ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

NCPಯ ಮತ ಸಿಗದ್ದೇ ಲೋಕಸಭೆ ಚುನಾವಣೆಯಲ್ಲಿ BJP ಸೋಲಿಗೆ ಕಾರಣ: ದೇವೇಂದ್ರ ಫಡಣವೀಸ್

Published : 26 ಸೆಪ್ಟೆಂಬರ್ 2024, 12:20 IST
Last Updated : 26 ಸೆಪ್ಟೆಂಬರ್ 2024, 12:20 IST
ಫಾಲೋ ಮಾಡಿ
Comments

ಮುಂಬೈ: 2024ರ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಹಿನ್ನಡೆಗೆ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ನಿರೀಕ್ಷಿತ ಮಟ್ಟದಲ್ಲಿ ಮತ ವರ್ಗಾವಣೆ ಆಗದಿರುವುದೇ ಕಾರಣ ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಗುರುವಾರ ಹೇಳಿದ್ದಾರೆ.

‘ಬಿಜೆಪಿಯ ಮೂಲ ಮತದಾರರಿಗೆ ಎನ್‌ಸಿಪಿ ಜೊತೆಗಿನ ಮೈತ್ರಿ ಒಪ್ಪಿಗೆಯಾಗಿಲ್ಲ. ಆದರೆ ಈಗ ಶೇ 80ರಷ್ಟು ಜನರಿಗೆ ಈ ರಾಜಕೀಯ ಹೊಂದಾಣಿಕೆಯ ಅಗತ್ಯದ ಬಗ್ಗೆ ಮನವರಿಕೆಯಾಗಿದೆ’ ಎಂದು ಅವರು ನುಡಿದಿದ್ದಾರೆ.

ಬಿಜೆಪಿ, ಎನ್‌ಸಿಪಿ ಹಾಗೂ ಏಕನಾಥ ಶಿಂದೆ ಬಣದ ಶಿವಸೇನಾ ಮೈತ್ರಿಯು 48 ಲೋಕಸಭಾ ಕ್ಷೇತ್ರಗಳ ಪೈಕಿ 17 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. 2019ರ ಚುನಾವಣೆಯಲ್ಲಿ 23 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿಯ ಸಂಖ್ಯೆ 9ಕ್ಕೆ ಇಳಿದಿತ್ತು. 7 ಸ್ಥಾನ ಶಿಂದೆ ಬಣ ಹಾಗೂ 1 ಕ್ಷೇತ್ರ ಅಜಿತ್ ಬಣಕ್ಕೆ ಲಭಿಸಿತ್ತು.

‘ಕಳೆದ ಕೆಲವು ಚುನಾವಣೆಯಲ್ಲಿ ಬಿಜೆಪಿ ಹೀನಾಯ ಪ್ರದರ್ಶನ ನೀಡಿದ್ದು ನಿಜ. 28 ಕ್ಷೇತ್ರಗಳಲ್ಲಿ ನಾವು ಸ್ಪರ್ಧಿಸಿದ್ದರೂ ನಮಗೆ ಕಡಿಮೆ ಸೀಟುಗಳು ಲಭಿಸಿದವು. 12 ಕ್ಷೇತ್ರಗಳಲ್ಲಿ ನಾವು ಶೇ 3ಕ್ಕಿಂತ ಕಡಿಮೆ ಮತಗಳ ಅಂತರದಿಂದ ಸೋತೆವು. ಇದರ ಅಂತರ 3000–6000 ಮತಗಳಷ್ಟೇ. ಆ ಚುನಾವಣೆಯಲ್ಲಿ ಅತಿ ಹೆಚ್ಚು ಮತ ಪಡೆದಿದ್ದು ಬಿಜೆಪಿ’ ಎಂದು ಅವರು ಇಂಡಿಯಾ ಟುಡೆ ಕಾನ್‌ಕ್ಲೇವ್‌ನಲ್ಲಿ ಹೇಳಿದ್ದಾರೆ.

‘ಅವರಿಗೆ (ಎನ್‌ಸಿಪಿ, ಶಿವಸೇನಾ) ಲೋಕಸಭೆ ಚುನಾವಣೆಯಲ್ಲಿ ತಮ್ಮ ಮತದಾರರನ್ನು ಸ್ಥಿರಗೊಳಿಸಬೇಕಾಗಿತ್ತು. ಇಬ್ಬರಿಗೂ ಅದು ಕಷ್ಟವೇ ಆಗಿತ್ತು. ಆದರೆ ನಮಗೆ ಅದು ಸುಲಭ. ಏಕೆಂದರೆ ನಮ್ಮ ಮತಬ್ಯಾಂಕ್ ಈಗಾಗಲೇ ಸ್ಥಿರವಾಗಿದೆ’ ಎಂದ ಅವರು, ಲೋಕಸಭೆ ಚುನಾವಣಾ ಫಲಿತಾಂಶವು ವಿಧಾನಸಭೆ ಚುನಾವಣೆಯಲ್ಲಿ ‍ಪ್ರತಿಫಲಿಸದು ಎಂದು ಹೇಳಿದ್ದಾರೆ.

‘ನಾವು ಹಲವು ವರ್ಷಗಳಿಂದ ಮೈತ್ರಿ ಮಾಡಿಕೊಂಡಿದ್ದರಿಂದ ಶಿವಸೇನಾಗೆ ಮತ ವರ್ಗಾವಣೆ ಮಾಡಲು ಸಾಧ್ಯವಾಯಿತು. ಆದರೆ ನಾವು ಯಾವತ್ತೂ ಎನ್‌ಸಿಪಿಯ ವಿರುದ್ಧ ಸ್ಪರ್ಧಿಸಿಕೊಂಡು ಬಂದಿದ್ದೆವು. ಹೀಗಾಗಿ ಅವರು ಮತ ವರ್ಗಾವಣೆ ಮಾಡಲು ಸಾಧ್ಯವಾಗಲಿಲ್ಲ. ಬಿಜೆಪಿಯ ಮತದಾರರು ಎನ್‌ಸಿಪಿ ಜೊತೆಗಿನ ಮೈತ್ರಿಯನ್ನು ಒಪ್ಪಿಕೊಂಡಿಲ್ಲ. ಈಗ ಉಭಯ ಪಕ್ಷಗಳ ಮತದಾರರು ಸ್ಥಿರವಾಗಿದ್ದಾರೆ’ ಎಂದು ಫಡಣವೀಸ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT