ಗುವಾಹಟಿ: ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಬಾಂಗ್ಲಾದೇಶದ ಇಬ್ಬರು ಪ್ರಜೆಗಳನ್ನು ವಾಪಸ್ ಕಳುಹಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
ಬಾದರ್‌ಪುರ ರೈಲು ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಇಬ್ಬರು ಭಾರತಕ್ಕೆ ಅಕ್ರಮವಾಗಿ ಪ್ರವೇಶ ಮಾಡಿರುವುದನ್ನು ಪತ್ತೆ ಹಚ್ಚಲಾಗಿತ್ತು.
ಬಿಎಸ್‌ಎಫ್ ಸಹಯೋಗದಲ್ಲಿ ಅಸ್ಸಾಂ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಇಬ್ಬರನ್ನು ಬಾಂಗ್ಲಾದೇಶದ ಮಾಡೆಲ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಮಾಸುಮ್ ಖಾನ್ ಮತ್ತು ಢಾಕಾದ ಸೋನಿಯಾ ಅಖ್ತರ್ ಎಂದು ಗುರುತಿಸಲಾಗಿದೆ.
ಮಾಧೋಪುರ್ (ಬಾಂಗ್ಲಾದೇಶ)-ಅಗರ್ತಲಾ ಮಾರ್ಗದ ಮೂಲಕ ಭಾರತಕ್ಕೆ ಪ್ರವೇಶಿಸಿರುವ ಇವರು ಬೆಂಗಳೂರಿಗೆ ಹೋಗಲು ಯೋಜನೆ ಹಾಕಿದ್ದರು.
ಕಳೆದ ಒಂದು ತಿಂಗಳಲ್ಲಿ ಸರಿಯಾದ ದಾಖಲೆಗಳಿಲ್ಲದೆ ಭಾರತಕ್ಕೆ ಪ್ರವೇಶಿಸಲು ಯತ್ನಿಸಿದ 30ಕ್ಕೂ ಅಧಿಕ ಬಾಂಗ್ಲಾದ ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ. ಜವಳಿ ಉದ್ಯಮದಲ್ಲಿ ಕೆಲಸ ಹುಡುಕಿಕೊಂಡು ಬೆಂಗಳೂರು ಹಾಗೂ ದಕ್ಷಿಣ ಭಾರತದ ನಗರಗಳಿಗೆ ಹೋಗಲು ಯತ್ನಿಸಿದ್ದಾರೆ ಎಂದು ಶರ್ಮಾ ಮಾಹಿತಿ ನೀಡಿದ್ದಾರೆ.