ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ: ಬಿಜೆಪಿ ಮುನ್ನಡೆ, ಕಾಂಗ್ರೆಸ್‌ಗೆ ಹಿನ್ನಡೆ

Last Updated 6 ನವೆಂಬರ್ 2022, 20:22 IST
ಅಕ್ಷರ ಗಾತ್ರ

ನವದೆಹಲಿ: ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಭಾನುವಾರ ಪ್ರಕಟವಾಗಿದೆ. ಇದ್ದ ಎರಡು ಕ್ಷೇತ್ರಗಳನ್ನು ಕಳೆದುಕೊಂಡಿರುವ ಕಾಂಗ್ರೆಸ್‌ ಹಿನ್ನಡೆ ಅನುಭವಿಸಿದೆ. ಬಿಜೆಪಿ ನಾಲ್ಕು ಕ್ಷೇತ್ರಗಳಲ್ಲಿ ಗೆದ್ದರೆ, ಬಿಆರ್‌ಎಸ್‌, ಆರ್‌ಜೆಡಿ ಮತ್ತು ಶಿವಸೇನಾ (ಠಾಕ್ರೆ ಬಣ) ತಲಾ ಒಂದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.

ಚುನಾವಣೆ ನಡೆದ ಏಳು ಕ್ಷೇತ್ರಗಳ ಪೈಕಿ ಮೂರರಲ್ಲಿ ಬಿಜೆಪಿ ಶಾಸಕರಿದ್ದರು. ಆದರೆ, ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಮುನ್ನಡೆ ಸಾಧಿಸಿದೆ.

ಭಾರಿ ಕುತೂಹಲ ಕೆರಳಿಸಿದ್ದ ತೆಲಂಗಾಣದ ಮುನುಗೋಡು ಕ್ಷೇತ್ರದಲ್ಲಿ ಬಿಆರ್‌ಎಸ್‌ ಗೆದ್ದಿದೆ. ಕಾಂಗ್ರೆಸ್‌ನಿಂದ ಗೆದ್ದು ಬಿಜೆಪಿಗೆ ಸೇರಿದ್ದ ಕೊಮಟಿರೆಡ್ಡಿ ರಾಜಗೋಪಾಲ ರೆಡ್ಡಿ ಅವರನ್ನು ಬಿಆರ್‌ಎಸ್‌ನ ಕೆ. ಪ್ರಭಾಕರ ರೆಡ್ಡಿ ಅವರು 10,113 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇಲ್ಲಿ ತೀರಾ ಜಿದ್ದಾಜಿದ್ದಿನ ಚುನಾವಣಾ ಪ್ರಚಾರ ನಡೆದಿತ್ತು.

ಕಾಂಗ್ರೆಸ್‌ನ ಸ್ಥಿತಿ ಹೀನಾಯವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಪಲವಿ ಸ್ರಾವಂತಿ ರೆಡ್ಡಿ ಅವರು ಮೂರನೇ ಸ್ಥಾನ ಪಡೆದರೂ ಅವರಿಗೆ ಠೇವಣಿ ಉಳಿಸಿಕೊಳ್ಳುವಷ್ಟು ಮತಗಳೂ ಸಿಕ್ಕಿಲ್ಲ.

ಉಪಚುನಾವಣೆಗಳು ನಡೆದಂತೆ ಕಾಂಗ್ರೆಸ್ ಸ್ಥಾನಗಳನ್ನು ಕಳೆದುಕೊಳ್ಳುತ್ತಲೇ ಹೋಗುತ್ತಿದೆ. ಬಿಜೆಪಿಯ ಸ್ಥಿತಿ ಉತ್ತಮಗೊಳ್ಳುತ್ತಿದೆ. ಹೀಗಾಗಿ, ಮುಖ್ಯ ವಿರೋಧ ಪಕ್ಷವಾಗಿ ಕಾಂಗ್ರೆಸ್‌ ಉಳಿಯುವುದು ಕಷ್ಟ ಎನ್ನುವಂತಾಗಿದೆ.

ಹರಿಯಾಣದ ಆದಂಪುರ ಕ್ಷೇತ್ರದಲ್ಲಿ ಬಿಜೆಪಿಯ ಭವ್ಯ ಬಿಷ್ಣೋಯಿ ಅವರು ಗೆಲುವು ಕಂಡಿದ್ದಾರೆ. ಬಿಷ್ಣೋಯಿ ಅವರು ಹರಿಯಾಣದ ಮಾಜಿ ಮುಖ್ಯಮಂತ್ರಿ ಭಜನ್‌ಲಾಲ್‌ ಅವರ ಮೊಮ್ಮಗ. ಕಾಂಗ್ರೆಸ್‌ ನಾಯಕ ಭೂಪೇಂದ್ರ ಹೂಡ ಅವರಿಗೆ ಇದೊಂದು ಹಿನ್ನಡೆ ಎನ್ನಲಾಗಿದೆ. ಕಾಂಗ್ರೆಸ್‌ನಲ್ಲಿದ್ದ ಬಿಷ್ಣೋಯಿ ಅವರು ಪಕ್ಷ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ್ದರು.

ಎನ್‌ಡಿಎಯಿಂದ ಜೆಡಿಯು ಹೊರಬಂದ ಬಳಿಕ ಬಿಹಾರದಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಮೋಕಾಮಾದಲ್ಲಿ ಆರ್‌ಜೆಡಿಗೆ ಗೆಲುವು ಸಿಕ್ಕಿದೆ. ಈ ಹಿಂದೆಯೂ ಈ ಕ್ಷೇತ್ರವನ್ನು ಆರ್‌ಜೆಡಿ ಪ್ರತಿನಿಧಿಸಿತ್ತು. ಶಸ್ತ್ರಾಸ್ತ್ರ ಕಾಯ್ದೆಯಡಿ ತಪ್ಪಿತಸ್ಥರಾದ ಅನಂತ್‌ ಸಿಂಗ್‌ ಅವರು ಅನರ್ಹರಾದ ಕಾರಣದಿಂದ ಇಲ್ಲಿ ಉಪಚುನಾವಣೆ ನಡೆದಿದೆ. ಅನಂತ್ ಅವರ ಹೆಂಡತಿ ನೀಲಂ ಸಿಂಗ್ ಅವರು ಇಲ್ಲಿ ಗೆದ್ದಿದ್ದಾರೆ. ಆದರೆ, ಅವರ ಗೆಲುವಿನ ಅಂತರ ಕಳೆದ ಬಾರಿಗಿಂತ ಬಹಳ ಕಡಿಮೆ ಇದೆ. ಕಳೆದ ಬಾರಿ 35,757 ಮತಗಳ ಅಂತರದಿಂದ ಆರ್‌ಜೆಡಿ ಗೆದ್ದಿತ್ತು. ಈ ಬಾರಿ ಅದು 16,741ಕ್ಕೆ ಇಳಿದಿದೆ.

ಬಿಹಾರದ ಗೋಪಾಲ್‌ಗಂಜ್ ಕ್ಷೇತ್ರದಲ್ಲಿ ಬಿಜೆಪಿಗೆ ಜಯ ಸಿಕ್ಕಿದೆ. ಬಿಜೆಪಿಯ ಕುಸುಮ್ ದೇವಿ ಎದುರು ಆರ್‌ಜೆಡಿಯ ಮೋಹನ್‌ ಗುಪ್ತಾ ಅವರು 1,794 ಮತಗಳ ಅಂತರದಿಂದ ಸೋತಿದ್ದಾರೆ. ಬಿಎಸ್‌ಪಿ ಮತ್ತು ಎಐಎಂಐಎಂ ಅಭ್ಯರ್ಥಿಗಳು ಕಣದಲ್ಲಿ ಇದ್ದರು. ಈ ಇಬ್ಬರಿಗೆ ಒಟ್ಟು ಸುಮಾರು 20 ಸಾವಿರ ಮತಗಳು ಸಿಕ್ಕಿವೆ.

ಉತ್ತರ ಪ್ರದೇಶದ ಗೋಲ ಗೋರಖನಾಥ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡಿದೆ. ಬಿಜೆಪಿಯ ಅನಂತ್‌ ಗಿರಿ ಅವರ ನಿಧನದಿಂದ ತೆರವಾಗಿದ್ದ ಕ್ಷೇತ್ರದಲ್ಲಿ ಅವರ ಮಗ ಅಮನ್‌ ಗಿರಿ ಗೆದ್ದಿದ್ದಾರೆ. ಒಡಿಶಾದ ಧಾಮ್‌ನಗರ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡಿದೆ. ಬಿಜೆಪಿಯ ಸೂರ್ಯವಂಶಿ ಸೂರಜ್‌ ಅವರು 9,881 ಅಂತರದಲ್ಲಿ ಗೆದ್ದಿದ್ದಾರೆ.

*
ಇದು ಹೋರಾಟದ ಆರಂಭ ಮಾತ್ರ. ಚಿಹ್ನೆಯು ಮುಖ್ಯವೇ ಆದರೂ ಜನರು ವ್ಯಕ್ತಿತ್ವವನ್ನೂ ನೋಡುತ್ತಾರೆ. ಜನಬೆಂಬಲವಿದೆ ಎಂಬುದನ್ನು ಫಲಿತಾಂಶವು ತೋರಿಸಿಕೊಟ್ಟಿದೆ
-ಉದ್ಧವ್‌ ಠಾಕ್ರೆ, ಶಿವಸೇನಾ (ಉದ್ಧವ್‌ ಬಾಳಾಸಾಹೇಬ್‌ ಠಾಕ್ರೆ) ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT