ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುತ್ವಕ್ಕೆ ಅಂಬೇಡ್ಕರ್‌ ವಾದವೇ ಪರ್ಯಾಯ: ಸಚಿವ ಸಂತೋಷ್‌ ಲಾಡ್‌

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅಭಿಮತ
Published 9 ಮಾರ್ಚ್ 2024, 23:30 IST
Last Updated 9 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ಹಿಂದುತ್ವವಾದಿಗಳನ್ನು ಟೀಕಿಸುವ ಬದಲು, ಹಿಂದುತ್ವಕ್ಕೆ ಪರ್ಯಾಯವಾಗಿ ಅಂಬೇಡ್ಕರ್ ವಾದವನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು’ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಶನಿವಾರ ಹೇಳಿದರು.

ಗದಗದ ಲಡಾಯಿ ಪ್ರಕಾಶನ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನವೀನ್‌ ಸೂರಿಂಜೆ ಅವರ ‘ಮಹೇಂದ್ರ ಕುಮಾರ್, ನಡು ಬಗ್ಗಿಸದ ಎದೆಯ ದನಿ. ಹಿಂದುತ್ವವಾದಿಯ ಅನುಭವ ಕಥನ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಹಿಂದುತ್ವದ ಆಧಾರದಲ್ಲೇ ರಾಜಕೀಯ ಮಾಡುತ್ತಿವೆ. ಯುವಜನರನ್ನು ದುರುಪಯೋಗ ಮಾಡುತ್ತಿದೆ. ಇಂತಹ ಸಮಯದಲ್ಲಿ ಸಂವಿಧಾನದ ಮೂಲಕ ದೇಶದ ಎಲ್ಲ ಜನರಿಗೂ ಸ್ವಾಭಿಮಾನದ ಬದುಕುಕೊಟ್ಟ ಅಂಬೇಡ್ಕರ್‌ ವಾದವನ್ನು ಪರ್ಯಾಯ ಅಸ್ತ್ರವಾಗಿ ಬಳಸಿದರೆ ಅನುಕೂಲವಾಗುತ್ತದೆ. ಹಾಗೆಯೇ ಅಂಬೇಡ್ಕರ್‌ ಅವರ ಆಶಯದ ‘ಹಿಂದೂ ಕೋಡ್‌ ಬಿಲ್ಸ್’ ಕುರಿತು ವ್ಯಾಪಕ ಚರ್ಚೆಗಳು ನಡೆಯಬೇಕು ಎಂದರು.

ನಟ ಪ್ರಕಾಶ್‌ ರಾಜ್‌ ಮಾತನಾಡಿ, ‘ರೈತರು, ಬಡವರ ವಿರೋಧಿ ಮನೋಸ್ಥಿತಿಯ ಅಧಿಕಾರಸ್ಥರನ್ನು ಏಕವಚನದಲ್ಲಿ ಟೀಕಿಸಿದ್ದಕ್ಕೆ ಕೆಲವರು ಬೇಸರ ಮಾಡಿಕೊಂಡಿದ್ದಾರೆ. ಹಾಗಾಗಿ, ಇನ್ನು ಮುಂದೆ ಅವರನ್ನು ‘ಮಹಾಪ್ರಭುಗಳು’ ಎಂದೇ ಸಂಬೋಧಿಸುವೆ ಎಂದು ಪ್ರಧಾನಿ ಮೋದಿ ವಿರುದ್ಧ ಪರೋಕ್ಷ ವಾಗ್ದಾಳಿ’ ನಡೆಸಿದರು. 

‘ಜನರ ಪರವಾಗಿರುವ ನಾನು ಎಂದಿಗೂ ಪ್ರತಿಪಕ್ಷದ ಸ್ಥಾನದಲ್ಲಿರುತ್ತೇನೆ. ಜನರ ಧ್ವನಿಯಾಗಿ ಆಡಳಿತ ನಡೆಸುವವರನ್ನು ಟೀಕಿಸುತ್ತೇನೆ. ಅದು ಯಾವ ಪಕ್ಷವೇ ಆಗಿರಲಿ. ಕರ್ನಾಟಕದಲ್ಲಿ ಬಿಜೆಪಿ ತನ್ನ ಕಪಟತನದಿಂದ ಸೋಲು ಕಂಡಿತು. ಈಗ ಅಧಿಕಾರ ಹಿಡಿದಿರುವ ಕಾಂಗ್ರೆಸ್‌ ಸೋಲದಂತೆ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ’ ಎಂದು ಕಿವಿಮಾತು ಹೇಳಿದರು.  

‘ಮಹಾಪ್ರಭುಗಳ ಅಂತಪುರದಲ್ಲಿ ವಿಡಿಯೊ ಗ್ರಾಫರ್, ಫೋಟೊ ಗ್ರಾಫರ್, ವಸ್ತ್ರವಿನ್ಯಾಸಕರೇ ತುಂಬಿದ್ದಾರೆ. ಅವರ ಸಂಘ ಪರಿವಾರದಲ್ಲಿ ಬಡವರು, ರೈತರು, ಮಣಿಪುರಿಗಳಿಗೆ ಸ್ಥಾನವಿಲ್ಲ. ಅವರ ರಾಮನೂ ಕುಟುಂಬದ ರಾಮನಲ್ಲ, ಕೊಲ್ಲುವ ರಾಮ. ಕುಟುಂಬ ದ್ವೇಷಿ ಮನೋಭಾವದ ಮಹಾನುಭಾವರು ಅದಕ್ಕಾಗಿಯೇ ಸೀತೆ ಹೊರತಾದ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದಾರೆ. ಪೂರ್ಣಗೊಳ್ಳದ ದೇವಸ್ಥಾನ, ಆಸ್ಪತ್ರೆ ಉದ್ಘಾಟಿಸಿ ವಾಸ್ತವ ಮರೆಮಾಚುತ್ತಿದ್ದಾರೆ’ ಟೀಕಿಸಿದರು.

ವಕೀಲ ಎಸ್‌.ಬಾಲನ್‌, ಕಾಂಗ್ರೆಸ್‌ ಮುಖಂಡರಾದ ಸುಧೀರ್ ಮುರೋಳ್ಳಿ, ನಿಕೇತ್‌ ರಾಜ್‌ ಮೌರ್ಯ, ಶಾಸಕಿ ನಯನಾ ಮೋಟಮ್ಮ ಮಾತನಾಡಿದರು. ಡಿವೈಎಫ್‌ಐ ರಾಜ್ಯ ಉಪಾಧ್ಯಕ್ಷ ಮುನೀರ್‌ ಕಾಟಿಪಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃತಿಯ ಲೇಖಕ ನವೀನ್‌ ಸೂರಿಂಜೆ, ಪ್ರಕಾಶಕ ಬಸವರಾಜ ಸೂಳಿಬಾವಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT