ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಅಪರೂಪ’ಕ್ಕೆ ಲೋಕಸಭೆ ಸ್ಪೀಕರ್ ಚುನಾವಣೆ: ಇಬ್ಬರು ಅಭ್ಯರ್ಥಿಗಳ ಪರಿಚಯ ಇಲ್ಲಿದೆ

Published 26 ಜೂನ್ 2024, 4:10 IST
Last Updated 26 ಜೂನ್ 2024, 4:10 IST
ಅಕ್ಷರ ಗಾತ್ರ

ನವದೆಹಲಿ: ಸ್ಪೀಕರ್‌ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವ ವಿಷಯದಲ್ಲಿ ಎನ್‌ಡಿಎ ಹಾಗೂ ಇಂಡಿಯಾ ಮೈತ್ರಿಕೂಟಗಳು ಆರಂಭದಲ್ಲಿ ಸಹಮತಕ್ಕೆ ಬಂದಿದ್ದವು. ಸಂಪ್ರದಾಯದ ‍ಪ್ರಕಾರ ಉಪಸಭಾಧ್ಯಕ್ಷ ಸ್ಥಾನವನ್ನು ವಿಪಕ್ಷಕ್ಕೆ ಬಿಟ್ಟುಕೊಡಬೇಕು ಎಂದು ಕಾಂಗ್ರೆಸ್‌ ನಾಯಕರು ಪಟ್ಟು ಹಿಡಿದರು. ಈಗಲೇ ಭರವಸೆ ನೀಡಲಾಗದು ಎಂದು ಬಿಜೆಪಿ ನಾಯಕರು ಹೇಳಿದ್ದರಿಂದ ಮಾತುಕತೆ ಮುರಿದು ಬಿತ್ತು.

ಎನ್‌ಡಿಎ ಮೈತ್ರಿಕೂಟದಿಂದ ಓ ಬಿರ್ಲಾ ಹಾಗೂ ಇಂಡಿಯಾ ಬಣದಿಂದ ಕೋಡಿಕುನ್ನಿಲ್ ಸುರೇಶ್ ಅವರು ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ. ಸ್ಪೀಕರ್‌ ಸ್ಥಾನಕ್ಕೆ ‘ಅಪರೂ‍ಪ’ಕ್ಕೆ ಚುನಾವಣೆ ನಡೆಯುತ್ತಿದೆ. ಎನ್‌ಡಿಎ ಬಹುಮತ ಹೊಂದಿದ್ದು, ಓಂ ಬಿರ್ಲಾ ಸಭಾಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಅಭ್ಯರ್ಥಿಗಳ ಪರಿಚಯ

ಓಂ ಬಿರ್ಲಾ

ಓಂ ಬಿರ್ಲಾ ಅವರು ರಾಜಸ್ಥಾನದ ಕೋಟಾ ಲೋಕಸಭಾ ಕ್ಷೇತ್ರದಿಂದ ಮೂರನೇ ಅವಧಿಗೆ ಆಯ್ಕೆಯಾಗಿದ್ದಾರೆ. ಈ ಸಲ ಅವರು ಕಾಂಗ್ರೆಸ್‌ ಅಭ್ಯರ್ಥಿಯನ್ನು 41 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು. 2019ರಲ್ಲಿ ಅಚ್ಚರಿ ಅಭ್ಯರ್ಥಿಯಾಗಿ ಲೋಕಸಭಾಧ್ಯಕ್ಷ ಸ್ಥಾನಕ್ಕೆ ಓಂ ಬಿರ್ಲಾ ಅವರನ್ನು ಬಿಜೆಪಿ ಆಯ್ಕೆ ಮಾಡಿತ್ತು. ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.

2019ರವರೆಗೆ ಬಿಜೆಪಿ ವಲಯದಲ್ಲಿ ಅವರದ್ದು ಹೆಚ್ಚು ಪರಿಚಿತ ಹೆಸರಲ್ಲ. 1991ರಿಂದ 2003ರ ವರೆಗೆ ಭಾರತೀಯ ಜನತಾ ಯುವ ಮೋರ್ಚಾದಲ್ಲಿ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ರಾಜಸ್ಥಾನ ವಿಧಾನಸಭೆಗೆ ಮೂರು ಅವಧಿಗೆ ಆಯ್ಕೆಯಾಗಿದ್ದರು. ಡೆಪ್ಯುಟಿ ಸ್ಪೀಕರ್‌ ಇಲ್ಲದೆ ಪೂರ್ಣಾವಧಿ ಪೂರೈಸಿದ ಮೊದಲ ಸ್ಪೀಕರ್.

ಲೋಕಸಭೆಯ ‘ಸದಸ್ಯರ ಪೋರ್ಟಲ್’ಗೆ ಬಳಸುವ ಐ.ಡಿ ಹಾಗೂ ಪಾಸ್‌ವರ್ಡ್‌ ಅನ್ನು ಇತರರೊಂದಿಗೆ ಹಂಚಿಕೊಂಡಿದ್ದಾರೆ ಎಂಬ ಕಾರಣಕ್ಕೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆ ಸದಸ್ಯತ್ವದಿಂದ ಉಚ್ಚಾಟನೆ ಮಾಡಿದ್ದರು.

ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದಾಗ ಸಾರ್ವಜನಿಕ ಗ್ಯಾಲರಿಯಲ್ಲಿದ್ದ ಇಬ್ಬರು ಯುವಕರು ಸದನಕ್ಕೆ ಹಾರಿ, ಸ್ಮೋಕ್‌ ಕ್ಯಾನ್‌ ಅನ್ನು ಸಿಡಿಸಿದ್ದರು. ಭದ್ರತಾ ಲೋಪದ ಕುರಿತು ಗೃಹಮಂತ್ರಿ ಅಮಿತ್‌ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಪ್ರತಿಕ್ರಿಯೆ ನೀಡಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದಿದ್ದವು. ಈ ಕಾರಣಕ್ಕೆ ವಿಪಕ್ಷಗಳ 100ಕ್ಕೂ ಅಧಿಕ ಸಂಸದರನ್ನು ಓಂ ಬಿರ್ಲಾ ಅಮಾನತು ಮಾಡಿದ್ದರು.

ಕೋಡಿಕುನ್ನಿಲ್‌ ಸುರೇಶ್‌

ದಲಿತ ಸಮುದಾಯದ ಕೋಡಿಕುನ್ನಿಲ್‌ ಸುರೇಶ್ ಅವರು ಲೋಕಸಭೆಯ ಅತ್ಯಂತ ಹಿರಿಯ ಸದಸ್ಯ. ಅವರು ಎಂಟನೇ ಅವಧಿಗೆ ಸದಸ್ಯರಾಗಿದ್ದಾರೆ. ‌

66 ವರ್ಷದ ಅವರು ಕೇರಳದ ಮಾವೆಲಿಕ್ಕರ ಕ್ಷೇತ್ರದಿಂದ ಈ ಸಲ 10 ಸಾವಿರ ಮತಗಳ ಅಂತರದಿಂದ ಜಯಿಸಿದ್ದರು. ಅವರು 1989ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು. 2009ರಲ್ಲಿ ಅವರ ಸದಸ್ಯತ್ವವನ್ನು ಕೇರಳ ಹೈಕೋರ್ಟ್‌ ಅಸಿಂಧುಗೊಳಿಸಿತ್ತು. ಕ್ರೈಸ್ತ ಸಮುದಾಯದ ಸುರೇಶ್‌ ಅವರು ನಕಲಿ ಜಾತಿ ಪ್ರಮಾಣಪತ್ರ ಸೃಷ್ಟಿಸಿ ಮೀಸಲು ಕ್ಷೇತ್ರದಲ್ಲಿ ಕಣಕ್ಕಿಳಿದು ಗೆದ್ದಿದ್ದಾರೆ ಎಂದು ಆರೋಪಿಸಿ ಪರಾಜಿತ ಅಭ್ಯರ್ಥಿಯು ಹೈಕೋರ್ಟ್‌ ಮೊರೆ ಹೋಗಿದ್ದರು. ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿತ್ತು. ಅವರು ಈ ಹಿಂದೆ ಕೇರಳ ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT