ನವದೆಹಲಿ: ಲೆಬನಾನ್‌ನಾದ್ಯಂತ ಮತ್ತು ಸಿರಿಯಾದ ಕೆಲವೆಡೆ ಈಚೆಗೆ ಸಾವಿರಾರು ಪೇಜರ್‌ಗಳು ಸ್ಫೋಟಗೊಂಡ ಪರಿಣಾಮ ಹಲವು ಮಂದಿ ಮೃತಪಟ್ಟಿದ್ದು, 2,800ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚೀನಾ ನಿರ್ಮಿತ ಸಿಸಿಟಿವಿ ಕ್ಯಾಮೆರಾಗಳು ಸೇರಿದಂತೆ ಕಣ್ಗಾವಲು ಉಪಕರಣಗಳ ಮಾರಾಟಕ್ಕೆ ನಿರ್ಬಂಧ ಹೇರಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
ಕಣ್ಗಾವಲು ಉದ್ಯಮದಲ್ಲಿ ಸ್ಥಳೀಯ ಮಾರಾಟಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸರ್ಕಾರದ ಹೊಸ ಕಣ್ಗಾವಲು ನೀತಿಯು ಅಕ್ಟೋಬರ್ 8ರಂದು ಜಾರಿಗೆ ಬರುವ ಸಾಧ್ಯತೆಯಿದೆ. ಇದರಿಂದಾಗಿ ಚೀನಾ ನಿರ್ಮಿತ ಉಪಕರಣಗಳ ಮೇಲಿನ ಅವಲಂಬನೆಯನ್ನು ತಪ್ಪಿಸುವುದರ ಜತೆಗೆ ಸ್ವದೇಶಿ ಕಂಪನಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಮೂಲಗಳು ತಿಳಿಸಿವೆ.
‘ಭಾರತದ ಮಾರುಕಟ್ಟೆಯಲ್ಲಿ ಪ್ರಸ್ತುತ CP Plus, Hikvision ಮತ್ತು Dahua ಕಂಪನಿಗಳ ಉತ್ಪನ್ನಗಳಿಗೆ ಶೇ 60ರಷ್ಟು ಬೇಡಿಕೆ ಇದೆ. ಒಂದು ವೇಳೆ ವಿದೇಶಿ ನಿರ್ಮಿತ ಉಪಕರಣಗಳ ಮೇಲೆ ನಿರ್ಬಂಧ ವಿಧಿಸಿದ್ದೇ ಆದರೆ ಮಾರುಕಟ್ಟೆಯಲ್ಲಿ ಭಾರತದ ಸಿಸಿಟಿವಿ ಕಂಪನಿಯಾದ CP Plus ಉತ್ಪನ್ನದ ಬೇಡಿಕೆ ಹೆಚ್ಚಾಗಲಿದೆ. ಆದರೆ, ಚೀನಾ ನಿರ್ಮಿತ ಸಿಸಿಟಿವಿ ಕಂಪನಿಗಳಾದ Hikvision ಮತ್ತು Dahua ಉತ್ಪನ್ನಗಳಿಗೆ ಬೇಡಿಕೆ ಕುಸಿಯಲಿದೆ‘ ಎಂದು ಕೌಂಟರ್‌ಪಾಯಿಂಟ್ ರಿಸರ್ಚ್‌ನ ಸಂಶೋಧನಾ ವಿಶ್ಲೇಷಕ ವರುಣ್ ಗುಪ್ತಾ ಹೇಳಿದ್ದಾರೆ.
ಸಿಸಿಟಿವಿ ಕ್ಯಾಮೆರಾಗಳಿಂದ ಡೇಟಾ ಸೋರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಸಿಸಿಟಿವಿ ಕ್ಯಾಮೆರಾಗಳು ಸೂಕ್ಷ್ಮ ಸ್ಥಳಗಳು ಮತ್ತು ಜನರ ಚಲನವಲನಗಳನ್ನು ಪತ್ತೆಹಚ್ಚಲು ಸಹಾಯಕವಾಗಲಿವೆ ಎನ್ನಲಾಗಿದೆ.