ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಖಂಡ್: ಎಂಜಿನಿಯರಿಂಗ್‌ನಿಂದ ರಾಜಕಾರಣಕ್ಕೆ ಬಂದಿದ್ದ ಹೇಮಂತ್ ಸೊರೇನ್

Last Updated 24 ಡಿಸೆಂಬರ್ 2019, 5:03 IST
ಅಕ್ಷರ ಗಾತ್ರ

ರಾಂಚಿ: ಜಾರ್ಖಾಂಡ್‌ನ ಅತ್ಯಂತ ಕಿರಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಹೇಮಂತ್ ಸೊರೇನ್ (44), ಈಗ ಪುನಃ ರಾಜ್ಯದ ಮುಖ್ಯಮಂತ್ರಿಯಾಗುವ ಹಾದಿಯಲ್ಲಿದ್ದಾರೆ.

ಆಗಷ್ಟೇ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಹೇಮಂತ್ ಸೊರೇನ್ ಎದುರು ಎರಡು ಆಯ್ಕೆಗಳಿದ್ದವು. ಪ್ರತ್ಯೇಕ ಜಾರ್ಖಂಡ್‌ ರಾಜ್ಯಕ್ಕಾಗಿ ಹೋರಾಡುತ್ತಿದ್ದ ತಮ್ಮ ತಂದೆ ಶಿಬು ಸೊರೇನ್ ಜತೆ ರಾಜಕೀಯಕ್ಕೆ ಇಳಿಯುವುದು ಮತ್ತು ರಾಂಚಿಯ ಬಿರ್ಲಾ ತಾಂತ್ರಿಕ ವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಗೆ ಸೇರುವುದು.

ಶಿಬು ಮತ್ತು ರಿಪುಸೊರೇನ್ ದಂಪತಿಯ ಮೊದಲ ಮಗ ದುರ್ಗಾ ಸೊರೇನ್ ಅವರು, ಅವಿಭಜಿತ ಬಿಹಾರದಲ್ಲಿ ಶಾಸಕರಾಗಿದ್ದರು. ಹೀಗಾಗಿ ಹೇಮಂತ್ ಎಂಜಿನಿಯರ್‌ ಆಗಬೇಕು ಎಂಬುದು ಸೊರೇನ್ ದಂಪತಿಯ ಆಯ್ಕೆಯಾಗಿತ್ತು. ಪೋಷಕರ ಇಚ್ಛೆಯಂತೆ ಹೇಮಂತ್‌ ಎಂಜಿನಿಯರಿಂಗ್ ಪದವಿಗೆ ಸೇರಿದರೂ ಅದನ್ನು ಪೂರ್ಣಗೊಳಿಸಲು ಆಗಲಿಲ್ಲ.

2005ರಲ್ಲಿ ದುಮಕಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದು, ಸೋಲು ಅನುಭವಿಸಿದರು. ಇನ್ನೇನು ಅಧಿಕಾರ ರಾಜಕಾರಣದಿಂದ ದೂರ ಸರಿಯಬೇಕು ಎಂಬ ಚಿಂತನೆಯಲ್ಲಿದ್ದಾಗ, 2009ರ ಮೇ ತಿಂಗಳಲ್ಲಿ ಸೋದರ ದುರ್ಗಾ ಸೊರೇನ್ ಮೃತಪಟ್ಟರು. ಇದರಿಂದಾಗಿ, ಜಾರ್ಖಂಡ್‌ ಮುಕ್ತಿ ಮೋರ್ಚಾದ ಸಂಘಟನೆಯಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಕೊಳ್ಳುವುದು ಹೇಮಂತ್‌ಗೆ ಅನಿವಾರ್ಯವಾಯಿತು. 2009ರಜೂನ್‌ನಲ್ಲಿ ರಾಜ್ಯಸಭೆಯ ಸದಸ್ಯರಾದರು. ಆದರೆ, ಅದೇ ವರ್ಷದ ಡಿಸೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ದುಮಕಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾದರು.

ಬಿಜೆಪಿಗೆ ಜೆಎಂಎಂ ಬೆಂಬಲ ನೀಡಿದ್ದರಿಂದ ಜಾರ್ಖಂಡ್‌ನ ಉಪಮುಖ್ಯಮಂತ್ರಿಯಾಗುವ ಅವಕಾಶ ಹೇಮಂತ್‌ಗೆ ಒದಗಿ ಬಂತು. 2013ರಲ್ಲಿ ಜೆಎಂಎಂ ಬೆಂಬಲ ವಾಪಸ್ ಪಡೆದ ಕಾರಣ ಸರ್ಕಾರ ಉರುಳಿತು. ಜೆಎಂಎಂಗೆ ಕಾಂಗ್ರೆಸ್‌ ಮತ್ತು ಆರ್‌ಜೆಡಿ ಬೆಂಬಲ ನೀಡಿದವು. 2013ರ ಜುಲೈನಲ್ಲಿ ಹೇಮಂತ್ ನೇತೃತ್ವದಲ್ಲಿ ಸರ್ಕಾರ ರಚನೆಯಾಯಿತು. 2014ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಮೈತ್ರಿ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂತು.

ಈ ಬಾರಿಯ ಚುನಾವಣೆಗೂ ಮುನ್ನ ಹೇಮಂತ್ ಅವರೇ ಮಹಾಘಟಬಂಧನ ರಚಿಸುವ ಪ್ರಸ್ತಾವಕ್ಕೆ ನೀರೆರೆದಿದ್ದರು. ಹೀಗಾಗಿ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸಲು ಕಾಂಗ್ರೆಸ್ ಮತ್ತು ಆರ್‌ಜೆಡಿ ಒಪ್ಪಿದವು. ಬಿಜೆಪಿ ನೇತೃತ್ವದ ಸರ್ಕಾರದ ನೀತಿಗಳ ವಿರುದ್ಧ ಮಹಾಘಟಬಂಧನದ ನಾಯಕರು ನಡೆಸಿದ ಅಭಿಯಾನಗಳು ಫಲಕೊಟ್ಟವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT