ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

MUDA: ಕಾಂಗ್ರೆಸ್‌ ಪ್ರೀತಿಯ ಅಂಗಡಿಯಲ್ಲ, ಭ್ರಷ್ಟಾಚಾರದ ಭಾಯಿಜಾನ್‌– BJP ಆರೋಪ

Published : 27 ಸೆಪ್ಟೆಂಬರ್ 2024, 14:30 IST
Last Updated : 27 ಸೆಪ್ಟೆಂಬರ್ 2024, 14:30 IST
ಫಾಲೋ ಮಾಡಿ
Comments

ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಯಾಗಿರುವ ಮುಡಾ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ, ‘ಕಾಂಗ್ರೆಸ್‌ ಪಕ್ಷವು ಪ್ರೀತಿ ಅಂಗಡಿಯನ್ನು ನಡೆಸುವ ಬದಲು, ಭ್ರಷ್ಟಾಚಾರದ ಭಾಯಿಜಾನ್‌’ ಆಗಿದೆ ಎಂದು ಕಾಲೆಳೆದಿದೆ.

ಪಕ್ಷದ ವಕ್ತಾರ ಶಹೆಝಾದ್ ಪೂನಾವಾಲಾ ಅವರು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿ, ‘ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದ ಮೂಲಕ ತಮ್ಮ ಕುಟುಂಬದವರ ಹಿತ ಕಾಯುವ ಪದ್ಧತಿಯನ್ನು ಮುಂದುವರಿಸುತ್ತಿದ್ದಾರೆ. ಮುಡಾ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಾದ ಮೇಲೂ ನೈತಿಕತೆಯ ಆಧಾರದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಹೇಗೆ ಮುಂದುವರಿಯುತ್ತಾರೆ’ ಎಂದು ಪ್ರಶ್ನಿಸಿದ್ದಾರೆ. 

‘ಕಾಂಗ್ರೆಸ್ ಎಂಬುದು ಭೂಮಿಯೊಂದಿಗೆ ನಂಟು ಹೊಂದಿರುವ ಪಕ್ಷ. ಅವರು ಎಲ್ಲಿಯೇ ಅಧಿಕಾರಕ್ಕೆ ಬಂದರೂ, ಜಮೀನು, ನಿವೇಶನಗಳನ್ನು ತಮ್ಮ ಹಾಗೂ ತಮ್ಮ ಕುಟುಂಬದವರ ಹೆಸರಿನಲ್ಲಿ ಮಾಡಿಕೊಳ್ಳುತ್ತಾರೆ. ನ್ಯಾಷನಲ್‌ ಹೆರಾಲ್ಡ್ ಆಗಿರಲಿ ಅಥವಾ ಹರಿಯಾಣದ ‘ಅಳಿಯ‘ (ರಾಬರ್ಟ್ ವಾದ್ರಾ) ಅಥವಾ ಕರ್ನಾಟಕದಲ್ಲಿ ಮುಖ್ಯಮಂತ್ರಿ ಪತ್ನಿಯಾಗಿರಲಿ... ತಮ್ಮ ಕುಟುಂಬದವರ ಹಿತ ಕಾಯುವುದೇ ಕಾಂಗ್ರೆಸ್‌ನವರ ಕಾಯಕ’ ಎಂದು ಪೂನಾವಾಲಾ ದೂರಿದರು.

‘ಒಟ್ಟಿನಲ್ಲಿ ಕಾಂಗ್ರೆಸ್‌ನವರ ಮುಖ್ಯ ಗುರಿಯೇ ಅಧಿಕಾರಕ್ಕೆ ಬಂದ ನಂತರ ಸಾರ್ವಜನಿಕರನ್ನು ಲೂಟಿ ಮಾಡುವುದು. ಕರ್ನಾಟಕದ ಮುಡಾ ಪ್ರಕರಣದಲ್ಲಿ ತಪ್ಪು ಬಯಲಿಗೆ ಬರುತ್ತಿದ್ದಂತೆ, ಸಿಬಿಐ ತನಿಖೆಗೆ ನೀಡಲಾಗಿದ್ದ ಮುಕ್ತ ಅನುಮತಿಯನ್ನು ಕರ್ನಾಟಕ ಹಿಂದಕ್ಕೆ ಪಡೆದಿದೆ. ಆ ಮೂಲಕ ಕಾಂಗ್ರೆಸ್‌ನವರು ವೃತ್ತಿಪರ ಕಳ್ಳರಂತೆ ವರ್ತಿಸುತ್ತಿದ್ದಾರೆ. ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ. ದೇಶದೆಲ್ಲೆಡೆ ಇವರು ಇದನ್ನೇ ನಡೆಸುತ್ತಿದ್ದಾರೆ’ ಎಂದು ಪೂನಾವಾಲ ಹೇಳಿದರು.

‘ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮೂರು ಆಘಾತಗಳು ಆದವು. ಮೊದಲನೆಯದಾಗಿ ಪ್ರಕರಣದ ಕುರಿತು ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಆದೇಶಿಸಿದರು. ನಂತರ ಇದಕ್ಕೆ ಹೈಕೋರ್ಟ್ ಅಸ್ತು ಎಂದಿತು. ಮೂರನೆಯದಾಗಿ ವಿಶೇಷ ನ್ಯಾಯಾಲಯ ಎಫ್‌ಐಆರ್ ದಾಖಲಿಸಲು ನಿರ್ದೇಶಿಸಿತು. ಹೀಗಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದವರು ಪರಿಶಿಷ್ಟ ಜಾತಿಗೆ ಸೇರಿದ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸಿ, ಅವಮಾನಿಸಿತು. ಕೆಲ ಕಾಂಗ್ರೆಸ್ ಮುಖಂಡರು ರಾಜ್ಯಪಾಲರನ್ನು ನಿಂದಿಸಿದರು, ಅವರನ್ನು ಬೆದರಿಸುವ ಮಟ್ಟಕ್ಕೂ ಹೋದರು’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT