ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿನ್ನೋಟ 2022 | ರಾಜ್ಯ ಸರ್ಕಾರಕ್ಕೆ ಮುಜುಗರ ತಂದ ವರ್ಷ

Last Updated 29 ಡಿಸೆಂಬರ್ 2022, 6:36 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ರಾಜಕೀಯ, ಕೃಷಿ, ಧಾರ್ಮಿಕ ಸೇರಿ ವಿವಿಧ ಕ್ಷೇತ್ರಗಳಲ್ಲಿ 2022ರಲ್ಲಿ ನಡೆದ ಘಟನೆಗಳು ಸಿಹಿ–ಕಹಿಯ ಸಮ್ಮಿಶ್ರಣವಾಗಿದ್ದವು.

ಗುತ್ತಿಗೆದಾರರ ಸಂಘ ಹಾಗೂ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳು ಮಾಡಿದ ಶೇ 40 ಕಮೀಷನ್‌ ಆರೋಪಗಳು, ನೇಮಕಾತಿ ಹಗರಣಗಳು, ಪಠ್ಯಪುಸ್ತಕ ಸಮಿತಿ ನೇಮಕ ವಿವಾದ ಸರ್ಕಾರವನ್ನು ಸಾಕಷ್ಟು ಮುಜುಗರಕ್ಕೀಡು ಮಾಡಿಡವು. ಕಾಂಗ್ರೆಸ್‌ ಪೇಸಿಂಎಂ ಅಭಿಯಾನದ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತು.ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ ನಿಷೇಧ ವರ್ಷದ ಪ್ರಮುಖ ಅಂಶಗಳಲ್ಲಿ ಒಂದು. ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದು ಮಾಡಿದ ಹೈಕೋರ್ಟ್‌ ತೀರ್ಪು, ಲೋಕಾಯುಕ್ತಕ್ಕೆ ಮರಳಿ ಅಧಿಕಾರ ನೀಡಿದ್ದೂ ಉಲ್ಲೇಖನೀಯ.

ಚಿತ್ರದುರ್ಗದ ಮುರುಘಾ ಮಠದ ಪೀಠಾಧಿಪತಿ ಮುರುಘಾ ಶರಣರು ಹಾಸ್ಟೆಲ್‌ನ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿತರಾದುದು ಧಾರ್ಮಿಕ ಪರಂಪರೆಯಲ್ಲೇ ಕಪ್ಪುಚುಕ್ಕಿ. ಶಿವಮೊಗ್ಗ, ಮಂಗಳೂರಿನಲ್ಲಿ ಹಿಂದು, ಮುಸ್ಲಿಂ ಯುವಕರ ಹತ್ಯೆ ಕರ್ನಾಟಕದ ಕೋಮು ಸೌಹಾರ್ದದ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ವನ್ಯಜೀವಿ–ಮಾನವ ಸಂಘರ್ಷ ಹಿಂದೆಂದಿಗಿಂತಲೂ ಹೆಚ್ಚು ಆತಂಕ ಸೃಷ್ಟಿಸಿತು.

ಡಿಸೆಂಬರ್‌ ಅಂತ್ಯದವರೆಗೂ ಮಳೆ ಸುರಿದದ್ದು, ರಾಜ್ಯದ ಎಲ್ಲ ಜಲಾಶಯ, ಕೆರೆ–ಕಟ್ಟೆಗಳು ಭರ್ತಿಯಾದವು.ವರ್ಷಾಂತ್ಯದ ವೇಳೆಗೆ ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದ ಮತ್ತೆ ಭುಗಿಲೆದ್ದು, ಸಂಘರ್ಷದ ವಾತಾವರಣ ನಿರ್ಮಾಣವಾಯಿತು.

ಲೋಕಾಯುಕ್ತಕ್ಕೆ ಮರಳಿದ ಶಕ್ತಿ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹುಟ್ಟುಹಾಕಿದ್ದ ಕರ್ನಾಟಕಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ಹೈಕೋರ್ಟ್‌ವಿಭಾಗೀಯ ನ್ಯಾಯಪೀಠ ಆಗಸ್ಟ್‌ನಲ್ಲಿ ರದ್ದು ಮಾಡಿತು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸುವ ಅಧಿಕಾರವನ್ನು ಲೋಕಾಯುಕ್ತಕ್ಕೆ ಮರಳಿಸಿತು.

ಶೇ 40 ಕಮಿಷನ್‌ ಸದ್ದು: ಗುತ್ತಿಗೆದಾರರಿಂದ ಶೇ 40 ಕಮಿಷನ್‌ ಪಡೆಯುತ್ತಾರೆ ಎಂಬ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ರಾಜ್ಯ ಸರ್ಕಾರವನ್ನು ಮುಜುಗರಕ್ಕೀಡು ಮಾಡಿತು. ಕಮಿಷನ್ ಆರೋಪದ ಮೇಲೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಿದರು. ಹಾಗೆಯೇ ಖಾಸಗಿ ಶಾಲೆಗಳ ಒಕ್ಕೂಟವೂ ಶಿಕ್ಷಣ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಪ್ರಧಾನಮಂತ್ರಿಗೆ ಪತ್ರ ಬರೆದಿತ್ತು. ವಿರೋಧ ಪಕ್ಷ ಕಾಂಗ್ರೆಸ್‌ ಶೇ 40 ಕಮಿಷನ್‌ ದಂಧೆಯ ವಿರುದ್ಧ ‘ಪೇಸಿಎಂ’ ಅಭಿಯಾನವನ್ನು ಹಮ್ಮಿಕೊಂಡಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವಚಿತ್ರ ಇರುವ ಕ್ಯೂಆರ್‌ ಕೋಡ್‌ ಸಿದ್ಧಪಡಿಸಿ ‘ಪೇಸಿಎಂ– ಶೇ 40ರಷ್ಟು ಲಂಚ ಸ್ವೀಕರಿಸಲಾಗುವುದು’ ಎಂದು ಭಿತ್ತಿಪತ್ರ ಅಂಟಿಸಿ ಅಭಿಯಾನ ನಡೆಸಿತು.

15 ಸಾವಿರ ಶಾಲಾ ಶಿಕ್ಷಕರ ನೇಮಕ: ಹಲವು ವರ್ಷಗಳ ನಂತರ ಏಕಕಾಲಕ್ಕೆ 15 ಸಾವಿರಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅಂತಿಮವಾಗಿ13,363 ಅಭ್ಯರ್ಥಿಗಳು ಆಯ್ಕೆಯಾದರು.

ಜೈಲು ಸೇರಿದ ಮುರುಘಾ ಶರಣರು: ಚಿತ್ರದುರ್ಗದ ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಶರಣರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತು ಆಗಸ್ಟ್‌ನಲ್ಲಿ ಜೈಲು ಸೇರಿದರು. ಶರಣರ ವಿರುದ್ಧ ಪ್ರಕರಣ ದಾಖಲಿಸಲು ವಿದ್ಯಾರ್ಥಿನಿಯರಿಗೆ ಕುಮ್ಮಕ್ಕು ನೀಡಿದ ಹಾಗೂ ಷಡ್ಯಂತ್ರ ರೂಪಿಸಿದ ಆರೋಪದಡಿ ಮಠದ ಮಾಜಿ ಆಡಳಿತಾಧಿಕಾರಿಯಾಗಿದ್ದ ಎಸ್‌.ಕೆ.ಬಸವರಾಜನ್‌ ದಂಪತಿ ಬಂಧಿಸಿದ ಪೊಲೀಸರು ಜೈಲಿಗೆ ಕಳುಹಿಸಿದ್ದರು.

ಮಹಿಳಾ ಆಯೋಗಕ್ಕೆ ರಜತ ಸಂಭ್ರಮ: ರಾಜ್ಯ ಮಹಿಳಾ ಆಯೋಗದ ರಜತ ಮಹೋತ್ಸವ ಆಚರಿಸಿಕೊಂಡಿದ್ದು 2022ರ ವಿಶೇಷ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಯೋಗದ ಸಬಲೀಕರಣಕ್ಕೆ ಹಲವು ಯೋಜನೆ ರೂಪಿಸುವ ಭರವಸೆ ನೀಡಿದರು.

ಶಿಕ್ಷಕರ ಸ್ನೇಹಿಯಾದ ವರ್ಗಾವಣೆ ನೀತಿ: ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ–2020ಯನ್ನು ಜಾರಿಗೊಳಿಸಿ, ರಾಜ್ಯ ಸರ್ಕಾರ ವರ್ಷಾಂತ್ಯದಲ್ಲಿ ಅಧಿಸೂಚನೆ ಹೊರಡಿಸಿತು.

ನಿಲ್ಲದ ಪ್ರಾಣಿ–ಮಾನವ ಸಂಘರ್ಷ: ರಾಜ್ಯದ ಕೆಲವು ಭಾಗಗಳಲ್ಲಿ ಚಿರತೆ–ಮಾನವರ ಮಧ್ಯೆ, ಕೆಲವು ಭಾಗಗಳಲ್ಲಿ ಆನೆ–ಮಾನವರ ಮಧ್ಯೆ ನಡೆದ ಸಂಘರ್ಷದಲ್ಲಿ ಕೆಲವರು ಜೀವ ಕಳೆದುಕೊಂಡರು. ಆನೆಗಳ ಹಾವಳಿ ತಡೆಯಲು ಸರ್ಕಾರ ಕ್ಷಿಪ್ರಕಾರ್ಯ ಪಡೆಯನ್ನೇ ರಚಿಸಿತು.

ಮೂರು ಸಂಘಕ್ಕೆ ₹ 2 ಸಾವಿರ ಕೋಟಿ ಹೊಣೆ: ರಾಜ್ಯದ ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ಪದಾರ್ಥ ಪೂರೈಸಲು ಕೇವಲ ಮೂರು ಮಹಿಳಾ ಸಂಘಗಳಿಗೆ ಅನುಮತಿ ನೀಡಿದ ಸರ್ಕಾರ, ಹಿಂದೆ ಕಳಪೆ ಆಹಾರ ಪೂರೈಕೆ ಮಾಡಿ ಕಪ್ಪುಪಟ್ಟಿಗೆ ಸೇರಿದ್ದ ತಮಿಳುನಾಡು ಮೂಲದ ಸಂಸ್ಥೆಗೆ ಮತ್ತೆ ಕೆಂಪುಹಾಸು ಹಾಕಿತು.ರಾಜ್ಯದಲ್ಲಿ 137 ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನಾ ಮತ್ತು ತರಬೇತಿ ಕೇಂದ್ರಗಳಿವೆ (ಎಂಎಸ್‌ಪಿಟಿಸಿ). ಅವುಗಳಲ್ಲಿ ಕೇವಲ ಮೂರು ಸಂಘಗಳಿಗೆ ಸರಾಸರಿ ₹ 2 ಸಾವಿರ ಕೋಟಿ ವಹಿವಾಟು ಇರುವ ಹೊಣೆಗಾರಿಕೆ ನಿಭಾಯಿಸಲು ಅನುಮತಿ ನೀಡಿತು.

ಎನ್‌ಇಪಿ ವಿರುದ್ಧ ತೀವ್ರಗೊಂಡ ಹೋರಾಟ: ಹೊಸ ಪಿಂಚಣಿ ವ್ಯವಸ್ಥೆ ರದ್ದು ಮಾಡುವಂತೆ ಕೋರಿ ವಿವಿಧ ಸಂಘಟನೆಗಳು ನಿರ್ಣಾಯಕ ಹೋರಾಟ ಆರಂಭಿಸಿದವು. 2006ರಿಂದ ಹೊಸ ಪಿಂಚಣಿ ವ್ಯವಸ್ಥೆ ಜಾರಿಯಾದರೂ, ಹೋರಾಟ ತೀವ್ರ ಕಾವು ಪಡೆದದ್ದು ಇದೇ ಮೊದಲು.

ಪದವಿ ಕಾಲೇಜು ಸಹ ಪ್ರಾಧ್ಯಾಪಕರಿಗೆ ‘ಪ್ರೊಫೆಸರ್’ ಗಿರಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 274 ಸಹ ಪ್ರಾಧ್ಯಾಪಕರಿಗೆ ಪ್ರಾಧ್ಯಾಪಕ (ಪ್ರೊಫೆಸರ್‌) ಹುದ್ದೆಗೆ ಬಡ್ತಿ ನೀಡಿ ಸರ್ಕಾರ ಆದೇಶ ಹೊರಡಿಸಿತು. ಉನ್ನತ ಶಿಕ್ಷಣದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಪ್ರಥಮ ದರ್ಜೆ ಕಾಲೇಜುಗಳ ಬೋಧಕ ಸಿಬ್ಬಂದಿಗೆ ಪ್ರೊಫೆಸರ್‌ಗಳಾಗುವ ಅವಕಾಶ ದೊರೆಯಿತು.

ನೇಮಕಾತಿ ಅಕ್ರಮ ವರ್ಷ; ಜೈಲು ಸೇರಿದ ಎಡಿಜಿಪಿ: ಪಿಎಸ್‌ಐ, ಸಹಾಯಕ ಶಿಕ್ಷಕರು, ಪ್ರೌಢಶಾಲೆ ಸಹ ಶಿಕ್ಷಕರ ನೇಮಕಾತಿ ಅಕ್ರಮಗಳು 2022ರಲ್ಲಿ ಹೆಚ್ಚು ಸುದ್ದಿ ಮಾಡಿದವು. ಎಡಿಜಿಪಿ ಅಮ್ರಿತ್ ಪೌಲ್, ಕುಲಸಚಿವ ಪ್ರೊ. ಎಚ್‌.ನಾಗರಾಜ್, ಶಿಕ್ಷಣ ಇಲಾಖೆ ನಿರ್ದೇಶಕರಾದ ಎಂ.ಪಿ. ಮಾದೇಗೌಡ, ಗೀತಾ ಜೈಲು ಸೇರಿದ್ದರು.545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದ ಬಗ್ಗೆ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮ್ರಿತ್ ಪೌಲ್, ಡಿವೈಎಸ್ಪಿ ಶಾಂತಕುಮಾರ್, ಸಿಬ್ಬಂದಿ ಹಾಗೂ ಅಕ್ರಮದಲ್ಲಿ ಭಾಗಿಯಾಗಿದ್ದ ಅಭ್ಯರ್ಥಿಗಳು, ಮಧ್ಯವರ್ತಿಗಳಾಗಿದ್ದ ಹಾಲಿ ಡಿವೈಎಸ್ಪಿಗಳು, ಪಿಎಸ್‌ಐಗಳು ಬಂಧನಕ್ಕೊಳಗಾಗಿದ್ದರು.ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹಗರಣ, ಪ್ರೌಢಶಾಲೆ ಸಹ ಶಿಕ್ಷಕರ 2012–13 ಹಾಗೂ 2014–15ನೇ ಸಾಲಿನ ನೇಮಕಾತಿ ಅಕ್ರಮಗಳು ಇದೇ ವರ್ಷ ಬೆಳಕಿಗೆ ಬಂದವು.

ಬೆಳಕಿಗೆ ಬಂದ ಮತದಾರರ ಅಕ್ರಮ ಸಮೀಕ್ಷೆ:ಮತದಾರರ ವೈಯಕ್ತಿಕ ಮಾಹಿತಿ ಕಳವು, ದುರ್ಬಳಕೆ ಆರೋಪದಡಿ ‘ಚಿಲುಮೆ’ ಸಂಸ್ಥೆ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಸಂಸ್ಥಾಪಕ ರವಿಕುಮಾರ್, ಶಿವಾಜಿನಗರದ ಕಂದಾಯ ಅಧಿಕಾರಿ ಸುಹೇಲ್‌ ಅಹಮದ್‌, ಮಹದೇವಪುರದ ಕಂದಾಯ ಅಧಿಕಾರಿ ಕೆ.ಚಂದ್ರಶೇಖರ್‌, ಚಿಕ್ಕಪೇಟೆಯ ಉಪ ಕಂದಾಯ ಅಧಿಕಾರಿ ವಿ.ಬಿ.ಭೀಮಾಶಂಕರ್‌ ಮತ್ತು ರಾಜರಾಜೇಶ್ವರಿ ನಗರದ ಕಂದಾಯ ಅಧಿಕಾರಿ ಮಹೇಶ್‌ ಸೇರಿ ಹಲವರನ್ನು ಬಂಧಿಸಲಾಯಿತು.

ಪರೀಕ್ಷಾ ಕಾರ್ಯಕ್ಕೆ ಒಂದೇ ಮಂಡಳಿ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹೆಸರನ್ನು ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ’ ಎಂದು ಬದಲಾಯಿಸಲಾಯಿತು.ಪ್ರೌಢ ಶಾಲೆಗಳ ಜತೆಗೆ, ಪದವಿಪೂರ್ವ ಪರೀಕ್ಷೆಗಳನ್ನೂ ಈ ಮಂಡಳಿ ನಿರ್ವಹಿಸಲಿದೆ.

₹ 100 ದೇಣಿಗೆ ಸದ್ದು, ಆದೇಶ ರದ್ದು: ರಾಜ್ಯದ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಅಗತ್ಯವಿರುವ ಖರ್ಚು–ವೆಚ್ಚಗಳಿಗಾಗಿ ಮಕ್ಕಳ ಪೋಷಕರಿಂದ ದೇಣಿಗೆ ರೂಪದಲ್ಲಿ ಪ್ರತಿ ತಿಂಗಳು ₹ 100 ಸಂಗ್ರಹಿಸಲು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ (ಎಸ್‌ಡಿಎಂಸಿ) ಅನುಮತಿ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದರು. ಸರ್ಕಾರದ ಈ ನಡೆ ಶಿಕ್ಷಣದ ಮೂಲಭೂತ ಹಕ್ಕಿನ ಉಲ್ಲಂಘನೆ, ಕಡ್ಡಾಯ ಶಿಕ್ಷಣ ಹಕ್ಕು ಮೊಟಕುಗೊಳಿಸುವ ಹುನ್ನಾರ ಎಂದು ಶಿಕ್ಷಣ ತಜ್ಞರು, ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಒತ್ತಡಕ್ಕೆ ಮಣಿದ ಸರ್ಕಾರ ಸುತ್ತೋಲೆ ವಾಪಸ್‌ ಪಡೆಯಿತು.

ಸಿದ್ದರಾಮಯ್ಯ ಅಮೃತ ಮಹೋತ್ಸವ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ 75 ಜನ್ಮದಿನೋತ್ಸವ ದಾವಣಗೆರೆಯಲ್ಲಿ ನಡೆಯಿತು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರೂ ಹಾಜರಾಗಿದ್ದ ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದರು. ಕಾಂಗ್ರೆಸ್‌ ಶಕ್ತಿ ಪ್ರದರ್ಶನಕ್ಕೆ ಇದು ವೇದಿಕೆಯಾಯಿತು. ರಾಹುಲ್‌ ಗಾಂಧಿ ಹಮ್ಮಿಕೊಂಡಿದ್ದ ಭಾರತ್ ಜೋಡೊ ಯಾತ್ರೆ ಕರ್ನಾಟಕದಲ್ಲೂ ಸಾಗಿತು.

ಕೋಮು ಹತ್ಯೆ, ಸಂಘರ್ಷಗಳು
ರಾಜ್ಯದ ಕರಾವಳಿ, ಮಲೆನಾಡಿನಲ್ಲಿ ಕೋಮು ಸಂಘರ್ಷ, ಹತ್ಯೆಗಳು 2022ರಲ್ಲೂ ಘಟಿಸಿದವು.ವರ್ಷದ ಆರಂಭದಲ್ಲಿ ಶಿವಮೊಗ್ಗದಲ್ಲಿ ಬಜರಂಗ ದಳದ ಕಾರ್ಯಕರ್ತ ಹರ್ಷ ಹತ್ಯೆಯಾಯಿತು, ನಂತರ ಗಲಭೆಗಳು ನಡೆದವು. ದಕ್ಷಿಣ ಕನ್ನಡದಲ್ಲಿ ಜುಲೈನಲ್ಲಿ ಮೊಹಮ್ಮದ್‌ ಮಸೂದ್‌, ಬಿಜೆಪಿ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್‌ ನೆಟ್ಟಾರು,ಸುರತ್ಕಲ್‌ನಲ್ಲಿ ಮೊಹಮ್ಮದ್‌ ಫಾಝಿಲ್‌ ಹತ್ಯೆ, ಡಿಸೆಂಬರ್‌ನಲ್ಲಿಸುರತ್ಕಲ್ ಸಮೀಪದ ಕಾಟಿಪಳ್ಳ ಕೃಷ್ಣಾಪುರದಲ್ಲಿ ಅಬ್ದುಲ್‌ ಜಲೀಲ್‌ ಹತ್ಯೆಗಳು ನಡೆದವು.

ರಾಜ್ಯದ ಕೆಲವೆಡೆ ಜಾತ್ರೆ, ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಆಜಾನ್- ಭಜನೆ ಸಂಘರ್ಷಕ್ಕೂ ರಾಜ್ಯ ಸಾಕ್ಷಿಯಾಯಿತು.

ಹಿಜಾಬ್‌ ವಿವಾದ
ಉಡುಪಿಯಲ್ಲಿ ಫೆಬ್ರುವರಿ ತಿಂಗಳಲ್ಲಿ ಹಿಜಾಬ್‌ ವಿವಾದ ಆರಂಭವಾಯಿತು. ರಾಜ್ಯ ಸರ್ಕಾರ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ ನಿಷೇಧಿಸಿ ಆದೇಶ ಹೊರಡಿಸಿತು.

ರಾಜ್ಯದ ಶಾಲಾ, ಕಾಲೇಜು ತರಗತಿಗಳಲ್ಲಿ ಹಿಜಾಬ್‌ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಗಳನ್ನು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಋತುರಾಜ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಹಾಗೂ ಜೆ.ಎಂ‌. ಖಾಜಿ ಅವರಿದ್ದ ತ್ರಿಸದಸ್ಯ ನ್ಯಾಯಪೀಠ ರದ್ದುಗೊಳಿಸಿ ತೀರ್ಪು ನೀಡಿತು‌.ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿ ಸಂಬಂಧ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ವಿಭಿನ್ನ ತೀರ್ಪು ನೀಡಿದ ಕಾರಣ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ.

ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಕಾಯ್ದೆಯನ್ನೂ ಸರ್ಕಾರ ಜಾರಿಗೆ ತಂದಿತು.

ಪ್ರಮುಖ ಸುದ್ದಿಗಳು
*ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಡಾ.ರಾಜ್‌ಕುಮಾರ್‌, ಪುನೀತ್ ರಾಜ್‌ಕುಮಾರ್‌ ಪರಿಕಲ್ಪನೆ ಆಧಾರಿತ ಫಲಪುಷ್ಪ ಪ್ರದರ್ಶನ ಆಗಸ್ಟ್‌ನಲ್ಲಿ ನಡೆಯಿತು.
* ವಂದೇ ಭಾರತ್ ಎಕ್ಸ್‌ಪ್ರೆಸ್‌ ಮತ್ತು ಭಾರತ್ ಗೌರವ್ ಕಾಶಿ ದರ್ಶನ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 11ರಂದು ಚಾಲನೆ ನೀಡಿದರು.
*ಅದೇ ದಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ –2 ಉದ್ಘಾಟನೆಯನ್ನೂ ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದರು. ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆಯನ್ನೂ ಉದ್ಘಾಟಿಸಿದರು.
* ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯವು 89 ವರ್ಷಗಳ ಬಳಿಕ ಸೆಪ್ಟೆಂಬರ್‌ ತಿಂಗಳಲ್ಲಿ ಭರ್ತಿಯಾಯಿತು.
* ಮಂಗಳೂರಿನ ಗರೋಡಿ ಬಳಿ ಕುಕ್ಕರ್‌ ಬಾಂಬ್‌ ಸ್ಫೋಟವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT