ಬುಧವಾರ, ಮಾರ್ಚ್ 3, 2021
19 °C

ಖರ್ಚೇ ಆಗದ ‘ಪರಿಶಿಷ್ಟರ’ ನಿಧಿ!

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಅತಿ ಕಡಿಮೆ ವೆಚ್ಚವಾದ ಕಾರ್ಯಕ್ರಮಗಳ ಪಟ್ಟಿ

ಬೆಂಗಳೂರು: ಪರಿಶಿಷ್ಟ ಸಮುದಾಯದ ಅಭಿವೃದ್ಧಿಗಾಗಿ ‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ (ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ)’ ಅಡಿ 2020–21ನೇ ಸಾಲಿನಲ್ಲಿ ವಿವಿಧ ಇಲಾಖೆಗಳಿಗೆ ಪರಿಷ್ಕೃತಗೊಳಿಸಿ ಹಂಚಿಕೆ ಮಾಡಲಾದ ಒಟ್ಟು ₹ 25,616 ಕೋಟಿ ಅನುದಾನದಲ್ಲಿ ಡಿಸೆಂಬರ್‌ ಅಂತ್ಯದವರೆಗೆ ₹12,154 ಕೋಟಿ (ಶೇ 47.45) ಮಾತ್ರ ವೆಚ್ಚವಾಗಿದೆ.

ಬಜೆಟ್‌ನಲ್ಲಿ ₹ 27,699 ಕೋಟಿ ಅನುದಾನ ಹಂಚಿಕೆ ಮಾಡಿದ್ದರೂ, ಕೋವಿಡ್‌ ಕಾರಣದಿಂದ ₹ 2,083 ಕೋಟಿ ಕಡಿತಗೊಳಿಸಲಾಗಿತ್ತು. ಒಟ್ಟು 36 ಇಲಾಖೆಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ. ಆದರೆ, ಮಾತೃಇಲಾಖೆಗಳಾದ ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವಿವಿಧ ಕಾರ್ಯಕ್ರಮಗಳಿಗೆ ಮೀಸಲಿಟ್ಟ ಅನುದಾನದಲ್ಲಿ ವೆಚ್ಚ ಮಾಡಿದ ಹಣ ಶೇ 44ನ್ನು ದಾಟಿಲ್ಲ!

₹ 443.91 ಕೋಟಿ ಮೀಸಲಿಟ್ಟಿರುವ ಪ್ರಧಾನ ಮಂತ್ರಿ ಆವಾಸ್‌ ಯೋಜನೆ (ನಗರ) ಮತ್ತು ₹ 253.50 ಕೋಟಿ ಮೀಸಲಿಟ್ಟಿರುವ ಪ್ರಧಾನ ಮಂತ್ರಿ ಆವಾಸ್‌ ಯೋಜನೆ (ಗ್ರಾಮೀಣ), ಭಾಗ್ಯಲಕ್ಷ್ಮಿ, ಕುಡಿಯುವ ನೀರು ಪೂರೈಕೆ ಸೇರಿದಂತೆ 14 ಯೋಜನೆಗಳಲ್ಲಿ ನಯಾಪೈಸೆ ಖರ್ಚಾಗಿಲ್ಲ. 15ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಅತೀ ಕಡಿಮೆ ಅನುದಾನ ಬಳಕೆಯಾಗಿದೆ.

ಯೋಜನೆಯಡಿ ವಿವಿಧ ಇಲಾಖೆಗಳಿಗೆ ಒದಗಿಸಿ ಅನುದಾನ ವೆಚ್ಚ ಆಗದಿರುವ ಬಗ್ಗೆ ಸೋಮವಾರ (ಜ. 18) ನಡೆದ ಪ್ರಗತಿ  ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳನ್ನು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ಯೋಜನೆಯಡಿ ಮೀಸಲಿಟ್ಟ ಹಣದಲ್ಲಿ, ವಿಭಜಿಸಲಾಗದ ಪ್ರಕರಣಗಳಲ್ಲಿ ಆಗುವ ವೆಚ್ಚದ ಒಂದು ಭಾಗವು (ಡೀಮ್ಡ್‌ ಮೊತ್ತ) ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ತಲುಪಿದೆ ಎಂದು ಭಾವಿಸತಕ್ಕದ್ದು ಎಂದು ‘ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆ’ಯ ಸೆಕ್ಷನ್‌ 7 (ಡಿ) ಅಡಿಯಲ್ಲಿದೆ. ಆದರೆ, ಈ ಅಂಶವನ್ನು ತಪ್ಪಾಗಿ ಅರ್ಥೈಸಿಕೊಂಡು, ಯೋಜನೆಯಡಿ ಕಾರ್ಯಕ್ರಮಕ್ಕೆ ಮೀಸಲಿಟ್ಟ ಪೂರ್ಣ ಭಾಗವನ್ನು ಅನ್ಯ ಉದ್ದೇಶಗಳಿಗೆ ಬಳಸಿರುವುದು ಕೂಡಾ ಬಹಿರಂಗವಾಗಿದೆ.

‘ಈ ಯೋಜನೆಯಲ್ಲಿ ನಗರಾಭಿವೃದ್ಧಿ ಇಲಾಖೆಯಡಿ ಬೆಂಗಳೂರು ನಗರದ ಸುತ್ತ ಫೆರಿಫೆರಲ್‌ ರಿಂಗ್‌ ರಸ್ತೆಯ
ರಚನೆಗೆ ಮೀಸಲಿಟ್ಟಿದ್ದ ₹ 170 ಕೋಟಿ ಮತ್ತು ಸಣ್ಣ ನೀರಾವರಿ ಇಲಾಖೆಯಲ್ಲಿ ಮೀಸಲಿಟ್ಟ ಹಣವನ್ನೂ ಸಂಪೂರ್ಣವಾಗಿ ಇತರ ಉದ್ದೇಶಗಳಿಗೆ ಬಳಸಲಾಗಿದೆ. ಸಹಕಾರ ಇಲಾಖೆಯಲ್ಲಿ ₹ 74.13 ಕೋಟಿಯನ್ನು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕೆಐಎಡಿಬಿಗೆ ನೀಡಲು ಅನುಮೋದನೆ ನೀಡುವಂತೆ ಇಲಾಖೆಯ ಸಚಿವರಿಗೆ ಕಡತ ಮಂಡಿಸಲಾಗಿದೆ’ ಎಂದೂ ಅಧಿಕಾರಿ ಮಾಹಿತಿ ನೀಡಿದರು.

ಮಾತೃ ಇಲಾಖೆಯೇ ಹಿಂದೆ!:

ಸಮಾಜ ಕಲ್ಯಾಣ ಇಲಾಖೆಗೆ ಮೀಸಲಿಟ್ಟ ₹ 3,105 ಕೋಟಿಯಲ್ಲಿ ₹ 1,355 ಕೋಟಿ (ಶೇ 43.63), ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮೀಸಲಿಟ್ಟ ₹ 1341 ಕೋಟಿಯಲ್ಲಿ ₹ 585 ಕೋಟಿ (ಶೇ 43.67) ಮಾತ್ರ ವೆಚ್ಚವಾಗಿದೆ. ವಿದ್ಯಾರ್ಥಿ ವೇತನ ವಿತರಣೆಗೆ ಎಸ್‌ಎಸ್‌ಪಿ ಪೋರ್ಟಲ್‌ ತೆರೆಯಲಾಗಿದೆ. ಆದರೆ, ಈವರೆಗೂ ಹಣ ವರ್ಗಾವಣೆಯಾಗಿಲ್ಲ. ವಿಶೇಷ ದುರ್ಬಲ ಬುಡಕಟ್ಟು ಜನಾಂಗಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣದಲ್ಲಿ (₹ 21.31 ಕೋಟಿ) ನಯಾ ಪೈಸೆ ವೆಚ್ಚವಾಗಿಲ್ಲ. ಆದರೆ, ಆರ್ಥಿಕ ಇಲಾಖೆ ಡಾ.ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮ (₹ 58 ಕೋಟಿ), ಬಾಬು ಜಗಜೀವನ್‌ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (₹ 15 ಕೋಟಿ), ಭೋವಿ ಅಭಿವೃದ್ಧಿ ನಿಗಮಗಳಿಗೆ (₹ 30 ಕೋಟಿ) ಅನುದಾನವನ್ನೇ ಬಿಡುಗಡೆ ಮಾಡಿಲ್ಲ. ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮಕ್ಕೆ ನೀಡಿದ ₹ 25 ಕೋಟಿಯಲ್ಲಿ ಶೇ 50ರಷ್ಟು ವೆಚ್ಚವಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು