ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿಗೆ ಧ್ರುವಪ್ರಭೆಯ ಮೆರುಗು

ಸೌರ ವಿದ್ಯಮಾನದ ಸಮಯ, ವೇಗ ನಿಖರವಾಗಿ ಅಂದಾಜು ಮಾಡಿದ್ದ ಭಾರತೀಯ ವಿಜ್ಞಾನಿಗಳು
Last Updated 4 ನವೆಂಬರ್ 2021, 22:30 IST
ಅಕ್ಷರ ಗಾತ್ರ

ನವದೆಹಲಿ: ಸೂರ್ಯನಲ್ಲಿ ಉಂಟಾಗಿದ್ದ ಸೌರಚಾಚಿಕೆಗಳಿಂದ ಭೂಮಿಯ ಉತ್ತರ ಧ್ರುವದ ಆಗಸದಲ್ಲಿ ‘ಧ್ರುವ ಪ್ರಭೆ’ ಉಂಟಾಗುವ ಸಮಯವನ್ನು ಭಾರತದ ವಿಜ್ಞಾನಿಗಳು ನಿಖರವಾಗಿ ಗುರುತಿಸಿದ್ದಾರೆ. ಆದರೆ ಅಮೆರಿಕದ ವಿಜ್ಞಾನಿಗಳು ಗುರುತಿಸಿದ್ದ ಸಮಯ ಮತ್ತು ಸೌರ ಮಾರುತದ ವೇಗವು ಭಾರಿ ವ್ಯತ್ಯಾಸವಾಗಿತ್ತು.

ಸೂರ್ಯನ ಮೇಲ್ಮೈನಲ್ಲಿ ಈಚೆಗೆ ಭಾರಿ ಪ್ರಬಲವಾದ ಸೌರ ಚಾಚಿಕೆ ಉಂಟಾಗಿತ್ತು. ಅದರ ಬೆನ್ನಲ್ಲೇ ಸೌರ ಮಾರುತ ಉಂಟಾಗಿತ್ತು. ಆ ಸೌರ ಮಾರುತವು ಭೂಮಿಯನ್ನು ತಲುಪುವುದು ಖಚಿತವಾಗಿತ್ತು. ಹೀಗಾಗಿ ವಿಶ್ವದಾದ್ಯಂತ ಖಗೋಳವಿಜ್ಞಾನಿಗಳು ಆ ಸೌರ ಮಾರುತವು ಭೂಮಿಯನ್ನು ತಲುಪುವ ಸಮಯವನ್ನು ಅಂದಾಜು ಮಾಡಿದ್ದರು.

ನವೆಂಬರ್ 4ರತಡರಾತ್ರಿ 2ರ ವೇಳೆಗೆ ಈ ಸೌರ ಮಾರುತವು ಭೂಮಿಯನ್ನು ತಲುಪಬಹುದು ಎಂದುಕೋಲ್ಕತ್ತಾದ ಭಾರತೀಯ ವಿಜ್ಞಾನ, ಶೈಕ್ಷಣಿಕ ಸಂಶೋಧನಾ ಸಂಸ್ಥೆಯ (ಐಐಎಸ್‌ಇಆರ್‌) ವಿಜ್ಞಾನಿಗಳು ಅಂದಾಜು ಮಾಡಿದ್ದರು. ಸೌರ ಮಾರುತದ ವೇಗವು ಪ್ರತಿ ಸೆಕೆಂಡ್‌ಗೆ 768 ಕಿ.ಮೀ. ಇರಲಿದೆ ಎಂದೂ ಅಂದಾಜಿಸಿದ್ದರು.

ನವೆಂಬರ್ 4ರ ಬೆಳಿಗ್ಗೆ 4.30ರ ವೇಳೆಗೆ, ಪ್ರತಿ ಸೆಕೆಂಡ್‌ಗೆ ಸುಮಾರು 700 ಕಿ.ಮೀ. ವೇಗದಲ್ಲಿ ಸೌರ ಮಾರುತವು ಭೂಮಿಯನ್ನು ತಲುಪಲಿದೆ ಎಂದುಅಮೆರಿಕದ ವಿಜ್ಞಾನಿಗಳು ಅಂದಾಜಿಸಿದ್ದರು.

ಆದರೆ, ವಾಸ್ತವದಲ್ಲಿ ಸೌರ ಮಾರುತವು ನವೆಂಬರ್ 4ರ ತಡರಾತ್ರಿ 1ರ ವೇಳೆಗೆ ಭೂಮಿಯನ್ನು ತಲುಪಿತು. ಪ್ರತಿ ಸೆಕೆಂಡ್‌ಗೆ 750-800 ಕಿ.ಮೀ. ವೇಗದಲ್ಲಿತ್ತು. ಭಾರತದ ವಿಜ್ಞಾನಿಗಳ ಅಂದಾಜು ವಾಸ್ತವಕ್ಕೆ ಹತ್ತಿರವಾಗಿತ್ತು.

ಸೌರಚಾಚಿಕೆ, ಸೌರಮಾರುತ ಮತ್ತು ಧ್ರುವಪ್ರಭೆಗಳು ಅತ್ಯಂತ ಸಂಕೀರ್ಣವಾದ ವಿದ್ಯಮಾನಗಳಾಗಿವೆ. ಕೃತಕ ಉಪಗ್ರಹಗಳು, ಸಾಗರದಾಳದ ಕೇಬಲ್‌ಗಳು, ವಿದ್ಯುತ್ ಗ್ರಿಡ್‌ಗಳು ಮತ್ತು ಮೊಬೈಲ್ ಗೋಪುರಗಳಿಗೆಪ್ರಬಲ ಸೌರ ಮಾರುತಗಳಿಂದ ಹಾನಿಯಾಗುತ್ತದೆ. ಹೀಗಾಗಿ ಸೌರ ಮಾರುತವು ಯಾವಾಗ ಭೂಮಿಯನ್ನು ತಲುಪುತ್ತದೆ ಎಂಬುದನ್ನು ಅಂದಾಜಿಸುವುದು ಅತ್ಯಂತ ಮಹತ್ವದ್ದು.

ದೀಪಾವಳಿ ಮಾರುತ:ಈ ರೀತಿಯ ಸೌರ ಮಾರುತಗಳಿಗೆ ಒಂದೊಂದು ಹೆಸರು ನೀಡಲಾಗುತ್ತದೆ. ಗುರುವಾರದ ಸೌರ ಮಾರುತಕ್ಕೆ ‘ದೀಪಾವಳಿ ಮಾರುತ’ ಎಂದು ನಾಮಕರಣ ಮಾಡಲಾಗಿದೆ.

2000ರಲ್ಲಿ ಸಂಭವಿಸಿದ್ದ ಸೌರ ಮಾರುತಕ್ಕೆ ‘ಬ್ಯಾಸ್ಟಿಲ್ ಡೇ ಸ್ಟಾರ್ಮ್’, 2003ರ ಸೌರ ಮಾರುತಕ್ಕೆ ‘ಹಾಲೋವಿನ್ ಡೇ ಸ್ಟಾರ್ಮ್’ ಮತ್ತು 2015ರ ಸೌರ ಮಾರುತಕ್ಕೆ ‘ಪ್ಯಾಟ್ರಿಕ್ಸ್ ಡೇ ಸ್ಟಾರ್ಮ್’ ಎಂದು ನಾಮಕರಣ ಮಾಡಲಾಗಿತ್ತು.

ಧ್ರುವ ಪ್ರದೇಶ ಬೆಳಗಿದ ಪ್ರಭೆ

ಸೌರ ಮಾರುತವು ಭೂಮಿಯನ್ನು ತಲುಪಿದಾಗ ಈ ಬಾರಿಧ್ರುವ ಪ್ರಭೆ ಕಾಣಿಸಿದೆ. ಭೂಮಿಯ ಉತ್ತರ ಧ್ರುವ ಮತ್ತು ಉತ್ತರ ಧ್ರುವಕ್ಕೆ ಸಮೀಪವಿರುವ ಅತಿ ಎತ್ತರದ ಪ್ರದೇಶಗಳಲ್ಲಿ ಧ್ರುವ ಪ್ರಭೆ ಗೋಚರಿಸಿದೆ.

ಸ್ಕಾಟ್‌ಲೆಂಡ್, ಐರ್ಲೆಂಡ್, ಕೆನಡಾ ಮತ್ತು ಅಮೆರಿಕದ ಉತ್ತರದ ರಾಜ್ಯಗಳಲ್ಲಿ ಧ್ರುವ ಪ್ರಭೆ ಗೋಚರಿಸಿದೆ. ಧ್ರುವ ಪ್ರಭೆಯ ಚಿತ್ರಗಳನ್ನು ಸೆರೆಹಿಡಿದಿರುವ ಜನರು, ಅವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT