ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೈದಿಕ ಧರ್ಮದಲ್ಲಿ ಗೊಂದಲ, ಕಠೋರತೆ’: ಇತಿಹಾಸ ಪಾಠದ 4.2 ಅಧ್ಯಾಯದಲ್ಲೇನಿದೆ?

ದ್ವಿತೀಯ ಪಿಯುಸಿ ಇತಿಹಾಸ ಪಠ್ಯದಲ್ಲಿರುವ ಅಂಶಗಳು l ಚಕ್ರತೀರ್ಥ ಸಮಿತಿಯಿಂದ ಪರಿಷ್ಕರಣೆಗೆ ಸೂಚನೆ
Last Updated 24 ಮೇ 2022, 20:19 IST
ಅಕ್ಷರ ಗಾತ್ರ

ಬೆಂಗಳೂರು: ದ್ವಿತೀಯ ಪಿಯುಸಿ ಇತಿಹಾಸ ವಿಷಯದ ಪಠ್ಯಪುಸ್ತಕದಲ್ಲಿ ಭಾರತದ ಇತಿಹಾಸ ಅಧ್ಯಾಯದ 4.2 ರಲ್ಲಿ ‘ಹೊಸ ಧರ್ಮಗಳ ಉದಯ’ ಪಠ್ಯಭಾಗದ ಪರಿಷ್ಕರಣೆ ಮುಂದಾಗಿರುವುದು ಚರ್ಚೆಗೆ ಕಾರಣವಾಗಿದೆ. ವೈದಿಕ ಧರ್ಮ, ಸಮಾಜದಲ್ಲಿ ಬ್ರಾಹ್ಮಣರು ಪರಮಾಧಿಕಾರ ಸ್ಥಾಪಿಸಿದ್ದು, ಪ್ರಾಣಿ ಬಲಿ, ಮಂತ್ರ ಪಠಣಗಳ ಬಗ್ಗೆ ಜನಸಾಮಾನ್ಯರು ಆಸಕ್ತಿ ಕಳೆದುಕೊಂಡಿದ್ದು ಸೇರಿ ಹಲವು ಅಂಶವನ್ನು ಈ ಪಾಠ ಒಳಗೊಂಡಿದೆ.

ಈ ಅಂಶಗಳನ್ನು ಪರಿಷ್ಕರಿಸುವ ಜವಾಬ್ದಾರಿಯನ್ನು ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕಗಳ ಪರಿಷ್ಕರಣಾ ಸಮಿತಿಗೆ ವಹಿಸಲಾಗಿದೆ. ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಚಿವ ಬಿ. ಸಿ. ನಾಗೇಶ್‌ ಪತ್ರ ಬರೆದಿದ್ದರು.

‘ಹೊಸ ಧರ್ಮಗಳ ಉದಯ ಪಠ್ಯದಲ್ಲಿ ನಿರ್ದಿಷ್ಟ ಸಮುದಾಯಗಳ ಭಾವನೆಗಳಿಗೆ ಧಕ್ಕೆಯಾಗುವಂತಹ ವಿಷಯಗಳಿರುವ ಬಗ್ಗೆ ದೂರುಗಳು ಬಂದಿವೆ. ಈ ಪಠ್ಯಭಾಗವನ್ನು ಪರಿಶೀಲಿಸಿ ಸೂಕ್ತವಾಗಿ ಪರಿಷ್ಕರಿಸುವ ಹೊಣೆಗಾರಿಕೆಯನ್ನು ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿಗೆ ವಹಿಸಬೇಕು ಹಾಗೂ ಪರಿಷ್ಕೃತ ಪಠ್ಯಪುಸ್ತಕವನ್ನು 2022–23ನೇ ಸಾಲಿನಲ್ಲಿ ಮುದ್ರಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದರು.

ಇತಿಹಾಸ ಪಾಠದ 4.2 ಅಧ್ಯಾಯದಲ್ಲೇನಿದೆ?
ವೈದಿಕ ಧರ್ಮದಲ್ಲಿ ಗೊಂದಲಗಳು
: ಆರಂಭದಲ್ಲಿ ವೈದಿಕ ಧರ್ಮ ಯಾವುದೇ ಜಟಿಲತೆಗಳಿಲ್ಲದೆ ಸರಳವಾಗಿತ್ತು. ನಂತರ ಪುರೋಹಿತರ ಪ್ರಭಾವದಿಂದಾಗಿ ಬಹಳಷ್ಟು ಕಠೋರತೆಗಳು ಧರ್ಮದೊಳಗೆ ನುಸುಳಿದವು. ಜನರು ಅಸಂತುಷ್ಟರಾದರು ಮತ್ತು ಬದಲಾವಣೆಯನ್ನು ಬಯಸಿದ್ದ ಅವರು ಅದನ್ನು ಹೊಸ ಧರ್ಮಗಳಲ್ಲಿ ಕಂಡುಕೊಂಡರು.

ಪುರೋಹಿತ ವರ್ಗದ ಪರಮಾಧಿಕಾರ: ಬ್ರಾಹ್ಮಣರು ಇತರ ಜಾತಿಗಳ ಮೇಲೆ ಪರಮಾಧಿಕಾರ ಸ್ಥಾಪಿಸಿದರು. ಜನರಿಗೆ ಪುರೋಹಿತರಿಲ್ಲದೆ ಯಜ್ಞ ಮಾಡುವುದು ಅಸಾಧ್ಯವಾಗಿತ್ತು. ಬ್ರಾಹ್ಮಣರು ಅನೇಕ ವಿಶೇಷ ಸೌಲಭ್ಯ ಅನುಭವಿಸುತ್ತಿದ್ದರು ಮತ್ತು ತಮ್ಮನ್ನು ಎಲ್ಲರಿಗಿಂತ ಶ್ರೇಷ್ಠರೆಂದು ತಿಳಿದಿದ್ದರು.

ಪ್ರಾಣಿ ಬಲಿ: ಪ್ರಾಣಿ ಬಲಿ, ಶಾಸ್ತ್ರ ವಿಧಿಗಳ ಒಂದು ಭಾಗ ಮತ್ತು ಇವುಗಳ ಆಚರಣೆ ದುಬಾರಿಯಾಯಿತು. ಹೀಗಾಗಿ ಜನರು ಅಸ್ತಿತ್ವದಲ್ಲಿದ್ದ ಧರ್ಮದಲ್ಲಿನ ನಂಬಿಕೆ ಕಳೆದುಕೊಂಡರು. ಋಗ್ವೇದದ ಕಾಲದ ಧಾರ್ಮಿಕ ವಿಧಿ ಮತ್ತು ಧರ್ಮಾಚರಣೆ ಉತ್ತರ ವೇದ ಕಾಲದಲ್ಲಿ ಸಂಕೀರ್ಣವಾದವು. ಲೌಕಿಕ ಪ್ರಾಪ್ತಿಗಳಾದ ಮಕ್ಕಳನ್ನು ಪಡೆಯಲು, ಯುದ್ಧದಲ್ಲಿ ಜಯಗಳಿಸಲು, ರೋಗ ಗುಣಪಡಿಸಲು ಮತ್ತು ಮುಕ್ತಿ ಪಡೆಯಲು ಯಾಗ ಮತ್ತು ಶಾಸ್ರ್ತೋಕ್ತ ವಿಧಿಮಾಡಲು ಸಲಹೆ ನೀಡುತ್ತಿದ್ದರು. ವಿಚಾರವಾದಿಗಳು ಇದನ್ನು ವ್ಯರ್ಥ ಎಂದು ಭಾವಿಸಿದ್ದರು.

ಮಂತ್ರಗಳ ಪಠಣ (ಸಂಸ್ಕೃತ ಶ್ಲೋಕಗಳು): ಸಂಸ್ಕೃತದಲ್ಲಿದ್ದ ವೈದಿಕ ಸಾಹಿತ್ಯದ ಮೇಲೆ ಪುರೋಹಿತರ ಪ್ರಭುತ್ವವಿತ್ತು, ಜನಸಾಮಾನ್ಯರಿಗೆ ಅವುಗಳನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿರಲಿಲ್ಲ. ಸ್ಪಷ್ಟ ತಿಳಿವಳಿಕೆಯ ಕೊರತೆಯಿಂದ ಜನರು ಮಂತ್ರಗಳ ಪಠಣೆಯಲ್ಲಿ ನಂಬಿಕೆ ಕಳೆದುಕೊಂಡರು.

ಜಾತಿ ಪದ್ಧತಿ: ಸಾಮಾಜಿಕ ವ್ಯವಸ್ಥೆಯು ಜಟಿಲವಾಗಿತ್ತು. ಬೇರೆ ಬೇರೆ ಜಾತಿಗಳ ಮಧ್ಯೆ ಬೇಧ–ಭಾವವಿತ್ತು. ಬ್ರಾಹ್ಮಣರು ಉನ್ನತ ಸ್ಥಾನವನ್ನು ಹೊಂದಿದ್ದರು. ಸಮಾಜದಲ್ಲಿನ ಅಸಮಾನತೆಯಿಂದಾಗಿ ಜನರು ಅತೃಪ್ತರಾಗಿದ್ದರು. ಶೂದ್ರರು ಹೇಳಿಕೊಳ್ಳಲಾಗದ ಸಂಕಷ್ಟಗಳಿಗೆ ಗುರಿಯಾದರು.

ಮಹಾನ್‌ ವ್ಯಕ್ತಿಗಳ ಜನನ: ಜನರು ಅಸಂತುಷ್ಟರು ಮತ್ತು ಅತೃಪ್ತರಾಗಿದ್ದಾಗ ಮಹಾವೀರ ಮತ್ತು ಗೌತಮ ಬುದ್ಧನಂತಹ ಇಬ್ಬರು ಮಹಾನ್ ವ್ಯಕ್ತಿಗಳು ಜನಿಸಿದರು. ಅವರು ಸರಳವಾದ ತತ್ವಗಳನ್ನು ಜನರಾಡುವ ಭಾಷೆಯಲ್ಲಿ ಬೋಧಿಸಿದರು. ಹೊಸ ಧರ್ಮಗಳು ಬೋಧಿಸಿದ ಸರಳ ಮುಕ್ತಿ ಮಾರ್ಗದಿಂದಾಗಿ ಸಾಮಾನ್ಯರು ಹೊಸ ಧರ್ಮಗಳತ್ತ ಆಕರ್ಷಿಸಲ್ಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT