ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’ ಶಾಸಕರ 1,200 ಪ್ರಶ್ನೆ!

ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಲು ಸಿದ್ಧತೆ
Last Updated 7 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ಇದೇ 21ರಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನದಲ್ಲಿ 1,200ಕ್ಕೂ ಹೆಚ್ಚು ಪ್ರಶ್ನೆಗಳನ್ನು ರಾಜ್ಯದ ಸರ್ಕಾರದ ಮುಂದಿಡಲು ಕಾಂಗ್ರೆಸ್‌ ಶಾಸಕರು ನಿರ್ಧರಿಸಿದ್ದಾರೆ.

ಮಾಜಿ ಸಚಿವರ ತಂಡ ಪ್ರಶ್ನೆಗಳನ್ನು ಸಿದ್ಧಪಡಿಸಿದ್ದು, ಅವುಗಳನ್ನು ವಿಧಾನಸಭೆ ಸಚಿವಾಲಯಕ್ಕೆ ಸಲ್ಲಿಸುವಂತೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ಶಾಸಕರಿಗೆ ಸೂಚಿಸಿದರು.

ಅಧಿವೇಶನದಲ್ಲಿ ಚರ್ಚೆಗೆ ಎತ್ತಿಕೊಳ್ಳಬೇಕಾದ ವಿಷಯಗಳ ಕುರಿತು ಶಾಸಕರ ಜೊತೆ ಸಿದ್ದರಾಮಯ್ಯ ಸೋಮವಾರ ಆನ್‌ಲೈನ್‌ ಮೂಲಕ ಸಮಾಲೋಚನೆ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರು ಭಾಗವಹಿಸಿದರು.

‘ರಾಜ್ಯ ಸರ್ಕಾರ ಹಲವು ವಿಷಯಗಳಲ್ಲಿ ಎಡವಿದೆ. ಕೊರೊನಾ ಸೋಂಕು ನಿಯಂತ್ರಣದಲ್ಲಂತೂ ಸಂಪೂರ್ಣ ವಿಫಲವಾಗಿದೆ. ಕೋವಿಡ್ ಉಪಕರಣಗಳ ಖರೀದಿಯಲ್ಲಿ ಆಗಿರುವ ಅವ್ಯವಹಾರದ ಬಗ್ಗೆಯೂ ಸದನದಲ್ಲಿ ಪ್ರಶ್ನಿಸಬೇಕಿದೆ. ಜಿಎಸ್‍ಟಿ ವಿಚಾರದಲ್ಲಿ ಪರಿಹಾರ ಕೇಳಿದರೆ ಸಾಲ ಮಾಡಿ ನಷ್ಟ ತುಂಬಿ ಕೊಳ್ಳುವಂತೆ ಕೇಂದ್ರ ಹಣಕಾಸು ಸಚಿವರು ಹೇಳುತ್ತಾರೆ. ಇಂಥ ವಿಷಯಗಳ ಮೇಲೆ ಪ್ರಶ್ನೆ ಮಾಡಬೇಕಿದೆ’ ಎಂದರು. ‘ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಪರ್ಸೆಂಟೇಜ್ ಕೊಡದ ಶಾಸಕರ ಕ್ಷೇತ್ರಗಳಿಗೆ ಅನುದಾನ ಇಲ್ಲ ಎಂಬಂತಾಗಿದೆ. ಸಚಿವರಿರುವ ಕ್ಷೇತ್ರದಲ್ಲಿಯೂ ಅನುದಾನಕ್ಕಾಗಿ ಲಂಚ ನೀಡಬೇಕಾದ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆಯೂ ಸದನದಲ್ಲಿ ಚರ್ಚೆ ನಡೆಸಬೇಕಿದೆ’ ಎಂದು ಸಿದ್ದರಾಮಯ್ಯ ಹೇಳಿದರು.

16ರಂದು ಸಿಎಲ್‌ಪಿ ಸಭೆ

‘ಇದೇ ತಿಂಗಳ 16ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆ ಕರೆಯಲಾಗಿದೆ. ಸದನದಲ್ಲಿ ಕೈಗೆತ್ತಿಕೊಳ್ಳಬೇಕಾದ ವಿಷಯಗಳ ಬಗ್ಗೆ ಪಕ್ಷದ ಸದಸ್ಯರ ಜೊತೆ ಚರ್ಚಿಸಲಾಗುವುದು’ ಎಂದು ಸಿದ್ದರಾಮಯ್ಯ ಹೇಳಿದರು.

‘ಕೋವಿಡ್ ಉಪಕರಣಗಳ ಖರೀದಿಯಲ್ಲಿ ನಡೆದಿರುವ ಅವ್ಯವಹಾರ, ಸರ್ಕಾರದಲ್ಲಿ ನಡೆದಿರುವ ಭ್ರಷ್ಟಾಚಾರ, ಡ್ರಗ್ಸ್ ಜಾಲ, ಡಿ.ಜೆ. ಹಳ್ಳಿ ಘಟನೆ, ಜಿಎಸ್‍ಟಿ ಮತ್ತು ವಿವಿಧ ಮಸೂದೆಗಳನ್ನು ಸದನದಲ್ಲಿ ಪ್ರಸ್ತಾಪಿಸುವ ಕುರಿತು ಚರ್ಚೆ ನಡೆಸುತ್ತೇವೆ’ ಎಂದರು.

‘ಸರ್ಕಾರ ಕಡಿದು ಕಟ್ಟೆ ಹಾಕಿದ್ದೇನು?: ‘ಒಂದು ವರ್ಷದಿಂದ ಬಿಜೆಪಿ ಅಧಿಕಾರದಲ್ಲಿ ಇಲ್ಲವೇ. ಸರ್ಕಾರ ನಡೆಸುತ್ತಿರುವವರು ಏನನ್ನು ಕಡಿದು ಕಟ್ಟೆ ಹಾಕಿದ್ದಾರೆ. ಉದ್ಯಮಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 17ನೇ ಸ್ಥಾನಕ್ಕೆ ಹೋಗಲು 8ನೇ ಸ್ಥಾನದಲ್ಲಿದ್ದಾಗ ಸರ್ಕಾರ ನಡೆಸಿದವರು ಕಾರಣವೇ ಅಥವಾ 17ನೇ ಸ್ಥಾನದಲ್ಲಿರುವಾಗ ಇರುವ ಸರ್ಕಾರ ಕಾರಣವೇ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT