ಗುರುವಾರ , ಆಗಸ್ಟ್ 11, 2022
21 °C
ಕಾರ್ಖಾನೆಯ ಉತ್ಪಾದನೆ ಕುಂಠಿತ

ಬಗೆಹರಿಯದ ಟೊಯೊಟಾ ಬಿಕ್ಕಟ್ಟು; ಫಲ ನೀಡದ ಸರ್ಕಾರದ ಸಂಧಾನ

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದ ಅತಿ ದೊಡ್ಡ ಕಂಪನಿ ಆಗಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್‌ (ಟಿಕೆಎಂ) ಕಾರ್ಖಾನೆ ಬಿಕ್ಕಟ್ಟು ತಿಂಗಳ ನಂತರವೂ ಮುಂದುವರಿದಿದ್ದು, ಇದರಿಂದ ಇತರೆ ಕೈಗಾರಿಕೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಆತಂಕ ಎದುರಾಗಿದೆ.

37 ದಿನಗಳ ಮುಷ್ಕರದ ಬಳಿಕವೂ ಕಾರ್ಖಾನೆಯ ನೌಕರರು ಪಟ್ಟು ಸಡಿಲಿಸಿಲ್ಲ. ಟಿಕೆಎಂ ಆಡಳಿತ ಮಂಡಳಿ ಸಹ ಮಾತುಕತೆಗೆ ಉತ್ಸಾಹ ತೋರುತ್ತಿಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಧ್ಯಸ್ಥಿಕೆ ಮಾತುಕತೆ ನಡುವೆಯೂ ಸಮಸ್ಯೆ ಬಗೆಹರಿದಿಲ್ಲ. ಉಳಿದೆಲ್ಲ ಬೇಡಿಕೆಗಳ ಮಾತುಕತೆಗೆ ಆಡಳಿತ ಮಂಡಳಿ ಸಿದ್ಧವಿದ್ದರೂ ಅಮಾನತ್ತಾದ ಕಾರ್ಮಿಕರನ್ನು ಸೇವೆಗೆ ಹಿಂಪಡೆಯುವುದಕ್ಕೆ ಸಮ್ಮತಿಸುತ್ತಿಲ್ಲ. ಈ ಬೇಡಿಕೆ ಈಡೇರದ ಹೊರತು ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಕಾರ್ಮಿಕರು ಪಟ್ಟು ಹಿಡಿದಿದ್ದಾರೆ.

ಉತ್ಪಾದನೆ ಕುಂಠಿತ: ‘ಲಾಕೌಟ್‌’ ಜಾರಿಯಲ್ಲಿ ಇದ್ದರೂ ಕಾರ್ಖಾನೆಯ ಷರತ್ತು ಒಪ್ಪಿ ಬರುವವರಿಗೆ ಕೆಲಸ ಮಾಡಲು ಕಂಪನಿ ಅವಕಾಶ ನೀಡುತ್ತಿದೆ. ಆದರೆ ಹೆಚ್ಚಿನ ಉದ್ಯೋಗಿಗಳು ಆಸಕ್ತಿ ತೋರಿಲ್ಲ. ಇಬ್ಬರ ಹಠಮಾರಿ ಧೊರಣೆಯಿಂದಾಗಿ ಕಾರ್ಖಾನೆಯ ಉತ್ಪಾದನೆ ಕುಂಠಿತಗೊಂಡಿದೆ.

ಬಿಡದಿ ಕೈಗಾರಿಕಾ ಪ್ರದೇಶದಲ್ಲಿ 190ಕ್ಕೂ ಹೆಚ್ಚು ಕಂಪನಿಗಳು ಉತ್ಪಾದನಾ ಘಟಕಗಳನ್ನು ಹೊಂದಿವೆ. ಆ ಪೈಕಿಟಿಕೆಎಂ ಕಂಪನಿಯೇ ಅತಿ ದೊಡ್ಡದಾಗಿದೆ. 432 ಹೆಕ್ಟೇರ್‌ ವಿಸ್ತಾರವಾದ ಪ್ರದೇಶದಲ್ಲಿ ಹರಡಿಕೊಂಡಿರುವ ಕಾರ್ಖಾನೆಯಲ್ಲಿ 3500 ಖಾಯಂ ಸಿಬ್ಬಂದಿ ಸೇರಿದಂತೆ 6500ಕ್ಕೂ ಹೆಚ್ಚು ಕಾರ್ಮಿಕರು ನೇರವಾಗಿ ತೊಡಗಿಸಿಕೊಂಡಿದ್ದಾರೆ. ಇದಲ್ಲದೆ ಟಿಕೆಎಂನ ಸಹೋದರ ಕಂಪನಿ ಟೊಯೊಟಾ ಆಟೊ ಪಾರ್ಟ್ಸ್‌ ಸಹ ಇದೇ ಪ್ರದೇಶದಲ್ಲಿದೆ.

ವರ್ಷಕ್ಕೆ ಲಕ್ಷ ಕಾರು: ಇನೋವಾ, ಫಾರ್ಚುನರ್‌ನಂತಹ ದೊಡ್ಡ ಕಾರುಗಳನ್ನು ಇಲ್ಲಿ ಜೋಡಣೆ ಮಾಡಲಾಗುತ್ತಿದೆ. ವರ್ಷಕ್ಕೆ 3.10 ಲಕ್ಷ ಕಾರು ತಯಾರಿಸುವ ಸಾಮರ್ಥ್ಯ ಇದ್ದರೂ ಸದ್ಯ ವರ್ಷಕ್ಕೆ 1.1 ಲಕ್ಷ ಕಾರುಗಳನ್ನು ಮಾತ್ರ ತಯಾರಿಸುತ್ತಿರುವುದಾಗಿ ಕಂಪನಿಯ ಅಧಿಕಾರಿಗಳು ಹೇಳುತ್ತಾರೆ.

20 ಸಾವಿರ ಮಂದಿಗೆ ಉದ್ಯೋಗ: ಟಿಕೆಎಂ ಕಂಪನಿಯು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 20 ಸಾವಿರ ಮಂದಿಗೆ ಉದ್ಯೋಗ ನೀಡಿದೆ. ಕಾರು ಉದ್ಯಮಕ್ಕೆ ಪೂರಕವಾದ ಬಿಡಿ ಭಾಗಗಳ ಉತ್ಪಾದನೆ ಮತ್ತು ಇನ್ನಿತರ ಕೆಲಸಗಳಲ್ಲಿ ಸಾವಿರಾರು ಮಂದಿ ತೊಡಗಿಸಿಕೊಂಡಿದ್ದಾರೆ. ಆದರೆ ಈ ಅನಿಶ್ಚಿತತೆಯಿಂದ ಅವರೆಲ್ಲ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ಇದ್ದಾರೆ.

ಪರಿಸ್ಥಿತಿ ಹೀಗೆ ಮುಂದುವರಿದರೆ ಟೊಯೊಟಾ ಸಿಬ್ಬಂದಿ ಕುಟುಂಬಗಳ ನಿರ್ವಹಣೆಯೂ ಕಷ್ಟ ಆಗಲಿದೆ ಎಂದು ಕೆಲ ಕಾರ್ಮಿಕರು ಆತಂಕ ವ್ಯಕ್ತಪಡಿಸುತ್ತಾರೆ.

ಹಿಂದೆಯೂ ನಡೆದಿತ್ತು ಮುಷ್ಕರ!
ಟಿಕೆಎಂ ಕಂಪನಿಯು 1997ರಿಂದ ಬಿಡದಿಯಲ್ಲಿ ಕಾರು ತಯಾರಿಕಾ ಘಟಕ ಕಾರ್ಯಾರಂಭ ಮಾಡಿದೆ.

2014ರಲ್ಲಿ ವೇತನ ಪರಿಷ್ಕರಣೆ ವಿಚಾರವಾಗಿ ಇಲ್ಲಿನ ಕಾರ್ಮಿಕರು ಮುಷ್ಕರ ನಡೆಸಿದ್ದು, ಇದರಿಂದ 36 ದಿನ ಕಂಪನಿ ಲಾಕೌಟ್‌ ಆಗಿತ್ತು. ನಂತರದಲ್ಲಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿದಿತ್ತು.

ಈಗಿನ ಹೋರಾಟವು 37ನೇ ದಿನಕ್ಕೆ ಕಾಲಿಟ್ಟಿದ್ದು ಕಂಪನಿಯ ಇತಿಹಾಸದಲ್ಲೇ ಸುದೀರ್ಘ ಹೋರಾಟವಾಗಿದೆ.

ಉದ್ಯಮಗಳು ಹೊರಹೋಗುವ ಆತಂಕ
‘ಟೊಯೊಟಾ ಮುಷ್ಕರ ಮುಂದುವರಿದಷ್ಟೂ ಇಲ್ಲಿನ ಕೈಗಾರಿಕೋದ್ಯಮಕ್ಕೆ ಹಾನಿ ಆಗುತ್ತದೆ. ದೊಡ್ಡ ಕಂಪನಿಗಳು ಉತ್ಪಾದನೆ, ಹೂಡಿಕೆಯಿಂದ ಹಿಂದೆ ಸರಿಯಲೂಬಹುದು’ ಎಂದು ಕೈಗಾರಿಕಾ ಪ್ರದೇಶದ ಉದ್ಯಮಿ ಒಬ್ಬರು ಆತಂಕ ವ್ಯಕ್ತಪಡಿಸುತ್ತಾರೆ.

‘ಬಹುರಾಷ್ಟ್ರೀಯ ಕಂಪನಿಗಳು ಉದ್ಯಮ ಸ್ನೇಹಿ ವಾತಾವರಣಕ್ಕೆ ಮೊದಲ ಆದ್ಯತೆ ನೀಡುತ್ತವೆ. ಕಾರ್ಮಿಕರ ಹೋರಾಟ, ಲಾಕೌಟ್‌ ಇತ್ಯಾದಿ ಸಂಗತಿಗಳು ಹೆಚ್ಚು ದಿನ ಮುಂದುವರಿದಷ್ಟು ಅವುಗಳು ಇಲ್ಲಿಂದ ನಿರ್ಗಮಿಸುವ ಸಾಧ್ಯತೆ ಹೆಚ್ಚು. ಹೀಗಾಗಿ ಸರ್ಕಾರವೇ ದೃಢ ಮನಸ್ಸಿನಿಂದ ಸಮಸ್ಯೆ ಬಗೆಹರಿಸಲು ಮುಂದಾಗಬೇಕು’ ಎನ್ನುವುದು ಉದ್ಯಮಿಗಳ ಸಲಹೆ.

*
ಟಿಕೆಎಂ ಕಂಪನಿಯು ಕಾರ್ಮಿಕರನ್ನು ಬೆದರಿಸಲು ಬೇರೆ ಬೇರೆ ದಾರಿ ಹಿಡಿಯುತ್ತಿದೆ. ಶುಕ್ರವಾರ ರಾಮನಗರ ಡಿ.ಸಿ. ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು.
–ಪ್ರಸನ್ನಕುಮಾರ್‌ ಚಕ್ಕೆರೆ ಅಧ್ಯಕ್ಷ, ಟಿಕೆಎಂ ಕಾರ್ಮಿಕ ಸಂಘ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು