ಕಾನ್ದೀವರ ದೀಪಾವಳಿ: ಚಪ್ಪೆರೊಟ್ಟಿಯ ರುಚಿ

ಉತ್ತರ ಕನ್ನಡ ಜಿಲ್ಲೆಯ ವಿಶೇಷವಾಗಿ ಘಟ್ಟದ ಮೇಲಿನ ಶಿರಸಿ, ಸಿದ್ದಾಪುರ, ಶಿವಮೊಗ್ಗ ಜಿಲ್ಲೆಯ ಸಾಗರ ಭಾಗದ ಕಾನ್ದೀವರ (ಬೈನೆದೀವರು) ದೀಪಾವಳಿ ಹಬ್ಬ ಶುರುವಾಗುವುದೇ ‘ಬೂರ್ಗಳೆ ಹಾಯುವುದರಿಂದ’.

‘ಬೂರ್ಗಳೆ ಹಾಯುವುದು’ ಎಂದರೆ ಅಪರಾಧವಲ್ಲದ, ಕಳ್ಳನ ಮೇಲೆ ಯಾವುದೇ ಪ್ರಕರಣ ದಾಖಲಾಗದ, ಸಾಂಪ್ರದಾಯಿಕ ಆಚರಣೆಗಾಗಿ ನಡುರಾತ್ರಿಯಲ್ಲಿ ಮಾಡುವ ಖುಷಿಯ ಕಳ್ಳತನ. ದೀಪಾವಳಿಯ ಅಭ್ಯಂಜನ ಸ್ನಾನಕ್ಕೆ ಮೊದಲಾಗಿ ಮೈಗೆ ಬಳಿದುಕೊಳ್ಳುವ ಅರಶಿನದ ಕೊಂಬನ್ನು ಕದ್ದುತರುವುದರೊಂದಿಗೆ ‘ದೊಡ್ಡಬ್ಬ’ದ ಸಂಭ್ರಮ ತೆರೆದುಕೊಳ್ಳುತ್ತದೆ.

ಚಂಬೆಳಕಿನ ದೀಪಾವಳಿ ಮಲೆನಾಡಿನ ಜನರಿಗೆ ‘ದೊಡ್ಡಬ್ಬ’. ಪ್ರಕೃತಿ ಆರಾಧನೆಯ ಈ ಹಬ್ಬ ಎಲ್ಲ ಹಬ್ಬಗಳಿಗಿಂತ ಹೆಚ್ಚು ವಿಶೇಷ. ಹೀಗಾಗಿ, ಇದು ದೊಡ್ಡ ಹಬ್ಬ ಅರ್ಥಾತ್ ದೊಡ್ಡಬ್ಬ.

ನರಕ ಚತುದರ್ಶಿಯಿಂದ ಬಲಿಪಾಡ್ಯಮಿವರೆಗಿನ ಮೂರು ದಿನಗಳ ಹಬ್ಬದ ವೈಭವವು ತ್ರಯೋದಶಿಯ ದಿನ ಸಂಜೆ ಹಂಡೆಗೆ ಕೆಮ್ಮಣ್ಣು ಶೇಡಿ ಬಳಿದು ಶಿಂಡಲೆ ಬಳ್ಳಿ (ಸೌತೆಕಾಯಿ ಜಾತಿಯ ಸಣ್ಣ ಕಹಿ ಕಾಯಿಯ ಬಳ್ಳಿ) ಸುತ್ತುವುದರೊಂದಿಗೆ ಆರಂಭವಾಗುತ್ತದೆ.

ಮೊದಲ ದಿನದ ಬೂರೆ ಹಬ್ಬ ಅಥವಾ ಬೋರೆ ಹಬ್ಬದ ದಿನ ಬಲೀಂದ್ರ ಮನೆಗೆ ಬರುತ್ತಾನೆ. ಅಂದು ಬೆಳಿಗ್ಗೆ ತಿಂಡಿಗೆ ಅಕ್ಕಿಯ ತಿನಿಸುಗಳು ನಿಷಿದ್ಧ. ಹೆಚ್ಚಾಗಿ ಅವಲಕ್ಕಿ, ಉಪ್ಪಿಟ್ಟೇ ತಿಂಡಿ. ಕೆಲವು ಮಹಿಳೆಯರು ಉಪವಾಸ ಆಚರಣೆ ಮಾಡುತ್ತಾರೆ. ಸ್ನಾನ ಮುಗಿಸಿ ಶುಭ್ರರಾಗಿ, ಹೊಸ ಸೀರೆಯುಟ್ಟು ಬಾವಿಯಿಂದ ನೀರು ಸೇದಿ ಮೊದಲೇ ಅಲಂಕರಿಸಿಟ್ಟ ಮಗೆಗೆ (ಮಡಿಕೆ) ನೀರು ತುಂಬಿಸುತ್ತಾರೆ. ಈ ಮಡಿಕೆಯನ್ನು ಮನೆಯ ಕೊಟ್ಟಿಗೆಗೆ ತಂದು ಕೃಷಿ ಪರಿಕರಗಳ ಪಕ್ಕದಲ್ಲಿ ಮಣೆಯ ಮೇಲೆ ಇಡುವುದರೊಂದಿಗೆ ಬಲೀಂದ್ರನ ಪ್ರವೇಶವಾಗುತ್ತದೆ. ಅದೇ ಬೂರೆ ಮಗೆ.

ಕೊಟ್ಟಿಗೆಯಲ್ಲಿ ಪ್ರತಿಷ್ಠಾಪಿತನಾದ ಬಲೀಂದ್ರನಿಗೆ ಹಣ್ಣು ಸಿಹಿ ಕಜ್ಜಾಯ (ಅತ್ರಾಸ), ಎರಪ್ಪನ ಕಜ್ಜಾಯ (ಅಕ್ಕಿ ಕಡಲೆಬೇಳೆ ಸೇರಿಸಿ ತಯಾರಿಸಿದ ತಿಂಡಿ) ನೈವೇದ್ಯ ಮಾಡುವುದು ಅಂದರೆ ಬಲೀಂದ್ರನಿಗೆ ಎಡೆ ಹಾಕುವುದು ಸಂಪ್ರದಾಯ. ಪೂಜೆಯ ನಂತರ ಎಲ್ಲರೂ ಒಟ್ಟಾಗಿ ಕುಳಿತು ಹಬ್ಬದ ಊಟ ಮಾಡುತ್ತಾರೆ. ಕಾಲ ಬದಲಾದಂತೆ ಅನುಕೂಲಕ್ಕೆ ತಕ್ಕಹಾಗೆ ನೈವೇದ್ಯ ಸಿದ್ಧಪಡಿಸುವ ಕ್ರಮ ಬಂದಿದೆ ಎನ್ನುತ್ತಾರೆ ಸಾಮಾಜಿಕ ಮುಖಂಡ ಕನ್ನೇಶ್ ಕೋಲಸಿರ್ಸಿ.

ಎರಡನೇ ದಿನ ಕೆಲವರು ಲಕ್ಷ್ಮಿ ಪೂಜೆ ಮಾಡುತ್ತಾರೆ. ಮಧ್ಯಾಹ್ನ ತುಸು ಬಿಡುವು. ಸಂಜೆ, ಕೊಟ್ಟಿಗೆ ತೊಳೆಯುವುದು, ಮಣ್ಣಿನ ಕೊಟ್ಟಿಗೆಯಾದರೆ ಸಾರಿಸಿ ಶೃಂಗರಿಸುವುದು, ಆಕಳ ಮೈ ತೊಳೆಯುವುದು ಇವೆಲ್ಲ ಮರುದಿನದ ದೊಡ್ಡಬ್ಬದ ತಯಾರಿಗಳು. ಚಪ್ಪೆರೊಟ್ಟಿ (ಉಪ್ಪು ಹಾಕದೇ ತಯಾರಿಸಿದ ರೊಟ್ಟಿ), ಪಚ್ಚೆತೆನೆ, ಚೆಂಡು ಹೂ, ಮಾವಿನ ಎಲೆ, ಅಡಿಕೆ, ಅಡಿಕೆ ಸಿಂಗಾರ ಸೇರಿಸಿ ಹೆಣೆಯುವ ಗೋವಿನ ಹಾರ ನೋಡಲು ಬಲುಚಂದ. ಮನೆಮಂದಿಯೆಲ್ಲ ಸೇರಿ ಪ್ರಕೃತಿಯಲ್ಲಿ ಸಿಗುವ ಇವೆಲ್ಲವನ್ನು ತಂದು ಮನೆಯ ಜಗುಲಿಯಲ್ಲಿ ಒಟ್ಟಿಗೆ ಕುಳಿತು ಹರಟುತ್ತ ಹಾರಕಟ್ಟುವ ಪರಿ ನೋಡುವುದೇ ಸೊಬಗು.

ಹಬ್ಬದ ಮೂರನೇ ದಿನ ಬಲಿಪಾಡ್ಯದ ದಿನ ಬೆಳಿಗ್ಗೆ ಗೋಪೂಜೆ. ಶೇಡಿ, ಕೆಮ್ಮಣ್ಣಿನಿಂದ ಮೂಡಿದ ಗೋಪಾದದ ಆಕೃತಿ ರಂಗೋಲಿಯಿಂದ ಕಂಗೊಳಿಸುವ ಕೊಟ್ಟಿಗೆಯಲ್ಲಿ ಮಹಿಳೆಯರು ಗೋವಿಗೆ ಆರತಿ ಬೆಳಗುತ್ತಾರೆ. ಪುರುಷರು ಗೋವಿಗೆ ಹಾರ ಕಟ್ಟುತ್ತಾರೆ. ಗೋಪೂಜೆ ಮುಗಿಸಿ ‘ದನ ಬೆಚ್ಚಿದ’ ಮೇಲೆ ಇದೇ ಹಾರವನ್ನು ಮನೆಯ ಬಾಗಿಲು, ಕೃಷಿ ಸಲಕರಣೆ, ವಾಹನಗಳಿಗೆ ಕಟ್ಟುವ ಸಂಪ್ರದಾಯವಿದೆ. ನಂತರ ಇದೇ ದಂಡೆಯನ್ನು ಊರಿನ ಹುಲಿಯಪ್ಪ, ಚೌಡಮ್ಮ, ಭೂತಪ್ಪ ದೇವರ ಎದುರಿಟ್ಟು, ವಿಶೇಷ ತಿನಿಸುಗಳ ನೈವೇದ್ಯ ಮಾಡಿ, ಹಣ್ಣು–ಕಾಯಿ ಅರ್ಪಿಸುತ್ತಾರೆ.

ದನ ಬೆದರಿಸಲು ಹೋದವರು ಬರುವಾಗ ನೆಲ್ಲಿಕಾಯಿ, ಭತ್ತದ ಕದಿರು ತರುತ್ತಾರೆ. ಅದನ್ನು ಸೆಗಣಿಯ ಮೇಲೆ ವೀಳ್ಯದೆಲೆ ಇಟ್ಟು ಅದರ ಮೇಲೆ ಇಡುವ ಕ್ರಮವಿದೆ. ಮನೆ ಮಾಡಿಗೆ ಇಡುವ ಸಂಪ್ರದಾಯವೂ ಇದೆ. ಅಂದು ಕರ್ಜಿಕಾಯಿ, ಹೋಳಿಗೆ ಊಟದ ವ್ಯಂಜನಗಳು. ಮಹಾಸತಿ ಪೂಜಿಸುವ ಕಡೆಗಳಲ್ಲಿ ಎಡೆಗೆ ಹಾಕಲು ಮಾಂಸಾಹಾರ ಮಾಡುವ ಕ್ರಮವಿದೆ.

ನಂತರ ಬಾವಿಯ ನೀರಿನೊಂದಿಗೆ ಬಂದು ಮನೆಯಲ್ಲಿ ಪೂಜಿಸಲ್ಪಟ್ಟ ಬಲೀಂದ್ರನನ್ನು ವಿಸರ್ಜಿಸಿ, ಮಗೆ ನೀರನ್ನು ಬಾವಿಗೆ ಎರೆಯುವುದು, ಸಾಂಪ್ರದಾಯಿಕ ಹಾಡುಗಳೊಂದಿಗೆ ಹಬ್ಬಕ್ಕೆ ತೆರೆ ಬೀಳುತ್ತದೆ. ಮುಸ್ಸಂಜೆಯಲ್ಲಿ ಗದ್ದೆಯಲ್ಲಿ ದೊಂದಿಕೋಲು ದೀಪ ಬೆಳಗಿ ಹಬ್ಬವನ್ನು ಕಳುಹಿಸಿಕೊಡುವುದೂ ಹಬ್ಬದ ಮಂಗಳದ ಒಂದು ಭಾಗವೇ. ಪ್ರಾದೇಶಿಕವಾಗಿ ಆಚರಣೆ ತುಸು ಭಿನ್ನವಾಗಿದೆ. ಕಾನ್ದೀವರು, ತೆಂಗಿನದೀವರ ಆಚರಣೆಯಲ್ಲೂ ಅಲ್ಪಸ್ವಲ್ಪ ಬದಲಾವಣೆ ಇದೆ. ಸ್ತ್ರೀ ಪ್ರಧಾನ ವ್ಯವಸ್ಥೆಯಲ್ಲಿ ಮನೆ ಬೆಳಗುವ ಮನೆಯೊಡತಿಯ ಮೂಲ ಕುಟುಂಬದ ಆಚರಣೆ, ಮದುವೆಯಾಗಿ ಬಂದ ಮನೆಯ ಮೇಲೆ ಅಲ್ಪ ಪ್ರಭಾವ ಬೀರಿ, ಕೆಲವು ಆಚರಣೆಗಳನ್ನು ಭಿನ್ನತೆ ಬಂದಿರುವ ಸಾಧ್ಯತೆಯೂ ಇರುತ್ತದೆ ಎನ್ನುತ್ತಾರೆ ಕನ್ನೇಶ್.

ಗೋ ಪೂಜೆ ದಿನ ಸಂಜೆ ದನಗಳನ್ನು ಅಲಂಕರಿಸಿ, ಎಲ್ಲ ಮನೆಗಳವರೂ ಸೇರಿ ಊರಿನ ಮೈದಾನದಲ್ಲಿ ದನ ಬೆದರಿಸಿ ಓಡಿಸುವ (ದನಬೈಲು) ಆಚರಣೆ ಅನೇಕ ಹಳ್ಳಿಗಳಲ್ಲಿ ಇದೆ. ಇದನ್ನು ನೋಡಲು ಸಹಸ್ರಾರು ಜನರು ಸೇರುತ್ತಾರೆ.

ಹಿರಿಯ ಸ್ಮರಣೆ ವಿಶೇಷ:

ಅಮಾವಾಸ್ಯೆ ದಿನ ಸಂಜೆ ಹಿರಿಯರ ಸ್ಮರಣೆ ದೀವರ ದೀಪಾವಳಿ ಆಚರಣೆಯಲ್ಲಿ ವಿಶೇಷವಾದದ್ದು.

ಅಡುಗೆ ಮನೆಯ ಇಡಕಲು (ನೀರು ತುಂಬಿಡುವ ಪಾತ್ರೆ) ಪಕ್ಕದಲ್ಲಿ ಗತಿಸಿಹೋಗಿರುವ ಅಜ್ಜ–ಅಜ್ಜಿಯರ ಸ್ಮರಣೆಯಲ್ಲಿ ಗಂಡು ಹೆಣ್ಣಿನ ಆಕೃತಿ ಸ್ಥಾಪನೆ ಮಾಡುತ್ತಾರೆ. ಅಜ್ಜನಿಗೆ ಹೊಸ ಪಂಚೆ, ಅಜ್ಜಿಗೆ ಹೊಸ ಸೀರೆ ತೊಡಿಸುತ್ತಾರೆ. ಹೊರಗಿನಿಂದ ದೀಪ ತರುವ ಮನೆಯ ಒಡತಿ ಹಿಂದಿನ ಕಾಲಿನಲ್ಲೇ ಒಳಗೆ ಬರುತ್ತಾಳೆ ಅಂದು ಹಿರಿಯರಿಗೆ ಇಷ್ಟವಾದ ತಿನಿಸುಗಳನ್ನು ಮಾಡಿ ನೈವೇದ್ಯಕ್ಕೆ ಇಡಲಾಗುತ್ತದೆ. ಅವನ್ನೆಲ್ಲ ಮರುದಿನ ಬೆಳಿಗ್ಗೆ ಸ್ವಚ್ಛಗೊಳಿಸಿದ ನಂತರ, ಪಾಡ್ಯದ ಆಚರಣೆ ಆರಂಭವಾಗುತ್ತದೆ. ಈಗ ಕೆಲವು ಈ ಆಚರಣೆಯನ್ನು ಮಹಾಲಯ ಅಮಾವಾಸ್ಯೆಯಂದೇ ಮಾಡುತ್ತಾರೆ. ಆಗ ಮಾಡಲು ಸಾಧ್ಯವಾಗದವರು ದೀಪಾವಳಿ ವೇಳೆ ಆಚರಿಸುತ್ತಾರೆ ಎನ್ನುತ್ತಾರೆ ಸಮುದಾಯದ ಮುಖಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.