ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಕೋವಿಡ್ ಆತಂಕ:ರಾಜ್ಯಗಳಿಗೆ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಆರೋಗ್ಯ ಸಚಿವಾಲಯ

Published 18 ಡಿಸೆಂಬರ್ 2023, 14:17 IST
Last Updated 18 ಡಿಸೆಂಬರ್ 2023, 14:17 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕೋವಿಡ್-19 ಪ್ರಕರಣಗಳ ಹೆಚ್ಚಳ ಮತ್ತು ಕೊರೊನಾ ವೈರಾಣುವಿನ ಜೆಎನ್‌.1 ಉಪತಳಿಯ ಮೊದಲ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೋವಿಡ್‌ ಪರಿಸ್ಥಿತಿಯ ಮೇಲೆ ನಿರಂತರ ನಿಗಾ ಇರಿಸಲು ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದೆ.

ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆ ಆಗಿದೆ. ಕೊರೊನಾ ವೈರಾಣುವಿನ ಜೆಎನ್‌.1 ಉಪತಳಿಯ ಮೊದಲ ಪ್ರಕರಣ ಕೇರಳದಲ್ಲಿ ಡಿಸೆಂಬರ್‌ 8ರಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಕೇಂದ್ರ ಆರೋಗ್ಯ ಕಾರ್ಯದರ್ಶಿ ಸುಧಾಂಶ್‌ ಪಂತ್‌ ಅವರು ಸೋಮವಾರ ಎಲ್ಲ ರಾಜ್ಯಗಳಿಗೆ ಪತ್ರ ಬರೆದಿದ್ದಾರೆ. 

ಕ್ರಿಸ್‌ಮಸ್‌ ಮತ್ತು ಹೊಸ ವರ್ಷಾಚರಣೆ ಹತ್ತಿರ ಬರುತ್ತಿರುವುದರಿಂದ ಸೋಂಕು ಪ್ರಸರಣ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸನ್ನದ್ಧತೆಯ ಬಗ್ಗೆ ಪರಿಶೀಲಿಸಬೇಕು ಎಂದು ಪತ್ರದಲ್ಲಿ ಹೇಳಲಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯವು ಕೋವಿಡ್‌–19 ಸಂಬಂಧ ಈ ಹಿಂದೆ ಹೊರಡಿಸಿದ್ದ ಪರಿಷ್ಕೃತ ಕಣ್ಗಾವಲು ಮತ್ತು ಕಾರ್ಯತಂತ್ರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಮನ್ವಯದ ಕ್ರಮಗಳಿಂದಾಗಿ, ಕೋವಿಡ್‌ ಪ್ರಸರಣವನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗಿದೆ. ಆದರೂ ಕಳೆದ ಕೆಲವು ದಿನಗಳಿಂದ ಪ್ರಕರಣಗಳಲ್ಲಿ ಏರಿಕೆಯಾಗಿರುವುದರಿಂದ ಹೆಚ್ಚಿನ ನಿಗಾ ಅಗತ್ಯ ಎಂದು ಪಂತ್‌ ಹೇಳಿದ್ದಾರೆ. 

ಜೆಎನ್‌.1 ಉಪತಳಿಯ ಪ್ರಕರಣಗಳು ಭಾರತ ಅಲ್ಲದೆ ಅಮೆರಿಕ, ಚೀನಾ, ಸಿಂಗಪುರದಲ್ಲಿ ಕೂಡ ಪತ್ತೆಯಾಗಿವೆ. 

260 ಹೊಸ ಪ್ರಕರಣ: ದೇಶದಲ್ಲಿ ಕೋವಿಡ್‌ನ 260 ಹೊಸ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,828ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಪ್ರಮುಖ ಸಲಹೆಗಳು...

* ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುವುದನ್ನು ಮುಂಚಿತವಾಗಿಯೇ ಗುರುತಿಸಲು ಶೀತ ಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್‌ಐ) ಮತ್ತು ತೀವ್ರ ಉಸಿರಾಟದ ಸಮಸ್ಯೆ (ಎಸ್‌ಎಆರ್‌ಐ) ಪ್ರಕರಣಗಳ ಜಿಲ್ಲಾವಾರು ಮಾಹಿತಿಯನ್ನು ನಿಯಮಿತವಾಗಿ ವರದಿ ಮಾಡಬೇಕು.

* ಕೋವಿಡ್-19 ಪರೀಕ್ಷಾ ಮಾರ್ಗಸೂಚಿಗಳ ಪ್ರಕಾರ ಎಲ್ಲಾ ಜಿಲ್ಲೆಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಬೇಕು.

* ಆರ್‌ಟಿಪಿಸಿಆರ್‌ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಿ, ಪಾಸಿಟಿವ್‌ ಕಂಡುಬಂದ ಮಾದರಿಯನ್ನು ‘ಜೆನೋಮ್‌ ಸೀಕ್ವೆನ್ಸಿಂಗ್‌’ ಪ್ರಯೋಗಾಲಯಗಳಿಗೆ ಕಳುಹಿಸಬೇಕು.

* ಸಮುದಾಯ ಜಾಗೃತಿ ಕಾರ್ಯಕ್ರಮಗಳ ಮೂಲಕ ಕೋವಿಡ್‌ ನಿಯಂತ್ರಣಕ್ಕೆ
ಜನರ ನಿರಂತರ ಬೆಂಬಲ ಖಾತರಿಪಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT