ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ವಿರೋಧಗಳ ಬಗ್ಗೆ ಎಚ್ಚರದಿಂದಿರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Published 15 ಸೆಪ್ಟೆಂಬರ್ 2023, 5:40 IST
Last Updated 15 ಸೆಪ್ಟೆಂಬರ್ 2023, 5:40 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲಿ ಸಂವಿಧಾನವನ್ನು ನಾಶಮಾಡಿ, ಮನು ಸ್ಮೃತಿಯನ್ನು ಮರು ಜಾರಿಗೊಳಿಸಲು ಹವಣಿಸುತ್ತಿರುವ ಶಕ್ತಿಗಳ ಬಗ್ಗೆ ಜನರು ಎಚ್ಚರದಿಂದ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಶುಕ್ರವಾರ ಆಯೋಜಿಸಿದ್ದ ಭಾರತದ ಸಂವಿಧಾನದ ಜಾಗತಿಕ ವಾಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ʼದೇಶದ ಎಲ್ಲರೂ ಸಂವಿಧಾನವನ್ನು ಅರಿಯಬೇಕು. ಸಂವಿಧಾನದ ಆಶಯದಂತೆ ನಡೆಯಬೇಕುಸ. ಆಗ, ಸಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಇಲ್ಲವಾದರೆ ದೇಶದಲ್ಲಿನ ಅಸಮಾನತೆಯನ್ನು ಹೋಗಲಾಡಿಸುವುದು ಕಷ್ಟʼ ಎಂದರು.

ಭಾರತದಲ್ಲಿ ಬೌದ್ಧ ಧರ್ಮದ ಕಾಲದಿಂದಲೇ ಪ್ರಜಾತಂತ್ರ ವ್ಯವಸ್ಥೆ ಇತ್ತು. ಸಂವಿಧಾನ ಜಾರಿಯಾದ ಬಳಿಕ ಇಲ್ಲಿ ಪ್ರಜಾಪ್ರಭುತ್ವ ನೆಲೆಯೂರಿತು. ಶೇಕಡ 95ರಷ್ಟು ಜನರು ಗುಲಾಮರಂತೆ ಬದುಕಬೇಕು ಎಂದು ಪ್ರತಿಪಾದಿಸುವ ಮನು ಸ್ಮೃತಿಯನ್ನು ಮತ್ತೆ ತರಬೇಕು ಎಂಬ ಹವಣಿಕೆಯಲ್ಲಿರುವ ಶಕ್ತಿಗಳನ್ನು ಮಣಿಸಲು ಜನರು ಸಜ್ಜಾಗಬೇಕು ಎಂದು ಹೇಳಿದರು.

ಸಂವಿಧಾನದ ಶಕ್ತಿ ಕುಗ್ಗದಂತೆ ಎಚ್ಚರ ವಹಿಸಬೇಕು. ದೇಶದ ಎಲ್ಲ ಜನರಿಗೂ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ದೊರಕಿದಾಗ ಮಾತ್ರ ನಿಜವಾದ ಸ್ವಾತಂತ್ರ್ಯ ದೊರಕುತ್ತದೆ ಎಂದು ಡಾ.ಬಿ.ಆರ್‌. ಅಂಬೇಡ್ಕರ್‌ ಪ್ರತಿಪಾದಿಸಿದ್ದರು. ಅವರ ಕನಸುಗಳನ್ನು ನನಸು ಮಾಡುವುದಕ್ಕೆ ಸಂವಿಧಾನವನ್ನು ಉಳಿಸಿಕೊಳ್ಳಬೇಕು ಎಂದರು.

ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ಮುಖ್ಯಮಂತ್ರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಗತ್ತಿನಾದ್ಯಂತ 2.31 ಕೋಟಿ ಜನರು ಸಂವಿಧಾನದ ಪ್ರಸ್ತಾವನೆ ವಾಚನಕ್ಕೆ ನೋಂದಾಯಿಸಿಕೊಂಡಿದ್ದರು.

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ, ಜಿ. ಪರಮೇಶ್ವರ,ಸತೀಶ ಜಾರಕಿಹೊಳಿ, ಕೆ.ಜೆ. ಜಾರ್ಜ್‌, ಪ್ರಿಯಾಂಕ್‌ ಖರ್ಗೆ, ಕೆ.ಎಚ್.‌ ಮುನಿಯಪ್ಪ, ರಾಮಲಿಂಗಾರೆಡ್ಡಿ, ಶಿವರಾಜ ತಂಗಡಗಿ, ಮಂಕಾಳ ವೈದ್ಯ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು, ವಿಧಾನ ಪರಿಷತ್‌ ಸದಸ್ಯ ಸುಧಾಮ್‌ ದಾಸ್‌, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT