ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಶಿಫಾರಸಿಗೆ ರಾಮನಾಥ ಕೋವಿಂದ್ ಸಹಿ

ಸುಪ್ರೀಂ ಮೊರೆಹೊಕ್ಕ ಶಿವಸೇನಾ
Last Updated 12 ನವೆಂಬರ್ 2019, 12:16 IST
ಅಕ್ಷರ ಗಾತ್ರ

ನವದೆಹಲಿ/ಮುಂಬೈ:ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ರಾಜ್ಯಪಾಲಭಗತ್ ಸಿಂಗ್ ಕೋಶಿಯಾರ್ ಮತ್ತು ಕೇಂದ್ರ ಸಚಿವ ಸಂಪುಟ ಮಾಡಿರುವ ಶಿಫಾರಸಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಸಹಿ ಹಾಕಿದ್ದಾರೆ. ಇದರೊಂದಿಗೆ ಮಂಗಳವಾರ ಸಂಜೆಯಿಂದರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದಿದೆ.

ಬಿಜೆಪಿ–ಶಿವಸೇನಾ ಮೈತ್ರಿ ಮುರಿದುಬಿದ್ದ ಬಳಿಕ ಮಹಾರಾಷ್ಟ್ರ ರಾಜಕೀಯ ಹಲವು ತಿರುವುಗಳನ್ನು ಕಂಡಿತ್ತು.ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಕೇಂದ್ರ ಸಚಿವ ಸಂಪುಟ ಬುಧವಾರ ಮಧ್ಯಾಹ್ನ ಶಿಫಾರಸು ಮಾಡಿತ್ತು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. 11ನೇ ಬ್ರಿಕ್ಸ್‌ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮೋದಿಯವರು ಬ್ರೆಜಿಲ್‌ಗೆ ತೆರಳುವುದಕ್ಕೂ ಕೆಲವೇ ಕ್ಷಣಗಳ ಮುನ್ನ ಸಚಿವ ಸಂಪುಟ ಸಭೆ ನಡೆದಿತ್ತು.

ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರ್ ಅವರು ರಾಜ್ಯ ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿ ಸಲ್ಲಿಸಿದ ವರದಿಯ ಆಧಾರದಲ್ಲಿ ಸಚಿವ ಸಂಪುಟ ತೀರ್ಮಾನ ಕೈಗೊಂಡಿತ್ತು

ರಾಜ್ಯಪಾಲರಿಂದಲೂಶಿಫಾರಸು:ಸಂವಿಧಾನದ ಆಶಯಗಳ ಪ್ರಕಾರ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕಷ್ಟಸಾಧ್ಯ ಎಂದು ಕಂಡುಬಂದಿದೆ. ಹೀಗಾಗಿ ಸಂವಿಧಾನದ 356ನೇ ವಿಧಿಯ ಅನ್ವಯ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿ ಪತ್ರ ಕಳುಹಿಸಲಾಗಿದೆ ಎಂದು ರಾಜಭವನದ ಪ್ರಕಟಣೆ ತಿಳಿಸಿತ್ತು.

ಶಿವಸೇನಾ ಸುಪ್ರೀಂಗೆ ಮೊರೆ

ಸರ್ಕಾರ ರಚನೆಗೆ ಅವಕಾಶ ನೀಡದ್ದರ ವಿರುದ್ಧ ನಾವು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇವೆ. ಹಿರಿಯ ವಕೀಲ ಕಪಿಲ್ ಸಿಬಲ್ ನಮ್ಮ ಪರ ವಾದ ಮಂಡಿಸಲಿದ್ದಾರೆ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಆಪ್ತ ಅನಿಲ್ ಪರಬ್ ತಿಳಿಸಿದ್ದಾರೆ.

ಸರ್ಕಾರ ರಚನೆಗೆ ಸತತ ಯತ್ನ ನಡೆಸಿದ್ದ ಶಿವಸೇನಾ

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ 56 ಸದಸ್ಯರನ್ನು ಹೊಂದಿ ಎರಡನೇ ಅತಿದೊಡ್ಡ ಪಕ್ಷವಾಗಿರುವ ಶಿವಸೇನಾವನ್ನು ಸರ್ಕಾರ ರಚಿಸಲು ರಾಜ್ಯಪಾಲರು ಭಾನುವಾರ ಸಂಜೆ ಆಹ್ವಾನಿಸಿದ್ದರು. ಸೋಮವಾರ ಸಂಜೆ 7.30ರವರೆಗೆ ಈ ಪಕ್ಷಕ್ಕೆ ಗಡುವು ನೀಡಲಾಗಿತ್ತು. ಸರ್ಕಾರ ರಚನೆಯ ಹಕ್ಕು ಮಂಡಿಸಲು 105 ಸದಸ್ಯರನ್ನು ಹೊಂದಿರುವ ಬಿಜೆಪಿ ನಿರಾಕರಿಸಿದ ಬಳಿಕ ಸೇನಾವನ್ನು ಆಹ್ವಾನಿಸಲಾಗಿತ್ತು.

98 ಸದಸ್ಯರನ್ನು ಹೊಂದಿರುವ ಎನ್‌ಸಿಪಿ–ಕಾಂಗ್ರೆಸ್‌ ಮೈತ್ರಿಕೂಟದ ಬೆಂಬಲ ಪಡೆಯುವ ಪ್ರಯತ್ನವನ್ನು ಉದ್ಧವ್‌ ಮಾಡಿದ್ದಾರೆ. ಬೆಂಬಲ ನೀಡಬೇಕಿದ್ದರೆ ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಸೇನಾ ಹೊರಕ್ಕೆ ಬರಬೇಕು ಎಂಬ ಷರತ್ತನ್ನು ಎನ್‌ಸಿಪಿ ಒಡ್ಡಿತ್ತು. ಅದರಂತೆ, ಕೇಂದ್ರದಲ್ಲಿ ಸಚಿವರಾಗಿರುವ ಸೇನಾದ ಅರವಿಂದ್‌ ಸಾವಂತ್ ಅವರು ಸೋಮವಾರ ರಾಜೀನಾಮೆ ನೀಡಿದ್ದರು.

ಎನ್‌ಸಿಪಿ–ಕಾಂಗ್ರೆಸ್‌ ಬೆಂಬಲದಲ್ಲಿ ಶಿವಸೇನಾ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದೇ ಬಿಡುತ್ತದೆ ಎಂಬ ಸನ್ನಿವೇಶ ಸೋಮವಾರ ಸಂಜೆ ಸೃಷ್ಟಿಯಾಗಿತ್ತು. ಆದರೆ, ಬೆಂಬಲ ನೀಡುವುದಕ್ಕೆ ಸಂಬಂಧಿಸಿ ಎನ್‌ಸಿಪಿ ಜತೆಗೆ ಇನ್ನಷ್ಟು ಮಾತುಕತೆ ನಡೆಸಬೇಕಿದೆ ಎಂದು ಕಾಂಗ್ರೆಸ್‌ ಹೇಳಿತ್ತು.

ಈ ಎಲ್ಲ ಬೆಳವಣಿಗೆಗಳ ನಡುವೆ ಶಿವಸೇನಾಗೆ ನೀಡಿದ್ದ ಗಡುವನ್ನು ವಿಸ್ತರಿಸಲು ಒಪ್ಪದ ರಾಜ್ಯಪಾಲರು ಮೂರನೇ ಅತಿದೊಡ್ಡ ಪಕ್ಷ ಎನ್‌ಸಿಪಿಯನ್ನು ಸರ್ಕಾರ ರಚನೆಗೆ ಆಹ್ವಾನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT