ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ವರ್ಗಾವಣೆ ನಿಯಂತ್ರಣಕ್ಕೆ ಮಸೂದೆ: ವರ್ಗ, ಹಸ್ತಕ್ಷೇಪಕ್ಕೆ ಮಾರ್ಗ

ಕಡ್ಡಾಯದ ಬದಲು ವಲಯವಾರು ಪದ್ಧತಿ
Last Updated 10 ಮಾರ್ಚ್ 2020, 20:07 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಯನ್ನು ಕೌನ್ಸೆಲಿಂಗ್‌ ಮೂಲಕ ಮಾತ್ರ ಮಾಡಬೇಕು ಎಂಬ ನಿಯಮವನ್ನು ಸಡಲಿಸಲು ತೀರ್ಮಾನಿಸಿರುವ ರಾಜ್ಯ ಸರ್ಕಾರ, ಸಚಿವರು ಹಾಗೂ ಶಾಸಕರ ಹಸ್ತಕ್ಷೇಪಕ್ಕೆ ಅವಕಾಶ ಕಲ್ಪಿಸಲು ಮುಂದಾಗಿದೆ.

ಶಿಕ್ಷಕರ ವರ್ಗಾವಣೆ ಪದ್ಧತಿಯಲ್ಲಿ ಸುಧಾರಣೆ ತರುವ ಉದ್ದೇಶಿತ ‘ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಮಸೂದೆ–2020’ ಅನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ ಕುಮಾರ್‌ ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಿದರು. ಚರ್ಚೆಯ ಬಳಿಕ ಉಭಯಸದನಗಳಲ್ಲೂ ಇದು ಅನುಮೋದನೆ ಪಡೆದು, ರಾಜ್ಯಪಾಲರ ಅಂಕಿತದ ಬಳಿಕ ಕಾಯ್ದೆಯಾಗಲಿದೆ.

2017 ಹಾಗೂ ಅದಕ್ಕೂ ಹಿಂದಿನ ಕಾಯ್ದೆಗಳಲ್ಲಿ ಶಿಕ್ಷಕರ ವರ್ಗಾವಣೆಯಲ್ಲಿ ಸಚಿವರು, ಶಾಸಕರ ಹಸ್ತಕ್ಷೇಪಕ್ಕೆ ಅವಕಾಶ ಇರಲಿಲ್ಲ. ಕೌನ್ಸೆಲಿಂಗ್ ಮಾತ್ರ ವರ್ಗಾವಣೆಗೆ ದಾರಿಯಾಗಿತ್ತು. ಈ ಮಸೂದೆಯಲ್ಲಿ (ಖಂಡ–7), ‘ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಗಣಕೀಕೃತ ಕೌನ್ಸೆಲಿಂಗ್‌ ಪ್ರಕ್ರಿಯೆಯಡಿ ವರ್ಗಾವಣೆ ಮಾಡಬಹುದು. ಆ ಬಳಿಕ ವಿಶೇಷ ಸನ್ನಿವೇಶಗಳಲ್ಲಿ ನಿರ್ದಿಷ್ಟ ಕಾರಣಗಳನ್ನು ದಾಖಲಿಸಿ ಸರ್ಕಾರದ ನಿರ್ದೇಶನದ ಮೇರೆಗೆ ವರ್ಗಾವಣೆ ಮಾಡಬಹುದು’ ಎಂದು ಹೇಳಲಾಗಿದೆ.

‘ಕೌನ್ಸೆಲಿಂಗ್ ಮುಗಿದ ಬಳಿಕ ಶಾಸಕರ ಶಿಫಾರಸು ಪಡೆದು ಇಲಾಖಾ ಸಚಿವರು ಅಥವಾ ಮುಖ್ಯಮಂತ್ರಿ ಅವರಿಂದ ಅನುಮೋದನೆ ಪಡೆದು ವರ್ಗಾವಣೆ ಮಾಡಲು ಅವಕಾಶ ಕಲ್ಪಿಸಿಕೊಳ್ಳಲಾಗಿದೆ. ಇದು ‘ಪ್ರಭಾವ’ ಇರುವವರು ವರ್ಗಾವಣೆ ಮಾಡಿಸಿಕೊಳ್ಳಲು ದಾರಿಯಾಗಲಿದೆ’ ಎಂದು ಕೆಲ ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಮಸೂದೆಯಲ್ಲಿ ಏನೇನು ಬದಲಾವಣೆ

*ಕಡ್ಡಾಯ ವರ್ಗಾವಣೆ ರದ್ದು; ಅದರ ಬದಲು ಕೌನ್ಸೆಲಿಂಗ್ ಮೂಲಕವೇ ವಲಯವಾರು ವರ್ಗಾವಣೆಗೆ ಅವಕಾಶ.

*ಒಂದು ವರ್ಷ ವಲಯವಾರು ವರ್ಗಾವಣೆ, ಮತ್ತೊಂದು ವರ್ಷ ಶಿಕ್ಷಕರ ಸಮರ್ಪಕ ಮರುಹಂಚಿಕೆ (ಲೀನ್ ಶಿಫ್ಟ್‌ ಮಾದರಿ). ಪ್ರತಿ ಪರ್ಯಾಯ ವರ್ಷದಲ್ಲಿ ಮಾತ್ರ ವಲಯವಾರು ವರ್ಗಾವಣೆ.

*10 ವರ್ಷ ‘ಸಿ’–ವಲಯದಲ್ಲಿ ಕೆಲಸ ಮಾಡಿ ಬಳಿಕ ನಗರ ಪ್ರದೇಶದಲ್ಲಿ (ವಲಯ ‘ಎ’ ಮತ್ತು ಬಿ) 10 ವರ್ಷ ಮೇಲ್ಪಟ್ಟು ಕೆಲಸ ಮಾಡುತ್ತಿರುವವರಿಗೂ ವಲಯವಾರು ವರ್ಗಾವಣೆಯಿಂದ ವಿನಾಯಿತಿ.

*10 ವರ್ಷ ಗ್ರಾಮೀಣ ಪ್ರದೇಶದಲ್ಲಿ ಕೆಲಸವನ್ನೇ ಮಾಡದೇ, 10 ವರ್ಷಕ್ಕೂ ಮೇಲ್ಪಟ್ಟು ನಗರ ಪ್ರದೇಶದಲ್ಲಿ ಕೆಲಸ ಮಾಡಿರುವ ಪ್ರತಿಯೊಬ್ಬ ಶಿಕ್ಷಕರನ್ನು ರಾಜ್ಯ ಸರ್ಕಾರ ಸೂಚಿಸಬಹುದಾದ ಷರತ್ತುಗಳಿಗೆ ಒಳಪಟ್ಟು ವಲಯ ‘ಸಿ’ ಅಥವಾ ‘ಬಿ’ ಗೆ ವಲಯವಾರು ವರ್ಗಾವಣೆ ಮಾಡಲು ಅವಕಾಶ.

*‘ಎ’ ನಿಂದ ‘ಸಿ’ ವಲಯಕ್ಕೆ ವರ್ಗಾವಣೆಗೊಂಡ ಶಿಕ್ಷಕರಿಗೆ ಖಾಲಿ ಹುದ್ದೆ ಇಲ್ಲದಿದ್ದಲ್ಲಿ, ‘ಸಿ’ ವಲಯದಲ್ಲಿ ಕೆಲಸ ಮಾಡುವ ಶಿಕ್ಷಕರು ಸಮ್ಮತಿಸಿದರೆ ಅವರನ್ನು ‘ಎ’ ವಲಯಕ್ಕೆ ವರ್ಗಾಯಿಸಿ ಅವಕಾಶ ನೀಡುವುದು.

*ಶಿಕ್ಷಕಿಯರಿಗೆ 50 ವರ್ಷ ಹಾಗೂ ಶಿಕ್ಷಕರಿಗೆ 55 ವರ್ಷ ತುಂಬಿದ ಬಳಿಕ ವಲಯವಾರು ವರ್ಗಾವಣೆಯಿಂದಲೂ ವಿನಾಯಿತಿ.

*ವರ್ಗಾವಣೆ ಕೋರಲು ಒಂದು ಶಾಲೆಯಲ್ಲಿ ಕನಿಷ್ಠ 3 ವರ್ಷ ಸೇವೆ ಮಾಡಿರಬೇಕು.

*ಶಿಕ್ಷಕರ ನೇಮಕಾತಿ ಸಂದರ್ಭ ಹಾಗೂ ಬಡ್ತಿ ನೀಡಿ ವರ್ಗಾವಣೆ ಮಾಡುವಾಗ ಕಡ್ಡಾಯವಾಗಿ ವಲಯ–‘ಸಿ’ ಯಲ್ಲಿನ (ಗ್ರಾಮೀಣ) ಹುದ್ದೆ ನೀಡಿಕೆ. ಈ ವೇಳೆ ‘ಸಿ’–ವಲಯದ ಖಾಲಿ ಹುದ್ದೆಗಳ ಭರ್ತಿ.

*ಸಿ–ವಲಯದಲ್ಲಿ ಖಾಲಿ ಇಲ್ಲದಿದ್ದರೆ ಮಾತ್ರ ಕನಿಷ್ಠ ಸೇವಾವಧಿ ಪೂರೈಸಿರುವ ಈ ವಲಯದಲ್ಲಿರುವ ಶಿಕ್ಷಕರನ್ನು ಸಮ್ಮತಿ ಮೇರೆಗೆ ವಲಯ–ಬಿ ಅಥವಾ ಎ ಗೆ ವರ್ಗಾಯಿಸಿ ಖಾಲಿ ಹುದ್ದೆ ಸೃಜನೆ.

*ಕನಿಷ್ಠ ಸೇವಾವಧಿ ಪೂರೈಸಿದ ಶಿಕ್ಷಕರು ಖಾಲಿ ಹುದ್ದೆಗಳ ಲಭ್ಯತೆ ಆಧರಿಸಿ ಕೋರಿಕೆ ವರ್ಗಾವಣೆಗೆ ಅರ್ಜಿ ಸಲ್ಲಿಸಬಹುದು.

*ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿನ ಶಿಕ್ಷಕರು ಅಲ್ಲಿಂದ ಹೊರಗಿನ ಪ್ರದೇಶಕ್ಕೆ ವರ್ಗಾವಣೆ ಕೋರಲು ಕನಿಷ್ಠ 10 ವರ್ಷ ಕೆಲಸ ಮಾಡಿರುವುದು ಕಡ್ಡಾಯ.

*ಮ್ಯಾನ್ಯುಯಲ್ ಕೌನ್ಸೆಲಿಂಗ್ ನಿಷೇಧ. ಒಂದು ವೇಳೆ ಮಾಡಿದರೆ ಅದು ಅನೂರ್ಜಿತ. ಅಂತಹ ಅಧಿಕಾರಿ
ಗಳನ್ನು ಶಿಸ್ತುಕ್ರಮಕ್ಕೆ ಗುರಿಪಡಿಸಬಹುದು.

*
ಶಿಕ್ಷಕ ಸ್ನೇಹಿ, ಶಿಕ್ಷಣ ಪೂರಕ ಹಾಗೂ ವಿದ್ಯಾರ್ಥಿ ಹಿತಚಿಂತನೆಯ ಮಸೂದೆ ಇದು. ಶಿಕ್ಷಕಿಯ ಮಗನಾಗಿ ಶಿಕ್ಷಕರಿಗೆ ಋಣ ಸಂದಾಯ ಮಾಡುತ್ತಿರುವೆ.
–ಎಸ್‌.ಸುರೇಶ್ ಕುಮಾರ್, ಶಿಕ್ಷಣ ಸಚಿವ

*
ಶಿಕ್ಷಣ ಸಚಿವರು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಬಹುವರ್ಷಗಳ ಬಳಿಕ ಬಂದ ಶಿಕ್ಷಕರ ಸ್ನೇಹಿ ವರ್ಗಾವಣೆ ಮಸೂದೆ ಇದಾಗಿದೆ. –ವಿ.ಎಂ.ನಾರಾಯಣಸ್ವಾಮಿ, ಅಧ್ಯಕ್ಷ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

*
ಶೇ 80ರಷ್ಟು ಶಿಕ್ಷಕರಿಗೆ ಅನುಕೂಲ ಆಗುವ ರೀತಿಯಲ್ಲಿ ಬಹಳ ಕಡಿಮೆ ಅವಧಿಯಲ್ಲಿ ಸಚಿವರು ಮಸೂದೆ ರೂಪಿಸಿದ್ದಾರೆ.
– ಎಚ್.ಕೆ.ಮಂಜುನಾಥ್, ಅಧ್ಯಕ್ಷ, ಪ್ರೌಢಶಾಲಾ ಶಿಕ್ಷಕರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT