ನವದೆಹಲಿ: ಕೇಂದ್ರ ಸರ್ಕಾರ ಹಿಂಪಡೆದಿರುವ ಕೃಷಿ ಕಾನೂನುಗಳನ್ನು ಮತ್ತೆ ಜಾರಿಗೆ ತರುವಂತೆ ಒತ್ತಾಯಿಸುವ ಮೂಲಕ ಬಾಲಿವುಡ್ ನಟಿ, ಲೋಕಸಭೆ ಬಿಜೆಪಿ ಸಂಸದೆ ಕಂಗನಾ ರನೌತ್ ಅವರು ಮತ್ತೊಂದು ಸುತ್ತಿನ ವಿವಾದಕ್ಕೆ ಅಡಿಯಿಟ್ಟಂತೆ ಕಾಣುತ್ತಿದೆ.
ಕೇಂದ್ರದ ಕೃಷಿ ಕಾನೂನುಗಳ ಕುರಿತು ಕಂಗನಾ ರನೌತ್ ಮಾತನಾಡಿರುವ ವಿಡಿಯೊವೊಂದು ‘ಎಕ್ಸ್’ನಲ್ಲಿ ಹರಿದಾಡುತ್ತಿದೆ. ಆದರೆ, ಇದು ಯಾವಾಗ ಮಾತನಾಡಿರುವ ವಿಡಿಯೊ ಎಂಬುದು ಸ್ಪಷ್ಟವಾಗಿಲ್ಲ.
‘ಕೇಂದ್ರ ಸರ್ಕಾರ ಹಿಂಪಡೆದಿರುವ ಕೃಷಿ ಕಾನೂನುಗಳನ್ನು ಮರಳಿ ಜಾರಿಗೆ ತರಬೇಕು. ನನ್ನ ಹೇಳಿಕೆ ವಿವಾದಾಸ್ಪದವಾಗಬಹುದು ಎಂದು ನಾನು ಭಾವಿಸುತ್ತೇನೆ. ರೈತರ ಹಿತಾಸಕ್ತಿಗೆ ಅನುಕೂಲವಾಗುವಂತಹ ಕೃಷಿ ಕಾನೂನುಗಳನ್ನು ಯಾವುದೇ ಅಡ್ಡಿಯಾಗದಂತೆ ಮತ್ತೆ ಜಾರಿಗೆ ತರುವಂತೆ ಒತ್ತಾಯಿಸುತ್ತೇನೆ’ ಎಂದು ಕಂಗನಾ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.
‘ರೈತರು ದೇಶದ ಅಭಿವೃದ್ಧಿಯಲ್ಲಿ ಆಧಾರ ಸ್ತಂಭವಾಗಿದ್ದಾರೆ. ಕೆಲವು ರಾಜ್ಯಗಳಲ್ಲಿ ಮಾತ್ರ ರೈತರು ಕೃಷಿ ಕಾನೂನುಗಳನ್ನು ವಿರೋಧಿಸಿದ್ದಾರೆ. ರೈತರ ಹಿತಾಸಕ್ತಿಗಾಗಿ ಕೃಷಿ ಕಾನೂನುಗಳನ್ನು ಮರಳಿ ಜಾರಿಗೆ ತರಬೇಕು ಎಂದು ನಾನು ಕೈ ಜೋಡಿಸಿ ಮನವಿ ಮಾಡುತ್ತೇನೆ’ ಎಂದು ಕಂಗನಾ ಹೇಳಿದ್ದಾರೆ. ಇದೇ ವಿಡಿಯೊವನ್ನು ಕಾಂಗ್ರೆಸ್ ಕೂಡ ‘ಎಕ್ಸ್’ನಲ್ಲಿ ಹಂಚಿಕೊಂಡಿದೆ.
ಸಂಸದೆಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ‘ಕೇಂದ್ರ ಸರ್ಕಾರ ಹಿಂಪಡೆದಿರುವ ಕೃಷಿ ಮಸೂದೆಗಳ ಕುರಿತು ಬಿಜೆಪಿ ಸಂಸದೆ ಕಂಗನಾ ರನೌತ್ ಮಾತನಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದು ಅವರ ವೈಯಕ್ತಿಕ ಹೇಳಿಕೆ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಕಂಗನಾ ಹೇಳಿಕೆ ಬಿಜೆಪಿ ಪಕ್ಷದ ಹೇಳಿಕೆಯಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.
‘ಕಂಗನಾ ರನೌತ್ ಅವರ ರೈತ ವಿರೋಧಿ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಸರ್ಕಾರದ ನೀತಿಗಳ ಕುರಿತು ಹೇಳಿಕೆ ನೀಡಲು ಕಂಗನಾ ಅವರಿಗೆ ಯಾವುದೇ ಅಧಿಕಾರವಿಲ್ಲ’ ಎಂದು ಭಾಟಿಯಾ ಸ್ಪಷ್ಟಪಡಿಸಿದ್ದಾರೆ.
BJP has once again said that the comments made by Kangana Ranaut are not a reflection of what the party’s stand is @DeccanHerald pic.twitter.com/9d3z3qLiNS
— amrita madhukalya (@visually_kei) September 24, 2024
ಕಂಗನಾ ರನೌತ್ ಅವರು ರೈತರ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೀಡಾಗುತ್ತಿರುವುದು ಇದೆ ಮೊದಲಲ್ಲ. ಈಚೆಗೆ ‘ದೇಶದ ನಾಯಕತ್ವವು ಬಲಿಷ್ಠವಾಗಿಲ್ಲದೆ ಇದ್ದಿದ್ದರೆ ರೈತರ ಪ್ರತಿಭಟನೆಯು ಬಾಂಗ್ಲಾದೇಶದಲ್ಲಿ ಸೃಷ್ಟಿಯಾದಂತಹ ಸನ್ನಿವೇಶವನ್ನು ಭಾರತದಲ್ಲಿಯೂ ಸೃಷ್ಟಿಸುತ್ತಿತ್ತು’ ಎಂದು ಹೇಳಿದ್ದರು. ಕಂಗನಾ ಆಡಿದ ವಿವಾದಾತ್ಮಕ ಮಾತುಗಳ ಬಗ್ಗೆ ಬಿಜೆಪಿ ಅಸಮ್ಮತಿ ವ್ಯಕ್ತಪಡಿಸಿತ್ತು.
Absolutely, my views on Farmers Laws are personal and they don’t represent party’s stand on those Bills. Thanks. https://t.co/U4byptLYuc
— Kangana Ranaut (@KanganaTeam) September 24, 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.