ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಗಣತಿ ಬೇಡಿಕೆಗೆ ಸ್ಪಂದಿಸದ ಮೋದಿ ಪರಿವಾರದಿಂದ ಜಾತಿ ಬಗ್ಗೆ ಮಾತು: ಕಾಂಗ್ರೆಸ್

Published 21 ಡಿಸೆಂಬರ್ 2023, 9:50 IST
Last Updated 21 ಡಿಸೆಂಬರ್ 2023, 9:50 IST
ಅಕ್ಷರ ಗಾತ್ರ

ನವದೆಹಲಿ: ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರನ್ನು ಅಣಕಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಕಿಡಿಕಾರಿದೆ. ಜಾತಿಗಣತಿ, ರೈತರ ಬೇಡಿಕೆಗಳ ವಿಚಾರದಲ್ಲಿ ಮೌನವಾಗಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಇದೀಗ ಜಾತಿ ಮತ್ತು ರೈತರ ವಿಚಾರವಾಗಿ ಧ್ವನಿ ಎತ್ತರಿಸುತ್ತಿದೆ ಎಂದು ಟೀಕಿಸಿದೆ.

ಅಮಾನತುಗೊಂಡಿರುವ ಸಂಸದರು ಸಂಸತ್‌ ಭವನದ ಮೆಟ್ಟಿಲುಗಳ ಮೇಲೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ತೃಣಮೂಲ ಕಾಂಗ್ರೆಸ್‌ ಪಕ್ಷದ ನಾಯಕ ಕಲ್ಯಾಣ್‌ ಬ್ಯಾನರ್ಜಿ ಅವರು ಧನಕರ್‌ ಅವರನ್ನು ಅಣಕಿಸಿದ್ದರು. ಇದನ್ನು ಆಡಳಿತ ಪಕ್ಷ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಇದು ರಾಜಕೀಯ ಪಕ್ಷಗಳ ಜಿದ್ದಾಜಿದ್ದಿಗೆ ಕಾರಣವಾಗಿದೆ.

ಧನಕರ್‌ ಅವರನ್ನು ಅಣಕಿಸಿರುವುದು ರೈತರು ಹಾಗೂ ಧನಕರ್‌ ಅವರ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್ ಅವರು, 'ಮೋದಿ ಪರಿವಾರವು, ಇದ್ದಕ್ಕಿದ್ದಂತೆ ರೈತರು ಮತ್ತು ಜಾತಿಯ ಬಗ್ಗೆ ಧ್ವನಿ ಏರಿಸಿ ಮಾತನಾಡುತ್ತಿದೆ. ಇದು, ಮೋದಿಯವರ ಜನಪ್ರಿಯ 3ಡಿ (Distortion, Diversion and Distraction) ಕೆಲಸವಾದ ವಿಷಯಾಂತರ ಮಾಡುವುದು, ಗಮನ ಬೇರೆಡೆ ಸೆಳೆಯುವುದು ಮತ್ತು ದಾರಿತಪ್ಪಿಸುವುದಲ್ಲದೆ ಬೇರೇನೂ ಅಲ್ಲ' ಎಂದು ಆರೋಪಿಸಿದ್ದಾರೆ.

'ಮಣಿಪುರ ಹಿಂಸಾಚಾರ ನಡೆಯುತ್ತಿದ್ದಾಗ, ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆದ ಪ್ರತಿಭಟನೆ ವೇಳೆ 700 ರೈತರು ಮೃತಪಟ್ಟಾಗ, ಮಹಿಳಾ ಕುಸ್ತಿಪಟುಗಳ ಮೇಲೆ ದೆಹಲಿ ಪೊಲೀಸರು ಹಲ್ಲೆ ನಡೆಸಿದಾಗ ಮತ್ತು ಬಿಜೆಪಿ ಸಂಸದರಿಂದ ಲೈಂಗಿಕ ದೌರ್ಜನ್ಯವಾದಾಗ, ಆಗಂತುಕರು ಡಿಸೆಂಬರ್‌ 13ರಂದು ಲೋಕಸಭೆಯೊಳಗೆ ನುಗ್ಗಲು ಬಿಜೆಪಿ ಸಂಸದ ಅವಕಾಶ ಕಲ್ಪಿಸಿದಾಗ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ವ್ಯವಸ್ಥೆಯಲ್ಲಿ ಅವಕಾಶ ಕಲ್ಪಿಸುವ ಮತ್ತು ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸುವ ಸಲುವಾಗಿ ಜಾತಿಗಣತಿ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಾಗ ಇಡೀ ಮೋದಿ ಪರಿವಾರ ಮೌನವಾಗಿತ್ತು' ಎಂದು ದೂರಿದ್ದಾರೆ.

ಉಪ ರಾಷ್ಟ್ರಪತಿಯವರನ್ನು ಅಣಕಿಸಿದ್ದರ ಬಗ್ಗೆ ರಾಷ್ಟ್ರಪತಿ ದ್ರೌ‍ಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಆಘಾತ ವ್ಯಕ್ತಪಡಿಸಿದ್ದಾರೆ. ಧನಕರ್ ಅವರು, ತಮ್ಮ ರೈತಾಪಿ ಹಿನ್ನೆಲೆ ಹಾಗೂ ಜಾಟ್ ಜಾತಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT