ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
3000 ಗ್ರಾಮಗಳಿಗೆ ಸರ್ಕಾರಿ ಬಸ್ಸೇ ಹೋಗಲ್ಲ: ಖಾಸಗಿಯೇ ಆಸರೆ; ಸಿಗುವುದೇ ‘ಶಕ್ತಿ’ ಯೋಜನೆ?
3000 ಗ್ರಾಮಗಳಿಗೆ ಸರ್ಕಾರಿ ಬಸ್ಸೇ ಹೋಗಲ್ಲ: ಖಾಸಗಿಯೇ ಆಸರೆ; ಸಿಗುವುದೇ ‘ಶಕ್ತಿ’ ಯೋಜನೆ?
ಈ ಗ್ರಾಮಗಳ ಸ್ತ್ರೀಯರಿಗೆ ಉಚಿತ ಬಸ್‌ ಯಾನ ಸದ್ಯ ಮರೀಚಿಕೆ
Published 9 ಜೂನ್ 2023, 1:40 IST
Last Updated 9 ಜೂನ್ 2023, 1:40 IST
ಅಕ್ಷರ ಗಾತ್ರ
ಸರ್ಕಾರ ಇದೇ 11ರಿಂದ ರಾಜ್ಯದ ಮಹಿಳೆಯರಿಗೆ ‘ಶಕ್ತಿ’ ಯೋಜನೆಯಡಿ ಆಯ್ದ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯ ಕಲ್ಪಿಸಿದೆ. ಆದರೆ ಖಾಸಗಿ ಬಸ್ಸುಗಳೇ ಹೆಚ್ಚಿರುವ ಜಿಲ್ಲೆಗಳಲ್ಲಿ, ಗ್ರಾಮೀಣ ಭಾಗಗಳಲ್ಲಿ ಹಾಗೂ ಸರ್ಕಾರಿ ಬಸ್ಸುಗಳೇ ಸಂಚರಿಸದ ಪ್ರದೇಶಗಳಲ್ಲಿ ಸ್ತ್ರೀಯರಿಗೆ ಈ ಯೋಜನೆ ಕೈಗೆಟಕುತ್ತದೆಯೇ?

ಸರ್ಕಾರ ಇದೇ 11ರಿಂದ ರಾಜ್ಯದ ಮಹಿಳೆಯರಿಗೆ ‘ಶಕ್ತಿ’ ಯೋಜನೆಯಡಿ ಆಯ್ದ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯ ಕಲ್ಪಿಸಿದೆ. ಆದರೆ ಖಾಸಗಿ ಬಸ್ಸುಗಳೇ ಹೆಚ್ಚಿರುವ ಜಿಲ್ಲೆಗಳಲ್ಲಿ, ಗ್ರಾಮೀಣ ಭಾಗಗಳಲ್ಲಿ ಹಾಗೂ ಸರ್ಕಾರಿ ಬಸ್ಸುಗಳೇ ಸಂಚರಿಸದ ಪ್ರದೇಶಗಳಲ್ಲಿ ಸ್ತ್ರೀಯರಿಗೆ ಈ ಯೋಜನೆ ಕೈಗೆಟಕುತ್ತದೆಯೇ?

‘ನಮ್ಮೂರಿಗೆ ಸರ್ಕಾರಿ ಬಸ್ಸೇ ಬರಲ್ಲ ಸೋಮಿ. ಖಾಸಗಿ ಬಸ್ ಮಾತ್ರ ಇರೋದು. ಎಲ್ಲಿಗೇ ಹೋಗೋದಿದ್ರೂ ಪ್ರೈವೇಟ್‌ ಗಾಡಿಯಲ್ಲೇ ಹೋಗಬೇಕು. ನಮ್ಮಂಥ ಊರಿನೋರಿಗೆ ಫ್ರೀ ಬಸ್‌ ಹೆಂಗೆ ಸಿಗುತ್ತೆ’‌

– ಹೀಗೆಂದು ಪ್ರಶ್ನಿಸುತ್ತಾರೆ ಚಿತ್ರದುರ್ಗ ತಾಲ್ಲೂಕಿನ ಕೊಣನೂರು ಗ್ರಾಮದ ಗೃಹಿಣಿ ರಶ್ಮಿ.

‘ನಮ್ಮ ಊರಿಗೆ ಸರ್ಕಾರಿ ಬಸ್ಸು, ಖಾಸಗಿ ಬಸ್ಸು ಯಾವುದೂ ಬರುವುದಿಲ್ಲ. ಎಲ್ಲದಕ್ಕೂ ಆಪೆ ಆಟೊ, ಮೋಟಾರು ಸೈಕಲ್‌ಗಳನ್ನೇ ಅವಲಂಬಿಸಿದ್ದೇವೆ. ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವುದು ಒಳ್ಳೆಯದು. ಆದರೆ ಬಸ್ಸೇ ಬಾರದ ನಮ್ಮಂತಹ ಊರಿನ ಮಹಿಳೆಯರ ಗತಿಯೇನು? ಈ ಯೋಜನೆಯ ಸೌಲಭ್ಯ ನಮಗೆ ಸಿಗದೇ’ ಎಂಬುದು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಎಚ್‌. ಪ್ರೀತಿ ಅವರ ಪ್ರಶ್ನೆ.

ಸರ್ಕಾರಿ ಬಸ್‌ ಸೇವೆ ಕಾಣದ ಗ್ರಾಮಗಳ ಬಹುತೇಕ ಮಹಿಳೆಯರ ಅಭಿಪ್ರಾಯ ಇದೇ ರೀತಿಯದ್ದಾಗಿದೆ. ಅಂಕಿ ಅಂಶಗಳ ಪ್ರಕಾರ ರಾಜ್ಯದ 3,000ಕ್ಕೂ ಹೆಚ್ಚು ಗ್ರಾಮಗಳಿಗೆ ಸರ್ಕಾರಿ ಬಸ್ಸುಗಳ ಸೇವೆ ದೊರೆತಿಲ್ಲ. ಈ ಗ್ರಾಮಗಳೂ ಸೇರಿದಂತೆ ಹತ್ತಾರು ಸಾವಿರ ಗ್ರಾಮಗಳಲ್ಲಿ ಜನರು ಹೆಚ್ಚಾಗಿ ಅವಲಂಬಿಸಿರುವುದು ಖಾಸಗಿ ಬಸ್ಸು ಅಥವಾ ವಾಹನಗಳನ್ನು. ರಾಜ್ಯದಲ್ಲಿ ಸುಮಾರು 16 ಸಾವಿರ ಖಾಸಗಿ ಬಸ್‌ಗಳು ಜನರಿಗೆ ಸೇವೆ ಒದಗಿಸುತ್ತಿವೆ.

ಗ್ರಾಮಕ್ಕೆ ಅಥವಾ ಸಮೀಪದ ಮಾರ್ಗಕ್ಕೆ ಬಸ್ಸುಗಳೇ ಬಾರದೇ ಮಹಿಳೆ, ‘ಶಕ್ತಿ’ ಯೋಜನೆಯ ಫಲಾನುಭವಿ ಆಗುವುದಾದರೂ ಹೇಗೆ? ಬೆಂಗಳೂರಿಗೆ ಹೊಂದಿಕೊಂಡಿರುವ ಮಾಗಡಿ, ಹೊಸಕೋಟೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ರೈತ ಮಹಿಳೆಯರು ತಾವು ಬೆಳೆದ ತರಕಾರಿ, ಸೊಪ್ಪು, ಹೂವನ್ನು ಬೆಂಗಳೂರಿನ ಕೆ.ಆರ್. ಮಾರುಕಟ್ಟೆಗೆ ಸಾಗಿಸಲು ನಿತ್ಯ ಖಾಸಗಿ ಸಾರಿಗೆಯನ್ನೇ ಅವಲಂಬಿಸಿದ್ದಾರೆ. ಇಂಥವರಿಗೆ ಸರ್ಕಾರ ‘ಶಕ್ತಿ’ ಯೋಜನೆಯನ್ನು ಹೇಗೆ ಜಾರಿಗೊಳಿಸುತ್ತದೆ ಎಂಬ ಪ್ರಶ್ನೆ ಗ್ರಾಮೀಣ ಭಾಗದ ಬಹುತೇಕ ಮಹಿಳೆಯರನ್ನು ಕಾಡುತ್ತಿದೆ.

ಇಲ್ಲಿ ಸರ್ಕಾರಿ ಸಾರಿಗೆ ವಿರಳ:

ಉಡು‍ಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶತಮಾನದಿಂದ ಖಾಸಗಿ ಬಸ್ಸುಗಳು ಜನರಿಗೆ ಸೇವೆ ಒದಗಿಸುತ್ತಿವೆ. ಮಂಗಳೂರು ಮತ್ತು ಉಡುಪಿ ನಗರಗಳಲ್ಲಿ ಕೆಎಸ್‌ಆರ್‌ಟಿಸಿ ನಗರ ಸಾರಿಗೆ ಬಸ್‌ಗಳಿದ್ದರೂ, ಅವುಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ‘ಜೆ– ನರ್ಮ್‌’ ಯೋಜನೆಯಡಿ ರಾಜ್ಯದ ಇತರ ನಗರಗಳಲ್ಲಿ ಸಾರಿಗೆ ಸಂಸ್ಥೆಯವರು ಬಸ್‌ಗಳನ್ನು ಖರೀದಿಸಿದ್ದರೂ, ಈ ಎರಡು ನಗರಗಳಲ್ಲಿ ಸೇವೆ ಒದಗಿಸುತ್ತಿರುವ ಬಸ್ಸುಗಳ ಸಂಖ್ಯೆ ತೀರಾ ಕಡಿಮೆ.

ಮಂಗಳೂರು ನಗರವೊಂದರಲ್ಲೇ ಖಾಸಗಿಯವರಿಗೆ ಸೇರಿದ 328 ನಗರ ಸಾರಿಗೆ ಬಸ್ಸುಗಳು ನಿತ್ಯ ಸಾವಿರಕ್ಕೂ ಹೆಚ್ಚು ಟ್ರಿಪ್‌ಗಳನ್ನು ಮಾಡುತ್ತಿವೆ. ಆದರೆ ಸರ್ಕಾರಿ ಬಸ್ಸುಗಳ ಸಂಖ್ಯೆ ಎರಡಂಕಿ ದಾಟಿಲ್ಲ. ಜಿಲ್ಲೆಯಲ್ಲಿ 400ಕ್ಕೂ ಹೆಚ್ಚು ಖಾಸಗಿ ಸರ್ವಿಸ್‌ ಬಸ್‌ಗಳಿದ್ದು ಅವು ಸಾವಿರಕ್ಕೂ ಹೆಚ್ಚು ಟ್ರಿಪ್‌ಗಳನ್ನು ನಡೆಸುತ್ತಿವೆ. ರಾಷ್ಟ್ರೀಕರಣಗೊಂಡಿರುವ ರಸ್ತೆಗಳಲ್ಲಿ ಖಾಸಗಿಯವರಿಗೆ ಸೇರಿದ ಒಪ್ಪಂದದ ಸಾರಿಗೆಯ (ಕಾಂಟ್ರ್ಯಾಕ್ಟ್‌ ಕ್ಯಾರೇಜ್‌) 68 ಬಸ್‌ಗಳು ಸೇವೆ ನೀಡುತ್ತಿವೆ. ಇವುಗಳಿಗೆ ಹೋಲಿಸಿದರೆ ಸರ್ಕಾರಿ ಬಸ್‌ಗಳ ಸಂಖ್ಯೆ ಕಡಿಮೆಯೇ.

ಸರ್ಕಾರಿ ಬಸ್ಸಿಗೆ ಒತ್ತಾಯ:

‘ಶಕ್ತಿ’ ಯೋಜನೆ ಜಾರಿಯ ಘೋಷಣೆಯಾಗುತ್ತಿದ್ದಂತೆಯೇ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸರ್ಕಾರಿ ಬಸ್‌ಗಳ ಸಂಖ್ಯೆ ಹೆಚ್ಚಿಸುವಂತೆ ವಿವಿಧ ವರ್ಗದವರಿಂದ ಒತ್ತಡ ಆರಂಭವಾಗಿದೆ. ಕೊರೊನಾ ಕಾಲದಲ್ಲಿ ಸೇವೆ ಸ್ಥಗಿತಗೊಳಿಸಿದ್ದ ಕೆಲವು ಮಾರ್ಗಗಳಲ್ಲಿ ಮತ್ತೆ ಸೇವೆಯನ್ನು ಸಾರಿಗೆ ನಿಗಮವು ಆರಂಭ ಮಾಡಿಲ್ಲ. ಅಂಥ ಕಡೆಗಳಲ್ಲಿ ಪುನಃ ಸೇವೆ ಆರಂಭಿಸಬೇಕು, ಗ್ರಾಮೀಣ ಪ್ರದೇಶಕ್ಕೆ ಸೇವೆ ಹೆಚ್ಚಿಸಬೇಕು ಎಂದು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆಗಳೂ ನಡೆದಿವೆ.

ಇನ್ನೊಂದೆಡೆ, ‘ಸರ್ಕಾರಿ ಬಸ್‌ಗಳನ್ನು ಹೆಚ್ಚಿಸಿ, ಜಿಲ್ಲೆಯ ಮಹಿಳೆಯರಿಗೂ ‘ಶಕ್ತಿ ಯೋಜನೆ’ಯ ಲಾಭ ಸಿಗುವಂತೆ ಮಾಡಿ’ ಎಂದು ರಾಜಕೀಯ ಪಕ್ಷಗಳ ಮುಖಂಡರು ಒತ್ತಾಯ, ಪ್ರತಿಭಟನೆಯನ್ನೂ ಆರಂಭಿಸಿದ್ದಾರೆ.

ಖಾಸಗಿ ಮೇಲೆಯೇ ಅವಲಂಬನೆ:

ಚಿತ್ರದುರ್ಗ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಬಸ್‌ ಸೇವೆಯೇ ಪರಿಣಾಮಕಾರಿಯಾಗಿದೆ. ಜಿಲ್ಲೆಯಲ್ಲಿ 450ಕ್ಕೂ ಅಧಿಕ ಖಾಸಗಿ ಬಸ್ಸುಗಳು ಸುಮಾರು 400 ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಬಹುತೇಕ ಮಾರ್ಗಗಳಲ್ಲಿ ಸರ್ಕಾರಿ ಬಸ್‌ ಸೇವೆ ಲಭ್ಯವಿಲ್ಲ.

ಚಿಕ್ಕಮಗಳೂರು ಜಿಲ್ಲೆಯಲ್ಲಿ 280ಕ್ಕೂ ಹೆಚ್ಚು ಖಾಸಗಿ ಬಸ್ಸುಗಳು ಕಾರ್ಯಾಚರಣೆ ಮಾಡುತ್ತಿವೆ. ಪ್ರಮುಖವಾಗಿ ಕೊಪ್ಪ ಮತ್ತು ಸುತ್ತಮುತ್ತಲ ಗ್ರಾಮೀಣ ಪ್ರದೇಶಕ್ಕೆ ಖಾಸಗಿ ಬಸ್ಸುಗಳೇ ನರನಾಡಿ. ಈ ಭಾಗದಲ್ಲಿ 130ಕ್ಕೂ ಹೆಚ್ಚು ಬಸ್ಸುಗಳು ಸಂಚರಿಸುತ್ತಿವೆ. ಚಿಕ್ಕಮಗಳೂರು ನಗರದಿಂದಲೂ 40ಕ್ಕೂ ಹೆಚ್ಚು ಬಸ್‌ಗಳು ನಿಗದಿತ ಗ್ರಾಮೀಣ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ತರೀಕೆರೆ ಮತ್ತು ಕಡೂರು ಭಾಗದಲ್ಲೂ ಖಾಸಗಿ ಬಸ್‌ಗಳನ್ನು ಜನ ಅವಲಂಬಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್‌ಗಳು ಮುಖ್ಯ ರಸ್ತೆಯಲ್ಲಿ ಮಾತ್ರ ಸಂಚರಿಸುತ್ತಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಅದರಲ್ಲೂ ಮಲೆನಾಡಿನ ಗುಡ್ಡದಲ್ಲಿರುವ ಹಳ್ಳಿಗಳಿಗೆ ಖಾಸಗಿ ಬಸ್ಸುಗಳು ಸೇವೆ ಒದಗಿಸುತ್ತಿವೆ. ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದರೆ ಅವರು ಖಾಸಗಿ ಬಸ್ಸುಗಳನ್ನು ಹತ್ತುವುದಿಲ್ಲ. ಮುಖ್ಯರಸ್ತೆ ತನಕ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಸಾಗಿ, ಆ ಬಸ್ಸುಗಳು ಬಾರದ ಊರುಗಳಿಗೆ ತೆರಳಲು ಖಾಸಗಿ ಬಸ್ಸುಗಳಿಗಾಗಿ ಪ್ರಯಾಣಿಕರು ಕಾಯಬೇಕಾಗುತ್ತದೆ. ಖಾಸಗಿ ಬಸ್ಸುಗಳು ಮುಖ್ಯ ರಸ್ತೆಯಲ್ಲಿ ಖಾಲಿ– ಖಾಲಿಯಾಗಿ ಸಂಚರಿಸಿ, ಹಳ್ಳಿಗಳಿಗೆ ಮಾತ್ರ ಸೇವೆ ಒದಗಿಸುತ್ತವೆ ಎಂದು ನಿರೀಕ್ಷಿಸುವುದು ಹೇಗೆ ಎಂಬ ಜಿಜ್ಞಾಸೆಯೂ ಪ್ರಯಾಣಿಕರನ್ನು ಕಾಡುತ್ತಿದೆ.

ಕಾಡಂಚಿನಲ್ಲಿ ಖಾಸಗಿ ಬಸ್ಸುಗಳೇ ಗತಿ:

ಗಡಿ ಜಿಲ್ಲೆ ಚಾಮರಾಜನಗರದ ಹನೂರು ತಾಲ್ಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಖಾಸಗಿ ಬಸ್ಸುಗಳೇ ಹೆಚ್ಚು. ಗ್ರಾಮೀಣ ಪ್ರದೇಶದವರು ನಗರ, ಪಟ್ಟಣಗಳಿಗೆ ಬರಲು ಖಾಸಗಿ ಸಾರಿಗೆಯನ್ನೇ ಅವಲಂಬಿಸಿದ್ದಾರೆ. ‘ಹೆಚ್ಚುವರಿ ಬಸ್‌ಗಳನ್ನು ಕೊಡಿ’ ಎಂದು ಕೆಎಸ್‌ಆರ್‌ಟಿಸಿಗೆ ಹಲವು ವರ್ಷಗಳಿಂದ ಮನವಿ ಮಾಡುತ್ತಲೇ ಇದ್ದರೂ ಪ್ರಯೋಜನವಾಗಿಲ್ಲ.

ಬೆಟ್ಟ ಗುಡ್ಡಗಳಿಂದ ಕೂಡಿರುವ ಕೊಡಗು ಜಿಲ್ಲೆಯಲ್ಲೂ ತಾಲ್ಲೂಕು, ಹೋಬಳಿಗಳ ಸಂಪರ್ಕಕ್ಕೆ ಖಾಸಗಿ ಬಸ್ಸುಗಳ ಅವಲಂಬನೆಯೇ ಮುಂದುವರಿದಿದೆ.

ಮಂಡ್ಯ, ಮೈಸೂರು ಜಿಲ್ಲೆಗಳಲ್ಲೂ ಬಹುತೇಕರು ಖಾಸಗಿ ಬಸ್ಸುಗಳನ್ನೇ ಆಶ್ರಯಿಸಿದ್ದಾರೆ. ತಾಲ್ಲೂಕು, ಹೋಬಳಿ ಕೇಂದ್ರಗಳಿಂದ ತುಂಬಾ ದೂರದಲ್ಲಿರುವ ಊರುಗಳಿಗೆ ಕೆಎಸ್‌ಆರ್‌ಟಿಸಿ ಬಸ್ಸುಗಳು ದಿನಕ್ಕೆ ಒಂದೆರಡು ಬಾರಿಯಷ್ಟೇ ‌ಸಂಚರಿಸುತ್ತಿವೆ. ಮಂಡ್ಯ ಜಿಲ್ಲೆಯ ನಾಗಮಂಗಲ, ಮಳವಳ್ಳಿ, ಶ್ರೀರಂಗಪಟ್ಟಣ, ಹಲಗೂರು ಭಾಗದಲ್ಲಿ ಖಾಸಗಿ ಬಸ್ಸುಗಳು ಹೆಚ್ಚಾಗಿ ಓಡಾಡುತ್ತಿದ್ದು, ಕೆಎಸ್‌ಆರ್‌ಟಿಸಿ ಬಸ್ಸುಗಳ ಕೊರತೆ ಇದೆ. ಮಂಡ್ಯದಿಂದ 65 ಖಾಸಗಿ ಬಸ್ಸುಗಳು ಮಳವಳ್ಳಿ, ನಾಗಮಂಗಲ ಮಾರ್ಗದಲ್ಲಿ ಸಂಚರಿಸುತ್ತಿವೆ. 

ಖಾಸಗಿ ಸವಾರಿಯನ್ನೇ ನೆಚ್ಚಿಕೊಂಡಿರುವ ಜನ:

ದಾವಣಗೆರೆ ಜಿಲ್ಲೆಯ ಚನ್ನಗಿರಿ, ಜಗಳೂರು, ಹೊನ್ನಾಳಿ, ಮಲೇಬೆನ್ನೂರು, ಸಂತೇಬೆನ್ನೂರು ಭಾಗಗಳಲ್ಲಿ ಹೆಚ್ಚಾಗಿ ಖಾಸಗಿ ಬಸ್ಸುಗಳು ಸಂಚರಿಸುತ್ತವೆ.  ಶಿವಮೊಗ್ಗ, ಚಿತ್ರದುರ್ಗ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳಿಗೆ ದಾವಣಗೆರೆ ಜನರು ಖಾಸಗಿ ಬಸ್ಸುಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯಿಂದ 646 ಖಾಸಗಿ ಬಸ್ಸುಗಳು ಪಕ್ಕದ ದಾವಣಗೆರೆ, ಚಿತ್ರದುರ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾವೇರಿ, ಬಳ್ಳಾರಿ ಜಿಲ್ಲೆಗಳ ನಡುವೆ ಸಂಚರಿಸುತ್ತಿದ್ದು, ಜನರು ತಮ್ಮ ಸಂಚಾರಕ್ಕೆ ಇವುಗಳನ್ನೇ ನೆಚ್ಚಿಕೊಂಡಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಖಾಸಗಿ ಬಸ್ಸುಗಳು ನಿತ್ಯ ಸಂಚರಿಸುತ್ತಿವೆ. ಪ್ರಮುಖವಾಗಿ ತುಮಕೂರು– ಕುಣಿಗಲ್, ತುಮಕೂರು– ಮಧುಗಿರಿ– ಪಾವಗಡ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಬಸ್ಸುಗಳ ಓಡಾಟವಿದೆ.

ಚಿತ್ರದುರ್ಗದಲ್ಲಿ ಖಾಸಗಿ ಬಸ್‌ ಸೇವೆ ಪಡೆಯುತ್ತಿರುವ ಮಹಿಳೆ.
ಚಿತ್ರದುರ್ಗದಲ್ಲಿ ಖಾಸಗಿ ಬಸ್‌ ಸೇವೆ ಪಡೆಯುತ್ತಿರುವ ಮಹಿಳೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಖಾಸಗಿ ಬಸ್ಸುಗಳ ಸೇವೆ ಇದೆ. ಇವುಗಳು ಹೆಚ್ಚಾಗಿ ಬೆಂಗಳೂರಿಗೆ ಸಂಚರಿಸುತ್ತಿವೆ. ಬಾಗೇಪಲ್ಲಿ, ಶಿಡ್ಲಘಟ್ಟ ಮತ್ತು ಚಿಂತಾಮಣಿ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಖಾಸಗಿ ಬಸ್ಸುಗಳ ಅವಲಂಬನೆಯೇ ಹೆಚ್ಚಿದೆ. ರಾಮನಗರ ಜಿಲ್ಲೆಯಲ್ಲಿ ಸುಮಾರು 200 ಖಾಸಗಿ ಬಸ್ಸುಗಳು ಸಂಚರಿಸುತ್ತಿವೆ. ರಾಮನಗರ, ಕನಕಪುರ, ಮಾಗಡಿ, ಚನ್ನಪಟ್ಟಣ, ಬೆಂಗಳೂರು ಹಾಗೂ ಗ್ರಾಮೀಣ ಭಾಗಗಳಲ್ಲಿ ಇವುಗಳು ಕಾರ್ಯಾಚರಣೆ ನಡೆಸುತ್ತಿವೆ.

ತುಮಕೂರು ಖಾಸಗಿ ಬಸ್‌ ನಿಲ್ದಾಣ
ತುಮಕೂರು ಖಾಸಗಿ ಬಸ್‌ ನಿಲ್ದಾಣ

‘ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಬಸ್ಸುಗಳು ಸಂಚರಿಸಬೇಕು. ಹೊಸ ಮಾರ್ಗಗಳಲ್ಲೂ ಬಸ್‌ ಸಂಚಾರ ಆರಂಭವಾಗಬೇಕು. ಮಹಿಳಾ ಉದ್ಯೋಗಿಗಳು, ಕಾರ್ಮಿಕರು ಕೆಲಸಕ್ಕೆ ಹೋಗುವ ಮತ್ತು ಮರಳುವ ಸಮಯಕ್ಕೆ ಬಸ್‌ ಸೌಲಭ್ಯ ದೊರೆಯಬೇಕು. ಆಗ ಮಾತ್ರ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗುತ್ತದೆ’ ಎಂಬುದು ಮಹಿಳೆಯರ ಅಭಿಪ್ರಾಯ.

ಮಲೆನಾಡು ಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳ ಸಂಚಾರವೇ ಇಲ್ಲ. ‘ಶಕ್ತಿ’ ಯೋಜನೆಯ ಫಲ ನಮಗೆ ಸಿಗಬೇಕು ಎಂದರೆ ಸರ್ಕಾರ ಮೊದಲು ಈ ಭಾಗಕ್ಕೆ ಸರ್ಕಾರಿ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು
– ಗಾಯತ್ರಿ, ಶೇಷಗಿರಿ ತೀರ್ಥಹಳ್ಳಿ
People take private buses at Kalasipalya Bus Stand as government buses remain off the road due to the protests in Bengaluru on Sunday. DH Photo/Pushkar V
People take private buses at Kalasipalya Bus Stand as government buses remain off the road due to the protests in Bengaluru on Sunday. DH Photo/Pushkar V
ಮಲೆನಾಡು ಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳ ಸಂಚಾರವೇ ಇಲ್ಲ. ‘ಶಕ್ತಿ’ ಯೋಜನೆಯ ಫಲ ನಮಗೆ ಸಿಗಬೇಕು ಎಂದರೆ ಸರ್ಕಾರ ಮೊದಲು ಈ ಭಾಗಕ್ಕೆ ಸರ್ಕಾರಿ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು
– ಗಾಯತ್ರಿ ಶೇಷಗಿರಿ ತೀರ್ಥಹಳ್ಳಿ

ಇಷ್ಟು ಗ್ರಾಮಗಳಿಗಿಲ್ಲ ಸರ್ಕಾರಿ ಬಸ್‌ ಸಂಪರ್ಕ

ದಾವಣಗೆರೆ ಜಿಲ್ಲೆಯ 309,

ಶಿವಮೊಗ್ಗದ 400

ತುಮಕೂರಿನ 141

ಕೋಲಾರದ 151

ಮೈಸೂರು ಜಿಲ್ಲೆಯ 16

ಕೊಡಗಿನ 45

ಮಂಡ್ಯದ 22

ಬಳ್ಳಾರಿಯ 33

ಬೆಳಗಾವಿಯ 20

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ 8 ಜಿಲ್ಲೆಗಳ 80 ಗ್ರಾಮಗಳಿಗೆ ಇನ್ನೂ ಬಸ್ ಸೌಕರ್ಯ ಇಲ್ಲ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಸಾರಿಗೆಯೇ ವಿರಳ. ಮೂಲ್ಕಿ ಉಳ್ಳಾಲ ಮೂಡುಬಿದಿರೆ ಹಾಗೂ ಮಂಗಳೂರು ತಾಲ್ಲೂಕುಗಳಲ್ಲಿ ಸರ್ಕಾರಿ ಸಾರಿಗೆ ಅತೀ ಕಡಿಮೆ. ಮಂಗಳೂರು– ಮೂಡುಬಿದಿರೆ ಸೇರಿದಂತೆ ಹಲವು ಮಾರ್ಗದಲ್ಲಿ ಒಂದೇ ಒಂದು ಸರ್ಕಾರಿ ಬಸ್‌ ಸಂಚರಿಸುವುದಿಲ್ಲ. 
ಕರಾವಳಿಯಲ್ಲಿ 2500ಕ್ಕೂ ಹೆಚ್ಚು ಬಸ್ಸುಗಳು ಸಂಚರಿಸುತ್ತಿವೆ. ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸರಾಸರಿ ಪ್ರಮಾಣ ಶೇ 35ರಷ್ಟಿದೆ. ಸರ್ಕಾರಿ ಬಸ್‌ ಸೌಲಭ್ಯ ಇಲ್ಲದ ಕಡೆಯಲ್ಲೂ ಖಾಸಗಿ ಬಸ್‌ಗಳು ಸೇವೆ ನೀಡುತ್ತಿವೆ. ಆದಾಯ ಖೋತಾ ಆದರೆ ಗ್ರಾಮೀಣ ಪ್ರದೇಶದ ಜನರಿಗೆ ಸೇವೆ ನೀಡುವುದು ಕಷ್ಟವಾಗಬಹುದು
– ಕುಯಿಲಾಡಿ ಸುರೇಶ್ ನಾಯಕ್, ಅಧ್ಯಕ್ಷ ರಾಜ್ಯ ಖಾಸಗಿ ಬಸ್‌ ಮಾಲೀಕರ ಸಂಘಗಳ ಒಕ್ಕೂಟ
ಸರ್ಕಾರಿ ಬಸ್ಸುಗಳ ರೀತಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲು ನಾವೂ ಸಿದ್ಧರಿದ್ದೇವೆ. ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಪ್ರತೀ ಮೂರು ತಿಂಗಳಿಗೊಮ್ಮೆ ಕಟ್ಟಿಸಿಕೊಳ್ಳುವ ರಸ್ತೆ ತೆರಿಗೆಯನ್ನು ಮನ್ನಾ ಮಾಡಬೇಕು. ಮೀನುಗಾರಿಕೆ ದೋಣಿಗಳಿಗೆ ಕೊಡುವಂತೆ ನಮಗೂ ಡೀಸೆಲ್‌ಗೆ ಸಬ್ಸಿಡಿ ಕೊಡಬೇಕು
– ಮೀಸೆ ರಂಗಸ್ವಾಮಿ, ಸಂಘಟನಾ ಕಾರ್ಯದರ್ಶಿ ರಾಜ್ಯ ಖಾಸಗಿ ಬಸ್‌ಗಳ ಮಾಲೀಕರ ಒಕ್ಕೂಟ
ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಬಳಸುವ ಪಾಸ್‌ಗಳನ್ನೇ ಖಾಸಗಿ ಬಸ್‌ಗಳಲ್ಲಿ ಬಳಸಲು ಸರ್ಕಾರ ಅವಕಾಶ ನೀಡಬೇಕು. ಎಷ್ಟು ಮಹಿಳೆಯರು ಪ್ರಯಾಣಿಸಿದ್ದಾರೆ ಎಂಬ ಆಧಾರದಲ್ಲಿ ನಮಗೂ ಹಣ ಮರು ಪಾವತಿಸಿದರೆ ಅನುಕೂಲ ಆಗಲಿದೆ. ಈ ಸಂಬಂಧ ಚರ್ಚಿಸಲು ಮುಂದಿನ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗುತ್ತಿದ್ದೇವೆ. ಸರ್ಕಾರ ಅವಕಾಶ ನೀಡದಿದ್ದರೆ ಮುಂದಿನ ಆರು ತಿಂಗಳಲ್ಲಿ ಖಾಸಗಿ ಬಸ್‌ಗಳೇ ಇರುವುದಿಲ್ಲ
– ಬಾಲಕೃಷ್ಣ ಭಟ್, ಅಧ್ಯಕ್ಷ ಚಿಕ್ಕಮಗಳೂರು ಜಿಲ್ಲಾ ಖಾಸಗಿ ಮಾಲೀಕರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT