ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ತಂದೆ–ತಾಯಿಯನ್ನು ಗುರಿ ಮಾಡಿದ್ದು ಏಕೆ: ಮೋದಿಗೆ ಕೇಜ್ರಿವಾಲ್‌ ಪ್ರಶ್ನೆ

Published 23 ಮೇ 2024, 15:28 IST
Last Updated 23 ಮೇ 2024, 15:28 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ಮಣಿಸುವ ಉದ್ದೇಶದಿಂದ ತಮ್ಮ ವಯೋವೃದ್ಧ ತಂದೆ–ತಾಯಿಯನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುರುವಾರ ಆರೋಪಿಸಿದ್ದಾರೆ. ಅಲ್ಲದೆ, ಮೋದಿ ಅವರು ಎಲ್ಲ ಮಿತಿಗಳನ್ನೂ ಮೀರಿದ್ದಾರೆ ಎಂದು ದೂರಿದ್ದಾರೆ.

ವರ್ಚುವಲ್ ಆಗಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಪ್ರಧಾನಿ ಮೋದಿ ಅವರಿಗೆ ಸಂದೇಶವೊಂದನ್ನು ರವಾನಿಸುತ್ತಿರುವುದಾಗಿ ಹೇಳಿದರು. ‘ಪ್ರಧಾನಿ ಮೋದಿ ಅವರಿಗೆ ನನ್ನದೊಂದು ಸಂದೇಶ, ಮನವಿ ಇದೆ. ನೀವು ನನ್ನ ಶಾಸಕರನ್ನು ಬಂಧಿಸಿದಿರಿ. ಆದರೆ ನಾನು ಮಣಿಯಲಿಲ್ಲ. ನೀವು ನನ್ನ ಸಚಿವರನ್ನು ಬಂಧಿಸಿದಿರಿ, ಆದರೆ ನಾನು ಬಾಗುವಂತೆ ಮಾಡಲು ಆಗಲಿಲ್ಲ. ನೀವು ನನ್ನನ್ನು ಬಂಧಿಸಿದಿರಿ, ನನಗೆ ಜೈಲಿನಲ್ಲಿ ಕಿರುಕುಳ ನೀಡಲಾಯಿತು’ ಎಂದು ಕೇಜ್ರಿವಾಲ್ ವಿವರಿಸಿದರು.

‘ಆದರೆ ಇಂದು ನೀವು ಎಲ್ಲ ಮಿತಿಗಳನ್ನೂ ಮೀರಿದಿರಿ. ನನ್ನನ್ನು ಮಣಿಸಲು ನೀವು ನನ್ನ ವಯೋವೃದ್ಧ, ಅನಾರೋಗ್ಯಕ್ಕೆ ತುತ್ತಾಗಿರುವ ಪಾಲಕರನ್ನು ಗುರಿಯಾಗಿಸಿಕೊಂಡಿದ್ದೀರಿ. ನನ್ನ ತಾಯಿ ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ನನ್ನ ಬಂಧನ ಆದ ದಿನ (ಮಾರ್ಚ್ 21) ಆಕೆ ಆಸ್ಪತ್ರೆಯಿಂದ ವಾಪಸ್ಸಾಗಿದ್ದಳು. ನನ್ನ ತಂದೆಗೆ 85 ವರ್ಷ ವಯಸ್ಸು, ಅವರಿಗೆ ಶ್ರವಣ ಸಮಸ್ಯೆ ಇದೆ. ನನ್ನ ತಂದೆ–ತಾಯಿ ದೋಷಿಗಳು ಎಂದು ನೀವು ಭಾವಿಸಿದ್ದೀರಾ? ನನ್ನ ತಂದೆ–ತಾಯಿಗೆ ಕಿರುಕುಳ ನೀಡುತ್ತಿರುವುದು ಏಕೆ? ದೇವರು ನಿಮ್ಮನ್ನು ಕ್ಷಮಿಸುವುದಿಲ್ಲ’ ಎಂದು ಕೇಜ್ರಿವಾಲ್ ಹೇಳಿದರು.

ದೆಹಲಿ ಪೊಲೀಸರು ತಮ್ಮ ತಂದೆ–ತಾಯಿಯನ್ನು ಗುರುವಾರ ವಿಚಾರಣೆಗೆ ಗುರಿಪಡಿಸಲಿದ್ದಾರೆ ಎಂದು ಕೇಜ್ರಿವಾಲ್ ಅವರು ಬುಧವಾರ ಹೇಳಿದ್ದರು. ಆದರೆ, ಮೂಲಗಳ ಪ್ರಕಾರ, ದೆಹಲಿ ಪೊಲೀಸರು, ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರ ತಂದೆ–ತಾಯಿಯನ್ನು ವಿಚಾರಣೆಗೆ ಗುರಿಪಡಿಸಲು ಗುರುವಾರ ಅವರ ನಿವಾಸಕ್ಕೆ ತೆರಳಿದ ಬಗ್ಗೆ ವರದಿಯಾಗಿಲ್ಲ. ಸ್ವಾತಿ ಅವರ ಮೇಲೆ ಕೇಜ್ರಿವಾಲ್ ನಿವಾಸದಲ್ಲಿ ಮೇ 13ರಂದು ಹಲ್ಲೆ ನಡೆದಿದೆ ಎಂಬ ದೂರು ದಾಖಲಾಗಿದೆ.

ಈ ಪ್ರಕರಣದಲ್ಲಿ ಕೇಜ್ರಿವಾಲ್ ಅವರ ಆಪ್ತ ಬಿಭವ್ ಕುಮಾರ್ ಅವರನ್ನು ಬಂಧಿಸಲಾಗಿದೆ. 

‍ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಅರವಿಂದ ಕೇಜ್ರಿವಾಲ್ ತಮ್ಮ ಬಂಧನ ಸೇರಿದಂತೆ ಹಲವು ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ. ಅವರ ಮಾತುಗಳಲ್ಲಿ ಕೆಲವು ಇಲ್ಲಿವೆ...

  • ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ನಾನು ರಾಜೀನಾಮೆ ನೀಡುವುದಿಲ್ಲ. ಏಕೆಂದರೆ ಹಾಗೆ ಮಾಡಿದರೆ ಕೇಂದ್ರ ಸರ್ಕಾರಕ್ಕೆ ಬಿಜೆಪಿಯನ್ನು ರಾಜಕೀಯವಾಗಿ ವಿರೋಧಿಸುವ ಮಮತಾ ಬ್ಯಾನರ್ಜಿ ಎಂ.ಕೆ. ಸ್ಟಾಲಿನ್ ಅವರಂತಹ ಮುಖ್ಯಮಂತ್ರಿಗಳನ್ನು ಗುರಿಯಾಗಿಸಿಕೊಳ್ಳಲು ಪೂರ್ವನಿದರ್ಶನ ಹಾಕಿಕೊಟ್ಟಂತೆ ಆಗುತ್ತದೆ.

  • ದೆಹಲಿ ಮುಖ್ಯಮಂತ್ರಿಯಾಗಿ ನನ್ನ ಜವಾಬ್ದಾರಿಗಳನ್ನು ಜೈಲಿನಿಂದಲೇ ನಿಭಾಯಿಸಲು ಅವಕಾಶ ಕಲ್ಪಿಸುವಂತೆ ನ್ಯಾಯಾಲಯವನ್ನು ಕೋರಲಿದ್ದೇನೆ.

  • ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ನನ್ನ ನೇತೃತ್ವದ ಸರ್ಕಾರ ಉರುಳುತ್ತದೆ ಎಂದು ಮೋದಿ ಅವರು ನನ್ನ ಬಂಧನ ಆಗುವಂತೆ ನೋಡಿಕೊಂಡರು. ಆದರೆ ಅವರ ಪಿತೂರಿಗೆ ಯಶಸ್ಸು ಸಿಗಲು ನಾನು ಬಿಡುವುದಿಲ್ಲ. ಅಬಕಾರಿ ನೀತಿಗೆ ಸಂಬಂಧಿಸಿದ ಪ್ರಕರಣವು ಸಂಪೂರ್ಣವಾಗಿ ಸುಳ್ಳು.

  • ನಾನು ಹಣ ಪಡೆದಿದ್ದರೆ ಒಳಗೊಳಗೇ ದುರ್ಬಲನಾಗುತ್ತಿದ್ದೆ. ಬಹುಶಃ ಬಿಜೆಪಿ ಸೇರುತ್ತಿದ್ದೆ; ನನ್ನೆಲ್ಲ ಪಾಪಗಳನ್ನು ಕ್ಷಮಿಸಲಾಗುತ್ತಿತ್ತು.

  • ಅಬಕಾರಿ ನೀತಿಗೆ ಸಂಬಂಧಿಸಿದ ಹಗರಣವು ₹1100 ಕೋಟಿ ಮೌಲ್ಯದ್ದು ಎಂದು ಬಿಜೆಪಿಯವರು ಕಳೆದ ಕೆಲವು ವಾರಗಳಿಂದ ಹೇಳಲು ಆರಂಭಿಸಿದ್ದಾರೆ. ಇಷ್ಟೆಲ್ಲ ಹಣ ಎಲ್ಲಿ ಹೋಗಿದೆ? ಒಂದು ಪೈಸೆಯನ್ನಾದರೂ ವಶಪಡಿಸಿಕೊಳ್ಳಲಾಗಿದೆಯೇ? ಚಿನ್ನಾಭರಣ ವಶಪಡಿಸಿಕೊಳ್ಳಲಾಯಿತೇ? ಪುರಾವೆಯೇ ಇಲ್ಲ. ನಮ್ಮನ್ನು ಬಂಧಿಸಲಿಕ್ಕಾಗಿಯೇ ಈ ಪ್ರಕರಣ ಸೃಷ್ಟಿಸಲಾಗಿದೆ.

  • ತಿಹಾರ್ ಜೈಲಿಗೆ ಮರಳಬೇಕಾದ ಬಗ್ಗೆ ನನಗೆ ತಲೆಬಿಸಿ ಅಥವಾ ಆತಂಕ ಇಲ್ಲ. ಇದು ದೇಶವನ್ನು ಉಳಿಸಲು ನನ್ನ ಹೋರಾಟದ ಒಂದು ಭಾಗ. ಜೈಲಿನಲ್ಲಿ ಇದ್ದಾಗ ಭಗವದ್ಗೀತೆಯನ್ನು ಎರಡು ಬಾರಿ ಓದಿದೆ. ಅದು ನನ್ನ ದೃಷ್ಟಿಕೋನವನ್ನು ಬದಲಾಯಿಸಿತು.

  • ತಿಹಾರ್‌ ಜೈಲಿನಲ್ಲಿ ಇದ್ದಾಗ ಸಿಸಿಟಿವಿ ಕ್ಯಾಮೆರಾ ಮೂಲಕ ನನ್ನ ಮೇಲೆ ನಿರಂತರ ನಿಗಾ ಇರಿಸಲಾಗಿತ್ತು. ಜೈಲಿನ 13 ಮಂದಿ ಅಧಿಕಾರಿಗಳು ಪ್ರಧಾನಿ ಕಚೇರಿ ನನ್ನನ್ನು ಗಮನಿಸುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT