ಸೋಮವಾರ, ಆಗಸ್ಟ್ 8, 2022
24 °C

ಸಾರ್ಥಕ ಸೇವೆಗೆ ನಿಮ್ಮ ಕೊಡುಗೆ ಸಮರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಡಿಯಾ ಕೇರ್ಸ್ ಫೌಂಡೇಷನ್‌

ಇಂಡಿಯಾ ಕೇರ್ಸ್‌ ಫೌಂಡೇಷನ್‌ ಅನ್ನು 2000ರಲ್ಲಿ ಪ್ರಾಥಮಿಕವಾಗಿ ಬೆಂಗಳೂರು ನಗರವನ್ನು ಗಮನದಲ್ಲಿ ಇಟ್ಟುಕೊಂಡು ಸ್ಥಾಪಿಸಲಾಯಿತು. ಕೋವಿಡ್‌ ಪಿಡುಗು ಆರಂಭವಾದಂದಿನಿಂದಲೂ ಈ ಸಂಸ್ಥೆ ಪರಿಹಾರ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಕಳೆದ ವರ್ಷ ಆಹಾರ ಕಿಟ್‌ ಮತ್ತು ಪಡಿತರ ಕಿಟ್ ಅನ್ನು ನೀಡಿತ್ತು. ಈ ವರ್ಷ ಪ್ರಮುಖವಾಗಿ ವೈದ್ಯಕೀಯ ಪರಿಹಾರ ಒದಗಿಸಲು ಆದ್ಯತೆ ನೀಡಿದೆ. ಹೊಸಕೆರೆಹಳ್ಳಿಯಲ್ಲಿ ಬಿಬಿಎಂಪಿಯ ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳುತ್ತಿದೆ. ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೌಲಭ್ಯ ಬಲಪಡಿಸಲು ಯೋಜನೆ ಹೊಂದಿದೆ. ಆರಂಭಿಕವಾಗಿ ಚಿಕ್ಕೋಡಿ (ಬೆಳಗಾವಿ ಜಿಲ್ಲೆ), ತೀರ್ಥಹಳ್ಳಿಯಲ್ಲಿ (ಶಿವಮೊಗ್ಗ ಜಿಲ್ಲೆ) ಆಮ್ಲಜನಕ ಸಾಂದ್ರಕಗಳು, ಮಲ್ಟಿ ಪ್ಯಾರಾ ಮಾನಿಟರ್‌ಗಳು, ವಿದ್ಯುತ್ ಜನರೇಟರ್‌ಗಳು, ಫ್ಲವರ್ ಬೆಡ್‌ ಒದಗಿಸಲು ಮುಂದಾಗಿದೆ.

ಸಹಯೋಗ್

ಸಹಯೋಗ್‌ ಎಂಬುದು ಬೆಂಗಳೂರು ಮೂಲದ ಎನ್‌ಜಿಒ ಆಗಿದ್ದು, ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಗಳ ಚಿಕಿತ್ಸೆಗೆ ವೈದ್ಯಕೀಯ ವೆಚ್ಚ ಭರಿಸುವುದು ಹಾಗೂ ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ನೆರವು ನೀಡುತ್ತಿದೆ. ಕೋವಿಡ್ ಸೋಂಕಿನ ಸಂದರ್ಭದಲ್ಲಿ ಸಮಾಜದಲ್ಲಿನ ನಿರ್ಗತಿಕರಾದ ಮತ್ತು ಕಡುಬಡತನದಲ್ಲಿ ಇರುವ ವರ್ಗಗಳ ಜನರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಪಡೆಯಲು ಆಗುವಂತೆ ಪರಿಹಾರ ಕಾರ್ಯಗಳನ್ನು ಹಮ್ಮಿಕೊಂಡಿದೆ. ಸಹಯೋಗ್‌ ಸಂಸ್ಥೆಯು ಬಿಬಿಎಂಪಿ ಸಹಯೋಗದಲ್ಲಿ 50 ಹಾಸಿಗೆ ಸಾಮರ್ಥ್ಯದ ಟ್ರಯಾಜ್‌ ಕೇಂದ್ರವನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನಲ್ಲಿ ಸ್ಥಾಪಿಸಿದೆ. ಅಲ್ಲದೆ, ನಿರ್ಲಕ್ಷಿತ ವರ್ಗದರಿಗಾಗಿ ಚಿಕಿತ್ಸೆ ಒದಗಿಸಲು ಮೊಬೈಲ್‌ ಕೇರ್ ಘಟಕವನ್ನು ಆರಂಭಿಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಮಾರ್ಗ ಅಳವಡಿಸಲು ಉದ್ದೇಶಿಸಿದೆ. ಸಂಸ್ಥೆ ಈಗ ಕೋವಿಡ್‌ ನಂತರದ ಅನಾರೋಗ್ಯದಿಂದ ಬಳಲುತ್ತಿರುವ ಬಡ ರೋಗಿಗಳಿಗೆ ವೈದ್ಯಕೀಯ ನೆರವು ಒದಗಿಸುವ ಕಾರ್ಯದಲ್ಲಿ ತೊಡಗಿದೆ.

