ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸ ಮನೆ ಕಟ್ಟಿಸಿಕೊಟ್ಟ ಆನಂದ್ ಮಹೀಂದ್ರಾ: ‘ಇಡ್ಲಿ ಅಮ್ಮ’ನ ಮುಖದಲ್ಲಿ ಮಂದಹಾಸ

ಈ ತಿಂಗಳ ಕೊನೆಗೆ ಗೃಹಪ್ರವೇಶ
ಅಕ್ಷರ ಗಾತ್ರ

ಚೆನ್ನೈ: ಬೆಲೆ ಏರಿಕೆ ನಡುವೆಯೂ ಒಂದು ರೂಪಾಯಿಗೆ ಇಡ್ಲಿ ಕೊಡುವ ಮೂಲಕ ದೇಶದಾದ್ಯಂತ ಸುದ್ದಿಯಾದವರು ತಮಿಳುನಾಡಿನ ಕಮಲತ್ತಾಳ್‌.

85ರ ವಯಸ್ಸಿನಲ್ಲೂ ನಿತ್ಯ ನೂರಾರು ಇಡ್ಲಿ ಬೇಯಿಸುವ ಕಮಲತ್ತಾಳ್‌ ಅವರಿಗೆ ಮಹೀಂದ್ರಾ ಗ್ರೂಪ್‌ ಅಧ್ಯಕ್ಷ ಆನಂದ್‌ ಮಹೀಂದ್ರಾ ಅವರು ಚೊಕ್ಕವಾದ ಮನೆಯೊಂದನ್ನು ಕಟ್ಟಿಸಿಕೊಟ್ಟಿದ್ದಾರೆ. ಹೊಸ ಮನೆಯಲ್ಲಿ ಇಡ್ಲಿ ಮಾಡಿಕೊಡುವುದಕ್ಕಾಗಿಯೇ ಅವರಿಗೆ ಅಡುಗೆ ಮಾಡಲು ಪ್ರತ್ಯೇಕ ಕೋಣೆಯ ವ್ಯವಸ್ಥೆ ಇದೆ.

ಈ ಕುರಿತು ಸುದ್ದಿಸಂಸ್ಥೆ ‘ಎಎನ್‌ಐ’ ಜೊತೆ ಮಾತನಾಡಿರುವ ಕಮಲತ್ತಾಳ್‌, ‘ಹೊಸ ಮನೆಯನ್ನು ಪಡೆದುಕೊಂಡಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಈ ತಿಂಗಳ ಕೊನೆಗೆ ಗೃಹ ಪ್ರವೇಶ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ.

ಎಲ್‌ಪಿಜಿ ಸಿಲಿಂಡರ್‌ ಬೆಲೆ, ಅಗತ್ಯ ವಸ್ತುಗಳ ದರ ಏರಿಕೆ ನಡುವೆಯೂ ‘ಇಡ್ಲಿ ಅಮ್ಮ’ ರೂಪಾಯಿಗೊಂದು ಇಡ್ಲಿ ನೀಡುತ್ತಿರುವುದು ವಿಶೇಷ.

ತಾಯಂದಿರ ದಿನದಂದು ಕಮಲತ್ತಾಳ್‌ ಅವರಿಗೆ ಹೊಸ ಮನೆಯನ್ನು ಉಡುಗೊರೆಯಾಗಿ ನೀಡುತ್ತಿರುವುದಾಗಿ ಆನಂದ್‌ ಮಹೀಂದ್ರಾ ತಿಳಿಸಿದ್ದರು.

ಇಡ್ಲಿ ಅಮ್ಮ ಹೊಸ ಮನೆಗೆ ಪ್ರವೇಶಿಸುತ್ತಿರುವ ವಿಡಿಯೊ ಅನ್ನು ಆನಂದ್‌ ಮಹೀಂದ್ರಾ ಹಂಚಿಕೊಂಡಿದ್ದರು. 'ಸಮಯಕ್ಕೆ ಸರಿಯಾಗಿ ಮನೆಯ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಶ್ರಮಿಸಿದ ನಮ್ಮ ತಂಡಕ್ಕೆ ಕೃತಜ್ಞತೆಗಳು. ಅದರಿಂದಾಗಿ ತಾಯಂದಿರ ದಿನದಂದು ಇಡ್ಲಿ ಅಮ್ಮನಿಗೆ ಮನೆಯನ್ನು ಉಡುಗೊರೆಯಾಗಿ ನೀಡಲು ಸಾಧ್ಯವಾಗಿದೆ. ಆಕೆ ಆರೈಕೆ, ಕಾಳಜಿ ಹಾಗೂ ನಿಸ್ವಾರ್ಥದ ಗುಣಗಳ ಸಮ್ಮೇಳವಾಗಿರುವಳು. ಅವರಿಗೆ ಮತ್ತು ಕಾರ್ಯಕ್ಕೆ ಬೆಂಬಲ ನೀಡಲು ಅವಕಾಶ ದೊರೆತಿದೆ' ಎಂದು ಟ್ವೀಟಿಸುವ ಜೊತೆಗೆ ತಾಯಂದಿರ ದಿನದ ಶುಭಾಶಯಗಳನ್ನು ತಿಳಿಸಿದ್ದರು.

‘ಶೀಘ್ರದಲ್ಲೇ ಇಡ್ಲಿ ಅಮ್ಮ ಸ್ವಂತ ಮನೆಯಲ್ಲಿ ಇಡ್ಲಿಯನ್ನು ಬಡಿಸಲಿದ್ದಾರೆ’ ಎಂದು 2021ರ ಏಪ್ರಿಲ್‌ನಲ್ಲಿ ಮಹೀಂದ್ರಾ ಟ್ವೀಟಿಸಿದ್ದರು. ಇದೀಗ ಕೊಟ್ಟ ಭರವಸೆ ಪೂರ್ಣಗೊಂಡಿದೆ. ಅವರ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿನ ಕೊಯಮತ್ತೂರಿನ ಹೊರವಲಯದಲ್ಲಿ ವಡಿವೇಳಂಪಾಳಯಂನಲ್ಲಿ ಕಮಲತ್ತಾಳ್ ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ರುಚಿಕರ ಇಡ್ಲಿಗಳನ್ನು ತಯಾರಿಸುತ್ತಿದ್ದಾರೆ. ಒಂದು ರೂಪಾಯಿಗೆ ಒಂದು ಇಡ್ಲಿ ಮತ್ತು ಚಟ್ನಿ ಕೊಡುವ ಅವರು ಬೆಳಿಗ್ಗೆ 6ರಿಂದ ಮಧ್ಯಾಹ್ನದ ವರೆಗೂ ಕಾಯಕ ಮುಂದುವರಿಸುತ್ತಾರೆ. ಅವರ ಮನೆ ಹೋಟೆಲ್‌ಗೆ ವಲಸೆ ಕಾರ್ಮಿಕರು, ಬಡವರೇ ಹೆಚ್ಚಾಗಿ ಬರುವುದರಿಂದ ₹1ಕ್ಕೆ ಇಡ್ಲಿ ಕೊಡುತ್ತಿದ್ದಾರೆ.

ಇಡ್ಲಿ ತಯಾರಿಸುವ ಕಾಯಕದಲ್ಲಿ ನಿರತರಾಗಿರುವಕಮಲತ್ತಾಳ್‌ –ಪಿಟಿಐ ಚಿತ್ರ
ಇಡ್ಲಿ ತಯಾರಿಸುವ ಕಾಯಕದಲ್ಲಿ ನಿರತರಾಗಿರುವಕಮಲತ್ತಾಳ್‌ –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT