ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ನಾಡಿನಲ್ಲಿ ಹಿಂದುತ್ವದ ವಿರುದ್ಧ ಒಬಿಸಿ–ದಲಿತ ರಾಜಕಾರಣ

Last Updated 21 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ಎಸ್‌ಪಿ ಸ್ಥಾಪಕ ಮುಲಾಯಂ ಸಿಂಗ್ ಯಾದವ್‌ ಮತ್ತು ಬಿಎಸ್‌ಪಿಯ ನಾಯಕಿ ಮಾಯಾವತಿ ಅವರು ದಶಕಗಳ ಬಳಿಕ ಒಂದೇ ವೇದಿಕೆಯಲ್ಲಿ ಶುಕ್ರವಾರ ಕಾಣಿಸಿಕೊಂಡರು. ಇತರ ಹಿಂದುಳಿದ ವರ್ಗಗಳ (ಒಬಿಸಿ) ‘ಅಸಲಿ’ ನಾಯಕ ಮುಲಾಯಂ, ಪ್ರಧಾನಿ ನರೇಂದ್ರ ಮೋದಿ ಅವರು ಒಬಿಸಿಯ ‘ನಕಲಿ’ ನಾಯಕ ಎಂದು ಈ ಸಭೆಯಲ್ಲಿ ಮಾಯಾವತಿ ಬಣ್ಣಿಸಿದರು.

ನಕಲಿ ಒಬಿಸಿ ನಾಯಕರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕಾರಣಕ್ಕೆ ಒಬಿಸಿ ಮತ್ತು ದಲಿತ ಸಮುದಾಯಗಳಿಗೆ ಮೀಸಲಾಗಿದ್ದ ಲಕ್ಷಾಂತರ ಹುದ್ದೆಗಳು ಖಾಲಿ ಉಳಿದವು ಎಂದು ಮುಲಾಯಂ ಅವರ ಭದ್ರಕೋಟೆ ಮೈನ್‌ಪುರಿಯಲ್ಲಿ ಮಾಯಾವತಿ ಹೇಳಿದರು. ಅಸಲಿ ಮತ್ತು ನಕಲಿಯ ನಡುವಣ ವ್ಯತ್ಯಾಸ ಗುರುತಿಸಬೇಕು ಎಂದು ಮತದಾರರನ್ನು ಮಾಯಾವತಿ ಕೇಳಿಕೊಂಡರು.

ಇದಕ್ಕೂ ಒಂದು ದಿನ ಮೊದಲು ಇದೇ ವಿಚಾರ ಬಿಹಾರದಲ್ಲಿಯೂ ಕೇಳಿ ಬಂದಿತ್ತು. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರು ‘ನರೇಂದ್ರ ಮೋದಿ ಅವರು ನಕಲಿ ಒಬಿಸಿ. 55 ವರ್ಷ ವಯಸ್ಸಾದ ಮೇಲೆ ಮೋದಿ ಅವರು ಒಬಿಸಿ ಆದರು. ಒಬಿಸಿ ಸಮುದಾಯಗಳಿಗೆ ಮೋದಿ ಏನನ್ನೂ ಮಾಡಿಲ್ಲ. ಹಾಗಾಗಿ ಮೋದಿಯನ್ನು ತಮ್ಮ ನಾಯಕ ಎಂದು ಒಬಿಸಿ ಸಮುದಾಯ ಒಪ್ಪಿಕೊಳ್ಳುವುದಿಲ್ಲ. ಮೋದಿ ಅವರು ಒಬಿಸಿಯನ್ನು ದ್ವೇಷಿಸುತ್ತಾರೆ ಮತ್ತು ವರ್ಣವ್ಯವಸ್ಥೆಯನ್ನು (ಜಾತಿ ಪದ್ಧತಿ) ಬೆಂಬಲಿಸುತ್ತಾರೆ’ ಎಂದರು.

ಬಿಜೆಪಿಯ ಮೇಲೆ ನಡೆದ ಈ ಎರಡೂ ವಾಗ್ದಾಳಿಗಳು ಒಂದೇ ಸ್ವರೂಪದವು.ಸಾಧ್ವಿ ಪ್ರಜ್ಞಾ ಠಾಕೂರ್‌ ಅಂಥವರನ್ನು ಲೋಕಸಭಾ ಚುನಾವಣಾ ಕಣಕ್ಕೆ ಇಳಿಸುವ ಮೂಲಕ ಹಿಂದುತ್ವವನ್ನು ಚುನಾವಣೆಯ ಮುಖ್ಯ ವಿಷಯವಾಗಿಸಲು ಬಿಜೆಪಿ ಯತ್ನಿಸುತ್ತಿದೆ ಎನ್ನಲಾಗುತ್ತಿದೆ. ಅದಕ್ಕೆ ಪ್ರತ್ಯುತ್ತರವಾಗಿ ಒಬಿಸಿ ಸಮುದಾಯಗಳನ್ನು ಧ್ರುವೀಕರಿಸುವ ಕೆಲಸವನ್ನು ಪ್ರಾದೇಶಿಕ ಪಕ್ಷಗಳು ಮಾಡುತ್ತಿವೆ. ಬಿಜೆಪಿಯನ್ನು ಯಜಮಾನಿಕೆಯ ಪಕ್ಷ ಎಂದು ಬಿಂಬಿಸುವ ಪ್ರಯತ್ನ ನಡೆಸುತ್ತಿವೆ.

ಇಂತಹ ಪ್ರಯತ್ನ ಇದೇ ಮೊದಲಲ್ಲ. ಬಿಹಾರದಲ್ಲಿ 2015ರಲ್ಲಿ ವಿಧಾನಸಭೆ ಚುನಾವಣೆ ನಡೆದಾಗ ಆರ್‌ಜೆಡಿ–ಜೆಡಿಯು–ಕಾಂಗ್ರೆಸ್‌ ಮೈತ್ರಿಕೂಟ ಇದೇ ಕಾರ್ಯತಂತ್ರವನ್ನು ಅನುಸರಿಸಿ ಬಿಜೆಪಿಯನ್ನು ಸೋಲಿಸಿತ್ತು. ಬಿಜೆಪಿ ಮೀಸಲಾತಿ ವಿರೋಧಿ ಎಂದು ಪ್ರತಿಪಾದಿಸಿ ಒಬಿಸಿ ಸಮುದಾಯಗಳನ್ನು ತಮ್ಮ ಪರವಾಗಿ ಒಗ್ಗೂಡಿಸಲು ಮೈತ್ರಿಕೂಟಕ್ಕೆ ಸಾಧ್ಯವಾಗಿತ್ತು. ಈಗ, ಬಿಹಾರದಲ್ಲಿ ಆರ್‌ಜೆಡಿ ನೇತೃತ್ವದ ಮೈತ್ರಿಕೂಟ ಮತ್ತು ಉತ್ತರ ಪ್ರದೇಶದಲ್ಲಿ ಎಸ್‌ಪಿ–ಬಿಎಸ್‌ಪಿ ಮೈತ್ರಿಕೂಟ ಈ ಕಾರ್ಯತಂತ್ರಕ್ಕೆ ಮತ್ತೆ ಮೊರೆಹೋಗಿವೆ.

ಹಿಂದುಳಿದ ವರ್ಗಗಳು, ದಲಿತರು ಮತ್ತು ಮುಸ್ಲಿಮರನ್ನು ಒಂದು ಮತಬ್ಯಾಂಕ್‌ ಆಗಿ ರೂಪಿಸುವ ಕೆಲಸವನ್ನು ಬಿಎಸ್‌‍ಪಿ ಸ್ಥಾಪಕ ಕಾನ್ಶೀರಾಂ ಅವರು 1978ರಲ್ಲಿಯೇ ಆರಂಭಿಸಿದ್ದರು. ಇದರ ಆಧಾರದಲ್ಲಿಯೇ 1993ರಲ್ಲಿ ಬಿಎಸ್‌ಪಿ ಮತ್ತು ಎಸ್‌ಪಿ ಒಂದಾಗಲು ಸಾಧ್ಯವಾಯಿತು. 1992ರಲ್ಲಿ ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸವಾಗಿತ್ತು. ಹಿಂದುತ್ವದ ಅಲೆಯನ್ನು ಬಿಜೆಪಿ ಬಿಗಿಯಾಗಿ ಹಿಡಿದುಕೊಂಡಿತ್ತು. ಅದಾಗಿ ಒಂದು ವರ್ಷದಲ್ಲಿ ಜತೆಯಾಗಿ ಚುನಾವಣೆ ಎದುರಿಸಿದ ಎಸ್‌ಪಿ ಮತ್ತು ಬಿಎಸ್‌ಪಿ ಕ್ರಮವಾಗಿ 109 ಮತ್ತು 67 ಕ್ಷೇತ್ರಗಳಲ್ಲಿ ಗೆದ್ದವು. 177 ಕ್ಷೇತ್ರಗಳಲ್ಲಿ ಗೆದ್ದ ಬಿಜೆಪಿ ಅತಿ ದೊಡ್ಡ ಪಕ್ಷವಾಗಿತ್ತು. ಆದರೆ, ಕಾಂಗ್ರೆಸ್‌ನ ಬಾಹ್ಯ ಬೆಂಬಲ ಪಡೆದ ಎಸ್‌ಪಿ–ಬಿಎಸ್‌ಪಿ ಮೈತ್ರಿಕೂಟ ಅಧಿಕಾರಕ್ಕೆ ಏರಿತು.

ಮೋದಿ ಅವರು ಪ್ರಧಾನಿಯಾದ ಬಳಿಕ ಅವರು ಹಿಂದುಳಿದ ವರ್ಗದವರು ಎಂಬುದನ್ನು ಬಿಜೆಪಿ ಗಟ್ಟಿಧ್ವನಿಯಲ್ಲಿ ಸಾರಿದೆ. ‘ಹಿಂದುಳಿದ ವರ್ಗದ ಹೆಮ್ಮೆ’ ಎಂದು ಅವರನ್ನು ಬಿಂಬಿಸಲು ಯತ್ನಿಸಿದೆ. ಬಳಿಕ, ದಲಿತ ಸಮುದಾಯದ ರಾಮನಾಥ ಕೋವಿಂದ್‌ ಅವರನ್ನು ರಾಷ್ಟ್ರಪತಿ ಹುದ್ದೆಗೆ ಏರಿಸಿದೆ.

‘ಬ್ರಾಹ್ಮಣ–ಬನಿಯಾ ಪಕ್ಷ’ ಎಂಬ ಹಣೆಪಟ್ಟಿ ಕಳಚಿಕೊಳ್ಳಲು ಬಿಜೆಪಿ ನಿರಂತರ ಪ್ರಯತ್ನ ನಡೆಸುತ್ತಲೇ ಬಂದಿದೆ. ಇದಕ್ಕೆ ದೊಡ್ಡ ಪ್ರತಿಫಲವೂ ಆ ಪಕ್ಷಕ್ಕೆ ಸಿಕ್ಕಿದೆ. ಉತ್ತರ ಪ್ರದೇಶದಲ್ಲಿ 2014ರ ಲೋಕಸಭಾ ಚುನಾವಣೆ ಮತ್ತು 2017ರ ವಿಧಾನಸಭಾ ಚುನಾವಣೆಯಲ್ಲಿ ಒಬಿಸಿ ಮತ್ತು ದಲಿತ ಸಮುದಾಯಗಳ ಗಣನೀಯ ಪ್ರಮಾಣದ ಮತಗಳು ಬಿಜೆಪಿಗೆ ಬಿದ್ದಿವೆ.

ಪ್ರಭಾವಿಯಲ್ಲದ ಒಬಿಸಿ ಮತ್ತು ದಲಿತ ಜಾತಿಗಳ ಬೆಂಬಲದ ಜತೆಗೆ ಹಿಂದುತ್ವದ ಬಲ ಬಿಜೆಪಿಯ ನೆಲೆಯನ್ನು ಸುಭದ್ರಗೊಳಿಸಿದೆ. ಹಾಗಾಗಿಯೇ, ಒಬಿಸಿ ಸಮುದಾಯಗಳು ಮತ್ತು ದಲಿತರನ್ನು ತಮ್ಮ ಪರವಾಗಿ ಧ್ರುವೀಕರಿಸಲುಪ್ರಾದೇಶಿಕ ಪಕ್ಷಗಳ ನಾಯಕರು ಯತ್ನಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT