ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಂತಿಯನ್ನು ಪಾಕಿಸ್ತಾನವೂ ಬಯಸುತ್ತಿದೆ; ಮಾತುಕತೆಗೆ ಸಕಾಲ: ಫಾರೂಕ್ ಅಬ್ದುಲ್ಲಾ

Published 12 ಜೂನ್ 2024, 10:48 IST
Last Updated 12 ಜೂನ್ 2024, 10:48 IST
ಅಕ್ಷರ ಗಾತ್ರ

ಶ್ರೀನಗರ: ‘ನಮ್ಮ ನೆರೆಹೊರೆಯವರೊಂದಿಗೆ ಈಗಲೂ ಸಮಸ್ಯೆ ಮುಂದುವರಿದಿದೆ. ಸೇನಾ ಕಾರ್ಯಾಚರಣೆಯಿಂದ ಈ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ. ಪಾಕಿಸ್ತಾನ ಸರ್ಕಾರವೂ ಶಾಂತಿಯುತ ವಾತಾವರಣ ಬಯಸುತ್ತಿದೆ. ಮಾತುಕತೆಗೆ ಇದು ಸಕಾಲ’ ಎಂದು ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್‌ನ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.

ಎಎನ್‌ಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಅವರು, ‘ಈಗಲೂ ಭಯೋತ್ಪಾದಕರು ಗಡಿ ದಾಟಿ ಬರುತ್ತಿದ್ದಾರೆ. ಯಾವುದೇ ಸರ್ಕಾರವಿರಲಿ, ಇಲ್ಲಿನ ಜನರು ಈ ಪರಿಸ್ಥಿತಿಯನ್ನು ಎದುರಿಸಲೇಬೇಕಾಗಿದೆ. ಕಾಶ್ಮಿರದ ಜನ ಈ ಸಮಸ್ಯೆಯಿಂದ ಹೊರಬರಬೇಕಿದೆ’ ಎಂದಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರ ಮೂಲಕ ಪ್ರಮುಖ ಯಾತ್ರೆಯಾದ ಅಮರನಾಥ ಯಾತ್ರೆ ಆರಂಭವಾಗುತ್ತದೆ. ಇಲ್ಲಿ ನಡೆಯುವ ಯಾವುದೇ ಅಹಿತಕರ ಘಟನೆಯು ಇಡೀ ದೇಶವನ್ನೇ ವ್ಯಾಪಿಸುತ್ತದೆ. ಕಾಶ್ಮೀರದ ಜನ ಇಂಥ ಯಾವುದೇ ಘಟನೆಗಳಿಗೂ ಹೊಣೆಗಾರರಲ್ಲ. ನಾವು ಯಾವುದರ ಪರವೂ ಇಲ್ಲ. ಇಂಥ ಪರಿಸ್ಥಿತಿಯಲ್ಲೇ ಲೋಕಸಭಾ ಚುನಾವಣೆ ನಡೆದಿದೆ. ಮುಂದೆ ವಿಧಾನಸಭಾ ಚುನಾವಣೆಯೂ ನಡೆಯಲಿದೆ’ ಎಂದಿದ್ದಾರೆ.

‘ಪಾಕಿಸ್ತಾನದಲ್ಲಿರುವ ಸರ್ಕಾರವೂ ಉಭಯ ರಾಷ್ಟ್ರಗಳ ನಡುವೆ ಶಾಂತಿಯನ್ನು ಬಯಸುತ್ತಿದೆ ಎಂಬುದು ನನ್ನ ಭಾವನೆ. ಈ ಕುರಿತ ಮಾತುಕತೆಗೆ ಬಾಗಿಲು ತೆರೆಯೋಣ. ದಕ್ಷಿಣ ಏಷ್ಯಾದ ಹಿತಕ್ಕಾಗಿಯೇ ಸಾರ್ಕ್‌ ರಚಿಸಲಾಗಿದೆ. ಹೀಗಾಗಿ ಸಾರ್ಕ್‌ ಸಮಿತಿಯನ್ನು ಪುನರ್‌ ಪರಿಶೀಲಿಸೋಣ’ ಎಂದು ಫಾರೂಕ್ ಸಲಹೆ ನೀಡಿದ್ದಾರೆ.

‘ಸೇನಾ ಕಾರ್ಯಾಚರಣೆ ಯಾವುದೇ ಸಮಸ್ಯೆಗೆ ಉತ್ತರವಾಗಲಾರದು ಎಂಬುದಕ್ಕೆ ರಷ್ಯಾ–ಉಕ್ರೇನ್ ಹಾಗೂ ಇಸ್ರೇಲ್‌–ಹಮಾಸ್‌ ನಡುವಿನ ಯುದ್ಧಗಳೇ ಸಾಕ್ಷಿ’ ಎಂದಿದ್ದಾರೆ.

ಪ್ರಧಾನಿಯಾಗಿ ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸುತ್ತಿರುವುದಕ್ಕೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರು ಎಕ್ಸ್‌ ಪೋಸ್ಟ್‌ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ನರೇಂದ್ರ ಮೋದಿ, ‘ಭಾರತದ ಜನರು ಸದಾ ಶಾಂತಿ, ಭದ್ರತೆ ಹಾಗೂ ಅಭಿವೃದ್ಧಿಯ ಆಲೋಚನೆಗಳಿಗೆ ಬೆಂಬಲ ನೀಡಿದ್ದಾರೆ’ ಎಂದಿದ್ದಾರೆ.

ಮಾತುಕತೆ ಮತ್ತು ಭಯೋತ್ಪಾದನೆ ಎರಡೂ ಸಮನಾಗಿ ಸಾಗಲು ಸಾಧ್ಯವಿಲ್ಲ. ಪಾಕಿಸ್ತಾನವನ್ನೂ ಒಳಗೊಂಡು ತನ್ನ ನೆರೆಯ ರಾಷ್ಟ್ರಗಳೊಂದಿಗೆ ಭಾರತ ಸಮಾನವಾದ ಸಂಬಂಧವನ್ನು ಹೊಂದಲು ಬಯಸುತ್ತಿದೆ ಎಂಬ ಸಂದೇಶವನ್ನು ಪಾಕಿಸ್ತಾನಕ್ಕೆ ಈ ಹಿಂದೆಯೇ ಭಾರತ ನೀಡಿದೆ.

ಜೂನ್ 9ರಂದು ರಯೀಸ್ ಜಿಲ್ಲೆಯಲ್ಲಿ ಶಿವ ಖೋರಿ ಯಾತ್ರಾ ಸ್ಥಳಕ್ಕೆ ತೆರಳುತ್ತಿದ್ದ ಬಸ್ಸಿನ ಮೇಲೆ ದಾಳಿ ನಡೆದ ಪರಿಣಾಮ 9 ಜನ ಮೃತಪಟ್ಟು, 42 ಜನ ಗಾಯಗೊಂಡಿದ್ದರು. ಈ ದಾಳಿಯಲ್ಲಿ ಬಸ್ಸು ಕಣಿವೆಗೆ ಕುಸಿದಿತ್ತು. ಜೂನ್ 11ರಂದು ರಾಷ್ಟ್ರೀಯ ರೈಫಲ್‌ ಮತ್ತು ಪೊಲೀಸ್ ಚೆಕ್‌ಪೋಸ್ಟ್‌ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಪರಿಣಾಮ ಐವರು ಸೈನಿಕರು ಹಾಗೂ ವಿಶೇಷ ಕರ್ತವ್ಯಾಧಿಕಾರಿ ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT