ನವದೆಹಲಿ: ಕ್ಯಾನ್ಸರ್ ಔಷಧಗಳು, ಭುಜಿಯಾ ಮತ್ತು ಮಿಕ್ಸ್ಚರ್‌ನಂತಹ ಕುರಕಲು ತಿಂಡಿಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳ ಸಂಶೋಧನಾ ನಿಧಿಗಳಿಗೆ ಜಿಎಸ್‌ಟಿ ಪಾವತಿಯಿಂದ ವಿನಾಯಿತಿ ನೀಡಲು ಜಿಎಸ್‌ಟಿ ಮಂಡಳಿ ಸೋಮವಾರ ನಿರ್ಧರಿಸಿದೆ.
ಪೊಟ್ಟಣಗಳಲ್ಲಿರುವ ಸಂಸ್ಕರಿತ ಕುರಕಲು ತಿಂಡಿಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಶೇ 18ರಿಂದ ಶೇ 12ಕ್ಕೆ ಇಳಿಸಲು ಹಾಗೂ ಕರಿಯದ ಅಥವಾ ಬೇಯಿಸದ ಕುರುಕಲು ತಿಂಡಿಗಳ ಮೇಲಿನ ಶೇ 5ರಷ್ಟು ಜಿಎಸ್‌ಟಿ ದರವನ್ನು ಮುಂದುವರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕ್ಯಾನ್ಸರ್‌ನ ಕೆಲವು ಔಷಧಿಗಳ ಮೇಲಿನ ಜಿಎಸ್‌ಟಿ ದರವನ್ನು ಶೇ 12ರಿಂದ ಶೇ 5ಕ್ಕೆ ಇಳಿಸಲು ನಿರ್ಧರಿಸಲಾಗಿದೆ.
ಕೌನ್ಸಿಲ್ ಸಭೆಯ ಬಳಿಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದರು.
ಕೇಂದ್ರ, ರಾಜ್ಯ ಸರ್ಕಾರಗಳ ಕಾನೂನುಗಳ ಅಡಿ ಸ್ಥಾಪನೆಯಾಗಿರುವ ಮತ್ತು ಆದಾಯ ತೆರಿಗೆ ವಿನಾಯಿತಿ ಪಡೆದಿರುವ ವಿಶ್ವವಿದ್ಯಾಲಯಗಳು, ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳಿಗೆ ಸಂಶೋಧನೆಗಾಗಿ ನೀಡಲಾದ ಅನುದಾನಕ್ಕೆ ಜಿಎಸ್‌ಟಿ ಪಾವತಿಸುವ ಅಗತ್ಯವಿಲ್ಲ ಎಂದು ಸಭೆ ನಿರ್ಧರಿಸಿದೆ ಎಂದು ಸಚಿವರು ತಿಳಿಸಿದರು.
ದೇಶದ ಏಳು ಪ್ರಮುಖ ಶೈಕ್ಷಣಿಕ ಸಂಸ್ಥೆಗಳು 2017ರಿಂದ ಪಡೆದ ಸಂಶೋಧನಾ ಅನುದಾನಗಳಿಗೆ ತೆರಿಗೆ ಪಾವತಿಸದ ಕಾರಣಕ್ಕೆ ಜಿಎಸ್‌ಟಿ ಮಹಾನಿರ್ದೇಶನಾಲಯ ಇತ್ತೀಚೆಗೆ ಷೋಕಾಸ್ ನೋಟಿಸ್ ನೀಡಿತ್ತು. ಐಐಟಿ ದೆಹಲಿ ₹ 120 ಕೋಟಿ ಪಾವತಿಸಬೇಕಿತ್ತು. ಇತರ ಸಂಸ್ಥೆಗಳು ₹ 5 ಕೋಟಿಯಿಂದ ₹ 60 ಕೋಟಿವರೆಗೆ ತೆರಿಗೆ ಪಾವತಿಸಬೇಕಿತ್ತು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿತ್ತು.
ಸಂಶೋಧನಾ ಅನುದಾನಗಳಿಗೆ ಸಂಬಂಧಿಸಿದಂತೆ ನೀಡಿರುವ ವಿನಾಯಿತಿಯಿಂದ ಸಂಶೋಧನಾ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಹೆಚ್ಚಿನ ನೆರವು ಹರಿದುಬರುವುದನ್ನು ಇದು ಖಾತರಿಪಡಿಸುತ್ತದೆ ಎಂದು ‘ಡೆಲಾಯ್ಟ್ ಇಂಡಿಯಾ’ದ ಪಾಲುದಾರ ಎಂ.ಎಸ್.ಮಣಿ ತಿಳಿಸಿದ್ದಾರೆ.
ವಿಮಾ ಪ್ರೀಮಿಯಂ ಮೇಲಿನ ತೆರಿಗೆ ಇಳಿಕೆಗೆ ಸಹಮತ
ನವದೆಹಲಿ: ಆರೋಗ್ಯ ವಿಮೆ ಹಾಗೂ ಜೀವ ವಿಮೆಗಳ ಪ್ರೀಮಿಯಂ ಮೇಲಿನ ಜಿಎಸ್‌ಟಿ ಪ್ರಮಾಣವನ್ನು ಈಗಿರುವ ಶೇಕಡ 18ಕ್ಕಿಂತ ಕಡಿಮೆ ಮಾಡಬೇಕು ಎಂಬ ವಿಚಾರವಾಗಿ ಜಿಎಸ್‌ಟಿ ಮಂಡಳಿಯಲ್ಲಿ ಬಹುತೇಕ ಸಹಮತ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿದೆ.
ಆದರೆ, ಈ ಕುರಿತ ಅಂತಿಮ ತೀರ್ಮಾನವನ್ನು ಜಿಎಸ್‌ಟಿ ಮಂಡಳಿಯ ಮುಂದಿನ ಸಭೆಯಲ್ಲಿ ಕೈಗೊಳ್ಳಲಾಗುತ್ತದೆ ಎಂದು ಗೊತ್ತಾಗಿದೆ. ಜಿಎಸ್‌ಟಿ ಮಂಡಳಿಯ ಸಭೆಯು ಸೋಮವಾರ ನಡೆಯಿತು.
ವಿಮಾ ಪ್ರೀಮಿಯಂಗಳ ಮೇಲಿನ ತೆರಿಗೆ ಪ್ರಮಾಣ ಕಡಿಮೆ ಮಾಡುವುದರ ಪರಿಣಾಮದ ಬಗ್ಗೆ ಫಿಟ್‌ಮೆಂಟ್ ಸಮಿತಿಯು ವರದಿಯೊಂದನ್ನು ಸಲ್ಲಿಸಿತು.
ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ಸಂಗ್ರಹವಾಗುತ್ತಿರುವ ವರಮಾನದ ಮೊತ್ತವು ತಿಂಗಳಿನಿಂದ ತಿಂಗಳಿಗೆ ಹೆಚ್ಚುತ್ತಿರುವ ಕಾರಣಕ್ಕೆ, ವಿಮಾ ಕಂತುಗಳ ಮೇಲಿನ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂಬ ವಿಚಾರದಲ್ಲಿ ಬಹುತೇಕ ರಾಜ್ಯಗಳು ಸಮ್ಮತಿ ವ್ಯಕ್ತಪಡಿಸಿವೆ ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.