ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೌತೆ ಮಾರುತದ ಅಬ್ಬರ: ರಾಜ್ಯದಲ್ಲಿ ಹಾನಿ ಅಪಾರ

ಕರಾವಳಿಯ ಮೂರೂ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತ l ತತ್ತರಿಸಿದ 98 ಗ್ರಾಮಗಳು l ಎಂಟು ಮಂದಿ ಸಾವು
Last Updated 16 ಮೇ 2021, 19:41 IST
ಅಕ್ಷರ ಗಾತ್ರ

ಬೆಂಗಳೂರು: ‘ತೌತೆ’ ಚಂಡಮಾರುತದ ಅಬ್ಬರಕ್ಕೆ ರಾಜ್ಯದ ಕರಾವಳಿಯ ಮೂರೂ ಜಿಲ್ಲೆಗಳ ಜನಜೀವನ ಅಸ್ತವ್ಯಸ್ತಗೊಂಡಿದೆ. ಚಂಡಮಾರುತದ ಪರಿಣಾಮ ಹಲವು ಜಿಲ್ಲೆಗಳಲ್ಲಿಯೂ ಮಳೆಯಾಗಿದೆ. ರಾಜ್ಯದ ವಿವಿಧೆಡೆ ಒಟ್ಟು ಎಂಟು ಮಂದಿ ಪ್ರಾಣ ಕಳೆದು
ಕೊಂಡಿದ್ದಾರೆ.

ಶನಿವಾರದಿಂದ ಜೋರಾಗಿದ್ದ ಮಳೆಯ ಬಿರುಸು ಭಾನುವಾರ ಮಧ್ಯಾಹ್ನದ ಬಳಿಕ ತುಸು ಕಡಿಮೆಯಾಗಿದೆ. ಚಂಡಮಾರುತದ ಪರಿಣಾಮ ಗಾಳಿಯಿಂದ ಕೂಡಿದ ಮಳೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಹಾನಿಯಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ಕಂದಾಯ ಇಲಾಖೆಯ ಪ್ರಾಥಮಿಕ ವರದಿ ಹೇಳಿದೆ.

ಎರಡು ಶವ ಪತ್ತೆ: ಹಡಗುಗಳಿಂದ ಕಚ್ಚಾ ತೈಲ ಇಳಿಸುವುದಕ್ಕಾಗಿ ಎಂಆರ್‌ಪಿಎಲ್‌ ಸಮುದ್ರದ ಅಡಿಯಲ್ಲಿ ಹಾಕಿರುವ ಕೊಳವೆ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಕೆಲಸ ಮಾಡುತ್ತಿದ್ದ ಎರಡು ಟಗ್‌ಗಳು ಲಂಗರು ಕಡಿದುಕೊಂಡು ಸಮುದ್ರದ ಪಾಲಾಗಿದ್ದವು. ಅದರಲ್ಲಿ ಹ್ಯಾಟ್‌ ಎಲ್‌ಐ ಹೆಸರಿನ ಟಗ್‌ ಶನಿವಾರ ಸಮುದ್ರದಲ್ಲಿ ಮಗುಚಿ ಬಿದ್ದಿದ್ದು, ಇಬ್ಬರು ಕಾರ್ಮಿಕರ ಶವ ಪತ್ತೆಯಾಗಿದೆ. ಮೂವರು ಕಾರ್ಮಿಕರನ್ನು ರಕ್ಷಿಸಲಾಗಿದೆ. ಇನ್ನೂ ಮೂವರು ನಾಪತ್ತೆಯಾಗಿದ್ದಾರೆ.

ನವ ಮಂಗಳೂರು ಬಂದರಿನಲ್ಲಿ ಲಂಗರು ಹಾಕಿದ್ದ ಕೋರಮಂಡಲ್‌ ಸಪೋರ್ಟರ್ ಹೆಸರಿನ ಮತ್ತೊಂದು ಟಗ್‌ ಲಂಗರು ಕಡಿದುಕೊಂಡು ಸಮುದ್ರದಲ್ಲಿ ಹೋಗಿದ್ದು, ಮೂಲ್ಕಿ ಬಳಿ ಬಂಡೆಗಳ ನಡುವೆ ಸಿಲುಕಿಕೊಂಡಿದೆ. ಟಗ್‌ನಲ್ಲಿರುವ ಒಂಬತ್ತು ಕಾರ್ಮಿಕರು ರಕ್ಷಣೆಗಾಗಿ ಮೊರೆ ಇಡುತ್ತಿದ್ದಾರೆ.

‘ನೌಕಾ ಪಡೆಯ ಐಎನ್‌ಎಸ್‌ ವರಾಹ ಹಡಗು ಟಗ್‌ ಸಮೀಪದಲ್ಲೇ ಇದೆ. ಆದರೆ, ಪ್ರತಿಕೂಲ ಹವಾಮಾನದಿಂದ ರಕ್ಷಣಾ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ. ತನ್ನ ಹೆಲಿಕಾಪ್ಟರ್‌ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲು ನೌಕಾಪಡೆ ಒಪ್ಪಿಗೆ ಸೂಚಿಸಿದೆ. ಹವಾಮಾನ ಸುಧಾರಿಸಿದ ಬಳಿಕ ಗೋವಾದಿಂದ ನೌಕಾಪಡೆಯ ಹೆಲಿಕಾಪ್ಟರ್‌ ಬರಲಿದೆ. ಆ ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗುವುದು. ಟಗ್‌ನಲ್ಲಿರುವ ಕಾರ್ಮಿಕರ ಬಳಿ ಆಹಾರ ವಸ್ತುಗಳು ಇರುವುದು ಖಾತರಿಯಾಗಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಭಾನುವಾರ ದಿನವಿಡೀ ಜೋರು ಗಾಳಿ ಮಳೆಯಾಗಿದೆ. ಖಾನಾಪುರ ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ಮಳೆಯಿಂದ ಮನೆಯ ಗೋಡೆ ಕುಸಿದು ದೊಡ್ಡವ್ವ ರುದ್ರಪ್ಪ ಪಟ್ಟೇದ (55) ಮತ್ತು ಅವರ ಮೊಮ್ಮಗ ಅಭಿಷೇಕ ಸುರೇಶ ಪಟ್ಟೇದ (3) ಮೃತಪಟ್ಟಿದ್ದಾರೆ.

ತೌತೆ ಚಂಡಮಾರುತದಿಂದಾಗಿ ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ಕಂದಾಯ ಇಲಾಖೆ ವರದಿ ತಿಳಿಸಿದೆ.

98 ಗ್ರಾಮಗಳಲ್ಲಿ ಹೆಚ್ಚು ಹಾನಿ:ಉತ್ತರ ಕನ್ನಡ ಜಿಲ್ಲೆಯ 31, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ತಲಾ 28, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ತಲಾ 5 ಹಾಗೂ ಹಾಸನ ಜಿಲ್ಲೆಯ ಒಂದು ಗ್ರಾಮದಲ್ಲಿ ಚಂಡಮಾರುತದಿಂದ ಹೆಚ್ಚು ಹಾನಿ ಸಂಭವಿಸಿದೆ.

ಗೋಡೆ ಕುಸಿತ, ಚಾವಣಿ ಹಾರಿ ಹೋಗಿರುವುದು ಸೇರಿದಂತೆ 220 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

‘ಕರಾವಳಿಯ ಮೂರು ಜಿಲ್ಲೆಗಳಲ್ಲಿ ಅಪಾಯದ ಸ್ಥಳಗಳಲ್ಲಿದ್ದ 516 ಜನರನ್ನು ಸ್ಥಳಾಂತರ ಮಾಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ 10 ಪರಿಹಾರ ಕೇಂದ್ರಗಳನ್ನು ತೆರೆದಿದ್ದು, 253 ಜನರಿಗೆ ಅಲ್ಲಿ ಆಶ್ರಯ ಕಲ್ಪಿಸಲಾಗಿದೆ’ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್ ತಿಳಿಸಿದ್ದಾರೆ.

ಸುಮಾರು 500 ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ. 27 ವಿದ್ಯುತ್‌ ಪರಿವರ್ತಕಗಳೂ ಹಾಳಾಗಿದ್ದು, 3,000 ಮೀಟರ್‌ಗಳಷ್ಟು ಉದ್ದದ ವಿದ್ಯುತ್‌ ಪೂರೈಕೆ ಮಾರ್ಗಗಳಿಗೆ ಹಾನಿ ಸಂಭವಿಸಿದೆ.

ಕೊಚ್ಚಿಹೋದ ಒಡ್ಡು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇತ್ರಾವತಿ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಮಂಗಳೂರು ಸಮೀಪದ ಹರೇಕಳ– ಅಡ್ಯಾರ್‌ ಬಳಿ ‘ಬ್ರಿಜ್‌ ಕಂ ಬ್ಯಾರೇಜ್‌’ ನಿರ್ಮಾಣ ಕಾಮಗಾರಿಗಾಗಿ ನಿರ್ಮಿಸಿದ್ದ ಮಣ್ಣಿನ ಒಡ್ಡು ಕೊಚ್ಚಿಹೋಗಿದೆ. ಕಾಮಗಾರಿಗಾಗಿ ಸ್ಥಳದಲ್ಲಿ ಸಂಗ್ರಹಿಸಿದ್ದ ವಸ್ತುಗಳು ಮತ್ತು ಸಲಕರಣೆಗಳೂ ನೀರುಪಾಲಾಗಿವೆ.

ಕಾರವಾರ, ಅಂಕೋಲಾ, ಭಟ್ಕಳ ಮತ್ತು ಮುರ್ಡೇಶ್ವರದಲ್ಲಿ ಸಮುದ್ರ ತೀರದಲ್ಲಿದ್ದ ದೋಣಿಗಳು, ಗೂಡಂಗಡಿಗಳು ಮತ್ತು ಮನೆಗಳಿಗೆ ಹಾನಿಯಾಗಿದೆ.

ಬೆಳಗಾವಿ ನಗರ, ಖಾನಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲೂ ವ್ಯಾಪಕ ಮಳೆಯಾಗಿದೆ. ಹಲವೆಡೆ ಮನೆಗಳು, ಶಾಲಾ ಕಟ್ಟಡಗಳಿಗೆ ಹಾನಿಯಾಗಿದೆ.

ಆರು ಜಿಲ್ಲೆಗಳಲ್ಲಿ ಭಾರಿ ಮಳೆ:

ಶನಿವಾರ ಬೆಳಿಗ್ಗೆ 8.30ರಿಂದ ಭಾನುವಾರ ಬೆಳಿಗ್ಗೆ 8.30ರವರೆಗಿನ 24 ಗಂಟೆಗಳ ಅವಧಿಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ 313 ಮಳೆ ಮಾಪನ ಕೇಂದ್ರಗಳಲ್ಲಿ 6.4 ಸೆಂ.ಮೀ. ಮಳೆ ಬಿದ್ದಿರುವುದು ದಾಖಲಾಗಿದೆ.

15 ಸ್ಥಳಗಳಲ್ಲಿ 20 ಸೆಂ.ಮೀ.ಗಿಂತ ಹೆಚ್ಚಿನ ಮಳೆ ದಾಖಲಾಗಿದೆ. ಕುಂದಾಪುರ ತಾಲ್ಲೂಕಿನ ನಾಡ ಮಳೆಮಾಪನ ಕೇಂದ್ರದಲ್ಲಿ ಗರಿಷ್ಠ 38.5 ಸೆಂ.ಮೀ. ಮಳೆ ಬಿದ್ದಿದೆ. ಈ ಜಿಲ್ಲೆಗಳಲ್ಲಿ ಜೋರಾದ ಮಳೆಯೊಂದಿಗೆ ಪ್ರತಿ ಗಂಟೆಗೆ 70 ರಿಂದ 90 ಕಿ.ಮೀ. ವೇಗದಲ್ಲಿ ಗಾಳಿ ಬೀಸಿರುವುದು ಹಾನಿಗೆ ಕಾರಣವಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.

ಎರಡು ಬಾರಿ ಮಾಹಿತಿ ಪಡೆದ ಸಿ.ಎಂ

ಬೆಂಗಳೂರು: ಕರಾವಳಿ ಭಾಗದಲ್ಲಿ 'ತೌತೆ' ಚಂಡಮಾರುತದಿಂದ ಉಂಟಾಗಿರುವ ಹಾನಿ‌ ಮತ್ತು ಸದ್ಯದ ಪರಿಸ್ಥಿತಿಯ ಬಗ್ಗೆ ‌ಆ ಭಾಗದ ಜಿಲ್ಲಾಧಿಕಾರಿಗಳಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾನುವಾರ ಬೆಳಿಗ್ಗೆ ಮತ್ತು ಸಂಜೆ ದೂರವಾಣಿ ಮೂಲಕ ಮಾಹಿತಿ ಪಡೆದರು. ಚಂಡಮಾರುತದಿಂದ ಹಾನಿಗೆ ಒಳಗಾದ ಪ್ರದೇಶಗಳಿಗೆ ಭೇಟಿ‌ ನೀಡಿ ಪರಿಹಾರ ಹಾಗೂ ರಕ್ಷಣಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲಾಧಿಕಾರಿಗಳು ಮತ್ತು ಸಚಿವರಿಗೆ ಕರೆ ಮಾಡಿ ಸೂಚನೆ ನೀಡಿದರು.

'ರಾಜ್ಯ ಸರ್ಕಾರದಿಂದ ಏನೇ ತುರ್ತು ನೆರವು ಬೇಕಿದ್ದರೂ ಸಂಬಂಧಪಟ್ಟ ಸಚಿವರಿಗೆ ಕರೆ ಮಾಡಿ ತಿಳಿಸಿ. ಅಥವಾ ನೇರವಾಗಿ ನನಗೆ ಕರೆ ಮಾಡಿ. ಮುನ್ನೆಚ್ಚರಿಕೆ ಕ್ರಮಗಳನ್ನು ಸಮರೋಪಾದಿಯಲ್ಲಿ ತೆಗೆದುಕೊಳ್ಳಿ' ಎಂದೂ ಮುಖ್ಯಮಂತ್ರಿ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT