ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಟಿಕೆಟ್: 130 ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿ ಸಿದ್ಧ?

ಸುರ್ಜೇವಾಲಾ, ಡಿಕೆಶಿ, ಸಿದ್ದರಾಮಯ್ಯ ಚರ್ಚೆ ಇಂದು
Last Updated 31 ಜನವರಿ 2023, 19:31 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆ ಗುರುವಾರ (ಫೆ. 2) ನಡೆಯಲಿದ್ದು, ಅದಕ್ಕೂ ಮೊದಲೇ 120ರಿಂದ 130 ಕ್ಷೇತ್ರಗಳಿಗೆ ಪಕ್ಷದ ಸಂಭವನೀಯ ಅಭ್ಯರ್ಥಿಗಳನ್ನು ಗುರುತಿಸಿ, ಪಟ್ಟಿ ಸಿದ್ಧಪಡಿಸಲು ರಾಜ್ಯ ಕಾಂಗ್ರೆಸ್‌ ನಿರ್ಧರಿಸಿದೆ.

ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬುಧವಾರ ಚರ್ಚೆ ನಡೆಸಲಿದ್ದಾರೆ.

‘ಸುರ್ಜೇವಾಲಾ ಅವರು ಬೆಳಿಗ್ಗೆ 11 ಗಂಟೆಗೆ ನಗರಕ್ಕೆ ಬರಲಿದ್ದು, ಮಧ್ಯಾಹ್ನದ ಬಳಿಕ ಮೂವರೂ ಒಂದೆಡೆ ಸೇರಿ ವಿಧಾನಸಭಾ ಕ್ಷೇತ್ರಗಳ ಸ್ಥಿತಿಗತಿ, ಯಾರಿಗೆ ಟಿಕೆಟ್‌ ನೀಡಿದರೆ ಗೆಲ್ಲುವ ಸಾಧ್ಯತೆ ಇದೆ, ಅಭ್ಯರ್ಥಿ ಆಕಾಂಕ್ಷಿಗಳ ಸಾಮರ್ಥ್ಯ ಹಾಗೂ ಕೊರತೆ ಏನೇನು ಎಂಬ ಬಗ್ಗೆ ಚರ್ಚೆ ನಡೆಸಲಿದ್ದಾರೆ’ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

‘ಹಾಲಿ ಶಾಸಕರ ಪೈಕಿ ಸ್ಪರ್ಧೆಯಿಂದ ಹಿಂದೆ ಸರಿಯಲು ಬಯಸಿದವರನ್ನು ಹೊರತುಪಡಿಸಿ, ಉಳಿದವರಿಗೆ ಟಿಕೆಟ್‌ ನೀಡಲು ಈಗಾಗಲೇ ತೀರ್ಮಾನಿಸಲಾಗಿದೆ. ಉಳಿದಂತೆ, ಕಡಿಮೆ ಪೈಪೋಟಿ ಇರುವ 30ರಿಂದ 40 ಕ್ಷೇತ್ರಗಳಿಗೆ ಅಭ್ಯರ್ಥಿಯ ಹೆಸರನ್ನು ಈ ಮೂವರೂ ನಾಯಕರು ಅಳೆದು ತೂಗಿ ಅಂತಿಮ‌ಗೊಳಿಸಲಿದ್ದಾರೆ. ನಂತರ ಕೇಂದ್ರ ಚುನಾವಣಾ ಸಮಿತಿ ಪಟ್ಟಿಯನ್ನು ಮರುಪರಿಶೀಲಿಸಲಿದೆ. ಇದೇ ತಿಂಗಳ ಎರಡನೇ ವಾರದಲ್ಲಿ ಪಟ್ಟಿ ಬಿಡುಗಡೆ ಆಗಬಹುದು. ಚುನಾವಣಾ ಪ್ರಚಾರದ ದೃಷ್ಟಿಯಿಂದ ಆದಷ್ಟು ಶೀಘ್ರದಲ್ಲೇ ಅಭ್ಯರ್ಥಿ ಅಂತಿಮಗೊಳಿಸುವುದುಅನಿವಾರ್ಯವಾಗಿದೆ’ ಎಂದೂ ಮೂಲಗಳು ತಿಳಿಸಿವೆ.

‘224 ಕ್ಷೇತ್ರಗಳ ಪೈಕಿ ಹಾಲಿ ಶಾಸಕರಿಗೆ ಟಿಕೆಟ್‌ ಖಚಿತವಾದರೂ, ಇತರ ಕ್ಷೇತ್ರಗಳಲ್ಲಿ ಟಿಕೆಟ್‌ ಹಂಚಿಕೆ ಮಾಡುವುದು ನಾಯಕರಿಗೆ ಸವಾಲಾಗಲಿದೆ. ಆದರೆ, ಕೆಲವು ಕಡೆ ಟಿಕೆಟ್‌ಗಾಗಿ ಆಕಾಂಕ್ಷಿಗಳು ಪಟ್ಟು ಹಿಡಿಯುವ ಸಾಧ್ಯತೆ ಇದೆ. ಕೆಲವರು ತಮಗೇ ಟಿಕೆಟ್‌ ಸಿಗಬಹುದೆಂಬ ವಿಶ್ವಾಸದಿಂದ ಪ್ರಚಾರ ಆರಂಭಿಸಿದ್ದಾರೆ. ಪೈಪೋಟಿ ಹೆಚ್ಚಿರುವ ಕ್ಷೇತ್ರಗಳಲ್ಲಿ ಟಿಕೆಟ್‌ ಹಂಚಿಕೆಯನ್ನು ಕೊನೆಕ್ಷಣದಲ್ಲಿ ಅಂತಿಮಗೊಳಿಸುವ ಸಾಧ್ಯತೆಯಿದೆ’ ಎಂದೂ ಮೂಲಗಳು ಹೇಳಿವೆ.

ಸಿದ್ದರಾಮಯ್ಯ ‘ಜೀವನ ಗಾನ’

ಸಿದ್ದರಾಮಯ್ಯ ಅವರ ಜೀವನ ಚರಿತ್ರೆ ಹಾಡಿನ ರೂಪದಲ್ಲಿ (ಆಲ್ಬಂ ಸಾಂಗ್‌) ಸಿದ್ಧವಾಗುತ್ತಿದ್ದು, ಶೀಘ್ರದಲ್ಲಿಯೇ ಹೊರಬರಲಿದೆ.

‘ಸಿದ್ದರಾಮಯ್ಯ ಅವರ ಅಭಿಮಾನಿಯಾಗಿರುವ ಹೈದರಾಬಾದ್‌ನ ಉದ್ಯಮಿ ಶ್ರೀಧರ್ ಅವರು ಆಲ್ಬಂ ನಿರ್ಮಿಸುತ್ತಿದ್ದು, ಚಿತ್ರೀಕರಣ ನಡೆಯುತ್ತಿದೆ. ಟಾಲಿವುಡ್‌ನ ಹೆಸರಾಂತ ಗಾಯಕರು ಹಾಡಿದ್ದಾರೆ. ಸಿದ್ದರಾಮಯ್ಯ ಅವರ ರಾಜಕೀಯ, ವೈಯಕ್ತಿಕ ಬದುಕಿನ ಬಗ್ಗೆ ಹಾಡು ರಚಿಸಲಾಗಿದೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಈ ಆಲ್ಬಂ ಹೊರಬರಲಿದೆ’ ಎಂದು ಸಿದ್ದರಾಮಯ್ಯ ಅವರ ಆಪ್ತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT