ಶನಿವಾರ, ಮೇ 15, 2021
25 °C
11,284 ಶಾಲೆಗಳಲ್ಲಿ ಪ್ರತ್ಯೇಕ ಶೌಚಾಲಯವೇ ಇಲ್ಲ

ಎಲ್ಲ ಶಾಲೆಗಳಿಗೆ ನೀರು, ಶೌಚಾಲಯ: ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳು ಮತ್ತು ಅಂಗನವಾಡಿಗಳಿಗೆ ಶುದ್ಧವಾದ ಕುಡಿಯುವ ನೀರು ಮತ್ತು ಶೌಚಾಲಯ ಒದಗಿಸುವ ಪ್ರಕ್ರಿಯೆ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಭರವಸೆ ನೀಡಿದರು.

ವಿಧಾನ ಪರಿಷತ್‌ನಲ್ಲಿ ಮಂಗಳವಾರ ಜೆಡಿಎಸ್‌ನ ಕೆ.ಎ. ತಿschoಪ್ಪೇಸ್ವಾಮಿ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿದ ಸಚಿವರು, ‘ಕೇಂದ್ರ ಸರ್ಕಾರದ ಜಲಜೀವನ ಮಿಷನ್‌ ಯೋಜನೆಯಡಿ ರಾಜ್ಯದ 53,568 ಸರ್ಕಾರಿ ಶಾಲೆಗಳ ಪೈಕಿ 40,062 ಶಾಲೆಗಳಿಗೆ ಶುದ್ಧ ನೀರು ಪೂರೈಕೆ ವ್ಯವಸ್ಥೆ ಮಾಡಲಾಗಿದೆ. 13,206 ಶಾಲೆಗಳಿಗೆ ನೀರಿನ ಸೌಲಭ್ಯ ಕಲ್ಪಿಸುವುದು ಬಾಕಿ ಇದೆ’ ಎಂದರು.

ರಾಜ್ಯದಲ್ಲಿ 55,396 ಅಂಗನವಾಡಿಗಳಿದ್ದು, 31872 ಅಂಗನವಾಡಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. 23,524 ಶಾಲೆಗಳಿಗೆ ನೀರಿನ ಪೂರೈಕೆಗೆ ವ್ಯವಸ್ಥೆ ಆಗಬೇಕಿದೆ. ಎಲ್ಲ ಶಾಲೆ ಮತ್ತು ಅಂಗನವಾಡಿಗಳಲ್ಲಿ ಕೈ ತೊಳೆಯಲು ನಲ್ಲಿ ನೀರಿನ ವ್ಯವಸ್ಥೆ ಮಾಡುವ ಕೆಲಸವೂ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

42,284 ಶಾಲೆಗಳಲ್ಲಿ ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕವಾದ ಶೌಚಾಲಯಗಳ ಸೌಲಭ್ಯವಿದೆ. 45,330 ಅಂಗನವಾಡಿಗಳಲ್ಲೂ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಇದೆ. ಉಳಿದಿರುವ ಶಾಲೆ ಮತ್ತು ಅಂಗನವಾಡಿಗಳಿಗೂ ಪ್ರತ್ಯೇಕವಾದ ಶೌಚಾಲಯ ಒದಗಿಸಲಾಗುವುದು ಎಂದರು.

ಜಲಜೀವನ ಮಿಷನ್‌ ಯೋಜನೆಯಡಿ ಅನುದಾನ ದೊರೆಯದಿದ್ದರೂ, ಇತರ ಮೂಲಗಳಿಂದ ಅಗತ್ಯ ಹಣ ಒದಗಿಸಿ ಎಲ್ಲ ಶಾಲೆ, ಅಂಗನವಾಡಿಗಳಿಗೆ ಶೌಚಾಲಯ, ಕುಡಿಯುವ ನೀರು ಒದಗಿಸಲಾಗುವುದು. ಈ ಸಂಬಂಧ ಗ್ರಾಮ ಪಂಚಾಯಿತಿಗಳಿಗೆ ಈಗಾಗಲೇ ಆದೇಶ ಹೊರಡಿಸಲಾಗಿದೆ. ಉದ್ಯೋಗ ಖಾತರಿ ಯೋಜನೆಯಡಿ ಎಲ್ಲ ಶಾಲೆ, ಅಂಗನವಾಡಿಗಳಿಗೆ ಕಾಂಪೌಂಡ್‌ ನಿರ್ಮಿಸಲಾಗುವುದು ಎಂದು ಈಶ್ವರಪ್ಪ ತಿಳಿಸಿದರು.

ನೆರವು ಪಡೆಯಲು ಸಲಹೆ: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆ, ಅಂಗನವಾಡಿಗಳಿಗೆ ನೀರು, ಶೌಚಾಲಯ ಒದಗಿಸಲು ಸರ್ಕಾರದಿಂದ ಸರಿಯಾಗಿ ಅನುದಾನ ದೊರಕುತ್ತಿಲ್ಲ ಎಂದು ಬಿಜೆಪಿಯ ಅರುಣ್‌ ಶಹಾಪುರ ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಸಚಿವರು, ‘ಶಿವಮೊಗ್ಗ ನಗರದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಅನುದಾನದ ಜತೆಗೆ ಸಂಘ ಸಂಸ್ಥೆಗಳ ನೆರವು ಹಾಗೂ ಕಾರ್ಪೋರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯ ಸಹಾಯ ಪಡೆದು ಶಾಲೆ, ಅಂಗನವಾಡಿಗಳಿಗೆ ಸೌಲಭ್ಯ ಒದಗಿಸಿದ್ದೇವೆ. ಅದೇ ಮಾದರಿಯಲ್ಲಿ ಇತರ ಕಡೆಯಲ್ಲೂ ಮಾಡಬೇಕು’ ಎಂದು ಸಲಹೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು