ಬೆಂಗಳೂರು: ರಾಜ್ಯದ 61 ನಗರಸಭೆ, 123 ಪುರಸಭೆ ಹಾಗೂ 117 ಪಟ್ಟಣ ಪಂಚಾಯಿತಿಗಳು ಸೇರಿ 301 ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿಯನ್ನು ನಿಗದಿ ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ನಿಗದಿ ಮಾಡಿದ್ದ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿಯಲ್ಲಿನ ಲೋಪ, ಪುನರಾವರ್ತನೆ ಪ್ರಶ್ನಿಸಿ ಕೆಲವರು ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ರಾಜ್ಯ ಸರ್ಕಾರ ತಾನು ನಿಗದಿ ಮಾಡಿದ್ದ ಮೀಸಲಾತಿ ಪಟ್ಟಿಯನ್ನು 2022ರ ಸೆಪ್ಟೆಂಬರ್‌ನಲ್ಲಿ ಪ್ರಮಾಣಪತ್ರದ ಮೂಲಕ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತ್ತು.
ರಾಷ್ಟ್ರೀಯ ಮಾಹಿತಿ ಕೇಂದ್ರ ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್ ಮೂಲಕ ಮೀಸಲಾತಿ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಮೀಸಲಾತಿಯ ಪುನರಾವರ್ತನೆಗೆ ಅವಕಾಶ ಇಲ್ಲದಂತೆ ನಿಯಮದ ಅನುಸಾರವೇ ಎಲ್ಲ ವರ್ಗಗಳಿಗೂ ನ್ಯಾಯ ಒದಗಿಸಲಾಗಿದೆ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟಿತ್ತು.
ಮೀಸಲಾತಿ ಸಂಬಂಧ ಇದ್ದ ಎಲ್ಲ ಪ್ರಕರಣಗಳನ್ನೂ ಕೋರ್ಟ್ ಇತ್ಯರ್ಥ ಮಾಡಿದ್ದು, ಅಂದು ರಾಜ್ಯ ಸರ್ಕಾರ ನಿಗದಿ ಮಾಡಿದ್ದ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪಟ್ಟಿಯನ್ನು ಎತ್ತಿಹಿಡಿದಿತ್ತು. ಕೋರ್ಟ್ ಸಮ್ಮತಿ ದೊರೆತ ಬೆನ್ನಲ್ಲೇ ನಗರಾಭಿವೃದ್ಧಿ ಇಲಾಖೆ ಪಟ್ಟಿ ಬಿಡುಗಡೆ ಮಾಡಿದೆ.