ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಥುರಾದ ಶಾಹಿ ಈದ್ಗಾ ಮಸೀದಿ ಸರ್ವೆ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

Published 16 ಜನವರಿ 2024, 6:49 IST
Last Updated 16 ಜನವರಿ 2024, 6:49 IST
ಅಕ್ಷರ ಗಾತ್ರ

ನವದೆಹಲಿ: ಶ್ರೀಕೃಷ್ಣನ ಜನ್ಮಸ್ಥಳಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮಥುರಾದ ಶ್ರೀಕೃಷ್ಣ ದೇವಾಲಯ ಪಕ್ಕದಲ್ಲಿರುವ ಶಾಹಿ ಈದ್ಗಾ ಮಸೀದಿ ಜಾಗದ ಸರ್ವೆಗೆ ಅನುಮತಿ ನೀಡಿದ ಅಲಹಾಬಾದ್ ಹೈಕೋರ್ಟ್‌ನ ಆದೇಶಕ್ಕೆ ಸುಪ್ರೀಂ ಕೋರ್ಟ್ ಇಂದು (ಮಂಗಳವಾರ) ತಡೆ ನೀಡಿದೆ.

ಪ್ರಕರಣ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿರುವ ಇತರ ಪ್ರಕ್ರಿಯೆಗಳು ಮುಂದುವರಿಯಲಿವೆ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ನೇತೃತ್ವದ ಪೀಠ ಸ್ಪಷ್ಟಪಡಿಸಿದೆ.

ಇದೇ ವೇಳೆ ಮಸೀದಿಯ ಪರ ವಕೀಲರ ವಾದ ಆಲಿಸಿದ ಪೀಠವು, ‘ಕಮಿಷನರ್‌ ನೇಮಕದ ಆದೇಶವನ್ನು ಕಾರ್ಯಗತಗೊಳಿಸುವುದಿಲ್ಲ’ ಎಂದು ಹೇಳಿದೆ.

ಶಾಹಿ ಈದ್ಗಾ ಸಮೀಕ್ಷೆ ಕುರಿತಾದ ಹೈಕೋರ್ಟ್ ಆದೇಶದ ವಿರುದ್ಧ ಮಸೀದಿ ಸಮಿತಿಯ ಮನವಿಗೆ ಹಿಂದೂ ಸಂಘಟನೆಯಾದ ಭಗವಾನ್ ಶ್ರೀ ಕೃಷ್ಣ ವಿರಾಜಮಾನ ಮತ್ತು ಇತರರು ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಶ್ರೀಕೃಷ್ಣನ ಜನ್ಮಸ್ಥಳದ ಮೇಲೆ ಮಸೀದಿ ನಿರ್ಮಿಸಲಾಗಿದೆ ಎಂದು ಸಲ್ಲಿಕೆಯಾದ ಅರ್ಜಿಗೆ ಸಂಬಂಧಿಸಿದಂತೆ ಮಸೀದಿ ಜಾಗದಲ್ಲಿ ಸರ್ವೆ ನಡೆಸಲು ಅಲಹಾಬಾದ್ ಹೈಕೋರ್ಟ್ 2023ರ ಡಿಸೆಂಬರ್ 14ರಂದು ಅನುಮತಿ ನೀಡಿತ್ತು. ಈ ಆದೇಶಕ್ಕೆ ತಡೆ ನೀಡಬೇಕು ಎಂದು ಮಸೀದಿ ಪರ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

‘ಈ ಪ್ರಕರಣದಲ್ಲಿ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದ ಹೈಕೋರ್ಟ್, ಪ್ರತಿವಾದಿಗಳಿಗೆ ರಿಟ್ ಅರ್ಜಿ ಸಲ್ಲಿಸಲು ಸೂಚಿಸಿತ್ತು. ಆದರೆ ಈಗ, ಕೆಲವು ಅರ್ಜಿಗಳನ್ನು ಮಾತ್ರ ಪುರಸ್ಕರಿಸಿದ್ದು, ಇದು ದೂರಗಾಮಿ ಪರಿಣಾಮಗಳನ್ನು ಉಂಟು ಮಾಡುತ್ತದೆ’ ಎಂದು ಮಸೀದಿ ಪರ ವಕೀಲ ಹುಝೇಫಾ ಅಹಮದಿ ವಾದಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಈ ಹಂತದಲ್ಲಿ ನಾವು ಏನನ್ನೂ ಹೇಳುವಂತಿಲ್ಲ. ಒಂದೊಮ್ಮೆ ಆದೇಶ ವ್ಯತಿರಿಕ್ತವಾಗಿದ್ದಲ್ಲಿ ಇದೇ ಪೀಠದ ಮುಂದೆ ಅರ್ಜಿ ಸಲ್ಲಿಸಿ’ ಎಂದು ಹೇಳುವ ಮೂಲಕ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT