ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದ ವರ್ಗದ ಹಾಸ್ಟೆಲ್‌ಗಳಿಗೆ ₹ 250 ಕೋಟಿ: ಬೊಮ್ಮಾಯಿ

ನಾರಾಯಣ ಗುರು ಹೆಸರಿನಲ್ಲಿ ನಾಲ್ಕು ಶಾಲೆ-: ಸಿ.ಎಂ
Last Updated 20 ಆಗಸ್ಟ್ 2022, 20:07 IST
ಅಕ್ಷರ ಗಾತ್ರ

ಬೆಂಗಳೂರು: ‘ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲು ₹ 250 ಕೋಟಿಮಂಜೂರು ಮಾಡಲು ಮತ್ತು ನಾರಾಯಣ ಗುರು ಹೆಸರಿನಲ್ಲಿ ತಲಾ ₹ 30 ಕೋಟಿ ವೆಚ್ಚದಲ್ಲಿ ನಾಲ್ಕು ಶಾಲೆಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಶನಿವಾರ ನಡೆದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 107ನೇ ಜನ್ಮದಿನಾಚರಣೆಕಾರ್ಯಕ್ರಮದಲ್ಲಿ ಮಂಗಳೂರಿನ ಡಾ. ಅಣ್ಣಯ್ಯ ಕುಲಾಲ್ ಅವರಿಗೆ ಡಿ. ದೇವರಾಜ ಅರಸು ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ‘ರಾಜ್ಯದ ಎಲ್ಲ 2,439 ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಶೇ 25ರಷ್ಟು ಹೆಚ್ಚಿಸಲು ಈ ಅನುದಾನ ಒದಗಿಸಲಾಗಿದೆ’ ಎಂದರು.

‘ಹಿಂದುಳಿದ ವಿದ್ಯಾರ್ಥಿಗಳ ಶಿಷ್ಯವೇತನದಲ್ಲಿ ತಲಾ ₹ 150 ಹೆಚ್ಚಿಸಲಾಗಿದೆ. 195 ವಿದ್ಯಾರ್ಥಿನಿಲಯಗಳ ಕಟ್ಟಡ ನಿರ್ಮಾಣದ ವಿವಿಧ ಹಂತಗಳಲ್ಲಿವೆ. ಕನಕದಾಸರ ಹೆಸರಿನಲ್ಲಿ 50 ಹೊಸ ಹಾಸ್ಟೆಲ್‍ಗಳನ್ನು ನಿರ್ಮಿಸಲಾಗುತ್ತಿದೆ. ರಾಜ್ಯದ ಐದು ಶೈಕ್ಷಣಿಕ ಕೇಂದ್ರಗಳಲ್ಲಿ 1,000 ಮಕ್ಕಳಿಗೆ ಬಹುಮಹಡಿ ವಸತಿ ಸಮುಚ್ಚಯಗಳನ್ನು ನಿರ್ಮಿಸಲಾಗುತ್ತಿದೆ. 5 ಸಾವಿರ ಮಕ್ಕಳ ಸಾಮರ್ಥ್ಯಕ್ಕೆ ಪೂರಕವಾಗಿ ಈ ಯೋಜನೆಯನ್ನು ವಿಸ್ತರಿಸುವ ಗುರಿ ಹೊಂದಲಾಗಿದ್ದು, ಅಗತ್ಯ ಅನುದಾನ ಒದಗಿಸಲಾಗಿದೆ. ದೇವರಾಜ ಅರಸು ಅವರ ಹೆಸರಿನಲ್ಲಿ ಪಿಎಚ್‍.ಡಿ ಮಾಡುವ ವಿದ್ಯಾರ್ಥಿಗಳಿಗೆ ಒಟ್ಟು ₹ 4 ಕೋಟಿ, ವಿದೇಶದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಶಿಷ್ಯ ವೇತನಕ್ಕೆ₹ 10 ಕೋಟಿ, ಹಿಂದುಳಿದ ವರ್ಗದ ವಿವಿಧ ನಿಗಮ ಮಂಡಳಿಗೆ ಹೆಚ್ಚುವರಿಯಾಗಿ ಸುಮಾರು ₹ 800 ಕೋಟಿ ಅನುದಾನ ನೀಡಲಾಗಿದೆ’ ಎಂದು ತಿಳಿಸಿದರು.

‘ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪ್ರತಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಸಂಘಸ್ಥಾಪಿಸಿ ₹ 10 ಲಕ್ಷ ಅನುದಾನ, ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು. ಸ್ತ್ರೀ ಶಕ್ತಿ ಸಂಘಗಳಿಗೆ ಆರ್ಥಿಕ ಸೌಲಭ್ಯ, ಬ್ಯಾಂಕ್ ಜೋಡಣೆ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ 5 ಲಕ್ಷ ಮಹಿಳೆಯರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ. ದೇವರಾಜ ಅರಸು ಅವರ ಸಾಮಾಜಿಕ ನ್ಯಾಯದ ಕಲ್ಪನೆಯನ್ನು ಸಾಕಾರಗೊಳಿಸಲು ಸರ್ಕಾರ ಬದ್ಧ’ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ದೇವರಾಜ ಅರಸು ಹೇಗೆ ಆಡಳಿತಾತ್ಮಕ ಶಕ್ತಿ ಕೊಟ್ಟರೋ ಅದೇ ರೀತಿ ನಮ್ಮ ಮುಖ್ಯಮಂತ್ರಿ ಕೂಡಾ ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬುವ ವಿಶ್ವಾಸ ಇದೆ‌’ ಎಂದರು.

‘ಅರಸು ಅವರು ಭೂಸುಧಾರಣೆ ಕಾಯ್ದೆ ತಂದಾಗ ವರ್ಗ ಸಂಘರ್ಷ ಆಗಿತ್ತು. ಆ ಕಾಯ್ದೆ ಮೂಲಕ ಹಿಂದುಳಿದ, ಶೋಷಿತ ವರ್ಗಗಳಿಗೆ ಅವರು ಶಕ್ತಿ ತುಂಬಿದ್ದಾರೆ’ ಎಂದ ಅವರು, ‘ಹಿಂದುಳಿದ ವರ್ಗಗಳ ಇಲಾಖೆಯಿಂದ ಉತ್ತರ ಕರ್ನಾಟಕ, ಮಂಗಳೂರು ಭಾಗದಲ್ಲಿ ಸೇನಾ ಪೂರ್ವ ತರಬೇತಿ ಶಾಲೆ ಆರಂಭಿಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT