ಗುರುವಾರ , ಏಪ್ರಿಲ್ 22, 2021
24 °C
ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಲು ಕಮಲ್‌ ಪಂತ್‌ ಮನವಿ

ಡ್ರಗ್ಸ್ ದಂಧೆ: ನಿರ್ದೇಶಕರಿಂದ ಮಾಹಿತಿ ಕೋರಿದ ಸಿಸಿಬಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ನಡೆಯುತ್ತಿದೆ ಎನ್ನಲಾದ ಡ್ರಗ್ಸ್ ದಂಧೆ ಬಗ್ಗೆ ಮಾದಕ ವಸ್ತು ನಿಯಂತ್ರಣ ದಳದ (ಎನ್‌ಸಿಬಿ) ಅಧಿಕಾರಿಗಳು ಈಗಾಗಲೇ ತನಿಖೆ ಚುರುಕುಗೊಳಿಸಿದ್ದು, ಇದೀಗ ಸಿಸಿಬಿ ಪೊಲೀಸರು ಸಹ ದಂಧೆ ಬಗ್ಗೆ ತನಿಖೆ ಆರಂಭಿಸಿದ್ದಾರೆ.

‘ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ ಇರುವುದು ನಿಜ. ನಾನೇ ನೋಡಿದ್ದೇನೆ. ದುಡ್ಡಿನ ಹಿಂದೆ ಬಿದ್ದ ಕೆಲ ಯುವ ನಟ–ನಟಿಯರು ಡ್ರಗ್ ಮಾಫಿಯಾ ಬೆನ್ನು ಬಿದ್ದಿದ್ದಾರೆ. ಅವರೇ ಹೆಚ್ಚೆಚ್ಚು ಡ್ರಗ್ಸ್ ವ್ಯಸನಿಗಳಾಗುತ್ತಿದ್ದಾರೆ. ಭದ್ರತೆ ನೀಡಿದರೆ ಎಲ್ಲರ ಹೆಸರು ಬಹಿರಂಗಪಡಿಸುವೆ’ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್‌ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು.

ಇದರ ಆಧಾರದಲ್ಲಿ ತನಿಖೆ ಕೈಗೆತ್ತಿಕೊಂಡಿರುವ ಸಿಸಿಬಿ ಪೊಲೀಸರು, ‘ಡ್ರಗ್ಸ್ ದಂಧೆ ಬಗ್ಗೆ ತಮ್ಮ ಬಳಿ ಇರುವ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ’ ಎಂದು ಕೋರಿ ಇಂದ್ರಜಿತ್‌ಗೆ ಶನಿವಾರ ನೋಟಿಸ್‌ ನೀಡಿದ್ದಾರೆ.

’ಬೆಂಗಳೂರಿನಲ್ಲಿ ಡ್ರಗ್ಸ್ ವಿರುದ್ಧ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಡಾರ್ಕ್‌ನೆಟ್ ಮೂಲಕ ನಡೆಯುವ ದಂಧೆಯನ್ನೂ ಭೇದಿಸಿದ್ದೇವೆ. ಉಚಿತ ಸಹಾಯವಾಣಿಗೆ (1098) ಮಾಹಿತಿ ನೀಡಬಹುದು’ ಎಂದು ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಹೇಳಿದರು.

‘ಡ್ರಗ್ಸ್ ದಂಧೆ ಬಗ್ಗೆ ಇಂದ್ರಜಿತ್ ಲಂಕೇಶ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಆ ಬಗ್ಗೆ ಖಚಿತ ಮಾಹಿತಿ ಪಡೆಯಲು ಅವರಿಗೆ ನೋಟಿಸ್ ನೀಡಲಾಗಿದೆ’ ಎಂದೂ ತಿಳಿಸಿದರು.

‘ಎನ್‌ಡಿಪಿಎಸ್’ ಕಾಯ್ದೆ ಬಳಕೆಗ ನಿರ್ಲಕ್ಷ್ಯ

ಡ್ರಗ್ಸ್ ದಂಧೆಗಳ ಬಗ್ಗೆ ಕೆಲ ಸ್ಥಳೀಯ ಪೊಲೀಸರಿಗೆ ಮಾಹಿತಿ ಇದ್ದರೂ ಕಾನೂನು ಕ್ರಮ ಜರುಗಿಸುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

‘ಡ್ರಗ್ಸ್‌ ಹಾಗೂ ಪೆಡ್ಲರ್‌ಗಳ ಬಗ್ಗೆ ಅನಾಮಧೇಯ ವ್ಯಕ್ತಿಯಿಂದ ಮಾಹಿತಿ ಬಂದರೆ, ಸಂಶಯ ವ್ಯಕ್ತವಾದರೆ ಅಂಥವರನ್ನು ವಿಚಾರಣೆಗೆ ಒಳಪಡಿಸುವ ಅಧಿಕಾರ ಆಯಾ ಠಾಣಾಧಿಕಾರಿಗೆ ಇದೆ. ಮಾದಕ ದ್ರವ್ಯಗಳು ಮತ್ತು ಮಾನಸಿಕ ವ್ಯಸನ ಪದಾರ್ಥಗಳ (ಎನ್‌ಡಿಪಿಎಸ್) ಕಾಯ್ದೆಯಲ್ಲಿ ಈ ಬಗ್ಗೆ ಹೇಳಲಾಗಿದೆ. ಆದರೂ ಪೊಲೀಸರು ಈ ಅವಕಾಶವನ್ನು ಬಳಸುತ್ತಿಲ್ಲ’ ಎಂದು ಪೊಲೀಸ್ ಇಲಾಖೆಯ ಕಾನೂನು ತಜ್ಞರೊಬ್ಬರು ಬೇಸರ ವ್ಯಕ್ತಪಡಿಸಿದರು.

‘ಎನ್‌ಸಿಬಿ ಅಧಿಕಾರಿಗಳಿಗೆ ಸಿಗುವ ಮಾಹಿತಿ, ಸ್ಥಳೀಯ ಪೊಲೀಸರಿಗೆ ಮೊದಲೇ ಗೊತ್ತಿರುತ್ತದೆ. ಅವರೇ ಡ್ರಗ್ಸ್‌ ದಂಧೆಯನ್ನು ಬುಡದಲ್ಲಿ ಮಟ್ಟ ಹಾಕಬಹುದು. ಡ್ರಗ್ಸ್ ಮಾರಾಟದ ಆದಾಯದಿಂದ ಯಾರಾದರೂ ಆಸ್ತಿ ಸಂಪಾದಿಸಿದರೆ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವೂ ಠಾಣಾಧಿಕಾರಿಗೆ ಇದೆ’ ಎಂದರು.

ಯುವನಟನ ಶವ ಪರೀಕ್ಷೆ ಏಕೆ ನಡೆಸಲಿಲ್ಲ?

ಬೆಂಗಳೂರು: ‘ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಯುವನಟರೊಬ್ಬರು ಮೃತಪಟ್ಟಿದ್ದರು. ಅವರ ಶವ ಪರೀಕ್ಷೆ ಮಾಡಿಲ್ಲ ಏಕೆ? ಇದರ ಹಿಂದಿನ ಕಾಣದ ಕೈಗಳಾವುವು. ರಾಜಕಾರಣಿಗಳು ಇದ್ದಾರೆಯೇ’ ಎಂದು ಇಂದ್ರಜಿತ್ ಲಂಕೇಶ್ ಪ್ರಶ್ನಿಸಿದ್ದಾರೆ. ಯುವನಟನ ಹೆಸರನ್ನು ಅವರು ಬಹಿರಂಗಪಡಿಸಿಲ್ಲ.

‘ಬೆಂಗಳೂರಿನ ಸೌತ್‌ ಎಂಡ್‌ ಸರ್ಕಲ್‌ ಬಳಿ ಕೆಲ ವರ್ಷಗಳ ಹಿಂದೆ ಅಪಘಾತಕ್ಕೀಡಾದ ಕಾರಿನಲ್ಲಿ ಚಿತ್ರರಂಗದವರೂ ಇದ್ದರು. ಕಾರಿನಲ್ಲಿ ಮಾದಕ ವಸ್ತು ಸಿಕ್ಕಿದ್ದು ಸುದ್ದಿಯಾಗಿತ್ತು. ಆ ಪ್ರಕರಣದಲ್ಲಿ ಹೆಸರು ಕೇಳಿಬಂದವರ ಏಕೆ ಕ್ರಮಕೈಗೊಳ್ಳಲಿಲ್ಲ’ ಎಂದೂ ಅವರು ಪ್ರಶ್ನಿಸಿದ್ದಾರೆ.

‘ಕೆಲ ನಟಿಯರು ಪಾರ್ಟಿಗಳಲ್ಲಿ ಡ್ರಗ್ಸ್‌ ಸೇವಿಸುತ್ತಾರೆ. ಚಿತ್ರೀಕರಣದ ವೇಳೆ ವ್ಯಾನಿಟಿ ಬ್ಯಾಗ್‌ನಲ್ಲೂ ಇಟ್ಟುಕೊಂಡಿರುವುದು ಗಮನಕ್ಕೆ ಬಂದಿದೆ’ ಎಂದಿದ್ದಾರೆ.

‘ತಪ್ಪು ಮಾಡಿದವರನ್ನು ಬೆತ್ತಲೆ ಮಾಡಿ’

‘ನಶೆ, ಹಾದರದ ಹಿಂದೆ ಬರಿ ಸಿನಿಮಾ ಅಲ್ಲ, ಸಮಾಜವೇ ಆಕರ್ಷಿತ ಆಗುತ್ತಿದೆ. ಯಾರು ಶ್ರಮಪಟ್ಟು ಜೀವನ ಗೆದ್ದಿರುತ್ತಾರೋ, ಅವರ ಹೆಜ್ಜೆ ತಪ್ಪುದಾರಿ ತುಳಿಯದು. ಯಾರು ವಾಮಮಾರ್ಗದಲ್ಲಿ ಗೆದ್ದಿರುತ್ತಾರೋ ಅವರೇ ನಶೆ ಹಾದರದ ದಾಸರು! ಉಪ್ಪು ತಿಂದವ ನೀರು ಕುಡಿಯುವ’ ಎಂದು ನಟ ಜಗ್ಗೇಶ್‌ ಟ್ವೀಟ್‌ ಮಾಡಿದ್ದಾರೆ.

‘ತಪ್ಪು ಮಾಡಿದವರನ್ನು ಬೆತ್ತಲೆ ಮಾಡಿ. ಆಗಲಾದರೂ ಜನಕ್ಕೆ ಅರಿವಾಗಲಿ’ ಎಂದು ಟ್ವೀಟ್‌ನಲ್ಲಿ ಅವರು ಹೇಳಿದ್ದಾರೆ.

***

ಸತ್ಯಾಂಶ ಹೊರಬರಲಿ

‘ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್‌ ಮಾಫಿಯಾ ಇರುವುದನ್ನು ನಾನು ಕಂಡಿಲ್ಲ. ಇಲ್ಲಿರುವ ತಂತ್ರಜ್ಞರು, ಕಲಾವಿದರು ಎಲ್ಲರೂ ಒಳ್ಳೆಯವರೇ ಎಂದು ಭಾವಿಸಿರುವೆ. ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಯಾರೂ ಮಾತನಾಡುವುದು ಸರಿಯಲ್ಲ. ತನಿಖಾ ಸಂಸ್ಥೆಗಳು ತನಿಖೆ ನಡೆಸಲಿ, ಸತ್ಯಾಂಶ ಹೊರಬರಲಿ’

– ಶಿವರಾಜ್‌ಕುಮಾರ್‌, ನಟ 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು