ಕೋಲ್ಕತ್ತ: ನಗರದ ಸರ್ಕಾರಿ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಬಳಿ ನಿಯೋಜಿಸಲಾದ ಸಿಐಎಸ್‌ಎಫ್ ಸಿಬ್ಬಂದಿಗೆ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಕ್ತ ರೀತಿಯಲ್ಲಿ ವಸತಿ ಮತ್ತು ಮೂಲ ಸೌಕರ್ಯಗಳನ್ನು ಒದಗಿಸಿಲ್ಲ ಎಂದು ಆರೋಪಿಸಿ ಗೃಹ ಸಚಿವಾಲಯವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಸಿಐಎಸ್‌ಎಫ್ ಸಿಬ್ಬಂದಿಗೆ ಮೂಲ ಸೌಕರ್ಯಗಳನ್ನು ಒದಗಿಸದಿದ್ದರೆ ಪಶ್ಚಿಮ ಬಂಗಾಳದ ಸರ್ಕಾರಿ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಗೃಹ ಸಚಿವಾಲಯವು ಮನವಿ ಮಾಡಿದೆ.
Ministry of Home Affairs files application in the #RGKARmedical suo Motu case before #SupremeCourt stating that CISF personnel do not have proper accommodation & basic facilities and if requests are not met then contempt action be initiated against state govt officials @HMOIndia pic.twitter.com/FuIRPFAwtV
— Bar and Bench (@barandbench) September 3, 2024
ಆಗಸ್ಟ್ 9ರಂದು ಕೋಲ್ಕತ್ತದ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿಯೊಬ್ಬಳ ಮೇಲಿನ ಅತ್ಯಾಚಾರ ಮತ್ತು ಕೊಲೆ ಘಟನೆ ಬಳಿಕ ರಾಜ್ಯದಾದ್ಯಂತ ಆಕ್ರೋಶ ಭುಗಿಲೆದ್ದಿತ್ತು.
ಅತ್ಯಾಚಾರ ವಿರೋಧಿ ಮಸೂದೆ: ಸರ್ವಾನುಮತದ ಅಂಗೀಕಾರ
ಅತ್ಯಾಚಾರ ಸೇರಿದಂತೆ ಇತರ ಲೈಂಗಿಕ ಅಪರಾಧಗಳ ವಿರುದ್ಧ ಮಹಿಳೆ ಮತ್ತು ಮಕ್ಕಳಿಗೆ ರಕ್ಷಣೆಯನ್ನು ಮತ್ತಷ್ಟು ಹೆಚ್ಚಿಸುವ ಮಸೂದೆಯನ್ನು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮಂಗಳವಾರ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಅತ್ಯಾಚಾರಕ್ಕೆ ಒಳಗಾದ ಮಹಿಳೆ ಸಾವನ್ನಪಿದಲ್ಲಿ ಅಥವಾ ಪ್ರಜ್ಞಾಹೀನ ಸ್ಥಿತಿ ತಲುಪಿದಲ್ಲಿ, ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಅವಕಾಶವನ್ನು ಮಸೂದೆ ಒಳಗೊಂಡಿದೆ. ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ವ್ಯಕ್ತಿಗೆ ಪೆರೋಲ್ ರಹಿತ ಜೀವಾವಧಿ ಶಿಕ್ಷೆ ನೀಡುವ ಅವಕಾಶವನ್ನೂ ಹೊಂದಿದೆ.
ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಆಕೆಯ ಕೊಲೆ ಹಿನ್ನೆಲೆಯಲ್ಲಿ, ಎರಡು ದಿನಗಳ ವಿಶೇಷ ಅಧಿವೇಶವನ್ನು ಕರೆಯಲಾಗಿತ್ತು. ಕಾನೂನು ಸಚಿವ ಮಲಯ್ ಘಟಕ್ ಅವರು ‘ಅಪರಾಜಿತ ಮಹಿಳೆ ಮತ್ತು ಮಕ್ಕಳ (ಪಶ್ಚಿಮ ಬಂಗಾಳ ಕ್ರಿಮಿನಲ್ ಕಾಯ್ದೆಗಳು ಮತ್ತು ತಿದ್ದುಪಡಿ) ಮಸೂದೆ,2024’ ಅನ್ನು ಮಂಡಿಸಿದರು.
ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು ಮಸೂದೆಯಲ್ಲಿ ಕೆಲ ತಿದ್ದುಪಡಿಗಳನ್ನು ಸೂಚಿಸಿದರು. ವಿಪಕ್ಷ ನಾಯಕ ಅಧಿಕಾರಿ ಸೂಚಿಸಿದ ತಿದ್ದುಪಡಿಗಳನ್ನು ಸರ್ಕಾರ ತಿರಸ್ಕರಿಸಿದೆ. ಹೀಗಾಗಿ ಈ ಮಸೂದೆಯು ಒಂದು ಕಣ್ಣೊರೆಸುವ ತಂತ್ರವಷ್ಟೆ ಎಂಬುದಾಗಿ ವಿರೋಧ ಪಕ್ಷಗಳ ಶಾಸಕರ ಆಕ್ಷೇಪಿಸಿದರು. ಅವುಗಳನ್ನು ಲೆಕ್ಕಿಸದೇ, ಮಸೂದೆಯನ್ನು ಅಂಗೀಕರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.