ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಹಾಲಿ ಸಂಸದರು ಪುನರಾಯ್ಕೆ ಅನುಮಾನ: ಬಿಜೆಪಿ ಆಂತರಿಕ ಸಮೀಕ್ಷೆ

17 ಕ್ಷೇತ್ರಗಳಲ್ಲಿ ಗೆಲುವು ಪಕ್ಕಾ ಎಂದ ಸಮೀಕ್ಷೆ
Last Updated 19 ಮೇ 2019, 5:47 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯ ಎಲ್ಲ ಹಾಲಿ ಸಂಸದರು ಪುನರಾಯ್ಕೆಯಾಗುವುದು ಅನುಮಾನ ಎಂದು ಕಮಲ ಪಡೆಯ ಆಂತರಿಕ ಸಮೀಕ್ಷೆ ಹೇಳಿದೆ.

ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಬೀಸುತ್ತಿದ್ದು, ಈ ಚುನಾವಣೆಯಲ್ಲಿ ಪಕ್ಷ 22 ಸ್ಥಾನಗಳನ್ನು ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹತ್ತಾರು ಸಲ ಹೇಳಿದ್ದಾರೆ. ರಾಜ್ಯ ನಾಯಕರು ಆ ಮಂತ್ರವನ್ನೇ ಪಠಿಸುತ್ತಿದ್ದಾರೆ.

ಈ ಸಲ ಪಕ್ಷ ಕನಿಷ್ಠ 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಎರಡು ದಿನಗಳ ಹಿಂದಷ್ಟೇ ಲಭಿಸಿದ ಆಂತರಿಕ ಸಮೀಕ್ಷೆ ಬಹಿರಂಗಪಡಿಸಿದೆ. 2014ರ ಚುನಾವಣೆಯಲ್ಲಿ ಪಕ್ಷ 17 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಸಲ ಹಾಲಿ ಸಂಸದರು ಪ್ರತಿನಿಧಿಸುವ ಮೂರು ಕ್ಷೇತ್ರಗಳನ್ನು ಪಕ್ಷ ಕಳೆದುಕೊಳ್ಳಲಿದೆ. ಪ್ರತಿಯಾಗಿ ಮೂರು ಕ್ಷೇತ್ರಗಳು ಕೈ ಹಿಡಿಯಲಿವೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

‘ಪಕ್ಷ 27 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ನೀಡಿದೆ. 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದು, 8 ಕ್ಷೇತ್ರಗಳಲ್ಲಿ ‍ಪ್ರಬಲ ಪೈಪೋಟಿ ನೀಡಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಗಂಗಾವತಿಗೆ ಬಂದು ಹೋಗಿದ್ದಾರೆ. ಶನಿವಾರ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಪ್ರಚಾರ ಮಾಡಲಿದ್ದಾರೆ. ಮೊದಲ ಹಂತದ ಮತದಾನ ನಡೆಯುವ 18ರಂದು ಚಿಕ್ಕೋಡಿ ಹಾಗೂ ವಿಜಯಪುರದಲ್ಲಿ ಭಾಷಣ ಮಾಡಲಿದ್ದಾರೆ. ಇದರಿಂದಾಗಿ ಮತ ಪ್ರಮಾಣ ಗಣನೀಯವಾಗಿ ಹೆಚ್ಚಲಿದೆ. ಈ ಮೂಲಕ, ಪ್ರಬಲ ಪೈಪೋಟಿ ನೀಡುವ ಕ್ಷೇತ್ರಗಳ ಪೈಕಿ ಕನಿಷ್ಠ 5ರಲ್ಲಿ ಗೆಲುವಿನ ದಡ ಮುಟ್ಟಬಹುದು’ ಎಂದು ಮೂಲಗಳು ಹೇಳಿವೆ. ಗೆಲುವಿನ ಹೆಚ್ಚಿನ ನಿರೀಕ್ಷೆ ಇಲ್ಲದ ಮೂರು ಕ್ಷೇತ್ರಗಳ ಪೈಕಿ ಎರಡು ದಕ್ಷಿಣ ಕರ್ನಾಟಕದಲ್ಲಿದ್ದರೆ ಒಂದು ಉತ್ತರ ಕರ್ನಾಟಕದಲ್ಲಿದೆ ಎಂದು ತಿಳಿಸಿದೆ.

ಸಂಘರ್ಷದಿಂದ ಹಾನಿ ಇಲ್ಲ: ‘ಬಿ.ಎಸ್‌.ಯಡಿಯೂರಪ್ಪ ಹಾಗೂ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಗುಂಪಿನ ನಡುವಿನ ‘ಸಂಘರ್ಷ’ದಿಂದ ಪಕ್ಷಕ್ಕೆ ಯಾವುದೇ ಹಾನಿ ಇಲ್ಲ’ ಎಂದು ರಾಜ್ಯ ನಾಯಕರೊಬ್ಬರು ತಿಳಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಅನೌಪಚಾರಿಕವಾಗಿ ಮಾತನಾಡಿದ ಅವರು, ‘ಯಡಿಯೂರಪ್ಪ ನಾಯಕರು. ಆದರೆ, ಸಂತೋಷ್ ನಾಯಕರಲ್ಲ. ಯಾವುದೇ ಪದವಿ, ಹುದ್ದೆ ಹಾಗೂ ಅಧಿಕಾರದ ಆಸೆ ಇಲ್ಲದೆ ಸಂಘಟನೆಯನ್ನು ಸದೃಢಗೊಳಿಸುವ ಸಂತೋಷ್ ಅವರು ಯಡಿಯೂರಪ್ಪ ಅವರಿಗೆ ಪ್ರತಿಸ್ಪರ್ಧಿ ಆಗುವುದಿಲ್ಲ. ಬಿಎಸ್‌ವೈ ವಿರುದ್ಧ ಮತ್ತೊಬ್ಬ ನಾಯಕ ಹಣಾಹಣಿ ನಡೆಸಿದ್ದರೆ ಪಕ್ಷಕ್ಕೆ ತೊಂದರೆಯಾಗುತ್ತಿತ್ತು ಎನ್ನಬಹುದು. ಪಕ್ಷದೊಳಗೆ ಸ್ವಾತಂತ್ರ್ಯ ಇದೆ. ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆ ಬಿ.ಎಲ್‌.ಸಂತೋಷ್‌ ಅವರ ಡಿಎನ್‌ಎ ಹೇಳಿಕೆಯೇ ಸಾಕ್ಷಿ. ಇದನ್ನು ಭಿನ್ನಮತ ಹಾಗೂ ಒಡಕು ಎನ್ನುವುದಕ್ಕಿಂತಲೂ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಅತ್ಯಾವಶ್ಯಕ ಎನ್ನಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT