್ರತ್ಯುತ್ತರ ನೀಡುತ್ತೇನೆ. ಅವರು ಬಳಸಿರುವ ಶಬ್ದಗಳಿಗಿಂತಲೂ ಕಠೋರವಾದ ಮಾತುಗಳಲ್ಲಿ ಉತ್ತರ ಕೊಡುತ್ತೇನೆ’ ಎಂದು ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ತಾಲ್ಲೂಕಿನ ಬೆಳಗುಂದಿಯಲ್ಲಿ ಬುಧವಾರ ನಡೆದ ಚುನಾವಣಾ ಪ್ರಚಾರ ಸಭೆಗೆ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನಾವು ಚುನಾವಣೆ ಮೂಡ್‌ನಲ್ಲಿದ್ದೇವೆ. ಹತಾಶ ಮನೋಭಾವದಿಂದ ಮಾತನಾಡುವ ಸ್ಥಿತಿಯಲ್ಲಿಲ್ಲ’ ಎಂದು ತಿರುಗೇಟು ನೀಡಿದರು.

‘ಡಿ.14ರಂದು ಒಂದು ತಾಸು ಬೇಕಾದರೂ ಪತ್ರಿಕಾಗೋಷ್ಠಿ ನಡೆಸಿ, ಎಲ್ಲ ವಿವರವನ್ನೂ ಕೊಡುತ್ತೇನೆ. 1985ರಿಂದ ಹಿಡಿದು ಈವರೆಗೂ ನನ್ನ ವ್ಯಕ್ತಿತ್ವ ಏನಿತ್ತು, ಅವರ ವ್ಯಕ್ತಿತ್ವ ಹೇಗಿತ್ತು? ನಮ್ಮ ಕುಟುಂಬ ಹೇಗಿತ್ತು, ಶಿವಕುಮಾರ್‌ ಕುಟುಂಬ ಯಾವ ರೀತಿಯಲ್ಲಿತ್ತು ಎನ್ನುವುದನ್ನು ಬಹಿರಂಗಪಡಿಸುತ್ತೇನೆ. ಅವತ್ತು ಯುದ್ಧವೇ (ಓಪನ್‌ ವಾರೇ) ಆಗಿಬಿಡಲಿ’ ಎಂದು ಗುಡುಗಿದರು.

‘ಮಹಾಂತೇಶ ಕವಟಗಿಮಠ ಅವರಿಗೆ ಒಂದೇ ಮತ ಕೇಳುತ್ತಿದ್ದೇವೆ. 2ನೇ ಅಭ್ಯರ್ಥಿಗೆ ಕೇಳಿಲ್ಲ. ಕಾಂಗ್ರೆಸ್‌ ಸೋಲಿಸಲು ಏನೇನು ಅದೆಲ್ಲವನ್ನೂ ಮಾಡುತ್ತೇನೆ’ ಎಂದರು.

‘ಬಿಜೆಪಿ ವರಿಷ್ಠರು ಹಾಗೂ ಆರ್‌ಎಸ್‌ಎಸ್‌ ಪ್ರಮುಖರ ಆಶೀರ್ವಾದ ನನ್ನ ಮೇಲಿದೆ. ಅವರಿಂದಾಗಿಯೇ ಜೀವಂತವಿದ್ದೇನೆ. ಇಲ್ಲವಾಗಿದ್ದಲ್ಲಿ ಷಡ್ಯಂತ್ರ ಮಾಡಿ ನನ್ನನ್ನು ಮುಗಿಸಿಬಿಡುತ್ತಿದ್ದರು. ವರಿಷ್ಠರು ಹಾಗೂ ಸಂಘ ಪರಿವಾರದವರ ಆಶೀರ್ವಾದದಿಂದಾಗಿ ಬಿಜೆಪಿಯಲ್ಲಿ ಪ್ರಮುಖ ನಾಯಕನಾಗಿ ಹೊರಹೊಮ್ಮಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

‘ಬ್ಲಾಕ್‌ಮೇಲ್ ಮಾಡುತ್ತಿರುವವರು ಯಾರು ಎನ್ನುವುದನ್ನು ಡಿ.14ರಂದು ತಿಳಿಸುತ್ತೇನೆ. ಅವರು (ಶಿವಕುಮಾರ್‌) ಶಾಸಕ ಸ್ಥಾನ ಉಳಿಸಿಕೊಳ್ಳಲಿ, ಮುಂದೆ ನೋಡೋಣ’ ಎಂದು ಹೇಳಿದರು.

ರಮೇಶ ಅವರನ್ನು ಕೊಳೆಗೆ ಹೋಲಿಸಿದ್ದ ಶಿವಕುಮಾರ್‌, ‘ಅವರ‍್ಯಾವ ಸಾಹುಕಾರ? ಅವರಂತಹ ಬಂಡುಕೋರರನ್ನು ನಮ್ಮ ಪಕ್ಷದಲ್ಲಿ ಒಂದು ತಾಸು ಕೂಡ ಇಟ್ಟುಕೊಳ್ಳುತ್ತಿರಲಿಲ್ಲ’ ಎಂದು ಈಚೆಗೆ ಇಲ್ಲಿ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT