ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರು, ಶಾಸಕರು ಬಿಜೆಪಿಗೆ ರಾಜಿನಾಮೆ ಕೊಟ್ಟು ಕಾಂಗ್ರೆಸ್‌ ಸೇರುತ್ತಾರೆ: ಯತ್ನಾಳ್

ಡಿಕೆಶಿ ಜತೆ ಚರ್ಚಿಸಿ ಟಿಕೆಟ್‌ಗೆ ವ್ಯವಸ್ಥೆ ಮಾಡಿಕೊಂಡ ಸಚಿವರು
Last Updated 24 ಜನವರಿ 2022, 19:28 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಧಾನಸಭಾ ಚುನಾವಣೆ ಘೋಷಣೆ ಆದ ತಕ್ಷಣವೇ ಒಂದಷ್ಟು ಸಚಿವರು, ಶಾಸಕರು ಬಿಜೆಪಿಗೆ ರಾಜಿನಾಮೆ ಕೊಟ್ಟು ಹೋಗುತ್ತಾರೆ. ಇವರು ಈಗಾಗಲೇ ಡಿ.ಕೆ.ಶಿವಕುಮಾರ್‌ ಜತೆಗೆ ಟಿಕೆಟ್‌ ಬಗ್ಗೆ ಮಾತನಾಡಿದ್ದಾರೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನೀಡಿದ ಹೇಳಿಕೆರಾಜಕೀಯ ವಲಯದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಜತೆ ಸೋಮವಾರ ಮಧ್ಯಾಹ್ನ ಭೋಜನ ಕೂಟದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ಈಗಲೇ ಸಚಿವ ಸಂಪುಟ ಪುನಾರಚನೆ ಮಾಡದಿದ್ದರೆ, ಎಲ್ಲ ಶಾಸಕರು ಬಿಜೆಪಿ ಬಿಟ್ಟು ಹೋಗಬಹುದು. ಉತ್ತರ
ಪ್ರದೇಶದಲ್ಲಿ ಆದ ರೀತಿ ಇಲ್ಲೂ ಆಗಬಹುದು’ ಎಂದೂ ಎಚ್ಚರಿಕೆ ನೀಡಿದರು.

ಈ ಮಧ್ಯೆ ಹಲವು ಶಾಸಕರು ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಒತ್ತಡ ಹೇರಿದ್ದಾರೆ. ಆದರೆ, ಸಂಪುಟ ವಿಸ್ತರಣೆ ತೀರ್ಮಾನವನ್ನು ವರಿಷ್ಠರು
ತೆಗೆದುಕೊಳ್ಳಬೇಕು ಎಂದು ಸಮಾಧಾನಪಡಿಸುವ ಯತ್ನವನ್ನು ಬೊಮ್ಮಾಯಿ ಮಾಡಿದ್ದಾರೆ.

ಯತ್ನಾಳ ಹೇಳಿದ್ದೇನು?:‘ಸಚಿವ ಸಂಪುಟ ಪುನಾರಚನೆ ಇನ್ನು ಒಂದು ವಾರದೊಳಗೆ ಮಾಡಬೇಕು. ತಡವಾಗಿ ಮಾಡಿದರೆ ಉಪಯೋಗ ಆಗದು. ಪಕ್ಷ ನಿಷ್ಠರಿಗೆ ಅವಕಾಶ ಕೊಡಬೇಕು. ಉತ್ತರಪ್ರದೇಶದಲ್ಲಿ ಆದಂತೆ ಅಧಿಕಾರ ಅನುಭವಿಸಿ, ನಮ್ಮ ಪಕ್ಷದಲ್ಲಿ ಜಾತ್ರೆ ಮಾಡಿ ಬಳಿಕ ಪಕ್ಷ ಬಿಟ್ಟು ಹೋಗಬಹುದು’ ಎಂದು ಹೇಳಿದರು.

‘ಕೆಲವರು ಡಿ.ಕೆ.ಶಿವಕುಮಾರ್‌ ಜತೆ ಟಿಕೆಟ್‌ ಬಗ್ಗೆ ಮಾತನಾಡಿರುವ ಮಾಹಿತಿ ಇದೆ. ಎಲ್ಲ ಹೋದ ಮೇಲೆ ಯತ್ನಾಳ ಬೇಕು, ಜಾರಕಿಹೊಳಿ ಬೇಕು ಎಂದರೆ ಆಗಲ್ಲ. ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದರೆ ಪ್ರಯೋಜನವೇನು’ ಎಂದು ಪ್ರಶ್ನಿಸಿದರು.

‘ಶಾಸಕ ರೇಣುಕಾಚಾರ್ಯ ಅವರನ್ನು ಭೇಟಿ ಮಾಡಿದ್ದರಲ್ಲಿ ತಪ್ಪೇನೂ ಇಲ್ಲ. ನಾನು ಸಿದ್ದರಾಮಯ್ಯ, ಡಿಕೆಶಿ ಅಥವಾ ಜಮೀರ್‌ ಅಹಮದ್ ಅವರನ್ನು ಭೇಟಿ ಮಾಡಿಲ್ಲವಲ್ಲ. ನಮ್ಮ ಪಕ್ಷದ ಶಾಸಕರನ್ನೇ ಭೇಟಿ ಮಾಡಿದ್ದು. ಚಹಾ ಕುಡಿಯಲು ಕರೆದಿದ್ದರು, ಹೋಗಿದ್ದೆ. ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ವಿರೋಧಿಸಿಕೊಂಡು ಬಂದಿದ್ದೇನೆ. ರೇಣುಕಾಚಾರ್ಯ ನನ್ನ ಬಗ್ಗೆ ಮಾತನಾಡಿದ್ದರೂ ನಾನು ಅವರ ಬಗ್ಗೆ ಮಾತನಾಡಿಲ್ಲ’ ಎಂದು ಯತ್ನಾಳ ಹೇಳಿದರು.

ಸಿ.ಎಂ ನಿರ್ಧಾರ ಒಪ್ಪುವೆ: ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಶಾಸಕ ರಮೇಶ ಜಾರಕಿಹೊಳಿ, ‘ಸಂಪುಟ ಪುನಾರಚನೆ ಬಗ್ಗೆ ಮುಖ್ಯಮಂತ್ರಿಯವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ. ನಾನು ಮತ್ತು ಯತ್ನಾಳ ಅವರು ನೀರಾವರಿ ವಿಷಯದ ಬಗ್ಗೆ ಮಾತನಾಡಲು ಸೇರಿದ್ದು’ ಎಂದರು.

‘ಬೆಳಗಾವಿಯ ಪ್ರತ್ಯೇಕ ಸಭೆಗೆ ಹೋಗಿಲ್ಲ. ಪ್ರೀತಿ ಇರುವ ಸಭೆಗೆ ಹೋಗುತ್ತೇನೆ. ಇಂತಹ ಸಭೆಗಳಿಗೆ ಹೋಗುವುದಿಲ್ಲ. ನಮ್ಮ ವರಿಷ್ಠರು ಬುದ್ಧಿವಂತರಿದ್ದಾರೆ. ಯಾರು ಎಲ್ಲಿ ಏನು ಮಾಡುತ್ತಾರೆ ಎಂಬ ಮಾಹಿತಿ ಅವರಿಗೆ ಇರುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಶೋಕ, ಮಾಧುಸ್ವಾಮಿಗೆ ಇಲ್ಲ ಜಿಲ್ಲಾ ಉಸ್ತುವಾರಿ

ಕೋವಿಡ್ ನಿರ್ವಹಣೆಗೆ ಸೀಮಿತವಾಗಿ ಸಂಪುಟ ಸಹೋದ್ಯೋಗಿಗಳಿಗೆ ಜಿಲ್ಲಾ ಉಸ್ತುವಾರಿ ವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಹಿಂದೆ ಇದ್ದ ಹೊಣೆಗಾರಿಕೆಯನ್ನು ಬದಲಾಯಿಸಿದ್ದಾರೆ. ಕೋವಿಡ್ ನಿರ್ವಹಣೆಯ ಜತೆಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ಹಂಚಿಕೆ ಮಾಡಿದ್ದಾರೆ. ತಾವು ಪ್ರತಿನಿಧಿಸುವ ಜಿಲ್ಲೆಯ ಉಸ್ತುವಾರಿಯನ್ನು ಸಚಿವರಿಗೆ ನೀಡದೇ, ಬೇರೆ ಜಿಲ್ಲೆ ನೀಡಿರುವುದು ವಿಶೇಷ.

ಈ ಸಂಬಂಧ ಸೋಮವಾರ ಸಂಜೆ ಅಧಿಕೃತ ಆದೇಶವನ್ನೂ ಹೊರಡಿಸಲಾಗಿದೆ.ಹಿರಿಯ ಸಚಿವರಾದ ಆರ್‌.ಅಶೋಕ ಮತ್ತು ಜೆ.ಸಿ.ಮಾಧುಸ್ವಾಮಿ ಅವರಿಗೆ ಯಾವುದೇ ಜಿಲ್ಲೆಗಳ ಉಸ್ತುವಾರಿ ನೀಡಿಲ್ಲ. ಕೆ.ಗೋಪಾಲಯ್ಯ, ಶಂಕರಪಾಟೀಲ ಮುನೇನಕೊಪ್ಪ ಮತ್ತು ಬಿ.ಸಿ.ಪಾಟೀಲ ಅವರಿಗೆ ತಲಾ ಎರಡು ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ.

ಬೆಂಗಳೂರು ನಗರ ಉಸ್ತುವಾರಿಯನ್ನು ಬೊಮ್ಮಾಯಿ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಪಕ್ಷದ ಪ್ರಮುಖರ ಸಮಿತಿ ಸಭೆಯಲ್ಲಿ ಯಾವುದೇ ಸಚಿವರಿಗೂ ತವರು ಜಿಲ್ಲೆಯ ಉಸ್ತುವಾರಿ ನೀಡಬಾರದು ಎಂಬ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಸಚಿವರ ಒತ್ತಡಕ್ಕೆ ಮಣಿದು ಯಡಿಯೂರಪ್ಪ ಕೆಲವರಿಗೆ ಮಾತೃ ಜಿಲ್ಲೆಗಳನ್ನೇ ಉಸ್ತುವಾರಿ ನೀಡಿದ್ದರು.ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿ ಮೇಲೆ ಕಂದಾಯ ಸಚಿವ ಆರ್‌.ಅಶೋಕ ಮತ್ತು ವಿ.ಸೋಮಣ್ಣ ಅವರು ಕಣ್ಣಿಟ್ಟಿದ್ದರು. ಇಬ್ಬರಿಗೂ ನಿರಾಸೆಯಾಗಿದೆ. ಶಿವಮೊಗ್ಗ ಉಸ್ತುವಾರಿ ಹೊಂದಿದ್ದ ಕೆ.ಎಸ್‌.ಈಶ್ವರಪ್ಪ ಅವರಿಗೆ ನೆರೆಯ ಚಿಕ್ಕಮಗಳೂರಿನ ಉಸ್ತುವಾರಿ ನೀಡಿದ್ದಾರೆ. ಮಾಧುಸ್ವಾಮಿ ಅವರು ಪಕ್ಷ ಹಾಳು ಮಾಡುತ್ತಿದ್ದಾರೆ ಎಂದು ತುಮಕೂರು ಸಂಸದ ಜಿ.ಎಸ್. ಬಸವರಾಜು ಅವರು ಸಚಿವ ಬೈರತಿ ಬಸವರಾಜ ಜತೆ ಮಾತನಾಡಿದ್ದು ಸದ್ದು ಮಾಡಿತ್ತು.

‘ಸಂಪರ್ಕದಲ್ಲಿರುವವರ ಮಾಹಿತಿ ಕೊಡಲ್ಲ’

‘ಬಿಜೆಪಿ ಮತ್ತು ಇತರ ಪಕ್ಷಗಳ ನಾಯಕರು ನಮ್ಮ ಜತೆ ಸಂಪರ್ಕದಲ್ಲಿ ಇರುವ ವಿಚಾರವನ್ನು ಬಹಿರಂಗವಾಗಿ ಮಾತನಾಡಲು ಸಾಧ್ಯವಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

‘ಬಿಜೆಪಿಯಲ್ಲಿ ಏನಾಗುತ್ತಿದೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ನಮ್ಮ ಜತೆ ಮಾತನಾಡಿರುವವರ ಬಗ್ಗೆ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಜತೆ ಯಾರೆಲ್ಲಾ ಮಾತನಾಡುತ್ತಿದ್ದಾರೆ ಎಂದು ಸಚಿವರನ್ನೇ ಕೇಳಿ’ ಎಂದು ಮಾರ್ಮಿಕವಾಗಿ ನುಡಿದರು.

‘ನನ್ನ ಬಳಿ ಯಾರು ಮಾತನಾಡುತ್ತಾರೆ ಎಂಬ ಮಾಹಿತಿಯನ್ನು ನಾನ್ಯಾಕೆ ಬಿಟ್ಟುಕೊಡಲಿ. ಇದರಲ್ಲಿ ಗೋಪ್ಯತೆ ಕಾಪಾಡಿಕೊಳ್ಳುವುದು ಮುಖ್ಯ. ಇದು ರಾಜಕಾರಣದ ಒಂದು ಭಾಗ’ ಎಂದರು.

‘ಸಂಪುಟ ವಿಸ್ತರಣೆ ವರಿಷ್ಠರ ತೀರ್ಮಾನ’

ಬೆಂಗಳೂರು: ‘ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇವೆ. ಆಕಾಂಕ್ಷಿಗಳು ಸಚಿವ ಸ್ಥಾನದ ಮೇಲೆ ನಿರೀಕ್ಷೆ ಇಟ್ಟಿರುವುದರಲ್ಲಿ ತಪ್ಪೇನಿಲ್ಲ. ಅದನ್ನು ಯಾವಾಗ ಮಾಡಬೇಕು? ಯಾವ ರೀತಿ ಮಾಡಬೇಕು ಎನ್ನುವುದು ಪಕ್ಷದ ವರಿಷ್ಠರ ಗಮನದಲ್ಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ನಾನೂ ಪಕ್ಷದ ವರಿಷ್ಠ ಗಮನಕ್ಕೆ ತರುತ್ತೇನೆ. ವರಿಷ್ಠರು ಯಾವಾಗ ಕರೆದು ಮಾತನಾಡುತ್ತಾರೊ ಆಗ ಎಲ್ಲ ವಿವರಗಳನ್ನು ಕೊಡುತ್ತೇನೆ’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

‌‘ನಿಗಮ ಮಂಡಳಿಗಳಿಗೆ ನೇಮಕಾತಿ ವಿಚಾರದಲ್ಲಿ ಕೂಡಾ ಪಕ್ಷದಲ್ಲಿ ಚರ್ಚೆ ಆಗಬೇಕು. ಪಕ್ಷದಲ್ಲಿ ಚರ್ಚೆಯಾದ ಬಳಿಕ ಈ ಬಗ್ಗೆ ತೀರ್ಮಾನ ಆಗುತ್ತದೆ. ಪಕ್ಷದವರು ಕುಳಿತುಕೊಂಡು ಚರ್ಚೆ ಮಾಡುತ್ತಾರೆ. ಸದ್ಯಕ್ಕೆ ನನ್ನ ಮುಂದೆ ನಿಗಮ– ಮಂಡಳಿಯ ಯಾವುದೇ ಪ್ರಸ್ತಾವ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಸಚಿವ ಉಮೇಶ ಕತ್ತಿ ಮನೆಯಲ್ಲಿ ನಡೆದ ರಹಸ್ಯ ಸಭೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಆ ಬಗ್ಗೆ ನನಗೆ ಗೊತ್ತಿಲ್ಲ. ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ನಾಯಕರು ಹಲವಾರು ಸಂದರ್ಭದಲ್ಲಿ ಪ್ರತ್ಯೇಕವಾಗಿ ಸೇರುತ್ತಾರೆ. ಕಾಂಗ್ರೆಸ್‌ನವರೂ ಸೇರುತ್ತಾರೆ, ಬಿಜೆಪಿಯವರೂ ಸೇರುತ್ತಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ‘ ಎಂದರು.

ಪಕ್ಷಕ್ಕೆ ನಿಷ್ಠ: ಬೈರತಿ

‘ಬಿಜೆಪಿಗೆ ಬಂದ ಸ್ನೇಹಿತರ ಪೈಕಿ ಯಾರು ಎಲ್ಲಿಗೆ ಹೋಗುತ್ತಾರೆ, ಬಿಡುತ್ತಾರೆ ಎನ್ನುವುದು ಗೊತ್ತಿಲ್ಲ. ಅದು ಅವರ ವೈಯಕ್ತಿಕ ವಿಚಾರ. ಆದರೆ, ಎಲ್ಲರೂ ಪಕ್ಷ ನಿಷ್ಠರಾಗಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳಿದರು.

ಪಕ್ಷಕ್ಕೆ ಮೋಸ ಮಾಡಲ್ಲ: ಸೋಮಶೇಖರ್

'ಎರಡು ವರ್ಷಗಳ ಅವಧಿಯಲ್ಲಿ ಸಹಕಾರ ಸಚಿವನಾಗಿ ಕೆಲಸ ಮಾಡುವಾಗ ಪಕ್ಷ ಮತ್ತು ಸರ್ಕಾರದಲ್ಲಿ ನನಗೆ ಸಂಪೂರ್ಣ ಸ್ವಾತಂತ್ರ್ಯ ದೊರಕಿದೆ. ಈಗ ಪಕ್ಷಕ್ಕೆ ಮೋಸ ಮಾಡುವುದಿಲ್ಲ' ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.

ಬಿಜೆಪಿ ಮತ್ತು ಜೆಡಿಎಸ್ ನ ಹಲವರು ಕಾಂಗ್ರೆಸ್ ಪಕ್ಷ ಸೇರಲು ಮುಂದಾಗಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, 'ಪಕ್ಷ ಮತ್ತು ಸರ್ಕಾರದಲ್ಲಿ ನನಗೆ ಸಂಪೂರ್ಣ ಸ್ವಾತಂತ್ರ್ಯ ಇದೆ. ಪಕ್ಷ ಮತ್ತು ಸರ್ಕಾರಕ್ಕೆ ಯಾವತ್ತೂ ಮುಜುಗರ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ' ಎಂದರು. 'ಇಲ್ಲಿ ತೃಪ್ತಿಯಾಗಿದ್ದೇನೆ. ಇಲ್ಲಿಯೇ ಮುಂದುವರಿಯುತ್ತೇನೆ' ಎಂದು ಹೇಳಿದರು.

ಯಾರಿಗೆ ಯಾವ ಜಿಲ್ಲೆ ಉಸ್ತುವಾರಿ

ಗೋವಿಂದ ಕಾರಜೋಳ–ಬೆಳಗಾವಿ, ಕೆ.ಎಸ್‌.ಈಶ್ವರಪ್ಪ–ಚಿಕ್ಕಮಗಳೂರು, ಬಿ.ಶ್ರೀರಾಮುಲು–ಬಳ್ಳಾರಿ, ವಿ.ಸೋಮಣ್ಣ– ಚಾಮರಾಜನಗರ, ಉಮೇಶ ಕತ್ತಿ–ವಿಜಯಪುರ, ಎಸ್‌.ಅಂಗಾರ– ಉಡುಪಿ, ಆರಗ ಜ್ಞಾನೇಂದ್ರ–ತುಮಕೂರು, ಡಾ.ಸಿ.ಎನ್‌.ಅಶ್ವತ್ಥನಾರಾಯಣ–ರಾಮನಗರ, ಸಿ.ಸಿ.ಪಾಟೀಲ– ಬಾಗಲಕೋಟೆ, ಆನಂದಸಿಂಗ್‌ – ಕೊಪ್ಪಳ, ಕೋಟ ಶ್ರೀನಿವಾಸ ಪೂಜಾರಿ– ಉತ್ತರಕನ್ನಡ, ಪ್ರಭು ಚವ್ಹಾಣ–ಯಾದಗಿರಿ, ಮುರುಗೇಶ ನಿರಾಣಿ– ಕಲಬುರಗಿ, ಶಿವರಾಮ ಹೆಬ್ಬಾರ್‌– ಹಾವೇರಿ, ಎಸ್‌.ಟಿ.ಸೋಮಶೇಖರ್– ಮೈಸೂರು, ಬಿ.ಸಿ.ಪಾಟೀಲ– ಚಿತ್ರದುರ್ಗ, ಗದಗ, ಬಿ.ಎ.ಬಸವರಾಜ– ದಾವಣಗೆರೆ, ಡಾ.ಕೆ.ಸುಧಾಕರ್– ಬೆಂಗಳೂರು ಗ್ರಾಮಾಂತರ, ಕೆ.ಗೋಪಾಲಯ್ಯ– ಹಾಸನ, ಮಂಡ್ಯ, ಶಶಿಕಲಾ ಜೊಲ್ಲೆ– ವಿಜಯನಗರ, ಎಂ.ಟಿ.ಬಿ ನಾಗರಾಜ– ಚಿಕ್ಕಬಳ್ಳಾಪುರ, ಕೆ.ಸಿ.ನಾರಾಯಣಗೌಡ– ಶಿವಮೊಗ್ಗ, ಬಿ.ಸಿ.ನಾಗೇಶ್– ಕೊಡಗು, ವಿ.ಸುನಿಲ್ ಕುಮಾರ್‌– ದಕ್ಷಿಣಕನ್ನಡ, ಹಾಲಪ್ಪ ಆಚಾರ್‌– ಧಾರವಾಡ, ಶಂಕರಪಾಟೀಲ ಮುನೇನಕೊಪ್ಪ– ರಾಯಚೂರು, ಬೀದರ್‌, ಮುನಿರತ್ನ–ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT