ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಸಾವಿಗೆ ಕಾಂಗ್ರೆಸ್‌ ಹೊಣೆ: ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಆರೋಪ

Last Updated 19 ಮೇ 2021, 12:15 IST
ಅಕ್ಷರ ಗಾತ್ರ

ಚಿತ್ರದುರ್ಗ: ಲಸಿಕೆಯ ಬಗ್ಗೆ ಅಪಪ್ರಚಾರ ನಡೆಸಿ ಜನರ ದಿಕ್ಕು ತಪ್ಪಿಸಿದ ಕಾಂಗ್ರೆಸ್‌, ಕೊರೊನಾ ಸೋಂಕಿನಿಂದ ಸಂಭವಿಸಿದ ಸಾವಿನ ಹೊಣೆ ಹೊರಬೇಕು. ರಾಜ್ಯದಲ್ಲಿ ಕೋವಿಡ್‌ನಿಂದ ಸೃಷ್ಟಿಯಾಗಿರುವ ವಿಪತ್ತಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೇ ಕಾರಣ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಆರೋಪಿಸಿದರು.

‘ನಾಲ್ಕು ತಿಂಗಳ ಹಿಂದೆ ಕೋವಿಡ್‌ ಲಸಿಕೆಯ ಬಗ್ಗೆ ಕಾಂಗ್ರೆಸ್‌ ಅಪಪ್ರಚಾರ ನಡೆಸಿತು. ಲಸಿಕೆ ಪಡೆದರೆ ಬಂಜೆತನದ ಅಪಾಯವಿದೆ ಎಂಬ ವದಂತಿ ಹಬ್ಬಿಸಿತು. ಇದರ ಫಲವಾಗಿ ಸಾಕಷ್ಟು ಜನರು ಕೋವಿಡ್‌ ನಿರ್ಲಕ್ಷ್ಯ ಮಾಡಿದರು. ಇದು ಸಾವಿನ ಪ್ರಮಾಣ ಹೆಚ್ಚಾಗಲು ಕಾರಣವಾಯಿತು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಾದಿಸಿದರು.

‘ಬೇರೆ ರಾಜ್ಯಗಳಲ್ಲಿ ಆಡಳಿತ ಪಕ್ಷಕ್ಕೆ ವಿರೋಧ ಪಕ್ಷಗಳು ಸಹಕಾರ ನೀಡುತ್ತಿವೆ. ರಾಜ್ಯದ ಕಾಂಗ್ರೆಸ್‌ ಮಾತ್ರ ಸಣ್ಣತನ ಪ್ರದರ್ಶಿಸುತ್ತಿದೆ. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅಗತ್ಯ ಸಹಕಾರ, ಸಲಹೆಗಳನ್ನು ನೀಡುತ್ತಿದ್ದಾರೆ. ಜೆಡಿಎಸ್‌ ನಾಯಕರನ್ನು ನೋಡಿ ಕಾಂಗ್ರೆಸ್‌ ಕಲಿಯಬೇಕಿದೆ’ ಎಂದು ಟೀಕಿಸಿದರು.

‘ಕೋವಿಡ್‌ ಪ್ರಕರಣ ಹೆಚ್ಚಿ ಸಾವು ಸಂಭವಿಸಲಿ ಎಂಬುದು ಕಾಂಗ್ರೆಸ್‌ ಅಪೇಕ್ಷೆ. ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಕೆಟ್ಟ ಹೆಸರು ಬರುವಂತೆ ಕಾಂಗ್ರೆಸ್ ನಿರೀಕ್ಷಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಹೆಸರಿಗೆ ಕಳಂಕ ತರಲು ಹುನ್ನಾರ ನಡೆಸುತ್ತಿದೆ. ರಾಜ್ಯದ ಅಭಿವೃದ್ಧಿ, ಜನರ ಆರೋಗ್ಯ ಸುಧಾರಣೆಗೆ ಸರ್ಕಾರ ಹಾಗೂ ಬಿಜೆಪಿ ಶ್ರಮಿಸುತ್ತಿದ್ದರೆ, ಕಾಂಗ್ರೆಸ್‌ ಅಧಿಕಾರ ಹಿಡಿಯಲು ಹವಣಿಸುತ್ತಿದೆ’ ಎಂದು ದೂರಿದರು.

‘ಶಾಸಕರ ನಿಧಿಯ ಅನುದಾನ ಹಾಗೂ ಆರು ತಿಂಗಳ ವೇತನವನ್ನು ಕೋವಿಡ್‌ಗೆ ವಿನಿಯೋಗಿಸಲು ಮುಖ್ಯಮಂತ್ರಿ ತೀರ್ಮಾನಿಸಿದ್ದಾರೆ. ಇದನ್ನು ಪ್ರಚಾರಕ್ಕೆ ಬಳಸಿಕೊಳ್ಳಲು ಮುಂದಾದ ಕಾಂಗ್ರೆಸ್‌, ಶಾಸಕರ ನಿಧಿಯಿಂದ ₹ 100 ಕೋಟಿ ನೀಡುವುದಾಗಿ ಗಿಮ್ಮಿಕ್ ಮಾಡಿದೆ. ಇದು ಸರ್ಕಾರದ ಹಣವೆ ಹೊರತು ಕಾಂಗ್ರೆಸ್‌ ಶಾಸಕರದ್ದಲ್ಲ. ವೈಯಕ್ತಿಕವಾಗಿ ನೀವು ಎಷ್ಟು ನೆರವು ನೀಡುತ್ತೀರಿ ಎಂಬುದನ್ನು ಸಮಾಜದ ಮುಂದಿಡಿ’ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT