ಮಂಗಳವಾರ, ಆಗಸ್ಟ್ 11, 2020
27 °C

ಭೂಗರ್ಭದೊಳಗೆ ವಿಹರಿಸ ಬನ್ನಿ…

ಹೇಮಮಾಲಾ.ಬಿ Updated:

ಅಕ್ಷರ ಗಾತ್ರ : | |

Prajavani

ಉಳಿ, ಚಾಣ ಹಿಡಿದು ಶ್ರಮಿಸುವ ಶಿಲ್ಪಿಯ ಕೈಚಳಕದಲ್ಲಿ ಮೂಡಿ ಬರುವ ಅದ್ಭುತ ಕುಸುರಿ ಕಲಾಕೃತಿಗಳುಳ್ಳ ಶಿಲ್ಪವನ್ನು ದೇವಾಲಯಗಳಲ್ಲಿ, ಮ್ಯೂಸಿಯಂನಲ್ಲಿ ನೋಡಿರುತ್ತೇವೆ. ಆದರೆ ಪ್ರಕೃತಿಯೇ ಶಿಲ್ಪಿಯ ಪಾತ್ರ ವಹಿಸಿ ನಿರ್ಮಿಸಿದ ಕಲಾಕೃತಿಯನ್ನು ನೋಡಬೇಕೆ?

ಹಾಗಾದರೆ, ನಮ್ಮ ನೆರೆಯ ರಾಜ್ಯ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಬೆಲಂ ಕೇವ್ಸ್ ಗೆ ಬನ್ನಿ. ಅಲ್ಲಿ, ಸುಣ್ಣದ ಕಲ್ಲಿನ ಪದರಗಳ ಮೇಲೆ ಸಹಸ್ರಾರು ವರ್ಷಗಳಿಂದ ತೊಟ್ಟಿಕ್ಕಿದ ನೀರಿನಿಂದಾಗಿ ಸೃಷ್ಟಿಯಾದ ನೈಸರ್ಗಿಕ ಗುಹೆಗಳಿವೆ. ಇವು ಭಾರತದಲ್ಲಿರುವ ಅತಿ ಉದ್ದದ ಗುಹೆಗಳ ಪಟ್ಟಿಗೆ ಸೇರಿವೆ. ಸಂಸ್ಕೃತ ಭಾಷೆಯಲ್ಲಿ ಗುಹೆ ಎಂಬ ಅರ್ಥವುಳ್ಳ ‘ಬಿಲಂ’ ಪದವು ತೆಲುಗು ಭಾಷೆಯಲ್ಲಿ 'ಬೆಲಂ ಗುಹಾಲು' ಆಗಿ, ಬ್ರಿಟಿಷರ ಪ್ರಭಾವದಿಂದಾಗಿ ‘ಬೆಲಂ ಕೇವ್ಸ್’ ಎಂಬ ಹೆಸರು ಪಡೆದಿವೆ.

ಬೆಲಂ ಗುಹೆಗಳು ಸುಮಾರು 3.5 ಕಿ.ಮೀ ಉದ್ದಕ್ಕೆ ಚಾಚಿಕೊಂಡಿವೆ. ಇದರಲ್ಲಿ 1.5 ಕಿ.ಮೀ ಉದ್ದದ ಜಾಗವನ್ನು ವೀಕ್ಷಿಸಲು ಪ್ರವಾಸಿಗರಿಗೆ ಹೋಗಲು ಸಾಧ್ಯವಾಗುವಂತೆ ಸಿದ್ಧಗೊಳಿಸಿದ್ದಾರೆ. ಗುಹೆಯಲ್ಲಿ ಅಲ್ಲಲ್ಲಿ ಹಲವಾರು ಸಣ್ಣ ಪುಟ್ಟ ಸುರಂಗಗಳಂತಹ ರಚನೆ ಇವೆಯಾದರೂ, ಅಲ್ಲಿಗೆ ಮನುಷ್ಯರು ಪ್ರವೇಶಿಸಲು ಸಾಧ್ಯವಿಲ್ಲ. ನೀರು ಮತ್ತು ಸುಣ್ಣದಕಲ್ಲಿನ ರಾಸಾಯನಿಕ ಪ್ರಕ್ರಿಯೆಯಿಂದ ನೈಸರ್ಗಿಕವಾಗಿ ಉಂಟಾಗುವ ಸ್ಟಾಲಕ್ಟೈಟ್ (Stalactite) ಮತ್ತು ಸ್ಟಾಲಗ್ಮೈಟ್ (Stalagmite) ಎಂಬ ಶಿಲಾರಚನೆಗಳನ್ನು ಹೊಂದಿದ ಈ ಗುಹೆಯನ್ನು ಉತ್ತಮ ಪ್ರವಾಸಿತಾಣವಾಗಿ ಆಧುನೀಕರಿಸಿದ್ದಾರೆ.

‘ಬೆಲಂ ಕೇವ್ಸ್’ ನ ಮುಖ್ಯದ್ವಾರದ ಶಾಂತಮೂರ್ತಿಯಾದ ಬುದ್ಧನ ಸುಂದರ ಪ್ರತಿಮೆ ಇದೆ. ಸಹಸ್ರಾರು ವರ್ಷಗಳ ಹಿಂದೆ ನೈಸರ್ಗಿಕವಾಗಿ ನಿರ್ಮಾಣಗೊಂಡ ಈ ಗುಹೆಯಲ್ಲಿ ಬೌದ್ಧ ಸನ್ಯಾಸಿಗಳು ವಾಸಿಸುತ್ತಿದ್ದರಂತೆ. ಹಾಗಾಗಿ ಗುಹೆಯ ಮುಖ್ಯದ್ವಾರದಲ್ಲಿ ಈ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಅಲ್ಲಿಂದ ಅನತಿ ದೂರದಲ್ಲಿ ಗುಹೆಗೆ ಇಳಿಯಲು ಮೆಟ್ಟಿಲುಗಳಿವೆ. ಈ ಗುಹೆಯು ಕೆಲವು ಕಡೆ ಮೆಟ್ರೊ ಸಬ್ ವೇ ಯಂತೆ ಅಗಲವಾಗಿದ್ದರೆ, ಇನ್ನು ಕೆಲವು ಕಡೆ ತೆವಳಿಕೊಂಡು ಹೋಗುವಷ್ಟು ಕಿರಿದಾಗಿದೆ.

ಅಲ್ಲಲ್ಲಿ ಗುಹೆಗಳ ಗೋಡೆಯಲ್ಲಿ ಭೀಮನ ಗಧೆ, ಮೊಸಳೆ, ಆನೆ, ಶಿವಲಿಂಗ, ಶಿರಡಿ ಬಾಬಾ, ಆಲದ ಮರ ಇತ್ಯಾದಿ ನಮ್ಮ ಕಲ್ಪನೆಯ ವಸ್ತು ಹಾಗೂ ವ್ಯಕ್ತಿಗಳನ್ನು ಹೋಲುವ ಆಕಾರಗಳಿವೆ. ಗುಹೆಯಲ್ಲಿ ಗಾಳಿ ಮತ್ತು ಬೆಳಕಿನ ವ್ಯವಸ್ಥೆ ಮಾಡಿರುವುದರಿಂದ ಸುರಕ್ಷಿತವಾಗಿ ಹೋಗಿ ಬರಬಹುದು. ಗುಹೆಯು ಕೆಲವು ಕಡೆ 120 ಅಡಿಯಷ್ಟು ಭೂಮಿಯ ಒಳಗೆ ಇಳಿಯಬಹುದು. ಗುಹೆಯ ಒಳಗೆ ಒಂದೆಡೆ ಸುಮಾರು 8 ಜನ ಕೂರಬಹುದಾದ ಕಟ್ಟೆಯಂತಹ ರಚನೆಯಿದೆ. ‘ಪಾತಾಳಗಂಗಾ‘ ಎಂದು ಕರೆಯುವ ಸ್ಥಳದಲ್ಲಿ ಸದಾ ನೀರಿನ ಸೆಲೆ ಹರಿಯುತ್ತಿರುತ್ತದೆ. ನಮ್ಮ ಗೈಡ್ ಹೇಳಿದ ಪ್ರಕಾರ ಬಹಳ ಹಿಂದೆ ಇಲ್ಲಿ ಚಿತ್ರಾವತಿ ಎಂಬ ನದಿ ಹರಿಯುತ್ತಿತ್ತಂತೆ. ಈಗ ನದಿ ಬತ್ತಿ ಹೋಗಿದೆ ಮತ್ತು ಗುಹೆಯ ಮೇಲ್ಭಾಗದಲ್ಲಿ ಕೃಷಿಭೂಮಿ ಸೃಷ್ಟಿಯಾಗಿದೆ. ಹನಿಯಾಗಿ ಭೂಮಿಗಿಳಿದ ಅಂತರ್ಜಲವು ಇಲ್ಲಿನ ಸುಣ್ಣಕಲ್ಲಿನೊಂದಿಗೆ ರಾಸಾಯನಿಕವಾಗಿ ಸಂಯೋಜನೆಗೊಂಡು, ಮಿಲಿಯಾಂತರ ವರ್ಷಗಳಲ್ಲಿ ಈಗ ನಮಗೆ ಕಾಣಿಸುವ ಗುಹೆಯಾಗಿ ರೂಪುಗೊಂಡಿದೆ.

ಭೂಮಿಯ ಒಡಲಲ್ಲಿ ಹೀಗೂ ಇರುತ್ತದೆಯೇ ಎಂಬ ಪುಳಕ ಕೊಡುವ ಸ್ಥಳವಿದು. ಬೆಲಂ ಕೇವ್ಸ್ ನಲ್ಲಿ ಪ್ರವಾಸ ಪ್ರಿಯರಿಗೆ ಭೂಗರ್ಭ ವಿಹಾರದ ಅನುಭೂತಿ ಹಾಗೂ ಪ್ರಾಕೃತಿಕ ಕೌತುಕಗಳನ್ನು ಅರಿಯುವ ಅವಕಾಶವಿದೆ. ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಬೆಲಂ ಕೇವ್ಸ್ ಸೂಕ್ತವೆನಿಸಬಹುದು.

ಇನ್ನೇನು ನೋಡಬಹುದು..

ಅನಂತಪುರ ಅಥವಾ ಅಹೋಬಲದಲ್ಲಿ ಒಂದು ದಿನದ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಂಡರೆ, ಅಂದಾಜು 80 ಕಿ.ಮೀ ಸುತ್ತಳತೆಯಲ್ಲಿರುವ ಯಾಗಂಟಿ, ಅಹೋಬಲದಲ್ಲಿರುವ ನವನಾರಸಿಂಹ ದೇವಾಲಯಗಳು, ತಾಡಪತ್ರಿ ದೇವಾಲಯ, ‘ಗೂಟಿ’ ಎಂಬಲ್ಲಿರುವ ಕೋಟೆ ಮೊದಲಾದ ಸ್ಥಳಗಳಿಗೂ ಭೇಟಿಕೊಡಬಹುದು. ಚಾರಣಾಸಕ್ತರು ‘ಅಹೋಬಲ’ದಲ್ಲಿ ‘ಜ್ವಾಲಾ ನರಸಿಂಹ’ ಗುಡಿಗೆ ಚಾರಣ ಮಾಡಬಹುದು.

ತಲುಪುವುದು ಹೇಗೆ

ಬೆಂಗಳೂರಿನಿಂದ ಬೆಲಂ ಕೇವ್ಸ್ ಗೆ ಅಂದಾಜು 300 ಕಿ.ಮೀ ದೂರವಿದೆ. ರೈಲು, ಬಸ್ಸು ಅಥವಾ ಖಾಸಗಿ ವಾಹನಗಳ ಮೂಲಕ, ಆಂಧ್ರಪ್ರದೇಶದ ಅನಂತಪುರದ ಮೂಲಕ ಬೆಲಂ ಕೇವ್ಸ್ ತಲಪಬಹುದು. ಗುಹೆ ಪ್ರವೇಶ ಶುಲ್ಕ ರೂ 50. ಹಣಕೊಟ್ಟು ಟಿಕೆಟ್ ಪಡೆದುಕೊಳ್ಳಬೇಕು.

ಊಟ–ವಸತಿ

ಊಟ – ಉಪಹಾರಕ್ಕೆ ಹೇಳಿಕೊಳ್ಳುವಂತಹ ವ್ಯವಸ್ಥೆ ಇಲ್ಲ. ಅಕ್ಕಪಕ್ಕದಲ್ಲಿ ಸಣ್ಣಪುಟ್ಟ ಹೋಟೆಲ್ ಗಳಿವೆಯಾದರೂ, ಊಟ, ವಸತಿಗೆ ಪ್ರವಾಸಿಗರೇ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು