ಶನಿವಾರ, ಏಪ್ರಿಲ್ 17, 2021
31 °C

ಸಾಲ ಪಡೆಯಲು ಸ್ಮಾರ್ಟ್‌ಫೋನ್ ಕಡ್ಡಾಯ: ಬೀದಿ ವ್ಯಾಪಾರಸ್ಥರ ಅಳಲು

ವೆಂಕಟೇಶ ಜಿ.ಎಚ್ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಪ್ರಧಾನಮಂತ್ರಿ ಆತ್ಮನಿರ್ಭರ ಯೋಜನೆಯಡಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಬೀದಿ ಬದಿಯ ವ್ಯಾಪಾರಸ್ಥರು ₹10 ಸಾವಿರ ಮೊತ್ತದ ಸಾಲ ಪಡೆಯಬೇಕಿದ್ದರೆ ಸ್ಮಾರ್ಟ್‌ಫೋನ್ ಕೊಂಡುಕೊಳ್ಳಲೇಬೇಕಾದ ಪರಿಸ್ಥಿತಿ ಬಂದಿದೆ.

ಸಾಲ ಪಡೆಯುವವರು ಕಡ್ಡಾಯವಾಗಿ ಯುಪಿಐ ಐಡಿ ಹೊಂದಿರಬೇಕು. ಆನ್‌ಲೈನ್‌ ಮೂಲಕವೇ ಸಾಲಕ್ಕೆ ಅರ್ಜಿ ಸಲ್ಲಿಸಬೇಕು. ಡಿಜಿಟಲ್ ಪಾವತಿ ಮೂಲಕವೇ ಸಾಲ ಮರಳಿಸಬೇಕು ಎಂಬ ನಿಯಮಗಳು ಇದಕ್ಕೆ ಕಾರಣ.

‘ಇದು ನಮ್ಮನ್ನು ಸಂಕಷ್ಟಕ್ಕೆ ದೂಡಿದೆ. ಸ್ಮಾರ್ಟ್‌ಫೋನ್ ಇಲ್ಲದವರು ಸಾಲಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ‘ ಎಂದು ಬಾಗಲಕೋಟೆ ಜಿಲ್ಲೆ ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಇಳಕಲ್‌ನ ರಿಯಾಜ್ ಮಕಾನದಾರ ಅಳಲು ತೋಡಿಕೊಂಡರು.

’ಡಿಜಿಟಲ್ ವಹಿವಾಟು ಉತ್ತೇಜಿಸಲು ಈ ನಿಯಮ ರೂಪಿಸಲಾಗಿದೆ ಎಂದು ಬ್ಯಾಂಕ್‌ನವರು ಹೇಳುತ್ತಾರೆ. ಬೀದಿ ಬದಿ ವ್ಯಾಪಾರಸ್ಥರಲ್ಲಿ ಬಹುತೇಕರು ಹೆಣ್ಣುಮಕ್ಕಳೇ ಇದ್ದಾರೆ. ಅವರ ಬಳಿ ಸಾಧಾರಣ ಫೋನ್‌ ಕೂಡಾ ಇಲ್ಲ. ಅವರಿಗೆ ಸ್ಮಾರ್ಟ್‌ ಫೋನ್‌ ಫೋನ್ ಬಳಸಲು ಬರುವುದಿಲ್ಲ. ಅಂತಹವರು ಏನು ಮಾಡಬೇಕು‘ ಎಂದು ಸಂಘದ ಇಳಕಲ್ ತಾಲ್ಲೂಕು ಘಟಕದ ಅಧ್ಯಕ್ಷ ಪವಾಡೆಪ್ಪ ಛಲವಾದಿ ಪ್ರಶ್ನಿಸುತ್ತಾರೆ. 

‘ಈ ಮೊದಲು ಸಾಲ ಕೊಡಲು ಯಾವುದೇ ಭದ್ರತೆ ಅಗತ್ಯವಿಲ್ಲ ಎಂದು ಹೇಳಿದ್ದರು. ಈಗ ಕೆಲವು ಬ್ಯಾಂಕ್‌ನವರು ₹200 ಮುಖಬೆಲೆಯ ಬಾಂಡ್ ಕೇಳುತ್ತಿದ್ದಾರೆ. ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಯಾರಾದರೂ ಒಬ್ಬರದು ಜಾಮೀನು ಬೇಕು ಎಂದು ತಿಳಿಸುತ್ತಿದ್ದಾರೆ’ ಎಂದು ದೂರಿದರು.

ಜಿಲ್ಲೆಯಲ್ಲಿ 16 ಸಾವಿರ ಮಂದಿ ನೋಂದಾಯಿತ ಬೀದಿ ಬದಿ ವ್ಯಾಪಾರಿಗಳು ಇದ್ದಾರೆ. ಇಲ್ಲಿಯವರೆಗೆ 15ಕ್ಕೂ ಹೆಚ್ಚು ಸಾಲಮೇಳ ಆಯೋಜಿಸಲಾಗಿದೆ. ಆರು ಸಾವಿರಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ 2200 ಜನರಿಗಷ್ಟೇ ಸಾಲ ದೊರೆತಿದೆ. ಈಗಿರುವ ತೊಂದರೆಗಳನ್ನು ನಿವಾರಿಸುವಂತೆ ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಿದ್ದೇವೆ ಎಂದು ರಿಯಾಜ್ ತಿಳಿಸಿದರು.

 ಏನಿದು ಸಾಲ ಸೌಲಭ್ಯ

ಪ್ರಧಾನಮಂತ್ರಿ ಆತ್ಮನಿರ್ಭರ ಯೋಜನೆಯಡಿ ಬೀದಿ ಬದಿಯ ವ್ಯಾಪಾರಿಗಳಿಗೆ ಯಾವುದೇ ಭದ್ರತೆ ಪಡೆಯದೇ ವಾರ್ಷಿಕ ಶೇ 7ರ ಬಡ್ಡಿ ದರದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ನೀಡಲಾಗುತ್ತಿದೆ. ಆಯಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೊಂದಾಯಿತ ವ್ಯಾಪಾರಸ್ಥರಿಗೆ ಈ ಸವಲತ್ತು ಸಿಗಲಿದೆ.

ವ್ಯಾಪಾರಿಗಳು ಬ್ಯಾಂಕ್‌ಗಳಿಗೆ ಅಲೆದಾಡುವುದನ್ನು ತಪ್ಪಿಸಲು, ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಆಯಾ ಸ್ಥಳೀಯ ಸಂಸ್ಥೆಗಳೇ ರಾಷ್ಟ್ರೀಯ ಬ್ಯಾಂಕ್ ಪ್ರತಿನಿಧಿಗಳು ಹಾಗೂ ವ್ಯಾಪಾರಸ್ಥರನ್ನು ಸೇರಿಸಿ ಕಳೆದ ಎರಡು ತಿಂಗಳಿನಿಂದ ಸಾಲ ಮೇಳವನ್ನು ಆಯೋಜಿಸುತ್ತಿವೆ.

ಬಡವರ ಬಂಧು: ಯೋಜನೆ ಸ್ಥಗಿತ?

ಹಿಂದಿನ ಸರ್ಕಾರ ‘ಬಡವರ ಬಂಧು’ ಹೆಸರಿನಡಿ ಸಾಲಯೋಜನೆ ಆರಂಭಿಸಿದ್ದು, ಸಹಕಾರ ಬ್ಯಾಂಕ್‌ಗಳಿಂದ ₹10 ಸಾವಿರ ಬಡ್ಡಿರಹಿತ ಸಾಲ ನೀಡಲಾಗುತ್ತಿತ್ತು. ಪಿಗ್ಮಿ ರೀತಿ ದಿನಕ್ಕೆ ₹50 ಕಟ್ಟಿಸಾಲ ತೀರಿಸಬೇಕಿತ್ತು.  ಈಗ ನಿಲ್ಲಿಸಲಾಗಿದೆ. ಕೇಳಿದರೆ, ಮೇಲಿನಿಂದ ಆದೇಶವಿದೆ ಎನ್ನುತ್ತಾರೆ ಎಂದು ರಿಯಾಜ್ ಮಕಾನದಾರ ತಿಳಿಸಿದರು.

***

ಸ್ಮಾರ್ಟ್‌ಫೋನ್ ಹೊಂದಬೇಕು ಎಂಬ ನಿಯಮ ಸರಿಯಲ್ಲ. ಕೂಡಲೇ ಲೀಡ್‌ ಬ್ಯಾಂಕ್‌ ನೇತೃತ್ವದಲ್ಲಿ ಬ್ಯಾಂಕರ್‌ಗಳ ಸಭೆ ಕರೆದು ಸಮಸ್ಯೆ ಪರಿಹರಿಸುವೆ 

- ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾಧಿಕಾರಿ, ಬಾಗಲಕೋಟೆ

***

ಸಾಲ ಪಡೆದವರು ಡಿಜಿಟಲ್ ವಹಿವಾಟು ನಡೆಸಿದಲ್ಲಿ ಮಾಸಿಕ ₹100 ಕ್ಯಾಶ್‌ಬ್ಯಾಕ್ ಸೌಲಭ್ಯ ಸಿಗಲಿದೆ. ಆದರೂ ಸ್ಮಾರ್ಟ್‌ಫೋನ್ ಕಡ್ಡಾಯ ಮಾಡಿಲ್ಲ. ಬ್ಯಾಂಕ್‌ನವರು ಹಾಗೆ ಹೇಳಿದಲ್ಲಿ ಫಲಾನುಭವಿಗಳು ನನ್ನನ್ನು ಸಂಪರ್ಕಿಸಲಿ 

- ಗೋಪಾಲ ರೆಡ್ಡಿ, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು