ಬೆಂಗಳೂರು: ನಾಯಕತ್ವ ಬದಲಾವಣೆ, ಸಂಪುಟ ಪುನರ್ರಚನೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ‘ಬಣ’ ರಾಜಕೀಯ ಶನಿವಾರ ಮತ್ತಷ್ಟು ತೀವ್ರಗೊಂಡಿದೆ.

ಯಾರ ಜತೆಗೆ ನಿಂತರೆ ಲಾಭ ಎಂಬ ಲೆಕ್ಕಾಚಾರದಲ್ಲಿರುವ ಶಾಸಕರು ಹಾಗೂ ಕಾಂಗ್ರೆಸ್ ನಾಯಕರು ಇಬ್ಬರು ನಾಯಕರನ್ನೂ ಭೇಟಿ ಮಾಡಿ, ತಮ್ಮ ಪರ ಲಾಬಿ ನಡೆಸುವಲ್ಲಿ ನಿರತರಾಗಿದ್ದಾರೆ. ಹೀಗಾಗಿ, ಸಿದ್ದರಾಮಯ್ಯ ಮತ್ತು ಶಿವಕುಮಾರ್ ಮನೆಗೆ ಶಾಸಕರು ಭೇಟಿ ನೀಡಿ ಸಮಾಲೋಚನೆ ನಡೆಸಿದರು.

ರಾಜ್ಯದ ಆಡಳಿತಾರೂಢ ಕಾಂಗ್ರೆಸ್ನಲ್ಲಿ ದಿನಕ್ಕೊಂದು ಬೆಳವಣಿಗೆ, ತಂತ್ರ–ಪ್ರತಿತಂತ್ರದ ರಾಜಕಾರಣ ತಾರಕಕ್ಕೇರಿದ್ದರೂ ಆ ಪಕ್ಷದ ಹೈಕಮಾಂಡ್ ಮೌನ ವಹಿಸಿದೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಬೆಂಗಳೂರಿನಲ್ಲಿಯೇ ಇದ್ದರೂ ಈ ಬಗ್ಗೆ ಬಹಿರಂಗವಾಗಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಖರ್ಗೆ ಅವರ ಸೂಚನೆ ಮೇರೆಗೆ ಸದಾಶಿವ ನಗರದಲ್ಲಿರುವ ಅವರ ನಿವಾಸಕ್ಕೆ ಶನಿವಾರ ರಾತ್ರಿ ತೆರಳಿದ ಸಿದ್ದರಾಮಯ್ಯ ಅವರು ಒಂದು ತಾಸಿಗೂ ಹೆಚ್ಚು ಮಾತುಕತೆ ನಡೆಸಿದರು. ಆದರೆ, ಅವರಿಬ್ಬರ ನಡುವಿನ ಖಾಸಗಿ ಮಾತುಕತೆಯ ವಿವರ ಬಹಿರಂಗಗೊಂಡಿಲ್ಲ. ಈ ಬೆಳವಣಿಗೆಯು ಹೈಕಮಾಂಡ್ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಮುನ್ಸೂಚನೆ ಎಂದೇ ವಿಶ್ಲೇಷಿಸಲಾಗಿದೆ. ಜೊತೆಗೆ, ಹೈಕಮಾಂಡ್ ನಡೆ ಯಾವ ಕಡೆ ಎಂಬ ಕುತೂಹಲವೂ ಮೂಡಿದೆ.

ಅಧಿಕಾರ ಹಂಚಿಕೆ, ಸಂಪುಟ ಪುನರ್ರಚನೆ ವಿಚಾರದಲ್ಲಿ ಉಂಟಾಗಿರುವ ಗೊಂದಲ ನಿವಾರಣೆ ಮಾಡುವಂತೆ ಸಚಿವರು, ಶಾಸಕರು ಆಗ್ರಹಿಸುತ್ತಿದ್ದಾರೆ. ಕಿತ್ತಾಟ ಇನ್ನಷ್ಟು ಜಾಸ್ತಿಯಾಗುವ ಸಾಧ್ಯತೆ ಇರುವುದರಿಂದ ಸೂಕ್ತ ನಿರ್ಧಾರವೊಂದನ್ನು ಕೈಗೊಳ್ಳಲೇಬೇಕಾದ ಅನಿವಾರ್ಯಕ್ಕೆ ಹೈಕಮಾಂಡ್ ತಲುಪಿದೆ ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿ ನಡೆಯುತ್ತಿದೆ.

ಖಂಡ್ರೆ ಭೇಟಿ:

ಅರಣ್ಯ ಸಚಿವ ಈಶ್ವರ ಖಂಡ್ರೆ ಶನಿವಾರ ಮಧ್ಯಾಹ್ನ ಖರ್ಗೆ ಅವರನ್ನು ಭೇಟಿ ಮಾಡಿದರು. ನಂತರ ಪ್ರತಿಕ್ರಿಯಿಸಿದ ಅವರು, ‘ತುಟಿಕ್ ಪಿಟಿಕ್ ಅನ್ನಬಾರದೆಂದು ವರಿಷ್ಠರು ಹೇಳಿದ್ದಾರೆ. ಹಾಗೆಯೇ ನಾವು ಕೂಡ ಇದ್ದೇವೆ’ ಎಂದರು. ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಶಾಸಕ ಅಜಯ್ ಸಿಂಗ್ ಕೂಡಾ ಖರ್ಗೆ ಅವರನ್ನು ಭೇಟಿ ಮಾಡಿದರು.

ಸಿ.ಎಂ ಭೇಟಿಯಾದ ಶಾಸಕರ ದಂಡು:

ಡಿ.ಕೆ. ಶಿವಕುಮಾರ್ ಅವರನ್ನು ಶುಕ್ರವಾರ ರಾತ್ರಿ ಭೇಟಿ ಮಾಡಿದ್ದ ಶಾಸಕರಾದ ಸಿ.ಪಿ. ಯೋಗೇಶ್ವರ್, ಶ್ರೀನಿವಾಸ ಮಾನೆ, ಯಾಸೀರ್ ಅಹ್ಮದ್ ಖಾನ್ ಪಠಾಣ, ಬಿ.ಕೆ. ಸಂಗಮೇಶ್ವರ ಅವರು ಮುಖ್ಯಮಂತ್ರಿ ಅವರನ್ನು ಶನಿವಾರ ಬೆಳಿಗ್ಗೆ ಭೇಟಿ ಮಾಡಿದರು. ಸಂಪುಟ ಪುನರ್ ರಚನೆಯಾದರೆ, ತಮ್ಮನ್ನು ಕೈಬಿಡಬಹುದೆಂಬ ಆತಂಕಕ್ಕೆ ಒಳಗಾಗಿರುವ ಮಂಕಾಳ ವೈದ್ಯ ಅವರೂ ಭೇಟಿ ಮಾಡಿ ಚರ್ಚೆ ನಡೆಸಿದರು.

ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಸಂಗಮೇಶ್ವರ, ‘ನಾಲ್ಕು ಬಾರಿ ಶಾಸಕನಾಗಿರುವ ನಾನು ಸಚಿವ ಸ್ಥಾನದ ಆಕಾಂಕ್ಷಿ. ಈ ಬಾರಿ ಸಚಿವ ಸ್ಥಾನ ಸಿಗಬಹುದು ಎನ್ನುವ ನಂಬಿಕೆಯಿದೆ. ಯಾವುದೇ ಸಹಿ ಸಂಗ್ರಹ ನಡೆಯುತ್ತಿಲ್ಲ. ಅವೆಲ್ಲ ಊಹಾಪೋಹ’ ಎಂದರು.

‘ಹೈಕಮಾಂಡ್ ತೀರ್ಮಾನ ನಾನೂ, ಶಿವಕುಮಾರ್ ಒಪ್ಪಬೇಕು’

ಬೆಂಗಳೂರು: ‘ಹೈಕಮಾಂಡ್ ಏನೇ ತೀರ್ಮಾನ ಮಾಡಿದರೂ ನಾನೂ ಒಪ್ಪಬೇಕು, ಡಿ.ಕೆ. ಶಿವಕುಮಾರ್ ಕೂಡಾ ಒಪ್ಪಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಖರ್ಗೆ ಅವರ ಭೇಟಿ ಬಳಿಕ ಮತನಾಡಿದ ಅವರು, ‘ಯಾವಾಗ ದೆಹಲಿಗೆ ನನ್ನನ್ನು ಕರೆಯುತ್ತಾರೋ ಆಗ ಹೋಗುತ್ತೇನೆ. ಹೈಕಮಾಂಡ್ ತೀರ್ಮಾನಕ್ಕೆ ನಾನು, ಎಲ್ಲ ನಾಯಕರೂ ಬದ್ಧರಾಗಿರಬೇಕು’ ಎಂದರು.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ‘ನಾನು ಕಳೆಗುಂದಿಲ್ಲ. ನಾನು ಯಾವಾಗಲೂ ಕಳೆಗುಂದುವ ಪ್ರಶ್ನೆಯೇ ಇಲ್ಲ. ಅತಿಯಾಗಿ ಖುಷಿಯಾಗಿಯೂ ಇರುವುದಿಲ್ಲ’ ಎಂದರು. ‘ನಾನು ಮತ್ತು ಖರ್ಗೆ ಒಂದೂವರೆ ತಾಸು ಚರ್ಚೆ ಮಾಡಿದ್ದೇವೆ. ಇದು ಸೌಹಾರ್ದ ಭೇಟಿ ಅಷ್ಟೆ. ಪಕ್ಷ ಸಂಘಟನೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ನಾವಿಬ್ಬರೂ ಚರ್ಚೆ ನಡೆಸಿದ್ದೇವೆ’ ಎಂದೂ ಹೇಳಿದರು.

ಗಾಳ ಹಾಕಿ ಮೀನು ಹಿಡಿಯುವ ಕಲೆ ಗೊತ್ತು: ಡಿಕೆಶಿ

‘ಗಾಳ ಹಾಕಿ ಮೀನು ಹಿಡಿಯುವ ಕಲೆಗಾರಿಕೆ ನನಗಿದೆ. ಅದಕ್ಕೆ ಬಹಳ ತಾಳ್ಮೆ ಬೇಕು’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಶನಿವಾರ ನಡೆದ ವಿಶ್ವ ಮೀನುಗಾರಿಕೆ ದಿನಾಚರಣೆ ಹಾಗೂ ಮತ್ಸ್ಯ ಮೇಳದಲ್ಲಿ ಮಾತನಾಡಿದ ಅವರು, ‘ಇಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ಮಶೀರ್ ಫಿಶ್ ಅನ್ನು ಮುಖ್ಯಮಂತ್ರಿ ಅವರಿಗೆ ತೋರಿಸಿದೆ. ನಾನು ಸಣ್ಣವನಿದ್ದಾಗ ಸಂಗಮಕ್ಕೆ ಹೋಗಿ ಮೀನು ಹಿಡಿಯುತ್ತಿದ್ದೆ. ಮೀನು ಹಿಡಿಯುವುದು ಬೇರೆ, ಮಾರಾಟ ಮಾಡುವುದು ಬೇರೆ’ ಎಂದರು.

‘ಈ ಮೀನು ವ್ಯವಹಾರ ಜಾತಿ ಮೇಲೆ ಇಲ್ಲ, ನೀತಿ, ಛಲ ಹಾಗೂ ಆಸಕ್ತಿ ಮೇಲಿದೆ. ಮೀನುಗಾರನಿಗೆ ನಿತ್ಯ ಮೀನು ಸಿಗುವುದಿಲ್ಲ. ಕೆಲವೊಮ್ಮೆ ವಾರವಾದರೂ ಒಂದು ಮೀನೂ ಸಿಗುವುದಿಲ್ಲ. ಅಂತಹ ತಾಳ್ಮೆ ವೃತ್ತಿ ನಡೆಸುತ್ತಿರುವ ನೀವು ಶ್ರಮಜೀವಿಗಳು’ ಎಂದು ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮೀನುಗಾರರನ್ನು ಉದ್ದೇಶಿಸಿ ಹೇಳಿದರು.

ಜೇನುಕಲ್ ಸ್ವಾಮಿ ಪಾದುಕೆ ಪೂಜೆ

ಸದಾಶಿವನಗರದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಮನೆಯಲ್ಲಿ ಶುಕ್ರವಾರ ರಾತ್ರಿ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಜೇನುಕಲ್ ಸಿದ್ದೇಶ್ವರಸ್ವಾಮಿ ಪಾದುಕೆ ಪೂಜೆ ನಡೆಯಿತು. ದೇವಸ್ಥಾನದ ಅರ್ಚಕರು ವಿಶೇಷ ಪೂಜೆ ನೆರವೇರಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಅರ್ಚಕರೊಬ್ಬರು, ‘ಶಿವಕುಮಾರ್ ಅವರ ಮನೆಯಲ್ಲಿ ಪೂಜೆ ನೆರವೇರಿದೆ. ಅವರು ಏನು ಸಂಕಲ್ಪ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಿಲ್ಲ’ ಎಂದರು. ಜೇನುಕಲ್ ಸಿದ್ದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಜುಲೈ 26ರಂದು ಭೇಟಿ ನೀಡಿದ್ದ ಡಿ.ಕೆ. ಶಿವಕುಮಾರ್, ವಿಶೇಷ ಪೂಜೆ ಸಲ್ಲಿಸಿದ್ದರು.

ಇದನ್ನೇ ನೆಪವಾಗಿಟ್ಟುಕೊಂಡು ಶಾಸಕರಾದ ಸಿ.ಪಿ. ಯೋಗೇಶ್ವರ್, ಪ್ರಕಾಶ್ ಕೋಳಿವಾಡ, ಯಾಸೀರ್ ಅಹ್ಮದಖಾನ್ ಪಠಾಣ, ಶ್ರೀನಿವಾಸ್ ಮಾನೆ, ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಶುಕ್ರವಾರ ರಾತ್ರಿ ಭೇಟಿ ನೀಡಿದ್ದರು.

ಹೈಕಮಾಂಡ್ ಮಧ್ಯಪ್ರವೇಶ ಮಾಡಲಿ:

‘ಅಧಿಕಾರ ಹಂಚಿಕೆ ಕುರಿತಾದ ಗೊಂದಲವನ್ನು ಹೈಕಮಾಂಡ್ ಮಧ್ಯಪ್ರವೇಶ ಮಾಡಿ ಇತ್ಯರ್ಥಪಡಿಸಬೇಕು. ಇಲ್ಲದಿದ್ದರೆ ಪಕ್ಷದಲ್ಲಿ, ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಲಿದೆ’ ಎಂದು ಮಾಗಡಿ ಕ್ಷೇತ್ರದ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು ‘ಶಾಸಕರು, ಕಾರ್ಯಕರ್ತರಿಗೆ ಸ್ಪಷ್ಟತೆ ಸಿಗಬೇಕು’ ಎಂದರು.

‘ಶಾಸಕರು ಗುಂಪು ಕಟ್ಟಿಕೊಂಡು ದೆಹಲಿಗೆ ಹೋಗಿಲ್ಲ. ಕೇವಲ ಮೂರ್ನಾಲ್ಕು ಶಾಸಕರು ಹೋಗಿದ್ದಾರೆ. ಅವರು ಅವರ ಕೆಲಸಕ್ಕೆ ಹೋಗಿದ್ದಾರೆ. ಗುಂಪು ಕಟ್ಟಿಕೊಂಡು ಅಂದರೆ, 15 ಶಾಸಕರು ಇರಬೇಕು. ಶಾಸಕರೆಲ್ಲರೂ ಅವರ ಕೆಲಸಕ್ಕೆ ಹೋಗಿದ್ದಾರೆ. ಅಧಿಕಾರ ಹಂಚಿಕೆಯು ಶಾಸಕರ ನಂಬರ್ ಗೇಮ್ ಮೇಲೆ ನಿಂತಿಲ್ಲ. ಹೈಕಮಾಂಡ್ ತೀರ್ಮಾನದ ಮೇಲೆ ನಿಂತಿದೆ’ ಎಂದರು.

‘ಡಿ.ಕೆ. ಶಿವಕುಮಾರ್ ಅವರು ಯಾರಿಗೂ ಬೆಂಬಲ ಕೊಡಿ ಎಂದು ಸೂಚಿಸಿಲ್ಲ. ಶಾಸಕರ ಬೆಂಬಲ ಕೋರುವ ಕೆಲಸ ನಡೆದಿಲ್ಲ. ಕೆಲವರು ವೈಯಕ್ತಿಕ ಹೇಳಿಕೆ ಕೊಡುತ್ತಿರಬಹುದು. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗಲು ಅವರದ್ದೇ ಆದ ಶಕ್ತಿ ಇದೆ’ ಎಂದೂ ಹೇಳಿದರು.

‘ಹಿಂದುಳಿದ ವರ್ಗದವರ ಕಾಲೆಳೆಯಲು ಅವಕಾಶ ಕೊಡದಿರಿ’

ನರಗುಂದ: ‘ರಾಜ್ಯದಲ್ಲಿ ಹಿಂದುಳಿದ ವರ್ಗದವರು ಮುಖ್ಯಮಂತ್ರಿಗಳಾಗಿದ್ದು ಕೇವಲ ಐದೇ ಮಂದಿ. ಅದರಲ್ಲಿ ಸಿದ್ದರಾಮಯ್ಯನವರು ಮಾತ್ರ ಎರಡನೇ ಅವಧಿಗೆ ಮುಖ್ಯಮಂತ್ರಿ ಆಗಿದ್ದಾರೆ. ಹಿಂದುಳಿದ ವರ್ಗದವರ ಕಾಲೆಳೆಯಲು ಜನರು ಅವಕಾಶ ಕೊಡಬಾರದು’ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಇಲ್ಲಿ ಶನಿವಾರ ನಡೆದ ಕನಕಭವನದ ಅಡುಗೆ ಮನೆ ನಿರ್ಮಾಣದ ಕಾಮಗಾರಿ ಭೂಮಿಪೂಜೆ ಹಾಗೂ 538ನೇ ಕನಕ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈವರೆಗೆ ದಲಿತ, ಅಲ್ಪಸಂಖ್ಯಾತರು ಮುಖ್ಯಮಂತ್ರಿ ಆಗಿಲ್ಲ. ಹಿಂದುಳಿದ ವರ್ಗದ ಸಿದ್ದರಾಮಯ್ಯ ಅವರು ಅಧಿಕಾರ ದೊರೆತಿದ್ದು, ಎರಡನೇ ಅವಧಿ ಪೂರ್ಣಗೊಳಿಸುವರು. ಆದರೆ, ಹಿಂದುಳಿದವರ ಅಧಿಕಾರ ತಂತಿಮೇಲಿನ ನಡಿಗೆಯಂತೆ. ಯಾವಾಗ ಕೆಡುವುತ್ತಾರೋ ತಿಳಿಯದು’ ಎಂದರು.

‘ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ದಲಿತರ ಅಭಿವೃದ್ಧಿಗೆ ಶ್ರಮಪಟ್ಟಿದ್ದು, ಅಹಿಂದ ಸಮುದಾಯ ಸಂಪೂರ್ಣ ಅವರ ಬೆನ್ನಿಗೆ ನಿಂತಿದೆ. ಮುಂದೆಯೂ ನಿಲ್ಲಬೇಕು’ ಎಂದು ಅವರು ಹೇಳಿದರು.

‘ಹಿಂದುಳಿದವರು ಅನುಭವಿಸುವ ಅಧಿಕಾರ ತಂತಿ ಮೇಲಿನ ನಡಿಗೆಯಂತೆ. ಯಾವಾಗ ಕೆಡುವುತ್ತಾರೋ ತಿಳಿಯದು’ ಎಂದರು.

ಕ್ರಾಂತಿಗೆ ಸಿದ್ಧರಾಗಿರಿ: ಎಚ್ಡಿಕೆ

‘ಕೆಲವೇ ತಿಂಗಳುಗಳಲ್ಲಿ ರಾಜ್ಯ ರಾಜಕಾರಣವು ಸ್ಫೋಟಕ ಬೆಳವಣಿಗೆಗೆ ಸಾಕ್ಷಿಯಾಗಲಿದೆ. ಆ ರಾಜಕೀಯ ಬೆಳವಣಿಗೆಗೆ ಜೆಡಿಎಸ್ ಕಾರ್ಯಕರ್ತರು ಸಿದ್ಧರಾಗಿರ ಬೇಕು’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕರೆ ನೀಡಿದರು.

ಪಕ್ಷದ ಬೆಳ್ಳಿಹಬ್ಬದ ಅಂಗವಾಗಿ ನಗರದಲ್ಲಿ ಶನಿವಾರ ನಡೆದ ಜೆಡಿಎಸ್ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಈಗಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ ಯಾರೂ ಕೂಡ ನಿರೀಕ್ಷೆ ಮಾಡದಂತಹ ಬದಲಾವಣೆಗಳು ಆಗಲಿವೆ. ರಾಜ್ಯದಲ್ಲಿ ಯಾರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗದ ಪರಿಸ್ಥಿತಿ ಸೃಷ್ಟಿಯಾಗಿದೆ. ಕೆಲವೇ ತಿಂಗಳಲ್ಲಿ ರಾಜಕೀಯ ಕ್ರಾಂತಿ ಆಗುವ ಸಾಧ್ಯತೆ ಇದೆ. ಹೀಗಾಗಿ, ಕಾರ್ಯಕರ್ತರು ಮತ್ತು ಮುಖಂಡರು ಜನರ ಬಳಿಯೇ ಇರಬೇಕು. ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧರಿರಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.