ರೈಟ್‌ ಟು ಲಿವ್

ಬೆಂಗಳೂರು ಮೂಲದ ಎನ್‌ಜಿಒ ಆಗಿರುವ ‘ರೈಟ್ ಟು ಲಿವ್’ ಕೋಟೆ ಫೌಂಡೇಷನ್‌ನ ಸೇವಾಕ್ರಮವಾಗಿದೆ. ಇದು, ಚಿಕ್ಕಬಳ್ಳಾಪುರ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕೋವಿಡ್ ಚಿಕಿತ್ಸಾ ಸೇವೆಯನ್ನು ನೀಡುತ್ತಿದೆ. ಇದು, ಡಾ.ಅನಿಲ್‌ ಕುಮಾರ್, ಕಾರ್ಯಕರ್ತರು ಮತ್ತು ಇತರೆ ಸಂಘಟನೆಗಳ ಸಹಯೋಗದಲ್ಲಿ ಜಿಲ್ಲೆಯ 100 ಗ್ರಾಮಗಳಲ್ಲಿ ಕೋವಿಡ್‌ ಪ್ರಥಮ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಿದೆ. ಬೆಂಗಳೂರಿನಲ್ಲಿ ‘ಡಾಕ್ಟರ್‌ ಆನ್‌ ವ್ಹೀಲ್‌’ (ಡಾ.ಸುನಿಲ್‌ ಹೆಬ್ಬಿ ಸಹಯೋಗ) ಕಾರ್ಯಗತಗೊಳಿಸಿದ್ದು, ಕೊಳೆಗೇರಿಗಳ ನಿವಾಸಿಗಳು ಮತ್ತು ಹಿರಿಯ ನಾಗರಿಕರಿಗೆ ಅವರ ಮನೆಯ ಬಾಗಿಲಿನಲ್ಲೇ ಕೋವಿಡ್‌ ಚಿಕಿತ್ಸೆಯನ್ನು ಒದಗಿಸುತ್ತಿದೆ. ಇದಲ್ಲದೆ, ದಕ್ಷಿಣ ಕನ್ನಡ ಜಿಲ್ಲೆ ಗ್ರಾಮೀಣ ಭಾಗಗಳು ಮತ್ತು ಹೊಸೂರುನಲ್ಲಿ ಕೋವಿಡ್ ಪರಿಸ್ಥಿತಿ ಎದುರಿಸಲು ಆಸ್ಪತ್ರೆಗಳಿಗೆ ಸೌಲಭ್ಯಗಳನ್ನು ಒದಗಿಸುತ್ತಿದೆ. ದಕ್ಷಿಣ ಕನ್ನಡ ಮತ್ತು ಬೆಂಗಳೂರಿನಲ್ಲಿ ಕೋವಿಡ್‌ನಿಂದ ಬಾಧಿತರಾದ ಸರ್ಕಾರಿ ಶಾಲೆಗಳ ಮಕ್ಕಳಿಗೆ, ಚಿಕಿತ್ಸೆಗಾಗಿ ಹಣಕಾಸು ನೆರವು, ಆಹಾರ ಮತ್ತು ಔಷಧಗಳನ್ನು ಸಂಸ್ಥೆಯು ಒದಗಿಸುತ್ತಿದೆ. ಅಲ್ಲದೆ, ಬಡಕುಟುಂಬಗಳಲ್ಲಿನ ಗರ್ಭಿಣಿಯರು, ಪಿಂಚಣಿದಾರರು, ವಿಧವೆಯರು, ದೈಹಿಕ ಮತ್ತು ಮಾನಸಿಕ ಅಂಗವಿಕಲರಿಗೆ ಮೈಸೂರು ಮತ್ತು ಬೀದರ್‌ ಜಿಲ್ಲೆಗಳಲ್ಲಿ ಆಹಾರ ಪದಾರ್ಥಗಳನ್ನು ಒದಗಿಸುತ್ತಿದೆ.

ರೋಟರಿ ಬೆಂಗಳೂರು ಸೌತ್‌ವೆಸ್ಟ್

ಚಾರಿಟಬಲ್ ಟ್ರಸ್ಟ್

ಬೆಂಗಳೂರಿನಲ್ಲಿ ಕಳೆದ ಒಂದು ದಶಕದಿಂದ ರೋಟರಿ ಬೆಂಗಳೂರು ಸೌತ್‌ವೆಸ್ಟ್ ಚಾರಿಟಬಲ್ ಟ್ರಸ್ಟ್ ಆರೋಗ್ಯ ಚಿಕಿತ್ಸಾ ಸೇವೆಯನ್ನು ಒದಗಿಸುತ್ತಿದೆ. ಕಳೆದ ಹಲವು ವರ್ಷಗಳಿಂದ ಬೆಂಗಳೂರು ಕಿಡ್ನಿ ಫೌಂಡೇಷನ್‌ನಲ್ಲಿ ರೋಗಿಗಳಿಗೆ ಉಚಿತವಾಗಿ ಡಯಾಲಿಸಿಸ್ ಸೇವೆಯನ್ನು ಒದಗಿಸುತ್ತಿದೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ 100ಕ್ಕೂ ಹೆಚ್ಚು ಜನರಿಗೆ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನೆರವು ಒದಗಿಸಿದೆ. ಕೋವಿಡ್ ಸಂದರ್ಭದಲ್ಲಿ ಈ ಸಂಸ್ಥೆಯು ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ಒದಗಿಸುವ ಆಸ್ಪತ್ರೆಗಳಿಗೆ ಎಚ್‌ಎನ್‌ಎಫ್‌ಸಿ ಮಷೀನ್‌ಗಳು, ಬಿಐಪಿಎಪಿ (BiPAP) ಮಷೀನ್‌ಗಳು, ವೆಂಟಿಲೇಟರ್‌ಗಳು, ಆಮ್ಲಜನಕ ಸಾಂದ್ರಕಗಳನ್ನು ನೀಡಿದೆ. ಹೆಚ್ಚಿನ, ಸರ್ಕಾರಿ ಆಸ್ಪತ್ರೆಗಳಿಗೆ ಸೌಲಭ್ಯಗಳನ್ನು ಒದಗಿಸಲು ಕಾರ್ಯನಿರತವಾಗಿದೆ. ಮುಂದಿನ ದಿನಗಳಲ್ಲೂ ಈ ಆಸ್ಪತ್ರೆಗಳು ಕೋವಿಡ್‌ ಸ್ಥಿತಿ ಎದುರಿಸಲು ಆಗುವಂತೆ ಸಜ್ಜುಗೊಳಿಸಲು ಅಗತ್ಯ ನೆರವು ಕಲ್ಪಿಸುವ ಉದ್ದೇಶವನ್ನು ಹೊಂದಿದೆ.

ರೋಟರಿ ಬೆಂಗಳೂರು ಲೇಕ್‌ ಸೈಡ್‌

ರೋಟರಿ ಬೆಂಗಳೂರು ಲೇಕ್‌ ಸೈಡ್‌ ಸಂಸ್ಥೆಯು ಬೆಂಗಳೂರಿನಲ್ಲಿ ಸಮುದಾಯ ಸೇವೆ ಮತ್ತು ಅಭಿವೃದ್ಧಿಗೆ ಒತ್ತು ನೀಡಿ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತಿದೆ. ಕೋವಿಡ್ ಸಂದರ್ಭದಲ್ಲಿ ಸಂಸ್ಥೆಯು ಅಗತ್ಯವಿರುವ ಕುಟುಂಬಗಳಿಗೆ ಪಡಿತರ ಕಿಟ್ ಮತ್ತು ವೈದ್ಯಕೀಯ ಕಿಟ್‌ಗಳನ್ನು ವಿತರಿಸಿದೆ. ಅಲ್ಲದೆ, ಬೆಂಗಳೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇರುವ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಪಿಪಿಇ ಕಿಟ್‌ಗಳನ್ನು ವಿತರಿಸಿದೆ. ದೀರ್ಘಾವಧಿಯಲ್ಲಿ ಬೆಂಗಳೂರು, ಕೋಲಾರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಆಸ್ಪತ್ರೆಗಳು, ಕೋವಿಡ್‌ ಕೇರ್ ಕೇಂದ್ರಗಳಿಗೆ ವೆಂಟಿಲೇಟರ್‌ಗಳು, ಆಮ್ಲಜನಕ ಸಾಂದ್ರಕಗಳನ್ನು ಒದಗಿಸುವ ಗುರಿ ಹೊಂದಿದೆ.

ಕಾಪುಚಿನ್ ಕೃಷಿಕ್‌ ಸೇವಾ ಕೇಂದ್ರ

ಕಾಪುಚಿನ್‌ ಕೃಷಿಕ್‌ ಸೇವಾ ಕೇಂದ್ರವು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿ ಗ್ರಾಮೀಣ ಭಾಗದ ಹಿಂದುಳಿದ ಸಮುದಾಯಗಳ ಸಬಲೀಕರಣ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ. ಕೋವಿಡ್ ಮೊದಲ ಅಲೆಯ ಅವಧಿಯಲ್ಲಿ ಈ ಸಂಸ್ಥೆಯು
836 ಕುಟುಂಬಗಳಿಗೆ ಆಹಾರ ಕಿಟ್‌ಗಳನ್ನು ಒದಗಿಸಿತ್ತು. ಅಲ್ಲದೆ, ಪಿಪಿಇ ಕಿಟ್‌ಗಳು, ಥರ್ಮಲ್‌ ಸ್ಕ್ಯಾನರ್‌ಗಳು, ಮಾಸ್ಕ್, ಗ್ಲೋವ್ಸ್‌ಗಳು, ಆಕ್ಸಿಮೀಟರ್‌ಗಳನ್ನು ತಾಲ್ಲೂಕು ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಒದಗಿಸಿದೆ. ಈಗ ಸಂಸ್ಥೆಯು 500 ಡ್ರೈಫುಡ್‌ ಕಿಟ್‌ಗಳು, ಪಿಪಿಇಗಳು, ಮಾಸ್ಕ್‌ಗಳು, ಗ್ಲೋವ್ಸ್‌ಗಳು, ಸ್ಯಾನಿಟೈಸರ್‌ಗಳು ಮತ್ತು ಮೆಡಿಕಲ್‌ ಕಿಟ್‌ಗಳನ್ನು ಸುಮಾರು 120 ರೋಗಿಗಳಿಗೆ ವಿತರಿಸಿದೆ. ತಾಲ್ಲೂಕು ಆಸ್ಪತ್ರೆಗಳ ಆರೋಗ್ಯದ ತಂಡದ ಜೊತೆಗೂಡಿ ಕೆಲಸ ಮಾಡಲಿದ್ದು, ಕೋವಿಡ್‌ ಪರೀಕ್ಷೆಗಳು ಮತ್ತು ಲಸಿಕೆ ಕಾರ್ಯಕ್ರಮವನ್ನು ಅಂಗವಿಕಲರು ಮತ್ತು ಅವರನ್ನು ನೋಡಿಕೊಳ್ಳುವವರಿಗಾಗಿ ಆಯೋಜಿಸಲಿದೆ. ಅಲ್ಲದೆ, ತಾಲ್ಲೂಕಿನಲ್ಲಿ ಕೋವಿಡ್‌ ಸೋಂಕಿನಿಂದಾಗಿ ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿಯನ್ನೇ ಕಳೆದುಕೊಂಡು ಬಾಧಿತವಾದ ಕುಟುಂಬಗಳಿಗೆ ನೆರವಾಗುವ ಯೋಜನೆಯನ್ನು ಹೊಂದಿದೆ.

ರೀಚ್‌

ರೀಚ್‌ (ರೂರಲ್‌ ಎನ್ವಿರಾನ್‌ಮೆಂಟಲ್ ಅವೇರ್‌ನೆಸ್‌ ಕಮ್ಯುನಿಟಿ ಹೆಲ್ಪ್‌) ಸಂಸ್ಥೆಯು ಬಾಗಲಕೋಟೆ ಜಿಲ್ಲೆಯಲ್ಲಿ ಪರಿಸರ, ಮಹಿಳಾ ಸಬಲೀಕರಣ ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೋವಿಡ್–19ನ ಮೊದಲ ಅಲೆ ಸಂದರ್ಭದಲ್ಲಿ ರೀಚ್ ಸಂಸ್ಥೆಯು, ಮಹಿಳೆಯರು ಹೊಲಿದು ಸಿದ್ಧಪಡಿಸಿದ ಬಟ್ಟೆ ಮಾಸ್ಕ್‌ಗಳನ್ನು ಖರೀದಿಸಿ ಅವುಗಳನ್ನು ಬಾಗಲಕೋಟೆ ಜಿಲ್ಲೆಯಲ್ಲಿ 600 ಕುಟುಂಬಗಳು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಪೊಲೀಸ್ ಮತ್ತು ಇತರೆ ಮುಂಚೂಣಿ ಕಾರ್ಯಕರ್ತರಿಗೆ ವಿತರಿಸಿತ್ತು. ಅಲ್ಲದೆ, 500 ಕುಟುಂಬಗಳಿಗೆ ಆಹಾರ ಕಿಟ್‌ ಅನ್ನು ವಿತರಿಸಿದ್ತ್ತು.ಈಗ ಜಿಲ್ಲಾಡಳಿತದ ಜೊತೆಗೆ ನೋಡಲ್ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕೋವಿಡ್‌ ರೋಗಿಗಳ ಕುರಿತ ಅಂಕಿ ಅಂಶ, ಮಾಹಿತಿಗಳನ್ನು ಸಂಗ್ರಹಿಸುತ್ತಿದೆ. ಬಾಧಿತ ಕುಟುಂಬಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನೆರವಾಗುತ್ತಿದೆ. ಸಂಸ್ಥೆಯು ಪೌಷ್ಟಿಕ ಆಹಾರ, ಸ್ವಚ್ಛತಾ ಕಿಟ್‌ಗಳನ್ನು
ಕೋವಿಡ್‌ನಿಂದ ಬಾಧಿತರಾದವರು, ಬಡಕುಟುಂಬಗಳ ಗರ್ಭಿಣಿಯರು, ಬಾಣಂತಿಯರಿಗೆ ಒದಗಿಸಿದೆ. ಪಿಪಿಇ, ಎನ್‌–95 ಮಾಸ್ಕ್, ಗ್ಲೋವ್ಸ್‌ಗಳು
ಹಾಗೂ ಇತರೆ ಸುರಕ್ಷತಾ ಪರಿಕರಗಳು ಇದ್ದ ಕಿಟ್‌ಗಳನ್ನು ಸೋಂಕಿತರ ಆರೈಕೆಯಲ್ಲಿ ನಿರತರಾಗಿರುವವರಿಗೆ ಒದಗಿಸಿದೆ.ಅಲ್ಲದೆ, ಕೋವಿಡ್‌ನಿಂದಾಗಿ ಕುಟುಂಬಕ್ಕೆ ಆಧಾರವಾಗಿದ್ದವರನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗಲು ಸಂಸ್ಥೆಯು ಉದ್ದೇಶಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು