ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9ನೇ ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕಾರ

Published 28 ಜನವರಿ 2024, 11:55 IST
Last Updated 28 ಜನವರಿ 2024, 11:55 IST
ಅಕ್ಷರ ಗಾತ್ರ

ಪಟ್ನಾ: ನಾಟಕೀಯ ರಾಜಕೀಯ ಬೆಳವಣಿಗೆಗಳ ನಡುವೆಯೇ ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರು ಬಿಜೆಪಿ ಜತೆಗೂಡಿ ಭಾನುವಾರ ಸಂಜೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ಅವರು 9ನೇ ಬಾರಿ ಮುಖ್ಯಮಂತ್ರಿಯಾಗಿ ದಾಖಲೆ ಬರೆದಿದ್ದಾರೆ.

ಕ್ಷಿಪ್ರ ಬೆಳವಣಿಗೆಗಳ ಬೆನ್ನಲ್ಲೇ ಅವರು ಭಾನುವಾರ ಬೆಳಿಗ್ಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ‘ಮಹಾಘಟಬಂಧನ್‌’ ಸರ್ಕಾರಕ್ಕೆ ಅಂತ್ಯ ಹಾಡಿದರು. ಆ ಮೂಲಕ ಅವರು ‘ಇಂಡಿಯಾ’ ಮೈತ್ರಿಕೂಟದಿಂದಲೂ ಹೊರ ನಡೆದರು. ಅಲ್ಲದೆ ಬಿಜೆಪಿ ಸಖ್ಯ ತೊರೆದ 18 ತಿಂಗಳಲ್ಲಿಯೇ ಮರಳಿ ಅದೇ ಪಕ್ಷದ ಒಡಗೂಡಿ ಸರ್ಕಾರವನ್ನೂ ರಚಿಸಿದರು. ನಿತೀಶ್ ಅವರನ್ನು ಮರಳಿ ಎನ್‌ಡಿಎಗೆ ಕರೆತರುವುದಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕರು ವರ್ಷದ ಹಿಂದೆಯಷ್ಟೇ ಹೇಳಿದ್ದರು.

ಬಿಹಾರದ ರಾಜ್ಯಪಾಲ ರಾಜೇಂದ್ರ ಅರ್ಲೇಕರ್‌ ಅವರು ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿತೀಶ್‌ ಅವರಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಕೆಲ ನಾಯಕರು ಉಪಸ್ಥಿತರಿದ್ದರು. ವಿಧಾನಸಭೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿರುವ ಆರ್‌ಜೆಡಿಯ ಯಾವುದೇ ನಾಯಕ ಸಮಾರಂಭದಲ್ಲಿ ಭಾಗಿಯಾಗಿರಲಿಲ್ಲ.

ಇಬ್ಬರು ಉಪ ಮುಖ್ಯಮಂತ್ರಿ: ಇದೇ ವೇಳೆ ಪ್ರಮಾಣ ವಚನ ಸ್ವೀಕರಿಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಾಮ್ರಾಟ್‌ ಚೌಧರಿ ಮತ್ತು ಮಾಜಿ ಸ್ಪೀಕರ್‌ ವಿಜಯ್‌ ಕುಮಾರ್‌ ಸಿನ್ಹಾ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಇದಕ್ಕೂ ಮುನ್ನ ನಡೆದಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಚೌಧರಿ ಮತ್ತು ಸಿನ್ಹಾ ಅವರನ್ನು ಕ್ರಮವಾಗಿ ನಾಯಕ ಮತ್ತು ಉಪ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು.

ಜೆಡಿಯು ಶಾಸಕರಾದ ವಿಜಯ್‌ ಕುಮಾರ್‌ ಚೌಧರಿ, ವಿಜೇಂದ್ರ ಯಾದವ್‌, ಶ್ರವಣ್‌ ಕುಮಾರ್‌, ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ನೇತೃತ್ವದ ಹಿಂದೂಸ್ತಾನ್‌ ಅವಾಮ್‌ ಮೋರ್ಚಾದ ಸಂತೋಷ್‌ ಕುಮಾರ್‌ ಸುಮನ್‌, ಪಕ್ಷೇತರ ಶಾಸಕ ಸುಮಿತ್‌ ಸಿಂಗ್‌ ಅವರೂ ಪ್ರಮಾಣ ವಚನ ಸ್ವೀಕರಿಸಿದರು. 

ಎನ್‌ಡಿಎ ಬಿಡಲ್ಲ– ನಿತೀಶ್‌: ‘ನಾನು ಹಿಂದೆಯೂ ಅವರ (ಎನ್‌ಡಿಎ) ಜತೆಯಲ್ಲಿ ಇದ್ದೆ. ಬಳಿಕ ನಾವು ಭಿನ್ನ ಹಾದಿಯಲ್ಲಿ ಸಾಗಿದೆವು. ಈಗ ಒಟ್ಟಿಗೆ ಇದ್ದೇವೆ ಮತ್ತು ಹಾಗೇ ಇರುತ್ತೇವೆ... ನಾನು ಮೊದಲು ಇದ್ದ ಜಾಗಕ್ಕೆ (ಎನ್‌ಡಿಎ) ಹಿಂತಿರುಗಿದ್ದೇನೆ. ಈಗ ಎಲ್ಲಿಯೂ ಹೋಗುವ ಪ್ರಶ್ನೆಯೇ ಇಲ್ಲ’ ಎಂದು 72 ವರ್ಷದ ನಿತೀಶ್‌ ಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು. 

‘ಇಬ್ಬರು ಉಪ ಮುಖ್ಯಮಂತ್ರಿ ಸೇರಿ ಒಟ್ಟು 8 ಮಂದಿ ಸಚಿವರಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದು, ಉಳಿದವರ ಹೆಸರನ್ನು ಶೀಘ್ರವೇ ಅಂತಿಮಗೊಳಿಸಲಾಗುವುದು’ ಎಂದು ಅವರು ಹೇಳಿದರು.

ಪ್ರಧಾನಿ ಅಭಿನಂದನೆ: ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮತ್ತು ಇಬ್ಬರು ಉಪ ಮುಖ್ಯಮಂತ್ರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್‌’ ಮೂಲಕ ಅಭಿನಂದನೆ ಸಲ್ಲಿಸಿದರು.

‘ಎನ್‌ಡಿಎ ಸರ್ಕಾರವು ಬಿಹಾರದ ಅಭಿವೃದ್ಧಿ ಮತ್ತು ಜನರ ಆಶೋತ್ತರಗಳನ್ನು ಈಡೇರಿಸುವ ದಿಸೆಯಲ್ಲಿ ಯಾವುದೇ ಅವಕಾಶವನ್ನೂ ಬಿಡುವುದಿಲ್ಲ. ಹೊಸ ಸರ್ಕಾರವು ಸಂಪೂರ್ಣ ಸಮರ್ಪಣಾ ಮನೋಭಾವದಿಂದ ಜನರ ಸೇವೆ ಮಾಡುತ್ತದೆ ಎಂಬ ವಿಶ್ವಾಸವಿದೆ’ ಎಂದು ಅವರು ಪೋಸ್ಟ್‌ ಮಾಡಿದರು.

ಸರ್ಕಾರ ರಚಿಸಲು ಬಿಜೆಪಿ ಸಮ್ಮತಿ: ತನ್ನ ಜತೆಗೂಡಿ ಸರ್ಕಾರ ರಚಿಸಲು ಮುಂದಾದ ಜೆಡಿಯು ಪಕ್ಷಕ್ಕೆ ಬಿಜೆಪಿ ಶಾಸಕರು ತ್ವರಿತವಾಗಿಯೇ ಸಮ್ಮತಿ ಸೂಚಿಸಿದರು. ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಶಾಸಕರೆಲ್ಲ ಸೇರಿದ್ದರು. ಸರ್ಕಾರ ರಚನೆಯ ಪ್ರಸ್ತಾವ ಜೆಡಿಯು ಕಡೆಯಿಂದ ಬಂದ ಕೂಡಲೇ, ಅದನ್ನು ಬೆಂಬಲಿಸುವ ಮೂಲಕ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ರಚನೆಗೆ ನಮ್ಮ ಎಲ್ಲ ಶಾಸಕರೂ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ವಿನೋದ್‌ ತಾವ್ಡೆ ಪ್ರತಿಕ್ರಿಯಿಸಿದರು. 

ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಸಾಮ್ರಾಟ್‌ ಚೌಧರಿ ಮತ್ತು ಮಾಜಿ ಸ್ಪೀಕರ್‌ ವಿಜಯ್‌ ಕುಮಾರ್‌ ಸಿನ್ಹಾ ಅವರನ್ನು ಕ್ರಮವಾಗಿ ಶಾಸಕಾಂಗ ಪಕ್ಷದ ನಾಯಕ ಮತ್ತು ಉಪ ನಾಯಕರನ್ನಾಗಿ ಆರಿಸಲಾಯಿತು. ತಮ್ಮ ಆಯ್ಕೆ ಆಗುತ್ತಿದ್ದಂತೆಯೇ ಉಭಯ ನಾಯಕರೂ, ‘ಲಾಲು ಪ್ರಸಾದ್‌ ಮತ್ತು ಆರ್‌ಜೆಡಿಯ ಜಂಗಲ್‌ ರಾಜ್‌ನಿಂದ ಬಿಹಾರನ್ನು ರಕ್ಷಿಸುವುದಾಗಿ’ ಪ್ರತಿಜ್ಞೆ ಮಾಡಿದರು. 

ಬಳಿಕ ತಾವ್ಡೆ ಮತ್ತು ಚೌಧರಿ ಅವರು ನಿತೀಶ್‌ ಕುಮಾರ್‌ ನಿವಾಸಕ್ಕೆ ಹೋದರು. ಅಲ್ಲಿಂದ ಎಲ್ಲರೂ ಹೊಸ ಸರ್ಕಾರ ರಚನೆಯ ಹಕ್ಕು ಮಂಡಿಸಲು ರಾಜಭವನಕ್ಕೆ ತೆರಳಿದರು.

ಅಂದುಕೊಂಡಂತೆ ಆಗುತ್ತಿರಲಿಲ್ಲ: ನಿತೀಶ್‌

‘ಮಹಾಘಟಬಂಧನ್‌ನಲ್ಲಿ ಕೆಲವು ವಿಷಯ, ವಿಚಾರಗಳು ನಾನು ಅಂದುಕೊಂಡಂತೆ ಆಗುತ್ತಿರಲಿಲ್ಲ. ಹೀಗಾಗಿ ನಾನು ರಾಜೀನಾಮೆ ಸಲ್ಲಿಸಿದೆ’ ಎಂದು ನಿತೀಶ್‌ ಕುಮಾರ್‌ ಅವರು ಬೆಳಿಗ್ಗೆ ರಾಜೀನಾಮೆ ಸಲ್ಲಿಸಿದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.  

‘ನಾನು ಮಹಾಘಟಬಂಧನ್‌ಗೆ ಹೇಗೆ ಬಂದೆ, ಅಲ್ಲಿ ಹಲವು ಪಕ್ಷಗಳನ್ನು ಒಗ್ಗೂಡಿಸಲು ಎಷ್ಟೆಲ್ಲ ಶ್ರಮಿಸಿದ್ದೇನೆ ಎಂಬುದೆಲ್ಲ ನಿಮಗೆ ತಿಳಿದಿದೆ. ಆದರೆ ಈಗ ಅದು ಸಾಧ್ಯವಾಗುತ್ತಿಲ್ಲ. ಇದು ನನ್ನ ಪಕ್ಷದಲ್ಲಿ ಇರುವವರಿಗೂ ಸರಿಹೋಗುತ್ತಿಲ್ಲ’ ಎಂದು ನಿತೀಶ್‌ ಸಮರ್ಥನೆ ನೀಡಿದರು. ರಾಜೀನಾಮೆ ಸಲ್ಲಿಸುವುದಕ್ಕೂ ಮುನ್ನ ಅವರು ಜೆಡಿಯು ಶಾಸಕಾಂಗ ಪಕ್ಷದ ಸಭೆ ನಡೆಸಿದರು.

-

ಆಟ ಇನ್ನೂ ಮುಗಿದಿಲ್ಲ, ಈಗಷ್ಟೇ ಆರಂಭವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ನಾಶವಾಗಲಿದೆ.
-ತೇಜಸ್ವಿ ಯಾದವ್‌, ಮಾಜಿ ಉಪ ಮುಖ್ಯಮಂತ್ರಿ
ಕಸ ಮತ್ತೆ ಕಸದ ಬುಟ್ಟಿಗೆ ಹೋಗಿದೆ. ಕೊಳೆತು ನಾರುವ ಕಸದ ಭಾಗವಾಗಿರುವ ಗುಂಪಿಗೆ ಶುಭಾಶಯಗಳು.
-ರೋಹಿಣಿ ಆಚಾರ್ಯ, (ಲಾಲು ಪ್ರಸಾದ್‌ ಅವರ ಪುತ್ರಿ)
ನಿತೀಶ್‌ ಕುಮಾರ್‌ ದ್ರೋಹ ಎಸಗಿದ್ದಾರೆ. ದೀರ್ಘ ಕಾಲ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸಿದ್ದ ಅವರನ್ನು ಆರ್‌ಎಸ್‌ಎಸ್‌– ಬಿಜೆಪಿ ದಾಳ ವಾಗಿ ಬಳಸಿಕೊಳ್ಳುತ್ತದೆ.
-ದೀಪಂಕರ್ ಭಟ್ಟಾಚಾರ್ಯ, ಸಿಪಿಐ (ಎಂ.ಎಲ್‌) ಪ್ರಧಾನ ಕಾರ್ಯದರ್ಶಿ
ತಮ್ಮ ರಾಜಕೀಯ ನಿಷ್ಠೆಯನ್ನು ಪದೇ ಪದೇ ಬದಲಿಸುವ ನಿತೀಶ್ ಕುಮಾರ್ ಅವರಿಗೆ ‘ಗಿರ್ಗಿತ್ ರತ್ನ’ (ಊಸರವಳ್ಳಿ) ಪ್ರಶಸ್ತಿ ನೀಡಿ ಗೌರವಿಸಬೇಕು.
-ತೇಜ್ ಪ್ರತಾಪ್ ಯಾದವ್, ಆರ್‌ಜೆಡಿ ನಾಯಕ
ನಿತೀಶ್ ಕುಮಾರ್ ಅವರನ್ನು ‘ಸ್ನೋಲಿಗೋಸ್ಟರ್‌’ ಎಂದು ಕರೆಯಬಹುದು; ಅಂದರೆ, ‘ತತ್ವರಹಿತ ರಾಜಕಾರಣಿ’ ಎಂದರ್ಥ. ಬಣ್ಣ ಬದಲಿಸುವುದರಲ್ಲಿ ಅವರು ‍ಊಸರವಳ್ಳಿಗೂ ಪೈಪೋಟಿ ನೀಡುತ್ತಿದ್ದಾರೆ.
-ಶಶಿ ತರೂರ್‌, ಕಾಂಗ್ರೆಸ್ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT